ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ಮುಖ್ಯಸ್ಥರ ಜನ್ಮದಿನ ವಿವಾದ: ಸುಪ್ರೀಂಗೆ ಸರ್ಕಾರದ ಕೇವಿಯಟ್

Last Updated 17 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್, ತಮ್ಮ ಜನ್ಮ ದಿನಾಂಕ ವಿವಾದ ಸಂಬಂಧದಲ್ಲಿ ರಕ್ಷಣಾ ಸಚಿವಾಲಯ ಕೈಗೊಂಡ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಬಗ್ಗೆ ಏಕಪಕ್ಷೀಯ ತೀರ್ಪು ನೀಡದಂತೆ ಸರ್ಕಾರ ಮಂಗಳವಾರ ಸುಪ್ರೀಂಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದೆ.

ಸಿಂಗ್ ಅರ್ಜಿಯ ಕುರಿತು ಸರ್ಕಾರದ ವಾದವನ್ನು ಆಲಿಸದೆ ಯಾವುದೇ ಆದೇಶ ಹೊರಡಿಸದಂತೆ ಸುಪ್ರೀಂ ಕೋರ್ಟ್‌ಗೆ ರಕ್ಷಣಾ ಸಚಿವಾಲಯದ ವಕೀಲ ಟಿ.ಎ. ಖಾನ್ ಈ ಅರ್ಜಿ ಸಲ್ಲಿಸಿದ್ದಾರೆ.

ಜನರಲ್ ಸಿಂಗ್ ಸೋಮವಾರ `ಜನ್ಮ ದಿನಾಂಕ ವಿವಾದದಿಂದ ತಮ್ಮ ಘನತೆ ಮತ್ತು ಗೌರವಕ್ಕೆ ಧಕ್ಕೆಯಾಗಿದೆ~ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ತಾವು 1951ರಲ್ಲಿ ಜನಿಸಿದ್ದೆಂದು ತಿಳಿಸಿದರೂ, 1950ರಲ್ಲಿ ಜನಿಸಿದ್ದೆಂದು ರಕ್ಷಣಾ ಸಚಿವಾಲಯ ಇತ್ತೀಚೆಗೆ ನಿರ್ಧಾರ ಪ್ರಕಟಿಸಿದ ನಂತರ ಸಿಂಗ್ ಈ ಕ್ರಮದ ಮೊರೆ ಹೋಗಿದ್ದಾರೆ.

ರಕ್ಷಣಾ ಸಚಿವಾಲಯವು 2011ರ ಜುಲೈ 21ರಂದು ಹೊರಡಿಸಿದ ತನ್ನ ಆದೇಶದಲ್ಲಿ ಸಿಂಗ್ ಅವರ ಜನ್ಮದಿನ 1950ರ ಮೇ 10 ಎಂದು ತಿಳಿಸಿತ್ತು. ಇದನ್ನು ಪ್ರಶ್ನಿಸಿ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು 2011ರ ಡಿಸೆಂಬರ್ 30ರಂದು ಸಚಿವಾಲಯ ವಜಾಗೊಳಿಸಿತ್ತು. ಈಗ ಸಿಂಗ್ 1951 ಮೇ 10ರಂದು ತಮ್ಮ ನಿಜವಾದ ಜನ್ಮದಿನವೆಂದು ಘೋಷಿಸುವಂತೆ ರಕ್ಷಣಾ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕೆಂದು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಜನರಲ್‌ಗೆ ಸಚಿವರ ಬೆಂಬಲ: ಈ ಮಧ್ಯೆ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವೆ ಅಂಬಿಕಾ ಸೋನಿ ಮಂಗಳವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, `ಜನರಲ್ ಸಿಂಗ್ ತಮ್ಮ ಜನ್ಮದಿನ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದು ಸಮಂಜಸವಾಗಿದೆ~ ಎಂದರು.

`ಪ್ರತಿಯೊಬ್ಬ ನಾಗರಿಕನೂ ತನಗೆ ಅನ್ಯಾಯವಾಗಿದೆ ಎಂಬ ಭಾವನೆ ಮೂಡಿದಾಗ, ನ್ಯಾಯ ಬಯಸುವುದರಲ್ಲಿ ಯಾವುದೇ ತಪ್ಪಿಲ್ಲ~ ಎಂದು ಅವರು ಉತ್ತರಿಸಿದರು. ಆದರೆ ಸಚಿವರು ವಿವಾದದ ಬಗ್ಗೆ ಯಾವುದೇ ನೇರ ಹೇಳಿಕೆಗೆ ನಿರಾಕರಿಸಿ, ಸೇನಾಪಡೆಗಳನ್ನು ನಾವು ಯಾವಾಗಲೂ ಉನ್ನತ ಗೌರವದಿಂದ ನೋಡುತ್ತಿರುವುದಾಗಿ ಸ್ಮರಿಸಿದರು.

ಸರ್ಕಾರಕ್ಕೆ ಬಿಜೆಪಿ ತರಾಟೆ: ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ಅವರ ಜನ್ಮದಿನದ ವಿವಾದವನ್ನು ಬಗೆಹರಿಸುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರವನ್ನು ಬಿಜೆಪಿ ಮಂಗಳವಾರ ಇಲ್ಲಿ ತರಾಟೆಗೆ ತೆಗೆದುಕೊಂಡಿದೆ.

ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಪಕ್ಷದ ಮುಖ್ಯ ವಕ್ತಾರ ರವಿಶಂಕರ ಪ್ರಸಾದ್, `ಸರ್ಕಾರವು ವಿವಾದವನ್ನು ಸಾರ್ವಜನಿಕ ಚರ್ಚೆಗೆ ಆಸ್ಪದ ನೀಡಿರುವುದಲ್ಲದೆ, ನ್ಯಾಯಾಲಯದ ವಿಚಾರಣೆಗೂ ಅವಕಾಶ ಕಲ್ಪಿಸಿರುವುದು ಸೇನೆಯ ಗೌರವವನ್ನು ಗಾಳಿಗೆ ತೂರಿದಂತಾಗಿದೆ~ ಎಂದು ಟೀಕಿಸಿದರು.

ಪಕ್ಷದ ಇನ್ನೊಬ್ಬ ವಕ್ತಾರ ರಾಜೀವ್ ಪ್ರತಾಪ್ ರೂಡಿ ಮಾತನಾಡಿ, `ಸೌಹಾರ್ದಯುತವಾಗಿ ಬಗೆಹರಿಸಬೇಕಾದ ವಿಷಯವನ್ನು ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡುವ ಮೂಲಕ ಸರ್ಕಾರ ಕರ್ತವ್ಯಲೋಪ ಎಸಗಿದೆ~ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT