ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯದಿಂದ ರೈತರ ಉನ್ನತಿ: ಐಹೊಳೆ

Last Updated 26 ಸೆಪ್ಟೆಂಬರ್ 2011, 10:35 IST
ಅಕ್ಷರ ಗಾತ್ರ

ರಾಯಬಾಗ: ಸಹಕಾರಿ ಬ್ಯಾಂಕುಗಳ ಮೂಲಕ ಎಲ್ಲ ರೀತಿಯ ಸಾಲ ಸೌಲಭ್ಯ ನೀಡಿದರೆ ರೈತರು ಆರ್ಥಿಕ ಅಭಿವೃದ್ಧಿ ಹೊಂದುವರು. ಅಲ್ಲದೆ ಸರ್ಕಾರದ ಸೌಲಭ್ಯಗಳಿಗೆ ಆಸೆ ಪಡದೆ ತಮ್ಮ ಇತಿಮಿತಿಯಲ್ಲಿ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.

ಪಟ್ಟಣದ ಯಕ್ಸಂಬಾದ ಶ್ರೀ ಬೀರೇಶ್ವರ ಸೌಹಾರ್ದ ಕ್ರೆಡಿಟ್ ಸಹಕಾರಿ ಲಿ.ನ 45ನೆಯ ಶಾಖೆಯನ್ನು  ಉದ್ಘಾಟಿಸಿ ಮಾತನಾಡಿದರು. ರೈತರು ಸೌಹಾರ್ದ ಸಹಕಾರಿ ಬ್ಯಾಂಕುಗಳ ಸದುಪಯೋಗ ಪಡೆದುಕೊಂಡು ಕ್ರಿಯಾತ್ಮಕ ಹಾಗೂ ಪ್ರಗತಿಶೀಲ ಅರ್ಥ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ರೈತರು ಮತ್ತು ಸಣ್ಣ ವ್ಯಾಪಾರಸ್ಥರು ಬ್ಯಾಂಕುಗಳಿಂದ ಪಡೆದ ಸಾಲವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಆರ್ಥಿಕ ವೃದ್ಧಿಗೆ ಆದ್ಯತೆ ನೀಡುವ ಜೊತೆಗೆ ಸಾಲವನ್ನು ಬೇಗ ಮರು ಪಾವತಿ ಮಾಡಿದರೆ ಉನ್ನತಿ ಸಾಧಿಸಲು ಸಹಾಯಕ ಎಂದು ಹೇಳಿದರು.

ಸಂಸ್ಥಾಪಕ ಅಣ್ಣಾಸಾಬ ಜೊಲ್ಲೆ ಮಾತನಾಡಿ, ಗ್ರಾಹಕರಿಗೆ ಒಂದೇ ಸೂರಿನಡಿ ಎಲ್ಲ ರೀತಿಯ ಹಣಕಾಸಿನ ಯೋಜನೆಗಳ ಸೌಲಭ್ಯ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಬ್ಯಾಂಕಿನ ಶಾಖೆಗಳನ್ನು ಮಹಾರಾಷ್ಟ್ರ, ಗೋವಾ, ಗುಜರಾತ್ ರಾಜ್ಯಗಳಿಗೂ ವಿಸ್ತರಿಸುವ ಉದ್ದೇಶವಿದೆ. ಇದೇ 28ರಿಂದ ರಿಲಾಯನ್ಸ್ ಸಂಸ್ಥೆ ಸಹಯೋಗದಿಂದ ಚಿನ್ನ ಮಾರಾಟ ಸೌಲಭ್ಯ ಪ್ರಾರಂಭಿಸುವದಾಗಿ ವಿವರಿಸಿದರು.

ಬ್ಯಾಂಕಿನಿಂದ ಪ್ಯಾನ್ ಕಾರ್ಡ್, ಇ-ಸ್ಟ್ಯಾಂಪ್, ವಿಮಾನ, ರೈಲು ಬಸ್ ಟಿಕೆಟ್ ಕಾಯ್ದಿರಿಸುವಿಕೆ, ಡಿಮ್ಯಾಟ್ ಅಕೌಂಟ್ ಸೌಲಭ್ಯ ಲಭ್ಯವಿದೆ ಎಂದು ನುಡಿದರು.

ಶಾಂತಿನಾಥ ಶೆಟ್ಟಿ, ವಕೀಲ ಎಲ್.ಬಿ. ಚೌಗಲಾ ಮಾತನಾಡಿದರು. ನಂದಿಕುರಳಿಯ ವೀರಭದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಬಾವನ ಸೌಂದತ್ತಿಯ ಶಿವಶಂಕರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಜ್ಯೋತಿಪ್ರಸಾದ ಬುದ್ಧಿ ಮಾಂಧ್ಯ ಮಕ್ಕಳ ಶಾಲೆಯ ಜ್ಯೋತಿ ಪ್ರಸಾದ ಜೊಲ್ಲೆ, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಆರ್.ಸಿ. ಚೌಗಲಾ, ಪ.ಪಂ. ಅಧ್ಯಕ್ಷ ಚಂದ್ರಕಾಂತ ಕೋರೆ, ಕಲ್ಲಪ್ಪ ಹಳಿಂಗಳಿ, ವೀರಪ್ಪ ನಿಂಗನೂರೆ, ಇಸ್ಮಾಯಿಲ್ ಮುಲ್ಲಾ, ಅಣ್ಣಪ್ಪ ಘಂಟಿ, ಶೈಲೇಂದ್ರ ಪಾಟೀಲ, ಅಣ್ಣಾಸಾಬ ಕುಲಗುಡೆ, ಯಲ್ಲಪ್ಪ ತಳವಾರ, ರಾಜು ರಂಗೊಳಿ, ಜಯಾನಂದ ಜಾಧವ, ಯಾಸೀನ್ ತಾಂಬೂಳಿ, ರತ್ನಾ ಬನಗೆ ಉಪಸ್ಥಿತರಿದ್ದರು.
ಜೊಲ್ಲೆ ಸಮೂಹದ ಶಶಿಕಲಾ ಜೊಲ್ಲೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಎ. ಗುರವ ಕಾರ್ಯಕ್ರಮ ನಿರೂಪಿಸಿದರು. ಜಯಾನಂದ ಜಾಧವ ವಂದಿಸಿದರು.

ಬೀಳ್ಕೊಡುಗೆ ಸಮಾರಂಭ
ರಾಯಬಾಗ:
ಸರ್ಕಾರಿ ನೌಕರರು ಕಾರ್ಯನಿರ್ವಹಿಸುವಾಗ ಬರುವ ಅಡೆತಡೆಗಳನ್ನು ಜಾಣತನದಿಂದ ನಿರ್ವಹಿಸಿ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಜಿ.ಪಂ. ಉಪ ಕಾರ್ಯದರ್ಶಿ ರವಿ ಬಸರೀಹಳ್ಳಿ ಹೇಳಿದರು.

ಶನಿವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಸೇವಾ ನಿವೃತ್ತರಾದ ಶಿವಾನಂದ ಶಿರಗಾವಿ ಅವರನ್ನು ಸತ್ಕರಿಸಿ,  ವರ್ಗವಣೆಗೊಂಡ ತಾಪಂ ವ್ಯವಸ್ಥಾಪಕ ಕುರ್ಣೆ ಅವರನ್ನು ಬೀಳ್ಕೊಡಲಾಯಿತು.
ಉಮೇಶ ಪೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾ.ಪಂ. ಇಒ ಅಜಿತ ಹಲಸೋಡೆ ಭಾಗವಹಿಸಿದ್ದರು.

ಸಂಘದ ಪದಾಧಿಕಾರಿಗಳಾದ ಬಿ.ಜಿ. ಚಿವಟಗಿ, ಸಿ.ಜಿ. ಕುಲಕರ್ಣಿ, ಸತೀಶ ನರಗಟ್ಟಿ, ಎಸ್.ಡಿ. ಅವಟೆ, ಎಲ್.ಬಿ. ನಿಂಬಾಳಕರ್, ಭಗವಂತ ಮಸಾಲಜಿ, ಮಠದ, ಕಾಂಬಳೆ, ಸುರೇಶ ಮೇಖಳಿ, ಗಡದೆ, ಮಹಾಂತೇಶ ಕೋರೆ, ಬಿ.ಎಸ್. ಕಾಂಬಳೆ, ಕರಿಹೊಳೆ ಉಪಸ್ಥಿತರಿದ್ದರು. ಬಿ.ಬಿ. ಮೊಖಾಶಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರಮೇಶ ಡಿ.ಪಿ. ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT