ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ವಂಚಿತ ನಕ್ಸಲ್ ಪೀಡಿತ ಗ್ರಾಮಗಳು

Last Updated 22 ಅಕ್ಟೋಬರ್ 2012, 5:55 IST
ಅಕ್ಷರ ಗಾತ್ರ

ಸಕಲೇಶಪುರ: ಜಿಲ್ಲೆಯ ಪಶ್ಚಿಮ ಘಟ್ಟದ ಬಿಸಿಲೆ,ಕಾಗಿನಹರೆ ರಕ್ಷಿತ ಅರಣ್ಯಗಳ ವ್ಯಾಪ್ತಿಯ ಗ್ರಾಮಗಳಲ್ಲಿ ನಕ್ಸಲ್ ಮತ್ತು ಪೊಲೀಸರ ಹೆಜ್ಜೆಗಳು ಹಾಗೂ ಅವರ ಬಂದೂಕುಗಳು ಜನರ ನೆಮ್ಮದಿಗೆ ಭಂಗ ಉಂಟುಮಾಡಿ ಭಯ ಹುಟ್ಟುಹಾಕಿವೆ.

ಮೂಲಭೂತ ಸೌಕರ್ಯಗಳಿಂದ ಸಂಪೂರ್ಣ ವಂಚಿತಗೊಂಡು, ಒಂದು ಹೊತ್ತಿನ ಕೂಳು ಇಲ್ಲದಿದ್ದರೂ, ನಿಸರ್ಗದ ಪ್ರಶಾಂತ ವಾತಾವರಣದಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದವರ ಉಸಿರು ಕಟ್ಟಿಹಾಕಿದಂತಾಗಿದೆ. ಮಲೆ ನಾಡಿನ ಈ ಭಾಗದಲ್ಲಿ ನಕ್ಸಲರನ್ನು ಬೆಂಬಲಿಸುವ ಜನಾಂಗ ಇಲ್ಲ, ದಿಕ್ಕು ತಪ್ಪಿ ಜಿಲ್ಲೆಗೆ ಕಾಲಿಟ್ಟಿದ್ದಾರೆ ಎಂಬ ಊಹೆ ಕಳೆದ ಒಂದು ತಿಂಗಳಿಂದಲೂ ಅವರು ಇಲ್ಲಿ ವಾಸ್ತವ್ಯ ಇರುವುದು ಸುಳ್ಳು ಮಾಡಿದೆ.

ಸಹಜವಾಗಿ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಿ, ಜನರು ಸರ್ಕಾರದ ವಿರುದ್ಧ ತಿರುಗಿಬೀಳು ವಂತಹ ಸಮಸ್ಯೆಗಳೇ ನಕ್ಸಲರು ನೆಲೆಯೂರುವುದಕ್ಕೆ ಬಂಡವಾಳ ಎನ್ನಲಾಗಿದೆ. ಅಂತಹ ಯಾವ ಸಮಸ್ಯೆಗಳನ್ನು ಬಿಸಿಲೆ ಆಸುಪಾಸಿನಲ್ಲಿ ರುವ ಗ್ರಾಮಗಳು ಎದುರಿಸುತ್ತಿವೆ ಎಂಬುದಕ್ಕೆ ಅಲ್ಲಿಯ ನಿವಾಸಿಗಳ ಹೇಳಿಕೆಗಳು ಹೀಗಿವೆ.

ಜಲ ವಿದ್ಯುತ್ ಯೋಜನೆಗಳು: `ಪಶ್ಚಿಮಘಟ್ಟದ ರಕ್ಷಿತ ಅರಣ್ಯಗಳಲ್ಲಿ ಜಲ ವಿದ್ಯುತ್ ಯೋಜನೆಗಳು ತಲೆ ಎತ್ತಿದ ನಂತರ ಕಾಡಾನೆಗಳು, ಕಾಡು ಕೋಣಗಳು, ಇನ್ನೂ ಹಲವು ಕಾಡು ಪ್ರಾಣಿಗಳು ಕಾಡು ಬಿಟ್ಟು ತಮ್ಮಗಳ ಗದ್ದೆ ತೋಟಗಳಿಗೆ ದಾಳಿ ಮಾಡುತ್ತಿವೆ.

ಇವುಗಳಿಂದ ಪ್ರಾಣ ಹಾನಿ, ಬೆಳೆ, ಆಸ್ತಿ ಪಾಸ್ತಿ ಹಾನಿಯಿಂದ ಬದುಕು ನಡೆುಸುವುದಕ್ಕೆ ಸಾಧ್ಯವೇ ಇಲ್ಲ ಎನ್ನುವಷ್ಟು ಕಷ್ಟವಿದೆ. ಕಳೆದ 6 ವರ್ಷಗಳಿಂದ ನಾಟಿ ಮಾಡಿದ ಭತ್ತದ ಬೆಳೆ ಸಂಪೂರ್ಣವಾಗಿ ಕಾಡಾನೆ, ಕಾಡೆಮ್ಮೆಗಳ ಪಾಲಾಗುತ್ತಿದೆ. ಈ ಭಾಗದ ಇತಿಹಾಸದಲ್ಲಿ ಅಂಗಡಿಯಿಂದ ಅಕ್ಕಿ ತಂದು ತಿಂದ ಉದಾಹರಣೆಗಳಿಲ್ಲ. ರಾತ್ರಿ 12 ಗಂಟೆಯಾದರೂ ಒಂದು ಊರಿನಿಂದ ಮತ್ತೊಂದು ಊರಿಗೆ ನಡೆದು ಹೋಗುತ್ತಿದ್ದ ನಾವುಗಳು ಕಾಡಾನೆಗಳಿಂದ ಸಂಜೆ 6ರ ನಂತರ ಮನೆಯಿಂದ ಹೊರ ಹೋಗುವುದಕ್ಕೆ ಪ್ರಾಣಭಯವಿದೆ.

ಯಾರೋ ಬಂಡವಾಳಶಾಹಿಗಳು ಮಾಡುತ್ತಿರುವ ಜಲ ವಿದ್ಯುತ್ ಯೋಜನೆಗಳಿಗೆ ಸರ್ಕಾರ ಅನುಮತಿ ನೀಡುವ ಮೂಲಕ ಕಾಡಾನೆ ಸಮಸ್ಯೆ ಸೃಷ್ಟಿಮಾಡಿದೆ. ಈಗ ಕಾಡಾನೆ ಸಮಸ್ಯೆ ಹೆಸರಿನಲ್ಲಿ ವಂಶಪಾರಂಪರ‌್ಯವಾಗಿ ಬದುಕು ಸಾಗಿಸುತ್ತಿರುವ ನೂರಾರು ಕುಟುಂಬ ಗಳನ್ನು ಆನೆ ಕಾರಿಡಾರ್ ವಿಸ್ತರಣೆ ಹೆಸರಿನಲ್ಲಿ ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿರುವುದು ಅನ್ಯಾಯ ಎಂದು ಪರಿಸರ ಪ್ರೇಮಿ ಗೊದ್ದು ಉಮೇಶ್ ಹೇಳುತ್ತಾರೆ.

ಕಾರಿಡಾರ್ ಸಮಸ್ಯೆ: `ಕಾಡಾನೆ ಸಮಸ್ಯೆ ವ್ಯಾಪಕವಾಗಿರುವ ಬಿಸಿಲೆ, ಹಡ್ಲುಗದ್ದೆ, ಆನೆಗುಂಡಿ, ಹುದಿನೂರು, ಮಂಕನಹಳ್ಳಿ, ಎತ್ತಳ್ಳ, ಬೋರ್‌ಮನೆ, ಸಿಂಕೇರಿ, ಕಾಗಿನಹರೆ, ಬಾಳೇಹಳ್ಳ, ಮಕ್ಕೀರ್‌ಮನೆ, ಹೊನ್ನಾಟ್ಲು, ಜಾಗಾಟ, ಮ್ಯಾಗಡಹಳ್ಳಿ, ಅರಣಿ, ಮಾವಿನೂರು, ಬಾಜೇಮನೆ ಸೇರಿದಂತೆ ಇನ್ನು ಹಲವು ಗ್ರಾಮ ಗಳನ್ನು ಬಿಸಿಲೆ ಅರಣ್ಯಕ್ಕೆ ಸೇರಿಸಿ ಕೊಂಡು ಆನೆ ಕಾರಿಡಾರ್ ಮಾಡುವು ದಾಗಿ ಕಳೆದ ಮೂರು ವರ್ಷಗಳಿಂದ ಸರ್ಕಾರ ಹೇಳುತಾ ಬಂದಿದೆ. ಇದರಿಂದಾಗಿ ನಾವುಗಳು ತೀರಾ ಗೊಂದಲದಲ್ಲಿ ಇದ್ದೇವೆ. ಹೊಸದಾಗಿ ತೋಟಗಳನ್ನು ಮಾಡುವಂತಿಲ್ಲ, ಇರುವ ಜಮೀನು ಅಭಿವೃದ್ಧಿ ಪಡಿಸು ವಂತಿಲ್ಲ, ಮನೆ ಕಟ್ಟುವಂತಿಲ್ಲ, ಇರುವ ಮನೆ ದುರಸ್ತಿ ಮಾಡುವಂತಿಲ್ಲ.
 
ತಾಲ್ಲೂಕು ಕೇಂದ್ರದಿಂದ 45 ರಿಂದ 50 ಕಿ.ಮೀ. ದೂದಲ್ಲಿರುವ ಗ್ರಾಮಗಳಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಸರಿಯಾಗಿ ಬರುವುದಿಲ್ಲ. ವಾಹನಗಳನ್ನು ಓಡಿಸುವುದಿರಲಿ ನಡೆದಾಡುವುದಕ್ಕೂ ಯೋಗ್ಯವಾಗಿ ರದ ರಸ್ತೆಗಳಿವೆ. ವಿದ್ಯುತ್, ಕುಡಿ ಯುವ ನೀರು ಸೇರಿದಂತೆ ಸರ್ಕಾರದ ಯಾವುದೇ ಮೂಲ ಸೌಕರ್ಯಗಳಿಲ್ಲ.

ಜನಪ್ರತಿನಿಧಿಗಳಿಗೆ ಚುನಾವಣೆ ಬಂದಾಗ ಮಾತ್ರ ನಮ್ಮ ಗ್ರಾಮಗಳು ನೆನಪಾಗುತ್ತವೆ. ಮೈತುಂಬಾ ಸಮಸ್ಯೆ ಹೊದ್ದುಕೊಂಡು ಬದುಕು ಕಳೆದು ಕೊಂಡಿದ್ದೇವೆ~ ಎಂದು ಹುದಿನೂರು ಸಂತೋಷ್ ಹೇಳುತ್ತಾರೆ. 

ಬೆಳೆ ನಾಶ: `ಶತ ಶತಮಾನಗಳಿಂದ ಈ ಭಾಗದ ಜನರ ಬದುಕಿಗೆ ಆಧಾರ ಆಗಿದ್ದ ಏಲಕ್ಕಿ ಬೆಳೆ ಕಳೆದ ಐದು ವರ್ಷಗಳಿಂದ ಕಟ್ಟೆ, ಕೊಕ್ಕೆ ಕಂದು ರೋಗಗಳಿಂದ ಶೇ.80ರಷ್ಟು ನಾಶವಾಗಿದೆ. ಏಲಕ್ಕಿ ಬೆಳೆ ತೆಗೆದು ಕಾಫಿ ತೋಟ ಮಾಡುವುದಕ್ಕೆ ಆನೆ ಕಾರಿಡಾರ್ ವಿಸ್ತರಣೆಯ ಬೂತ ಕಾಡುತ್ತಿದೆ~ ಎಂದು ಬಿಸಿಲೆ ಗ್ರಾಮದ ಅಶ್ವಥ್ ಹೇಳುತ್ತಾರೆ.

ಜಲ ವಿದ್ಯುತ್ ಯೋಜನೆ ನಿಲ್ಲಬೇಕು: ಸರ್ಕಾರ ಕೂಡಲೆ ಎಲ್ಲಾ ಕಿರು ಜಲವಿದ್ಯುತ್ ಯೋಜನೆಗಳನ್ನು ನಿಲ್ಲಿಸಬೇಕು. ಎತ್ತಿನಹೊಳೆ ಯೋಜನೆ, ಜಲ ವಿದ್ಯುತ್ ಯೋಜನೆಗಳಿಂದ ಪಶ್ಚಿಮಘಟ್ಟದ ನೈಸರ್ಗಿಕ ಅರಣ್ಯ ಪೂರ್ಣ ನಾಶವಾಗುತ್ತಿದೆ. ಅರಣ್ಯ ನಾಶ ಮಾಡುತ್ತಿರುವುದು ಮಾತ್ರವಲ್ಲ, ನೂರಾರು ವರ್ಷಗಳಿಂದ ಕಷ್ಟವೋ ಸುಖವೋ ನೆಮ್ಮದಿಯಿಂದ ಜೀವನ ನಡೆಸುತ್ತಿರುವ ಮಲೆನಾಡು ಜನರ ನೆಮ್ಮದಿ ಹಾಳು ಮಾಡಲಾಗುತ್ತಿದೆ~ ಎಲ್ಲಾ ಜಲ ವಿದ್ಯುತ್ ಯೋಜನೆಗಳನ್ನು ನಿಲ್ಲಿಸುವುದು, ಎತ್ತಿನಹೊಳೆ ಯೋಜನೆ ಕೈಬಿಡುವುದು ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಎಂದು ಮಲೆನಾಡು ಜನಪರ ಹೋರಾಟ ಸಮಿತಿ ಅಧ್ಯಕ್ಷ ಕಿಶೋರ್ ಹೇಳುತ್ತಾರೆ.

ಆನೆ ಕಾರಿಡಾರ್‌ಗೆ ಪರ ಮತ್ತು ವಿರೋಧ ಎರಡೂ ಇದ್ದು, ಪ್ರತಿ ಎಕರೆಗೆ 15 ಲಕ್ಷ ರೂಪಾಯಿ ಪರಿ ಹಾರ ಮತ್ತು ಪುನರ್ ವಸತಿ ಕಲ್ಪಿಸ ಬೇಕು ಎಂಬು ಪರ ಇರುವವರ ಬೇಡಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT