ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋರಿಯಾಸಿಸ್ ನಿಮ್ಮನ್ನು ಸೋಲಿಸದಿರಲಿ

Last Updated 28 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಸೋರಿಯಾಸಿಸ್ ಸಾಮಾನ್ಯವಾಗಿ ಕಂಡುಬರುವ ಒಂದು ಚರ್ಮ ರೋಗ. ಇದು ಅಂಟುರೋಗವಲ್ಲ. ಆದರೆ ಹೆಚ್ಚು ತೊಂದರೆ ಉಂಟುಮಾಡದಿದ್ದರೂ ಇದರ ರೂಪ ವಿಕೃತಿಯಿಂದ ರೋಗಿಗಳು ಮಾನಸಿಕವಾಗಿ ಅತ್ಯಂತ ವೇದನೆ ಅನುಭವಿಸುತ್ತಾರೆ. ಕೆಲವೊಮ್ಮೆ ಇದು ಒಂದೋ ಎರಡೋ ಸ್ಥಳದಲ್ಲಿದ್ದು ದೇಹವಿಡೀ ಹಬ್ಬದೇ ಇರಬಹುದು.

ತಲೆಯಲ್ಲಿ ಅತಿಯಾಗಿ ಕಾಣಿಸಿಕೊಳ್ಳುವ ಹೊಟ್ಟು, ಅತಿಯಾದ ಕಾಲೊಡಕು ಮುಂತಾದವು ಸೋರಿಯಾಸಿಸ್‌ನ ಲಕ್ಷಣಗಳು. ಆದರೆ ರೋಗಿಗಳು ಹೆಚ್ಚಾಗಿ ಇವನ್ನು ಕಡೆಗಣಿಸಿರುತ್ತಾರೆ ಅಥವಾ ಸರಿಯಾಗಿ ಪತ್ತೆ ಆಗಿರುವುದಿಲ್ಲ. ಇದರ ಬಗ್ಗೆ ಇನ್ನಷ್ಟು ಬೆಳಕು ಬೀರುವ ಯತ್ನ ಈ ಲೇಖನದ್ದು. 

ಸೋರಿಯಾಸಿಸ್‌ನಲ್ಲಿ ಚರ್ಮ ಕೆಂಪಗಾಗಿ, ದಪ್ಪ ಹಪ್ಪಳದಂತೆ ಬೆಳೆದು ಉದುರುತ್ತಾ ಇರುತ್ತದೆ. ಕೆಲವರಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ. ಚರ್ಮದ ಹೊರ ಪದರದ ಜೀವಕೋಶಗಳು ತ್ವರಿತಗತಿಯಲ್ಲಿ ಉತ್ಪಾದನೆ ಆಗುವುದರಿಂದ ಹಪ್ಪಳದಂತೆ ಒಂದರ ಮೇಲೊಂದು ಬೆಳೆಯುತ್ತವೆ. ಬೆಳೆಯಲು ಹೆಚ್ಚು ಸಮಯ ಸಿಗದೇ ಇರುವುದರಿಂದ ಪೂರ್ಣ ರೂಪ ಪಡೆಯುವುದಿಲ್ಲ. ನಮ್ಮ ದೇಹದಲ್ಲಿನ ರೋಗನಿರೋಧಕ ಕಣಗಳ ಅಚಾತುರ್ಯದಿಂದ ದೇಹದಲ್ಲಿ ಇಂತಹ ಪ್ರಕ್ರಿಯೆ ಶುರುವಾಗುತ್ತದೆ. ಇದಕ್ಕೆ `ಆಟೊ ಇಮ್ಯೂನ್' ದೋಷ ಎನ್ನುತ್ತೇವೆ. 

ಇದರಲ್ಲಿ ಐದು ವಿಧಗಳಿವೆ: ಪ್ಲೇಕ್, ಗಟ್ಟೇಟ್, ಇನ್ವರ್ಸ್, ಪ್ಯುಸ್ಟುಲಾರ್ ಹಾಗೂ ಎರಿತ್ರೋಡರ್ಮಿಕ್. ಮೊದಲನೆಯದು ಸಾಮಾನ್ಯವಾಗಿ ಕಂಡುಬರುವಂತಹದ್ದು. ಇದರಲ್ಲಿ ಚರ್ಮದ ಮೇಲೆ ಕೆಂಪು ಹಾಗೂ ಬಿಳಿ ಹಪ್ಪಳದಂತೆ ಪದರಗಳು ಕಾಣುತ್ತವೆ. ಇದು ಹೆಚ್ಚಾಗಿ ಮೊಣಕಾಲು ಹಾಗೂ ಮೊಣಕೈಯಲ್ಲಿ ಕಾಣಿಸುತ್ತದೆ. ಆದರೆ ಬೇರೆ ಜಾಗದಲ್ಲಿ ಅಂದರೆ, ತಲೆ, ಪಾದ, ಹಸ್ತ, ಜನನಾಂಗ ಮುಂತಾದವುಗಳಲ್ಲೂ ಕಾಣಿಸಬಹುದು.

ಎಕ್ಜಿಮಾಗೂ ಇದಕ್ಕೂ ಇರುವ ವ್ಯತ್ಯಾಸಎಂದರೆ, ಇದು ಸಂಧಿಯ ಹೊರಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಸದಾ ತೊಂದರೆ ಕೊಡುವ ಇದು ಬಹಳ ಕಡಿಮೆ ಚರ್ಮದಿಂದ ಆರಂಭವಾಗಿ ಪೂರ್ಣ ಮೈಯನ್ನು ಆವರಿಸಬಹುದು. ಹೆಚ್ಚಾಗಿ ಕೈಕಾಲಿನ ಬೆರಳುಗಳಲ್ಲೂ ಇದನ್ನು ಗುರುತಿಸಬಹುದು. ಈ ರೋಗದಲ್ಲಿ ಶೇ 10- 30ರಷ್ಟು ಜನರಲ್ಲಿ ಸಂಧಿನೋವು ಕಂಡುಬರುತ್ತದೆ (ಸೋರಿಯಾಟಿಕ್ ಆರ್ತ್ರೈಟಿಸ್)

ಸೋರಿಯಾಸಿಸ್‌ಗೆ ಸರಿಯಾದ ಕಾರಣ ಇನ್ನೂ ತಿಳಿಯದಿದ್ದರೂ `ಆನುವಂಶೀಯ' ಸಂಬಂಧವನ್ನು ಪತ್ತೆ ಮಾಡಲಾಗಿದೆ. ಅಲ್ಲದೆ ಕೆಲವು ಅಂಶಗಳು ಈ ಪ್ರಕ್ರಿಯೆ ಶುರುವಾಗಲು ಪೂರಕವಾಗಿವೆ.

ಅವುಗಳಲ್ಲಿ ಕೆಲವು: ಅತಿಯಾದ ದೈಹಿಕ ಹಾಗೂ ಮಾನಸಿಕ ಒತ್ತಡ, ಏನೋ ಕಾರಣಕ್ಕೆ ತೆಗೆದುಕೊಳ್ಳುತ್ತಿದ್ದ ಸ್ಟೀರಾಯಿಡ್ ಔಷಧಿಯನ್ನು ಒಮ್ಮೆಗೇ ನಿಲ್ಲಿಸುವುದು, ಗಂಟಲಿನ ಸೋಂಕು, ಹವಾಮಾನ ಬದಲಾವಣೆ, ಅತಿ ಮದ್ಯಪಾನ, ಧೂಮಪಾನ, ಕೆಲ ಸೌಂದರ್ಯ ಸಾಧನಗಳು, ಲೀಥಿಯಂ, ಬೀಟಾ ಬ್ಲಾಕರ್ಸ್ (ಹೆಚ್ಚಾಗಿ ರಕ್ತದೊತ್ತಡದ ಔಷಧಿಗಳು), ಕ್ಲೋರೋಕ್ವಿನ್ ಮುಂತಾದವುಗಳಿಂದ ಈ ರೋಗ ಶುರುವಾಗಬಹುದು. ಚರ್ಮ ಒಣಗಿದ್ದಷ್ಟೂ ಸೋರಿಯಾಸಿಸ್ ಭಯ ಹೆಚ್ಚು.

ಅತಿಯಾಗಿ ಚರ್ಮವನ್ನು ತುರಿಸುವುದು ಅಥವಾ ಸ್ಕ್ರಬ್ ಬಳಸುವುದೂ ಒಳ್ಳೆಯದಲ್ಲ. ಈ ರೋಗ ತನಗಿದೆ ಎನ್ನುವ ಮಾನಸಿಕ ಬಾಧೆಯಿಂದಲೂ ರೋಗ ಉಲ್ಬಣವಾಗುವ ಸಾಧ್ಯತೆ ಇರುತ್ತದೆ. ಎಲ್ಲ ವಯಸ್ಸಿನ ಹೆಂಗಸರು, ಗಂಡಸರಲ್ಲೂ ಇದು ಕಂಡುಬರಬಹುದು.

ಗಟ್ಟೇಟ್ ವಿಧ ಚಿಕ್ಕ ಚುಕ್ಕಿಗಳ ರೂಪದಲ್ಲಿ ಕಂಡುಬರುತ್ತದೆ. ಹೆಚ್ಚಾಗಿ ಗಂಟಲು ಅಥವಾ ಇನ್ನಾವುದೋ ಸೋಂಕಿನ ನಂತರ ಶುರುವಾಗುತ್ತದೆ. ಇದು ಸಾಧಾರಣವಾಗಿ ಬಲು ಬೇಗ ವಾಸಿಯಾಗುತ್ತದೆ. ಸೋಂಕು ತಡೆಗಟ್ಟುವುದು ಇಲ್ಲಿ ಮುಖ್ಯ.
ಇನ್ವರ್ಸ್ ವಿಧ ಸಂಧಿಗಳ ಒಳಭಾಗದಲ್ಲಿ ಮತ್ತು ಚರ್ಮದ ಸಂದುಗಳಲ್ಲಿ ಕಾಣಿಸಿಕೊಳ್ಳುತ್ತದೆ. ಪ್ಯುಸ್ಟುಲಾರ್‌ನಲ್ಲಿ ಚಿಕ್ಕ ಚಿಕ್ಕ ಸೋಂಕುರಹಿತ ಕೀವು ತುಂಬಿದ ಗುಳ್ಳೆಗಳ ರಾಶಿ ಕಂಡುಬರುತ್ತದೆ.

ಎರಿತ್ರೋಡರ್ಮಿಕ್ ವಿಧದಲ್ಲಿ ಸಂಪೂರ್ಣ ದೇಹ ಕೆಂಪಾಗಿ ಚರ್ಮ ಉದುರುತ್ತಿದ್ದು, ಹೆಚ್ಚಿನ ಬಾಧೆ ನೀಡುತ್ತದೆ. ಸೋರಿಯಾಸಿಸ್ ಸ್ಥಳದಿಂದ ದೇಹದಲ್ಲಿನ ನೀರಿನ ಅಂಶ ಬೇಗ ಆವಿಯಾಗುವುದರಿಂದ ಚರ್ಮ ಮತ್ತಷ್ಟು ಒಣಗುತ್ತದೆ. ಅಲ್ಲದೆ ಎರಿತ್ರೋಡರ್ಮಿಕ್ ವಿಧದಲ್ಲಿ ದೇಹದ ತಾಪಮಾನ ನಿರ್ವಹಣೆಯಲ್ಲೂ ತೊಂದರೆ ಉಂಟಾಗಿ ಮಾರಕ ಆಗಬಹುದು. ಹಾಗಾಗಿ ದೇಹದ ನೀರಿನ ಅಂಶವನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯ. ನೀರು ಮತ್ತು ಉಪ್ಪಿನಾಂಶ ಇರುವ ಹಣ್ಣಿನ ರಸ, ಎಳನೀರುಗಳ ಧಾರಾಳ ಸೇವನೆ ಅಗತ್ಯ.

ಕೈಕಾಲು ಅತಿಯಾಗಿ ಸೀಳಿಕೊಳ್ಳುವುದು, ತಲೆಯಲ್ಲಿ ಅಪಾರ ಹೊಟ್ಟು ಕೂಡಾ ಸೋರಿಯಾಸಿಸ್ ಲಕ್ಷಣಗಳೇ. ಸೆಬೋರಿಕ್ ಡರ್ಮಟೈಟಿಸ್ ಮುಂತಾದ  ಚರ್ಮ ರೋಗಗಳಿಲ್ಲ ಎಂಬುದನ್ನು ನುರಿತ ವೈದ್ಯರಿಂದ ಖಚಿತಪಡಿಸಿಕೊಂಡು ಮುಂದುವರಿಯಬೇಕು.

ಸೋರಿಯಾಸಿಸ್‌ಗೆ ಇನ್ನೂ ಪೂರ್ಣ ಚಿಕಿತ್ಸೆ ಸಂಶೋಧನೆಯಲ್ಲಿದೆ. ಹೆಚ್ಚಾಗಿ ಸ್ಟೀರಾಯಿಡ್, ಕೋಲ್ ಟಾರ್, ಮೆಥೊಟ್ರೆಕ್ಸೇಟ್ ಮುಂತಾದ ಔಷಧಗಳು ಪ್ರಚಲಿತ. ಕೆಲವು ಔಷಧಿಗಳಿಂದ ಯಕೃತ್, ಮೂತ್ರಕೋಶ ಮುಂತಾದ ಅಂಗಗಳ ಮೇಲೆ ದುಷ್ಪರಿಣಾಮ ಬೀರುವುದರಿಂದ ಜಾಗ್ರತೆಯಿಂದ, ನುರಿತ ಸಲಹೆಯೊಂದಿಗೆ ಮುಂದುವರಿಯಬೇಕು.

ತೆಗೆದುಕೊಳ್ಳುವ ಔಷಧಿಗಳ ಬಗ್ಗೆ ಅರಿವಿರಬೇಕು. ಆಯುರ್ವೇದದಲ್ಲಿ ಇದನ್ನು ಹೆಚ್ಚಾಗಿ `ವಿಚರ್ಚಿಕ' ಎಂಬ ಚರ್ಮ ರೋಗವೆಂದು ಪರಿಗಣಿಸಲಾಗಿದೆ. ಆದರೂ ಇನ್ನು ಕೆಲವು ರೋಗಲಕ್ಷಣಗಳನ್ನು ನೋಡಿ ಚಿಕಿತ್ಸೆ ನೀಡುವುದು ಅಗತ್ಯ.
ದೇಹದಲ್ಲಿ ತಪ್ಪಾಗಿ ತ್ವರಿತಗತಿಯಿಂದ ನಡೆಯುತ್ತಿರುವ ಜೀವಕೋಶಗಳ ವೃದ್ಧಿಯನ್ನು ಕುಂಠಿತಗೊಳಿಸಬೇಕು.

ಅಮೃತ ಬಳ್ಳಿ, ಬೇವು, ಸ್ತ್ರೀ ಕುಟಜ, ಹೊಂಗೆ, ಅರಿಶಿನ ಮುಂತಾದವುಗಳಲ್ಲಿ 'ಇಮ್ಯುನೋ ರೆಗ್ಯುಲೇಶನ್', `ಕೆರಟೋಲೈಸಿಸ್' (ದಪ್ಪ ಚರ್ಮವನ್ನು ಮೃದುಗೊಳಿಸುವುದು) ಗುಣ ಇರುವುದು ಸಾಬೀತಾಗಿದೆ. ಇವುಗಳ ಸೂಕ್ತ ಪ್ರಮಾಣದ ಔಷಧಿಗಳು ಹಚ್ಚಲು ಮತ್ತು ಸೇವಿಸಲು ಮಾರುಕಟ್ಟೆಯಲ್ಲಿ ಲಭ್ಯವಿವೆ. ಶೋಧನೆ, ತಕ್ರಧಾರ ಮುಂತಾದ ಚಿಕಿತ್ಸೆಗಳೂ ಸಹಾಯಕ. ಸೂಕ್ತ ಸಲಹೆಯೊಂದಿಗೆ ಇವುಗಳ ಸೇವನೆ ಅತ್ಯಗತ್ಯ.

ನೆನಪಿಡಿ
1. ನೀರು, ಎಳನೀರು, ಹಣ್ಣಿನ ರಸದ ಹೇರಳ ಸೇವನೆ ಉತ್ತಮ.
2. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಬೇಕು. ಧ್ಯಾನ, ಯೋಗ ಮುಂತಾದ ಕ್ರಿಯೆಗಳಲ್ಲಿ ತೊಡಗಿಕೊಳ್ಳಬೇಕು.
3. ಚರ್ಮವನ್ನು ಸದಾ ಎಣ್ಣೆ ಅಥವಾ ಮಾಯಿಶ್ಚರೈಸರ್‌ಗಳಿಂದ ಮೃದುವಾಗಿ ಇಟ್ಟುಕೊಂಡಿರಬೇಕು.
4. ಹೆಚ್ಚಾಗಿ ಹತ್ತಿಯ ಬಟ್ಟೆಗಳನ್ನು ಹಾಕಬೇಕು.
5. ದೇಹವನ್ನು ಅತಿಯಾದ ಗಾಳಿ ಹಾಗೂ ಸೂರ್ಯನ ಪ್ರಖರ ಕಿರಣಗಳಿಗೆ ಒಡ್ಡಬಾರದು.

ಹೀಗೆ ಮಾಡಿ
ಸೋರಿಯಾಸಿಸ್‌ಗೆ ಯಾವ ಆಹಾರ ಒಳ್ಳೆಯದಲ್ಲ ಎಂಬುದನ್ನು ಸಂಶೋಧನೆಗಳು ದೃಢೀಕರಿಸಿಲ್ಲ. ಆದರೂ ಕೆಲವು ಆಹಾರದಿಂದ ದೇಹದಲ್ಲಿ 'ಹಿಸ್ಟಮಿನ್' ರಾಸಾಯನಿಕದ ಅಂಶ ಅಧಿಕವಾಗಿ ತುರಿಕೆ ಹೆಚ್ಚಾಗುತ್ತದೆ. ಚರ್ಮವನ್ನು ತುರಿಸಿಕೊಂಡಾಗ ಅಥವಾ ಇನ್ನಾವುದೋ ರೀತಿಯಲ್ಲಿ ಗಾಯ ಮಾಡಿಕೊಂಡಾಗ ಅದು ಸೋರಿಯಾಸಿಸ್ ರೂಪ ತಾಳಬಹುದು.

ಜೋರಾಗಿ ತಲೆ ಬಾಚುವುದೂ ಒಳ್ಳೆಯದಲ್ಲ. ಇದಕ್ಕೆ `ಕಾಬ್ನರ್ ಫಿನಾಮೆನನ್' ಎನ್ನುತ್ತೇವೆ. ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಬದನೆಕಾಯಿ, ಅವರೆಕಾಯಿ, ಪನ್ನೀರಿನಂತಹ ಹಾಲಿನ ಪದಾರ್ಥಗಳು, ಮೀನು, ಮೊಟ್ಟೆ, ಕಡಲೆಬೀಜದ ಸೇವನೆ ಕಡಿಮೆ ಮಾಡುವುದು ಉತ್ತಮ.

ಆದರೆ ಮೀನೆಣ್ಣೆಯಲ್ಲಿರುವ ಒಮೇಗಾ-3 ತೈಲಾಂಶ ಒಳ್ಳೆಯದು ಎಂದು ಕೆಲವು ಸಂಶೋಧನೆಗಳಿಂದ ಕಂಡುಬಂದಿದೆ. ನಾರಿನ ಸತ್ವ ಹೆಚ್ಚಿರುವ ಆಹಾರಗಳಾದ ತರಕಾರಿ, ಹೊಟ್ಟಿರುವ ಧಾನ್ಯಗಳು, ಫೋಲಿಕ್ ಆಮ್ಲೋಂಶ ಹೆಚ್ಚಿರುವ ಹಸಿರು ಸೊಪ್ಪುಗಳು, ತರಕಾರಿಗಳ ಬಳಕೆ ಹೆಚ್ಚಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT