ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯ ನಮಸ್ಕಾರ ಭರ್ಜರಿ ಯಶಸ್ವಿ: 50 ಲಕ್ಷ ವಿದ್ಯಾರ್ಥಿಗಳು ಭಾಗಿ

Last Updated 12 ಜನವರಿ 2012, 19:30 IST
ಅಕ್ಷರ ಗಾತ್ರ

ಭೋಪಾಲ್ (ಪಿಟಿಐ): ವಿರೋಧ ಪಕ್ಷಗಳ ವಿರೋಧ ಮತ್ತು ಮುಸ್ಲಿಂ ಮುಖಂಡರ ಫತ್ವಾದ ಮಧ್ಯೆಯೂ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಾರಥ್ಯದಲ್ಲಿ ಮಧ್ಯಪ್ರದೇಶದಲ್ಲಿ ಗುರುವಾರ ನಡೆದ ಐತಿಹಾಸಿಕ ಸೂರ್ಯ ನಮಸ್ಕಾರದಲ್ಲಿ 50 ಲಕ್ಷ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಸಾಮೂಹಿಕ ಸೂರ್ಯನಮಸ್ಕಾರದ ಮೂಲಕ ವಿಶ್ವ ದಾಖಲೆ ನಿರ್ಮಿಸುವುದು ಮಧ್ಯಪ್ರದೇಶ ಸರ್ಕಾರದ ಗುರಿಯಾಗಿತ್ತು.

ಮಧ್ಯಪ್ರದೇಶ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ ಸ್ವಾಮಿ ವಿವೇಕಾನಂದ ಜನ್ಮ ದಿನದ ಪ್ರಯುಕ್ತ 2007ರಿಂದ ಪ್ರತಿ ವರ್ಷವೂ ಸಾಮೂಹಿಕ ಸೂರ್ಯ ನಮಸ್ಕಾರ ಏರ್ಪಡಿಸುತ್ತಿದೆ. ಈ ಸಲ ಕಾರ್ಯಕ್ರಮದ ಭಾರಿ ಯಶಸ್ವಿಗಾಗಿ ವ್ಯಾಪಕ ಶ್ರಮ ವಹಿಸಲಾಗಿತ್ತು.

ಈ ಬಾರಿ ರಾಜ್ಯದಾದ್ಯಂತ ಅಂದಾಜು 50 ಲಕ್ಷ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದರು.

ಕಾರ್ಯಕ್ರಮವನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್, ಸೂರ್ಯ ನಮಸ್ಕಾರ ಯಾವುದೇ ನಿರ್ದಿಷ್ಟ ಧರ್ಮಕ್ಕೆ ಸೀಮಿತವಾದುದಲ್ಲ. ಈ ದೈಹಿಕ ಅಂಗಸಾಧನೆಯಿಂದ ಮನಸ್ಸು ಮತ್ತು ದೇಹದ ಮಧ್ಯೆ ಅಸಾಧಾರಣ ಸಮನ್ವಯ ಉಂಟಾಗಿ ವ್ಯಕ್ತಿ ಆರೋಗ್ಯವಂತನಾಗಿರುತ್ತಾನೆ ಎಂದಿದ್ದಾರೆ.

ಇದರಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದ ಇತರ ವಿಭಾಗಗಳಲ್ಲಿ ನಡೆದ ಸೂರ್ಯನಮಸ್ಕಾರದಲ್ಲಿ ಭಾರಿ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿಭಾಗ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು ನೇತೃತ್ವ ವಹಿಸಿದ್ದರು.
ಮುಸ್ಲಿಂ ಸಮುದಾಯದ ಮುಖ್ಯಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಲ್ಲದೇ ಇದರಲ್ಲಿ ಪಾಲ್ಗೊಳ್ಳದಂತೆ ಫತ್ವಾ ಸಹ ಹೊರಡಿಸಿದ್ದರು.

ಕೇಸರೀಕರಣದ ಕಾರ್ಯಸೂಚಿ ಜಾರಿಗೊಳಿಸುವ ಉದ್ದೇಶ ಹೊಂದಿರುವ ಆರ್‌ಎಸ್‌ಎಸ್ ಅನ್ನು ತೃಪ್ತಿಪಡಿಸಲು ಸರ್ಕಾರ ಸೂರ್ಯ ನಮಸ್ಕಾರ ಏರ್ಪಡಿಸಿದೆ ಎಂದು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಟೀಕಿಸಿದೆ.

ಸೂರ್ಯ ನಮಸ್ಕಾರ ಸಂವಿಧಾನಬಾಹಿರವಾಗಿದ್ದು, ಬಹು ಧರ್ಮೀಯರು ಇರುವ ದೇಶದಲ್ಲಿ ಧಾರ್ಮಿಕ ಕಲಹ ಉಂಟು ಮಾಡುತ್ತದೆ. ಗಿನ್ನಿಸ್ ದಾಖಲೆಯಲ್ಲಿ ಸೇರಿಸದಂತೆ ತಾವು ಗಿನ್ನಿಸ್ ಆಡಳಿತ ಮಂಡಳಿಗೆ ಮನವರಿಕೆ ಮಾಡಿಕೊಡುವುದಾಗಿ ಇಸಾಯಿ ಮಹಾಸಂಘ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT