ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವೆಗೆ ಲಭ್ಯವಾಗದ ನೀರು ಶುದ್ಧೀಕರಣ ಘಟಕ

Last Updated 11 ಜನವರಿ 2012, 9:50 IST
ಅಕ್ಷರ ಗಾತ್ರ

ಕೆಂಭಾವಿ: ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ಬಳಸುತ್ತಿರುವ ಕುಡಿಯುವ ನೀರಿನಲ್ಲಿ ಪ್ಲೋರೈಡ್ ಮತ್ತು ಅರ್ಸೇನಿಕ್ ಅಂಶ ಪತ್ತೆಯಾಗಿದ್ದು, ರಾಸಾಯನಿಕ ವಸ್ತುಗಳು ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಗ್ರಾಮಗಳ ಜನರಿಗೆ ಶುದ್ಧ ನೀರು ಒದಗಿಸುವ ದೃಷ್ಟಿಯಿಂದ ಜಿಲ್ಲಾಡಳಿತವು ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿದೆ.

 ಪಟ್ಟಣದಲ್ಲಿ ನಿರ್ಮಿಸಲಾದ ನೀರು ಶುದ್ಧೀಕರಣ ಘಟಕದ ಪೂರ್ಣಗೊಂಡಿದ್ದರೂ, ಉಪಯೋಗಕ್ಕೆ ಬರದಂತಾಗಿದೆ. ಗೋಗಿ, ಕೆಂಭಾವಿ, ಸಗರ, ಕಿರದಳ್ಳಿ, ಅಮ್ಮಾಪುರ, ಮುದನೂರು ಗ್ರಾಮಗಳನ್ನು ಈ ಯೋಜನೆಯಡಿ ಆಯ್ಕೆ ಮಾಡಿಕೊಂಡಿರುವ ಜಿಲ್ಲಾಡಳಿತವು ಪ್ರತಿ ಗ್ರಾಮಗಳಿಗೆ ಸುಮಾರು ರೂ. 15 ಲಕ್ಷ ವೆಚ್ಚದಲ್ಲಿ ನೀರು ಶುದ್ಧೀಕರಣ ಘಟಕ ನಿರ್ಮಿಸಲು ಮುಂದಾಗಿದೆ.

ಆದರೆ ಕೆಂಭಾವಿಯಲ್ಲಿ  ಈ ಯೋಜನೆ ಪೂರ್ಣಗೊಂಡಿದ್ದು, ಇದುವರೆಗೂ ಉದ್ಘಾಟನೆ ಆಗದೇ, ಯಂತ್ರಗಳು ತುಕ್ಕು ಹಿಡಿಯುವ ಪರಿಸ್ಥಿತಿ ಬಂದಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನೀರಿನಲ್ಲಿ ಪ್ಲೋರೈಡ್ ಮತ್ತು ಅರ್ಸೇನಿಕ್ ಅಂಶ ಇರುವುದರಿಂದ ಈ ಭಾಗದ ಬಹುತೇಕ ಗ್ರಾಮಗಳ ಜನರಿಗೆ ಹಲ್ಲು ಕೆಂಪಾಗುವುದು, ಮೊಣಕಾಲು, ಸೊಂಟ, ಕೀಲು ನೋವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.

ವೈದ್ಯಕೀಯ ತಪಾಸಣೆಯಿಂದಲೂ ಇದು ಸ್ಪಷ್ಟವಾಗಿದೆ.  ನೀರಿನಿಂದಲೇ ಈ ಎಲ್ಲ ರೋಗಗಳು ಬರುತ್ತವೆ ಎಂದು ವೈದ್ಯರು ಹೇಳುತ್ತಿದ್ದಾರೆ. ಆದರೂ ಅನಿವಾರ್ಯವಾಗಿ ಜನ ರಾಸಾಯನಿಕ ಯುಕ್ತ ನೀರನ್ನೇ ಕುಡಿಯುವಂತಾಗಿದೆ.

ಈಚೆಗೆ ಗ್ರಾಮದಲ್ಲಿ ನೀರು ಶುದ್ಧೀಕರಣ ಘಟಕವೊಂದು ಪ್ರಾರಂಭವಾಗುತ್ತದೆ ಎಂದು ತಿಳಿದ ಜನತೆಗೆ ಸಂತಸವಾಗಿತ್ತು. ಇನ್ನಾದರೂ ನಮಗೆ ಶುದ್ಧ ಕುಡಿಯುವ ನೀರು ಸಿಗಲಿದೆ ಎಂದು ಸಂತಸಪಟ್ಟಿದ್ದ ಜನರ ಸಂತೋಷ ಸ್ವಲ್ಪದರಲ್ಲಿಯೇ ಮರೆಯಾಯಿತು.

ನೀರು ಶುದ್ಧೀಕರಣ ಘಟಕದ ಪೂರ್ಣಗೊಂಡಿದ್ದರೂ, ಅದು ಪ್ರಾರಂಭವಾಗದೇ ಇರುವುದೇ ಜನರ ನಿರಾಸೆಗೆ ಕಾರಣವಾಗಿದೆ.

ಈ ಕಾಮಗಾರಿಯನ್ನು ನಾಂದಿ ಫೌಂಡೆಶನ್ ಅವರಿಗೆ ನೀಡಲಾಗಿದ್ದು, ಈ ಘಟಕ ಪ್ರಾರಂಭವಾದರೆ ಪಟ್ಟಣದ ಜನರಿಗೆ ಶುದ್ಧ ಕುಡಿಯುವ ನೀರು, ಪ್ರತಿ 20 ಲೀಟರ್‌ಗೆ ಕೇವಲ ನಾಲ್ಕು ರೂಪಾಯಿಗಳಲ್ಲಿ ಸಿಗಲಿದೆ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದರು.

ಮನೆಯ ಬಾಗಿಲಿಗೆ ಶುದ್ಧ ಕುಡಿಯುವ ನೀರು ಬರಲಿದೆ ಎಂದುಕೊಂಡಿದ್ದ ಜನರಿಗೆ ಈಗ ನಿರಾಸೆ ಅನುಭವಿಸುವಂತಾಗಿದೆ. ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಿ ಸರ್ಕಾರ ಈ ಯೋಜನೆ ಸರಿಯಾದ ಸಮಯದಲ್ಲಿ ಜನರಿಗೆ ತಲುಪುವಂತಾಗಲಿ ಎನ್ನುವುದು ಗ್ರಾಮಸ್ಥರ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT