ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯಪಥದಲ್ಲಿ ವಜ್ರಪ್ರಭೆ

Last Updated 23 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

vÝ.ಸೂರ್ಯನಾಥ ಕಾಮತ್‌ ಎಂದರೆ ಕರ್ನಾಟಕದ ಇತಿಹಾಸಾಸಕ್ತರಿಗೆ ಕರ್ನಾಟಕದ ಇತಿಹಾಸವನ್ನು ಸಮಗ್ರವಾಗಿ ಬಲ್ಲ ಇತಿಹಾಸಕಾರ. ಅವರ ಬಹುತೇಕ ಶಿಷ್ಯರಿಗೆ ಅವರು ಒಳ್ಳೆಯ ಸರ್‌. ಸಹೋದ್ಯೋಗಿಗಳ ಪಾಲಿಗೆ ಶಿಸ್ತಿಗೆ ಆದ್ಯತೆ ನೀಡುವ ಅಧ್ಯಯನಶೀಲ ಇತಿಹಾಸಕಾರ. ಸಂಘಟನೆಯಲ್ಲೂ ಕಾಮತರದು ವಿಶಿಷ್ಟ ಹೆಸರು. ಇತಿಹಾಸವನ್ನು ಜನಪ್ರಿಯಗೊಳಿಸುವ ಪ್ರಯತ್ನದಲ್ಲಿ ಅವರದು ಬಹಳ ಮಹತ್ವದ ಸೇವೆ. ವೃತ್ತಿ ಜೀವನದಿಂದ ನಿವೃತ್ತರಾದರೂ, ಇತಿಹಾಸದ ಬಗ್ಗೆ ಇಂದಿಗೂ ವಿಶ್ವಾಸವನ್ನು ಉಳಿಸಿಕೊಂಡಿರುವ ಅವರಿಗೆ ಏಪ್ರಿಲ್‌ 26 ಹುಟ್ಟುಹಬ್ಬದ ಸಂಭ್ರಮ. 2011ರ ಏಪ್ರಿಲ್‌ 26ಕ್ಕೆ ಅವರು 74 ವರ್ಷ ಪೂರೈಸಿ, 75ನೆಯ ವರ್ಷಕ್ಕೆ ಹೆಜ್ಜೆ ಇಡುತ್ತಿದ್ದಾರೆ.

ತಾವು ಐದು ವರ್ಷದ ಮಗುವಾಗಿದ್ದಾಗಲೇ ತಮ್ಮ ಅಣ್ಣನ ಜೊತೆಗೆ ಸ್ವಾತಂತ್ರ ಹೋರಾಟದ ಚಳವಳಿಗಳಲ್ಲಿ ಪಾಲ್ಗೊಳ್ಳುತ್ತಿದ್ದುದು ಕಾಮತರ ನೆನಪಿನಲ್ಲಿದೆ. ಅದು ಅವರ ನೆನಪಿನ ವಿಷಯ; ಕೆಲವರಿಗೆ ವಯಸ್ಸಿಗೆ ತಕ್ಕ ಮರೆವು ಇರುತ್ತದೆ. ಸೂರ್ಯನಾಥ ಕಾಮತರಿಗೆ ಅದು ಇರಬಹುದಾದರೂ ಅವರಿಗೆ ಇತಿಹಾಸದ ಯಾವುದೇ ಪುಟದ ಯಾವುದೇ ಸಾಲು ಇಸವಿಯ ಸಮೇತ ಸದಾ ನೆನಪಿನಲ್ಲಿರುತ್ತದೆ. ಕರ್ನಾಟಕದ ಇತಿಹಾಸದ ಬಗ್ಗೆ ಪ್ರೀತಿ ಇರುವ ಎಲ್ಲರಿಗೂ ಕಾಮತ್‌ ವಿಶ್ವಾಸಾರ್ಹ ವ್ಯಕ್ತಿ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಹುಟ್ಟಿ ಪ್ರಾಥಮಿಕ ಶಿಕ್ಷಣವನ್ನು ಅಲ್ಲೇ ಪಡೆದು, ಬಂಟ್ವಾಳದಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದು, ನಂತರ ಮಂಗಳೂರಿನ ಸೇಂಟ್‌ ಎಲೋಷಿಯಸ್‌ ಕಾಲೇಜಿನಲ್ಲಿ ಇಂಟರ್‌ಮೀಡಿಯಟ್‌ ಶಿಕ್ಷಣ ಮುಗಿಸಿ, ಧಾರವಾಡದಲ್ಲಿ ಬಿ.ಎ.ಪದವಿ ಪಡೆದ, ಸೂರ್ಯನಾಥ ಕಾಮತ್‌ ಬಾಲ್ಯದಲ್ಲಿ ಕಾಂಗ್ರೆಸ್ಸಿಗರೊಡನೆ ಹೆಚ್ಚು ಸಂಪರ್ಕ ಹೊಂದಿದ್ದರು. ನಾರಾಯಣಾಚಾರ್ಯ ನಾವೂರಕರರ ಪ್ರಭಾವದಿಂದ ಸಾಹಿತ್ಯ - ರಾಜಕೀಯದಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು, 1952ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಾದ ವೈಕುಂಠ ಬಾಳಿಗ ಮತ್ತು ಬೆನಗಲ್‌ ಶಿವರಾಯರ ಪರವಾಗಿ ಶಾಲೆ ಬಿಟ್ಟು ಪ್ರಚಾರವನ್ನೂ ಮಾಡಿದ್ದರು. ಆಗಿನಿಂದಲೇ ಪತ್ರಿಕೆಗಳನ್ನು ಓದುವ ಆಸಕ್ತಿ ಬೆಳೆಸಿಕೊಂಡ ಕಾಮತರು, ವಿದ್ಯಾರ್ಥಿಯಾಗಿದ್ದಾಗಲೇ ಬರವಣಿಗೆಯನ್ನೂ ಆರಂಭಿಸಿದರು. ಮಂಗಳೂರಿನಲ್ಲಿ ಓದುತ್ತಿದ್ದಾಗ ಸೋದರ ಮಾವನ ಮಕ್ಕಳ ಮೂಲಕ ಆರ್‌.ಎಸ್‌.ಎಸ್‌. ಶಾಖೆಯ ಸಂಪರ್ಕ ಪಡೆದು, ಸ್ನೇಹಿತರು ಮತ್ತು ಸಾಹಿತ್ಯದಿಂದ ಪ್ರಭಾವಿತರಾಗಿ ನಿಷ್ಠಾವಂತ ಕಾರ್ಯಕರ್ತರಾದರು. ಬಿ.ಎ. ಓದುತ್ತಿದ್ದಾಗಲೇ ಐತಿಹಾಸಿಕ ಕಥೆಗಳನ್ನು ಬರೆಯತೊಡಗಿದ ಅವರು, ಭಾಷಣಕಾರರಾಗಿಯೂ ರೂಪುಗೊಂಡರು.

ಧಾರವಾಡದಲ್ಲಿ ಇತಿಹಾಸದ ಸ್ನಾತಕೋತ್ತರ ವಿದ್ಯಾರ್ಥಿಯಾದ ಸೂರ್ಯನಾಥ ಕಾಮತರು ಪ್ರೊ.ಬಿ.ವಿ.ಕಾಳೆ, ಪ್ರೊ.ಬಿ.ಎ.ಸಾಲೆತ್ತೂರ್‌, ಪ್ರೊ.ಜಿ.ಎಸ್‌.ದೀಕ್ಷಿತ್‌ ಅವರಂತಹ ಪ್ರಾಧ್ಯಾಪಕರಿಂದ ಇತಿಹಾಸ ಕಲಿತರು. ಅವರ ಮಾರ್ಗದರ್ಶನ ಕಾಮತರ ಪಾಲಿಗೆ ಸಂಜೀವಿನಿ ಆಯಿತು. ಬಿ.ಎ.ಸಾಲೆತ್ತೂರ್‌ ಅವರ ಪ್ರಭಾವದಿಂದ ಕರ್ನಾಟಕದ ಇತಿಹಾಸದ ಬಗ್ಗೆ ಅತೀವ ಆಸಕ್ತಿ ಬೆಳೆಸಿಕೊಂಡ ಕಾಮತರು, ಕಾಲೇಜಿಗೆ ರಜೆ ಇದ್ದ ಸಂದರ್ಭದಲ್ಲಿ ಆರ್‌.ಎಸ್‌.ಎಸ್‌.ನ ಕೆಲಸಗಳಲ್ಲಿ ಕ್ರಿಯಾತ್ಮಕವಾಗಿ ತೊಡಗಿಕೊಳ್ಳುತ್ತಿದ್ದರು. ಇದರಿಂದ ಅವರಿಗೆ ಅನೇಕ ಸ್ಥಳಗಳ ಮಾತ್ರವಲ್ಲದೆ, ವಿಭಿನ್ನ ಮನೋಭಾವದ ಜನರ ಪರಿಚಯವಾಗಿ ಅನುಭವ ಶ್ರೀಮಂತವಾಯಿತು.

ಜನಸಂಪರ್ಕದ ಮೂಲಕ ಅನೇಕ ಸಂಕುಚಿತ ವಿಚಾರಗಳು ಮರೆಯಾದವು. ಎಂ.ಎ. ಆದ ತರುಣದಲ್ಲಿ ಸಂಘದ ಪ್ರಚಾರಕರಾದ ಕಾಮತರು ಮೂರು ವರ್ಷಗಳ ಕಾಲ ಅಲ್ಲಿ ದುಡಿದರು. ಪ್ರಚಾರಕ ಕಾರ್ಯದಿಂದ ಬಿಡುಗಡೆ ಪಡೆದು, ಸಾಲ್ತೊರೆಯವರ ಮಾರ್ಗದರ್ಶನದಲ್ಲಿ  ಪಿಎಚ್‌.ಡಿ.ಗೆ ನೋಂದಣಿ ಮಾಡಿಸಿಕೊಂಡರೂ,          ಪ್ರೊ.ಜಿ.ಎಸ್‌.ದೀಕ್ಷಿತ್‌ ಅವರ ಮಾರ್ಗದರ್ಶನದಲ್ಲಿ ಅಧ್ಯಯನವನ್ನು ಮುಂದುವರಿಸಿದರು. ಉದ್ಯೋಗವನ್ನು ಅರಸಿಕೊಂಡು ಮುಂಬಯಿಗೆ ಹೋದರು.
ಆ ಹೊತ್ತಿಗೆ ತಮ್ಮ ಲೇಖನಗಳ ಮೂಲಕ ಕನ್ನಡ ಓದುಗರಿಗೆ ಪರಿಚಿತರಾಗಿದ್ದ ಕಾಮತ್‌ ಅವರಿಗೆ ಮುಂಬಯಿಯ ಫ್ರೋಪ್ರೆಸ್‌ ಜರ್ನಲ್‌ನಲ್ಲಿ ಉಪಸಂಪಾದಕರಾಗಿ ಸೇವೆಸಲ್ಲಿಸುವ ಅವಕಾಶ ದೊರೆಯಿತು. ಸುಮಾರು ಎರಡು ವರ್ಷ ಫ್ರೀಪೆಸ್‌ ಜರ್ನಲ್‌ ಪತ್ರಿಕೆಯಲ್ಲಿ ಪತ್ರಿಕಾ ಸಂಪಾದನೆಯ ವಿವಿಧ ವಿಭಾಗಗಳ ಅನುಭವ ಪಡೆದ ಕಾಮತ್‌ ಜೊತೆಜೊತೆಗೇ ತಮ್ಮ ಪಿಎಚ್‌.ಡಿ. ಅಧ್ಯಯನಕ್ಕೂ ಅವಕಾಶ ಮಾಡಿಕೊಂಡರು. ಪ್ರೊ.ವಿಲಿಯಂ ಕೊಯಿಲ್ಹೊ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ `ವಿಜಯನಗರ ಕಾಲದ ತುಳುನಾಡು~ ಮಹಾಪ್ರಬಂಧಕ್ಕೆ ಮುಂಬಯಿ ವಿಶವಿದ್ಯಾಲಯದಿಂದ    ಪಿಎಚ್‌.ಡಿ., ಪದವಿಯನ್ನು ಪಡೆದು, ಕರ್ನಾಟಕಕ್ಕೆ ಹಿಂದಿರುಗಿದರು. ಪಿ.ಎಚ್‌.ಡಿ., ಪಡೆಯಲೆಂದು ಮಾತ್ರ ಅವರು ಮುಂಬಯಿಗೆ ಹೋಗಿದ್ದರು. ಅಲ್ಲಿ ಅಧ್ಯಯನ ನಡೆದಿದ್ದಾಗ ಜೀವನಕ್ಕಾಗಿ ಕೆಲಸ ಮಾಡಿದರು. ಅವರ ಗುರಿ ಕರ್ನಾಟಕದ ಇತಿಹಾಸವನ್ನು ಅಭ್ಯಾಸಮಾಡಿ, ಆ ಬಗ್ಗೆ ಕೃತಿಗಳನ್ನು ರಚಿಸುವುದೇ ಆಗಿತ್ತು.

ಆಗ ತಾನೆ ಬೆಂಗಳೂರಿನಲ್ಲಿ ಆರಂಭವಾಗಿದ್ದ ಪಂದು ಹೊಸ ಮಾಸಪತ್ರಿಕೆಯ ಸಂಪಾದಕನಾಗಿ ಕಾರ್ಯಾರಂಭ ಮಾಡಿ, ಕಾರಣಾಂತರಗಳಿಂದ ಕೆಲವು ತಿಂಗಳಲ್ಲೇ ಅಲಿಂ್ಲದ ಬಿಡುಗಡೆ ಪಡೆದು, `ಪ್ರಜಾವಾಣಿ~ ಪತ್ರಿಕೆಯಲ್ಲಿ ಹದಿನಾರು ತಿಂಗಳು ಉಪಸಂಪಾದಕನಾಗಿ ಕಾರ್ಯ ನಿರ್ವಹಿಸಿದರು. ಇತಿಹಾಸಕಾರನಾಗಬೇಕೆನ್ನುವ ಹಂಬಲವೇ ಪ್ರಬಲವಾಗಿದ್ದ ಕಾಮತ್‌ರಿಗೆ ಬೋಧಕ ವೃತ್ತಿ ಪ್ರಿಯವಾಗಿತ್ತು; ಅದಕ್ಕೆ ಅನುಕೂಲವಾಗುವಂತೆ ಆಚಾರ್ಯ ಪಾಠಶಾಲಾ ಸಂಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. `ಪ್ರಜಾವಾಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗಲೇ ಅವರು, `ಕರ್ನಾಟಕದ ಸಂಕ್ಷಿಪ್ತ ಇತಿಹಾಸ~ ಎನ್ನುವ ಕೃತಿಯನ್ನು ಪ್ರಕಟಿಸಿದರು. ಅದಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನವೂ ದೊರೆಯತು. ಇದೇ ಕೃತಿಯನ್ನು ಕಾಮತರು `ಕನ್ಸೈಸ್‌ ಹಿಸ್ಟರಿ ಆಫ್‌ ಕರ್ನಾಟಕ~ ಹೆಸರಿನಲ್ಲಿ ಪ್ರಕಟಿಸಿದ್ದಾರೆ.

1968ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಲ್ಲಿ ಬೋಧಕರಾದ ಅವರು ಅಲ್ಲಿ ಅನೇಕ ವಿದ್ಯಾರ್ಥಿಗಳು ಕರ್ನಾಟಕ ಇತಿಹಾಸದ ಬಗ್ಗೆ ಅಧ್ಯಯನ ಮಾಡಲು ಪ್ರೇರಕರಾದರು. ನಿಗದಿತ ಪಠ್ಯಕ್ಕೆ ತಕ್ಕಂತೆ ಬೋಧಿಸುವ ಸಲುವಾಗಿ ಕಾಮತ್‌ ಹೆಚ್ಚು ಅಧ್ಯಯನ ಮಾಡಿದರು. ಬೇರೆ ವಿಶ್ವವಿದ್ಯಾಲಯಗಳಿಂದ ಇಲಾಖಾ ಮುಖ್ಯಸ್ಥರ ಹುದ್ದೆಗೆ ಕರೆ ಬಂದರೂ, ಕರ್ನಾಟಕವನ್ನು ಬಿಡಲೊಪ್ಪದ ಅವರು, ಇಲ್ಲೇ ತಮ್ಮ ಸಾಧನೆಯನ್ನು ಮುಂದುವರಿಸಿ, ತಾವು ಅಂದುಕೊಂಡಿದ್ದ ಅನೇಕ ಕೆಲಸಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.

ಕಾಮತ್‌ ಮೂರು ಸಂಪುಟಗಳಲ್ಲಿ ಸಂಪಾದಿಸಿದ `ಸ್ವಾತಂತ್ರ ಸಂಗ್ರಾಮದ ಸ್ಮೃತಿಗಳು~, (ಸುಮಾರು 3200ಕ್ಕೂ ಹೆಚ್ಚು ಪುಟಗಳ ಈ ಕೃತಿಯಲ್ಲಿ ಸುಮಾರು 800 ಹಿರಿಯ ಸ್ವಾತಂತ್ರ ಹೋರಾಟಗಾರರ ನೆನಪುಗಳಿವೆ), ಇಂಗ್ಲೀಷ್‌ನಲ್ಲಿ ಬರೆದ `ಕ್ವಿಟ್‌ ಇಂಡಿಯಾ ಮೂವ್‌ಮೆಂಟ್‌ ಇನ್‌ ಕರ್ನಾಟಕ~ ಕೃತಿಗಳು ಅವರ ಅಧ್ಯಯನಶೀಲತೆಗೆ ಉದಾಹರಣೆಗಳಾಗಿವೆ.

1982ರಲ್ಲಿ ಕೆಲವು ತಿಂಗಳುಗಳ ಕಾಲ ಕರ್ನಾಟಕ ರಾಜ್ಯ ಪತ್ರಾಗಾರದ ನಿರ್ದೇಶಕರಾಗಿ ಮತ್ತು ಕರ್ನಾಟಕ ಗ್ಯಾಸೆಟಿಯರ್‌ ಇಲಾಖೆಯ ಮುಖ್ಯ ಸಂಪಾದಕರಾಗಿ ಕಾಮತ್‌ ಸಲ್ಲಿಸಿರುವ ಸೇವೆ ವಿಶಿಷ್ಟವಾದುದು. ಸಮಗ್ರ ಕರ್ನಾಟಕಕ್ಕೆ ಸಂಬಂಧಿಸಿದ ಕರ್ನಾಟಕ ರಾಜ್ಯ ಗ್ಯಾಸೆಟಿಯರ್‌ನ ಎರಡು ಸಂಪುಟಗಳು (ಕನ್ನಡದಲ್ಲಿ ಮೂರು) ಮಾತ್ರವಲ್ಲದೆ, ಆರು ಜಿಲ್ಲೆಗಳ ಗ್ಯಾಸೆಟಿಯರ್‌ಗಳನ್ನು ತಮ್ಮ ಅಧಿಕಾರಾವಧಿಯಲ್ಲಿ ಪ್ರಕಟಿಸಿರುವ ಕಾಮತ್‌ ಬಿಡುವಿನ ವಿರೋಧಿ. ಅವರ ಕರ್ನಾಟಕ ಕೈಪಿಡಿ ಕರ್ನಾಟಕದ ಬಗ್ಗೆ ತಿಳಿಯಬೇಕೆನ್ನುವವರಿಗೆ ನಿಜಕ್ಕೂ ಒಂದು ಕೈಪಿಡಿ.

ಹಲವು ವರ್ಷಗಳಿಂದ ಮಿಥಿಕ್‌ ಸೊಸೈಟಿಯ ಜೊತೆಗೆ ಸಂಪರ್ಕ ಇಟ್ಟುಕೊಂಡಿರುವ ಕಾಮತ್‌, ಅದರ ಗೌರವ ಕಾರ್ಯದರ್ಶಿಗಳಾಗಿ ಮತ್ತು ಅಧ್ಯಕ್ಷರಾಗಿ ಸಾರ್ಥಕಸೇವೆ ಸಲ್ಲಿಸಿದ್ದಾರೆ. ವಿಶ್ವಮನ್ನಣೆ ಪಡೆದ ಮಿಥಿಕ್‌ ಸೊಸೈಟಿಯ ತ್ರೈಮಾಸಿಕ ವಿದ್ವತ್‌ ಪತ್ರಿಕೆಯನ್ನೂ ಹಲವು ವರ್ಷಗಳಿಂದ ಅವರು ಸಂಪಾದಿಸುತ್ತಿದ್ದಾರೆ.

ಈಗ ಸುವರ್ಣ ವರ್ಷವನ್ನು ಆಚರಿಸಿಕೊಳ್ಳುತ್ತಿರುವ `ಕರ್ನಾಟಕ ಇತಿಹಾಸ ಅಕಾಡೆಮಿ~ಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿ, ಹತ್ತು ವರ್ಷಗಳಿಗೂ ಹೆಚ್ಚು ಕಾಲ ಅದರ ಅಧ್ಯಕ್ಷರಾಗಿ ಸಂಘಟನೆಯಲ್ಲೂ ತಮ್ಮ ಛಾಪನ್ನು ಒತ್ತಿರುವ ಕಾಮತ್‌, ಈಗಲೂ ಕರ್ನಾಟಕ ಅಕಾಡೆಮಿಯ ಗೌರವಾಧ್ಯಕ್ಷರಾಗಿ ಮುಂದುವರಿದಿದ್ದಾರೆ. ಹಲವು ಕೃತಿಗಳು ಮತ್ತು ಶಿಷ್ಯರ ಮೂಲಕ ಕರ್ನಾಟಕದ ಇತಿಹಾಸಕಾರರೆಂದು ಖ್ಯಾತಿ ಪಡೆದಿರುವ ಕಾಮತ್‌- ಈಗ ತಮ್ಮ 75ನೆಯ ವರ್ಷಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಇನ್ನು ಮುಂದೆಯೂ ಅವರಿಂದ ಕರ್ನಾಟಕ ಇತಿಹಾಸಕ್ಕೆ ಅಮೂಲ್ಯ ಕೊಡುಗೆ ದೊರೆಯುವುದರಲ್ಲಿ ಸಂಶಯವಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT