ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯಗಳೇ ಇಲ್ಲದ ಇಲತೊರೆ ಗ್ರಾಮ

Last Updated 16 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ದೇವನಹಳ್ಳಿ: ಅಸಮರ್ಪಕ ವಿದ್ಯುತ್ ವ್ಯವಸ್ಥೆ,  ಜಲ್ಲಿಕಲ್ಲುಗಳ ರಸ್ತೆ, ಕುಡಿಯುವ ನೀರಿಗೆ ಪರದಾಟ, ಸಂಚಾರಕ್ಕಿರುವುದು ದಿನಕ್ಕೊಂದೇ ಬಸ್ !ಇದು ತಾಲ್ಲೂಕಿನಿಂದ ಆರು ಕಿಮೀ ದೂರವಿರುವ, ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ ಇಲತೊರೆ ಗ್ರಾಮದ ಸ್ಥಿತಿ.

ಈ ಗ್ರಾಮದಲ್ಲಿ 1150 ಜನ ಸಂಖ್ಯೆ ಇದೆ.ವಿದ್ಯಾರ್ಥಿಗಳು, ರೈತರು ಹೆಚ್ಚಾಗಿದ್ದಾರೆ. ಈ ಗ್ರಾಮದಿಂದ ಹೊರ ಹೋಗಲು ಸಂಪರ್ಕ ರಸ್ತೆ ಸುಗಮವಾಗಿಲ್ಲ. ಪರ್ಯಾಯ ರಸ್ತೆ ಇದ್ದರೂ, 4-5 ಕಿ.ಮೀ ಸುತ್ತಿ ಬಳಸಿಯೇ ಹೊರ ಹೋಗಬೇಕು.ಇಲತೊರೆಯಿಂದ ಐ.ವಿ.ಸಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿಯಾದರೆ ಕೇವಲ 2 ಕಿ.ಮೀ ಗೆ ಎಲ್ಲಾ ಊರುಗಳಿಗೂ ರಸ್ತೆ ಸಂಪರ್ಕಕ್ಕೆ ಸುಗಮವಾಗುತ್ತದೆ ಎಂಬುದು ಗ್ರಾಮಸ್ಥರ ಅಭಿಪ್ರಾಯ.

ರಸ್ತೆಯದ್ದು ಈ ಸಮಸ್ಯೆಯಾದರೆ, ಬಸ್ ಸಂಚಾರದ್ದು ಮತ್ತೊಂದು ಕಥೆ.  ಬೊಮ್ಮವಾರದಿಂದ ಅರಸನಹಳ್ಳಿ, ಉಗನವಾಡಿ ಇಲತೊರೆ ಮಾರ್ಗವಾಗಿ ಕೆ.ಆರ್.ಮಾರ್ಕೆಟ್‌ಗೆ ಒಂದೇ ಒಂದು ಬಸ್ ನಿತ್ಯ ಸಂಚರಿಸುತ್ತದೆ.ಇದರಿಂದ 3-4 ಕಿ.ಮೀ ಅಂತರದಲ್ಲಿರುವ ಗ್ರಾಮಗಳಲ್ಲಿ 180ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಿತ್ತು ಹೋಗಿರುವ ರಸ್ತೆ ಮೂಲಕವೇ ಸಾದಹಳ್ಳಿ ಸರ್ಕಾರಿ ಪ್ರೌಢಶಾಲೆ, ಕನ್ನಮಂಗಲ, ಯಲಹಂಕ, ಹೆಬ್ಬಾಳ ನಗರ ಪ್ರದೇಶಗಳಿಗೆ ತೆರಳಬೇಕಿದೆ.ಸರ್ಕಾರ ಉಚಿತ ಸೈಕಲ್ ವ್ಯವಸ್ಥೆ ಮಾಡಿದೆಯಾದರೂ, ವಿದ್ಯಾರ್ಥಿಗಳು ತಮ್ಮ ಸೈಕಲ್‌ಗಳು ತಳ್ಳಿಕೊಂಡೆ ಈ ರಸ್ತೆಯಲ್ಲಿ ಸಾಗುತ್ತಾರೆ.

‘ರಸ್ತೆ ಅಭಿವೃದ್ಧಿ ಮತ್ತು ವಿಸ್ತರಣಕ್ಕಾಗಿ ಮೂರು ಎಕರೆ  ಭೂಮಿಯನ್ನು ಬಿಟ್ಟುಕೊಟ್ಟಿದ್ದೆನೆ, 8 ವರ್ಷವಾಗಿದ್ದರೂ ಸಮರ್ಪಕವಾದ ರಸ್ತೆ ನಿರ್ಮಿಸುವಲ್ಲಿ ಇಲಾಖೆ ಆಸಕ್ತಿವಹಿಸಿಲ್ಲ. ಆಯ್ಕೆಗೊಂಡ ಜನಪ್ರತಿನಿಧಿಗಳು ನಿರ್ಲಕ್ಷ್ಯವಹಿಸಿದ್ದಾರೆ.ಅನೇಕ ಬಾರಿ ಈ ಬಗ್ಗೆ ಮನವಿ ಸಲ್ಲಿಸಿದ್ದರೂ ಗಮನಹರಿಸಿಲ್ಲ’ ಎಂಬುದು ಇಲತೊರೆ ಗ್ರಾಮದ ಗಾಣಿಗರ ಗೊವಿಂದಪ್ಪ ಅವರ ಆರೋಪ.

ಇದು ರಸ್ತೆ ಕಥೆಯಾಯ್ತು. ಇನ್ನು ಕುಡಿಯುವ ನೀರಿನ ವ್ಯಥೆ. ಈ ಗ್ರಾಮದ ಸುತ್ತಲಿನ ಪ್ರದೇಶದಲ್ಲಿ 8-10 ಕಲ್ಲು ಗಣಿಗಾರಿಕೆ ಘಕಟಗಳಿವೆ. ಗ್ರಾಮದ ಕೂಲಿ ಕಾರ್ಮಿಕ ಸಂಖ್ಯೆ ಶೇ 75ರಷ್ಟಿದೆ.ಆದರೆ  ವಿದ್ಯುತ್‌ನ ಕಣ್ಣಾ ಮುಚ್ಚಾಲೆಯಿಂದಾಗಿ ಸಕಾಲದಲ್ಲಿ ಕುಡಿಯುವ ನೀರು ಸರಬರಾಜಾಗುವುದಿಲ್ಲ.ತುರ್ತು ಪರಿಸ್ಥಿತಿಯಲ್ಲಿ ನೀರು ಪಡೆಯಲು ಸೂಕ್ತ ಕೊಳವೆ ಬಾವಿ ವ್ಯವಸ್ಥೆ ಇಲ್ಲ. ಹೀಗಾಗಿ ಕುಡಿಯುವ ನೀರಿನ ಬವಣೆ ಹೆಚ್ಚಿದೆ ಎಂಬುದು ಗ್ರಾಮಸ್ಥರ ದೂರು.

ನೀರಿನ ಬವಣೆ ಹೀಗಾದರೆ, ಗ್ರಾಮದ ನೈರ್ಮಲ್ಯ ಪರಿಸ್ಥಿತಿಯಂತೂ ಹೇಳತೀರದು.ಪ್ರಸ್ತುತ ನಿರ್ಮಿಸ ಲಾಗಿರುವ ಏಕೈಕ ಚರಂಡಿ ಈಗ ದುರ್ವಾಸನೆಯಿಂದ ಕೂಡಿದೆ. ಪ್ರಮುಖ ಬೀದಿಗಳಲ್ಲಿ ಚರಂಡಿ ವ್ಯವಸ್ಥೆಯೇ ಇಲ್ಲ.ಹೀಗಾಗಿ ಕೊಳೆತ ತಾಜ್ಯ ಎಲ್ಲಂದರಲ್ಲಿ ರಾಶಿಯಾಗಿ ಬಿದ್ದು, ಮಾರಕ ರೋಗಗಳ ತಾಣವಾಗಿ ಮಾರ್ಪಟ್ಟಿದೆ. ಈ ಸಮಸ್ಯೆ ಕುರಿತು ಅನೇಕ ಬಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯವಹಿಸಲಾಗಿದೆ ಎಂದು ಗ್ರಾಮದ ಯುವಕರು ಆರೋಪಿಸುತ್ತಾರೆ.

ಕನ್ನಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಲತೊರೆ ಗ್ರಾಮದಲ್ಲಿ 4-5 ಕುಟುಂಬಗಳಿಗೆ ಸರ್ಕಾರದಿಂದ ಆಶ್ರಯ ಯೋಜನೆ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಆದರೆ ಸಾಕಷ್ಟು ನಿವೇಶನ ಖಾಲಿಯಿದ್ದರೂ, ಬಡವರಿಗೆ, ಕೂಲಿ ಕಾರ್ಮಿಕರಿಗೆ ನಿವೇಶನ ಹಂಚಿಕೆಯಾಗಿಲ್ಲ. ಅನೇಕ ಕಡು ಬಡವರು ಬಿದ್ದು ಹೋಗುತ್ತಿರುವ ಮನೆಗಳಲ್ಲಿಯೇ ವಾಸ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರ ಆರೋಪಿಸುತ್ತಾರೆ.

ತಾಲ್ಲೂಕಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ ಕನ್ನಮಂಗಲ ಗ್ರಾಮ ಪಂಚಾಯಿತಿ ಇಡೀ ತಾಲ್ಲೂಕಿನಲ್ಲಿ ಅತಿಹೆಚ್ಚು ಸಂಪನ್ಮೂಲ ಕ್ರೋಡೀಕರಿಸುವ ಏಕೈಕ ಗ್ರಾಮ ಪಂಚಾಯಿತಿ. ಆದರೂ ತನ್ನ ವ್ಯಾಪ್ತಿಯಲ್ಲಿರುವ ಗ್ರಾಮಗಳ ಅಭಿವೃದ್ಧಿಗೆ ಮೂಲ ಸೌಕರ್ಯಗಳ ಬಗ್ಗೆ ನಿರ್ಲಕ್ಷ್ಯವಹಿಸುತ್ತಿರುವುದು ಸರಿಯಲ್ಲ’ ಎಂಬುದು ಸ್ಥಳಿಯ ಗ್ರಾಮಸ್ಥರ ಆರೋಪ. ಸಂಬಂಧಪಟ್ಟ ಜನಪ್ರತಿನಿಧಿಗಳು ಗ್ರಾಮೀಣ ಮೂಲ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು’ ಎಂಬುದು ಗ್ರಾಮಸ್ಥರ ಒತ್ತಾಸೆಯಾವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT