ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ–ಬಿಜೆಪಿ ಮೈತ್ರಿ ಭಂಗ ಸಂಭವ

ಮಹಾರಾಷ್ಟ್ರ: ಕಗ್ಗಂಟಾದ ಕ್ಷೇತ್ರ ಹೊಂದಾಣಿಕೆ
Last Updated 19 ಸೆಪ್ಟೆಂಬರ್ 2014, 20:05 IST
ಅಕ್ಷರ ಗಾತ್ರ

ಮುಂಬೈ (ಐಎಎನ್‌ಎಸ್‌/ ಪಿಟಿಐ): ಮಹಾರಾಷ್ಟ್ರದಲ್ಲಿ ಅ.೧೫ರಂದು ನಡೆ­ಯುವ ವಿಧಾನಸಭಾ ಚುನಾವಣೆ ಕ್ಷೇತ್ರ ಹೊಂದಾಣಿಕೆ ವಿಷಯದಲ್ಲಿ ಮಿತ್ರ ಪಕ್ಷ­ಗ­ಳಾದ ಶಿವಸೇನಾ ಮತ್ತು ಬಿಜೆಪಿ­ಗಳೆ­ರಡೂ ಪಟ್ಟು ಸಡಿಲಿಸುವ ಲಕ್ಷಣ ಕಂಡು­ಬರುತ್ತಿಲ್ಲ. ಇದರಿಂದಾಗಿ ೨೫ ವರ್ಷ­ಗಳ ಈ ಪಕ್ಷಗಳ ಮೈತ್ರಿಯು ಮುರಿ­ದು­ಬೀಳುವ ಹಂತಕ್ಕೆ ಬಂದು ನಿಂತಿದೆ.

ಎರಡೂ ಪಕ್ಷಗಳು ಮೈತ್ರಿ ಮುಂದು­­ವರಿಸಬೇಕೋ ಅಥವಾ ಕಡಿದು­ಕೊಳ್ಳ­ಬೇಕೋ ಎಂಬ ಬಗ್ಗೆ ಕೊನೆಯ ಕ್ಷಣದ ಚಿಂತನೆಯಲ್ಲಿವೆ. ಈ ಸಂಬಂಧ ಶುಕ್ರ­ವಾರ­ವಿಡೀ ಹಲವು ಸಭೆಗಳು ನಡೆದವು. ‘ಮೈತ್ರಿ ಮುರಿದುಬೀಳುವುದು ನಿಶ್ಚಿತ. ಈ ಬಗ್ಗೆ ಅಧಿಕೃತ ಹೇಳಿಕೆ ಹೊರಬೀಳುವುದಷ್ಟೇ ಬಾಕಿ ಉಳಿದಿದೆ’ ಎನ್ನುತ್ತಾರೆ ಹೆಸರು ಹೇಳಲು ಬಯಸದ ಬಿಜೆಪಿಯ ಹಿರಿಯ ನಾಯಕರೊಬ್ಬರು.

ಶಿವಸೇನಾ ಪದಾಧಿಕಾರಿಯೊಬ್ಬರು ಕೂಡ ಸುದ್ದಿಸಂಸ್ಥೆಯೊಂದಿಗೆ ಮಾತನಾ­ಡುತ್ತಾ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದರು. ‘ಮೈತ್ರಿ ಇನ್ನು ಮುಗಿದ ಮಾತು’ ಎಂದ ಅವರು ಪಕ್ಷದ ನಿಲುವು ಘೋಷಿಸುವ ಮುನ್ನ  ಯಾವ ಬೆಳವಣಿಗೆ ನಡೆಯುತ್ತಿವೆ ಎಂಬು­ದನ್ನು ಕಾದುನೋಡಲಾಗುತ್ತಿದೆ ಎಂದರು.

ಈ ಮಧ್ಯೆ ಬಿಕ್ಕಟ್ಟಿನ ಕುರಿತು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿ­ಸಿ­­ರುವುದು ಮೈತ್ರಿ ಬಯ­ಸು­ವ­ವ­ರಲ್ಲಿ ಒಂದಷ್ಟು ಸಮಾಧಾನ ಮೂಡಿಸಿದೆ. ಕ್ಷೇತ್ರ ಹೊಂದಾಣಿಕೆ ಮತ್ತು ಶಿವ­ಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವ­ರನ್ನು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ­ಯಾಗಿ ಬಿಂಬಿಸುವಲ್ಲಿನ ಭಿನ್ನಾಭಿಪ್ರಾಯಗಳೇ ವಿವಾದ ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ.
ರಾಜ್ಯದ ಒಟ್ಟು ೨೮೮ ಕ್ಷೇತ್ರಗಳ ಪೈಕಿ ತನಗೆ ೧೩೫ ಸ್ಥಾನಗಳನ್ನು ತನಗೆ ಬಿಟ್ಟು ಶಿವಸೇನೆ ಕೂಡ ಅಷ್ಟೇ (೧೩೫) ಸ್ಥಾನಗಳಲ್ಲಿ ಸ್ಪರ್ಧಿಸಬೇಕು; ಉಳಿದ ೧೮ ಕ್ಷೇತ್ರಗಳನ್ನು ಮೈತ್ರಿಕೂಟದ ಸಣ್ಣಪುಟ್ಟ ಪಕ್ಷಗಳಿಗೆ ಬಿಡಬೇಕು ಎಂದು ಬಿಜೆಪಿ ಪಟ್ಟುಹಿಡಿದಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರು ರಾಜ್ಯ­ದಲ್ಲಿ ಗುರುವಾರ ನಡೆದ ಸಾರ್ವಜನಿಕ ಸಭೆಯಲ್ಲಿ, ಮಿತ್ರಪಕ್ಷಗಳ ಬಗ್ಗೆ ಪ್ರಸ್ತಾಪ­ ಮಾಡದೆ ‘ಬಿಜೆಪಿಯು ಮುಂದಿನ ಸರ್ಕಾರ ರಚಿಸ­ಲಿದೆ’ ಎಂದಿ­ದ್ದಾರೆ. ಹೊಂದಾಣಿಕೆ ಬಗ್ಗೆ ಸಹಮತಕ್ಕೆ ಬರಲು ಪಕ್ಷವು ಶಿವಸೇನೆಗೆ ೨೪ ಗಂಟೆಗಳ ಗಡುವು ನೀಡಿದೆ. ಆದರೆ ಶಿವಸೇನಾ ಇದನ್ನು ತಿರಸ್ಕರಿಸಿದೆ.

‘ಪ್ರತ್ಯೇಕ ಸ್ಪರ್ಧೆಯೇ ಸೂಕ್ತ’
ಮುಂಬೈ: ಮಹಾರಾಷ್ಟ್ರದಲ್ಲಿ ಎಲ್ಲಾ ಪ್ರಮುಖ ಪಕ್ಷಗಳು ಮುಂಬರುವ ವಿಧಾ­ನ­ಸಭಾ ಚುನಾವಣೆಗೆ ಪ್ರತ್ಯೇಕ­ವಾಗಿ ಸ್ಪರ್ಧಿಸಬೇಕು ಎಂದು ಎನ್‌ಸಿಪಿ ಹಿರಿಯ ಮುಖಂಡ ಹಾಗೂ ಸಚಿವ ಛಗನ್‌ ಭುಜಬಲ್‌ ಅಭಿಪ್ರಾಯಪಟ್ಟಿದ್ದಾರೆ. ಒಂದೆಡೆ ಆಡಳಿತಾರೂಢ ಮಿತ್ರ ಪಕ್ಷ­ಗ­ಳಾದ ಕಾಂಗ್ರೆಸ್‌ ಹಾಗೂ ಎನ್‌ಸಿಪಿ, ಮತ್ತೊಂದೆಡೆ ಎದುರಾಳಿ ಮಿತ್ರ ಪಕ್ಷ­ಗಳಾದ ಶಿವಸೇನಾ ಮತ್ತು ಬಿಜೆಪಿ ಇವೆರಡೂ ಕೂಟಗಳಲ್ಲೂ ಈವರೆಗೂ ಕ್ಷೇತ್ರ ಹೊಂದಾಣಿಕೆ ಬಿಕ್ಕಟ್ಟು ಬಗೆಹರಿ­ದಿಲ್ಲ. ಹೀಗಾಗಿ ಭುಜಬಲ್‌ ಅವರು, ಎಲ್ಲಾ ಪ್ರಮುಖ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿ ತಮ್ಮ ನೈಜ ಬಲವನ್ನು ಪರೀಕ್ಷೆಗೆ ಒಡ್ಡಬೇಕು ಎಂದಿದ್ದಾರೆ.

ಈ ಅಭಿ­ಪ್ರಾಯ­ವನ್ನು ಕಾಂಗ್ರೆಸ್‌ ಗೌಣವಾಗಿ ತೆಗೆದು­ಕೊಂಡಿದೆ. ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರು ಮೈತ್ರಿಯನ್ನು ಕಾಪಾ­ಡಿ­ಕೊಳ್ಳುವ ಬಗ್ಗೆ ಉತ್ಸುಕರಾಗಿ­ದ್ದಾರೆ ಎಂದು ಹೇಳಿದೆ.

ಬಿಜೆಪಿಯಿಂದ ಹೊಸ ಪ್ರಸ್ತಾಪ
ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತಾನು ಸ್ಪರ್ಧಿಸಬಯಸುವ ಕ್ಷೇತ್ರಗಳ ಹೊಸ ಪಟ್ಟಿಯನ್ನು ಶಿವಸೇನೆಗೆ ನೀಡಲಿದೆ. ಶಿವಸೇನಾ ಕಳೆದ ಹಲವು ಚುನಾವಣೆಗಳಲ್ಲಿ ಯಾವ್ಯಾವ ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಾಗಿಲ್ಲವೋ ಅಲ್ಲಿ ಸ್ಪರ್ಧಿಸಬೇಕೆಂಬುದು ಆ ಪಕ್ಷದ ಇರಾದೆಯಾಗಿದೆ.

‘ನಾವು ಸ್ಪರ್ಧಿಸಬಯಸುವ ಕ್ಷೇತ್ರಗಳ ಹೊಸ ಪಟ್ಟಿಯನ್ನು ಸಿದ್ಧಪಡಿಸಿ ಶಿವಸೇನಾಗೆ ನೀಡುತ್ತೇವೆ. ಕಳೆದ ೨೫ ವರ್ಷಗಳಲ್ಲಿ ಶಿವಸೇನಾ ಒಮ್ಮೆಯೂ ಗೆಲ್ಲದ ೫೯ ಕ್ಷೇತ್ರಗಳು ಹಾಗೂ ಬಿಜೆಪಿ ಗೆಲ್ಲದ ೧೯ ಕ್ಷೇತ್ರಗಳು ಇವೆ. ಶಿವ­ಸೇನೆಯು ಈ ಅಂಶವನ್ನು ಗಣನೆಗೆ ತೆಗೆದುಕೊಳ್ಳಬೇಕು. ಪ್ರತಿಯೊಂದು ಕ್ಷೇತ್ರದ ಬಗ್ಗೆ ಪ್ರತ್ಯೇಕವಾಗಿ ಚರ್ಚೆ ನಡೆಯಬೇಕು’ ಎಂದು ಪಕ್ಷದ ರಾಜ್ಯ ಘಟ­ಕದ ಮಾಜಿ ಅಧ್ಯಕ್ಷ ಸುಧೀರ್‌ ಮುಂಗಂಟಿವರ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT