ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕಂದ ನಿಲಯದ ಪಿರಮಿಡ್

Last Updated 3 ಜುಲೈ 2012, 19:30 IST
ಅಕ್ಷರ ಗಾತ್ರ

ಅಬ್ಬಾ... ಆ 14 ತಿಂಗಳುಗಳು!.... ಉದ್ಘಾರ ತೆಗೆದು ಕಣ್ಣುಗಳನ್ನು ಅಗಲಗೊಳಿಸಿದ್ದರಷ್ಟೆ. ಮರುಕ್ಷಣವೇ ಸುಬ್ರಹ್ಮಣ್ಯ-ತ್ರಿವೇಣಿ ದಂಪತಿಯ ಮುಖದ ತುಂಬಾ ಸಂತೃಪ್ತಿ, ಸಡಗರ, ಉದ್ವೇಗದ ಸಮ್ಮಿಶ್ರಭಾವ.14 ತಿಂಗಳು... ಅವರ ಕನಸಿನ `ಸಾಯಿ ಸ್ಕಂದ~ ನಿಲಯ ರೂಪುಗೊಳ್ಳಲು ತೆಗೆದುಕೊಂಡ ಅವಧಿ.

ಬೆಂಗಳೂರಿನ ಸುಬ್ರಹ್ಮಣ್ಯ ನಗರದಲ್ಲಿ 25್ಡ40 ಅಡಿ ಅಳತೆಯ ಉತ್ತರ ಮುಖಿ ನಿವೇಶನದಲ್ಲಿ ಮೂರು ಅಂತಸ್ತುಗಳಲ್ಲಿ(ನಾಲ್ಕನೇ ಅಂತಸ್ತಿನಲ್ಲಿ ಪುಟ್ಟ ವ್ಯಾಯಾಮ ಶಾಲೆ ಮತ್ತು ಪುಟ್ಟ ಉದ್ಯಾನವನ) ನಿರ್ಮಾಣಗೊಂಡ `ಗೃಹ~ಕ್ಕೆ ಕೆಲ ದಿನಗಳ ಹಿಂದಷ್ಟೇ ಪ್ರವೇಶ ಮಾಡಿದ್ದಾರೆ. ಮನೆಯೊಳಗೆ ಆ ಶುಭ ಸಂದರ್ಭದ ಸಡಗರದ ಭಾವವಿನ್ನೂ ನಲಿದಾಡುತ್ತಿದೆ, ದಂಪತಿ ಮತ್ತು ಪುತ್ರಿಯರಿಬ್ಬರ ಮೊಗದಲ್ಲೂ  ಅದರ ಪ್ರತಿಫಲನ!

ಅಂದುಕೊಂಡಂತೆ ವಾಸ್ತುಶಾಸ್ತ್ರ ಪ್ರಕಾರವೇ ಮನೆ ನಿರ್ಮಾಣ ಪೂರ್ಣಗೊಂಡಿದ್ದು ದಂಪತಿಗೆ ಬಹಳ ಸಂತೃಪ್ತಿ ಉಂಟು ಮಾಡಿದೆ. ಮುಖ್ಯವಾಗಿ ದೇವರ ಕೋಣೆಯ ಮಾಡಿಗೆ ಗಾಜಿನಲ್ಲಿ ಪಿರಮಿಡ್ ಆಕಾರ ನೀಡಲು ಸಾಧ್ಯವಾಗಿದ್ದನ್ನೂ, ಅದು 51 ಡಿಗ್ರಿ ಕೋನದಲ್ಲಿರುವ ಕಾರಣ ದೇವರ ವಿಗ್ರಹದ ಮೇಲೆ ನಡು ಮಧ್ಯಾಹ್ನ ಸೂರ್ಯ ಕಿರಣಗಳು ನೇರವಾಗಿ ಬೀಳುವ ಸಂಗತಿಯನ್ನು ಮನೆ ನೋಡಲು ಬಂದವರೆದುರು ವರ್ಣಿಸುವಾಗ ಆಸ್ತಿಕ ಸುಬ್ರಹ್ಮಣ್ಯ ಕಣ್ಣುಗಳಲ್ಲಿ ದೈವ ಪರವಶ ಭಾವ.

ಆಡಿಟಿಂಗ್ ಮತ್ತು ತೆರಿಗೆ ಸೇವೆ ವೃತ್ತಿಯ ಸುಬ್ರಹ್ಮಣ್ಯ ಅವರಿಗೆ ನಿತ್ಯ ಅಂಕಿಗಳ ಜತೆಗಿನ ಒಡನಾಟ, ಲೆಕ್ಕಾಚಾರವೇ ಮುಖ್ಯವಾದ ಕೆಲಸದ ಅನುಭವ ಮನೆಯ ನಿರ್ಮಾಣದಲ್ಲಿ ಬಹಳ ನೆರವಾಗಿದೆ. ಅದರಲ್ಲೂ ಮನೆ ನಿರ್ಮಾಣ ಸಮಯದಲ್ಲಿ ಪ್ರತಿ ಹಂತದಲ್ಲೂ ಅವರ `ಲೆಕ್ಕಾಚಾರ~ದ ಬುದ್ಧಿಯೇ ಸಾಕಷ್ಟು ಹಣ ಉಳಿತಾಯ ಮಾಡಿಕೊಟ್ಟಿದೆ.

ವೃತ್ತಿ ಬದುಕಿನ ಮಿತ್ರರೂ, ಸೇವೆ ಪಡೆಯುವವರೂ ಉತ್ತಮ ಪರಿಕರಗಳು ಸ್ಪರ್ಧಾತ್ಮಕ ಬೆಲೆಯಲ್ಲಿ ದೊರೆಯುವಂತೆ ಮಾಡಿಕೊಟ್ಟಿದ್ದಾರೆ. ಮಾವ ವೆಂಕಟೇಶಯ್ಯ ಮಾರ್ಗದರ್ಶನ, ನಿವೇಶನದ ಬಳಿ ನಿಂತು ಉಸ್ತುವಾರಿ ವಹಿಸಿದ್ದು ಸುಬ್ರಹ್ಮಣ್ಯ ಅವರ ಅರ್ಧಹೊರೆ ಕಡಿಮೆ ಮಾಡಿದೆ.

ಬಂಧು-ಮಿತ್ರರ ಇಷ್ಟೆಲ್ಲ ನೆರವು-ಮಾರ್ಗದರ್ಶನದ ಮಧ್ಯೆಯೂ 14 ತಿಂಗಳ ಕಾಲ (ನಿರ್ಮಾಣ ಆರಂಭ 2011 ಫೆಬ್ರುವರಿ-ಮುಕ್ತಾಯ 2012 ಏಪ್ರಿಲ್) ಅನುಭವಿಸಿದ ಒತ್ತಡ, ಕಟ್ಟಡ ಕಾರ್ಮಿಕರ ಸಮಸ್ಯೆ `ಮನೆ ಕಟ್ಟಿ ನೋಡು~ ಎಂಬ ಮಾತನ್ನು ಹಿರಿಯರು ಏಕೆ ಹಾಗೆ ಒತ್ತು ನೀಡಿ ಹೇಳುತ್ತಿದ್ದರು ಎಂಬುದನ್ನು ಅವರಿಗೆ ಚೆನ್ನಾಗಿ ಮನದಟ್ಟು ಮಾಡಿಕೊಟ್ಟಿದೆ. ಹಾಗಾಗಿಯೇ ದಂಪತಿಗೆ ಆ 14 ತಿಂಗಳದ್ದು ದೊಡ್ಡ ಅನುಭವ.

ಒಟ್ಟಾರೆ ಮನೆ ನಿರ್ಮಾಣದ ಎಲ್ಲ ಕಷ್ಟ-ಸುಖದ ರುಚಿಯೂ ಸುಬ್ರಹ್ಮಣ್ಯ ಅವರಿಗೆ ಆಗಿದೆ. ಕಾರಣ, ಅವರು ಕಾಮಗಾರಿಯನ್ನಷ್ಟೇ ಗುತ್ತಿಗೆ ಲೆಕ್ಕದಲ್ಲಿ ಆಯಾ ಕ್ಷೇತ್ರದ ಕಾರ್ಮಿಕರಿಗೆ ವಹಿಸಿಕೊಟ್ಟಿದ್ದರು. ಅಗತ್ಯವಾದ ಸಾಮಗ್ರಿಗಳ ಖರೀದಿಯನ್ನು ಮಾತ್ರ ಸ್ವತಃ ನಿರ್ವಹಿಸಿದರು. ತ್ರಾಸದಾಯಕ ಎನಿಸಿದರೂ ಈ ಕ್ರಮ ಅವರಿಗೆ ಸಾಕಷ್ಟು ಹಣ ಉಳಿತಾಯ ಮಾಡಿಕೊಟ್ಟಿದೆ.

ಮನೆ ನಿರ್ಮಾಣಕ್ಕೆ ಅಗತ್ಯವಾಗಿ ಬೇಕಾಗಿದ್ದ ವಿವಿಧ ವಸ್ತುಗಳು ಎಲ್ಲೆಲ್ಲಿ ಲಭ್ಯವಿವೆ? ಎಷ್ಟು ಬೆಲೆಯಲ್ಲಿವೆ? ಯಾವ ಬ್ರಾಂಡ್ ಗುಣಮಟ್ಟ ಎಷ್ಟು? ಎಂಬ ಪ್ರಶ್ನೆ-ಅನುಮಾನಗಳಿಗೆಲ್ಲ ಸುಬ್ರಹ್ಮಣ್ಯ ಅವರು ಹೆಚ್ಚಿನ ಉತ್ತರ ಕಂಡುಕೊಂಡಿದ್ದ ಇಂಟರ್ನೆಟ್‌ನಲ್ಲಿ!

ಆ ಮಟ್ಟಿಗೆ ಅವರಿಗೆ ಸಾಮಗ್ರಿ ಖರೀದಿಯಲ್ಲಿ `ಗೂಗಲ್~ ಸರಿಯಾದ ಮಾರ್ಗದರ್ಶನ ಮಾಡಿದೆ. ಜತೆಗೆ ಅದಾಗಲೇ ಮನೆ ಕಟ್ಟಿ ಅನುಭವ ಪಡೆದಿದ್ದ ಬಂಧು-ಮಿತ್ರರಿಂದ ಅಗತ್ಯವಾದಾಗಲೆಲ್ಲ ಟಿಪ್ಸ್‌ಗಳನ್ನೂ ಪಡೆದುಕೊಳ್ಳುತ್ತಿದ್ದರು. ಜತೆಗೆ ನನ್ನ `ವಾಸ್ತುಶಿಲ್ಪ~ ಉಸ್ತುವಾರಿ, ಮಾರ್ಗದರ್ಶನವೂ ಆಗ್ಗಾಗ್ಗೆ ಇದ್ದೇ ಇರುತ್ತಿತ್ತು.

ಗುಣಮಟ್ಟ ವಿಚಾರದಲ್ಲಿಯಂತೂ ಯಾವುದೇ ರೀತಿ ರಾಜಿ ಮಾಡಿಕೊಳ್ಳದೆ ಉತ್ತಮ ಸಾಮಗ್ರಿಗಳನ್ನೇ ಅವರು ಖರೀದಿಸಿದರು. ಹತ್ತಾರು ಅಂಗಡಿಗಳಿಗೆ ಅಲೆದಾಡಿ, ಹಲವು ಮೂಲಗಳಿಂದ ಮಾಹಿತಿ ಸಂಗ್ರಹಿಸಿಕೊಂಡಿದ್ದರಿಂದ ಎಲ್ಲಿ ಯಾವ ವಸ್ತು ಕಡಿಮೆ ಬೆಲೆಗೆ ಸಿಗುತ್ತದೆ ಎಂಬುದು ಮೊದಲೇ ತಿಳಿದಿರುತ್ತಿತ್ತು.
 
ಹಾಗಾಗಿ ಮೆಟೀರಿಯಲ್ಸ್ ಖರೀದಿಯಲ್ಲಿ ಸಾಕಷ್ಟು ಹಣ ಉಳಿಸಲು ಸಾಧ್ಯವಾಯಿತು. 28 ಚದರದ ಮನೆಯನ್ನು ಒಟ್ಟು 40-42 ಲಕ್ಷ ರೂಪಾಯಿಯಲ್ಲಿ (ಕಟ್ಟಡ ನಿರ್ಮಾಣಕ್ಕೆ 30-31 ಲಕ್ಷ- ಒಳಾಂಗಣ ವಿನ್ಯಾಸಕ್ಕೆ 10-11 ಲಕ್ಷ ವೆಚ್ಚವಾಗಿದೆ) ಪೂರ್ಣಗೊಳಿಸಲು ಸುಬ್ರಹ್ಮಣ್ಯ ಅವರಿಗೆ ಸಾಧ್ಯವಾಗಿದೆ. ಇದರಿಂದಾಗಿ ಅವರೀಗ ಮನೆ ನಿರ್ಮಾಣ ಸಾಮಗ್ರಿ ಖರೀದಿ ವಿಚಾರದಲ್ಲಿ ಹತ್ತಾರು ಮಂದಿಗೆ ಮಾರ್ಗದರ್ಶನ ಮಾಡಬಲ್ಲಷ್ಟು ಅನುಭವಿಯೂ ಅಗಿದ್ದಾರೆ(ಮೊ: 98453 19233).

`ಜೀವನದಲ್ಲಿ ಒಂದೇ ಬಾರಿ ಇಂಥ ಮನೆ ಕಟ್ಟಿಕೊಳ್ಳುವುದು. ಹಾಗಾಗಿ ಬಹಳ ವಿಶೇಷವಾದ-ಅಪರೂಪದ ವಿನ್ಯಾಸವಿರುವ ಮನೆಯನ್ನೇ ಕಟ್ಟಿಕೊಳ್ಳಬೇಕು. ಆ ಕಾರಣದಿಂದಲೇ `ವಾಸ್ತುಶಿಲ್ಪಿ~ಯ ಮೊರೆ ಹೋದೆ~ ಎನ್ನುವ ಈ `ಲೆಕ್ಕಾಚಾರದ ಸುಬ್ರಹ್ಮಣ್ಯ~, ಸಾಮಗ್ರಿಗಳ ಆಯ್ಕೆ ವಿಚಾರದಲ್ಲಿ ಬಹಳ ಸ್ಪಷ್ಟ ನಿರ್ಧಾರ ತಳೆದಿದ್ದರು.

ಹಾಗಾಗಿಯೇ ಮನೆಯ ಗೋಡೆಗಳಿಗೆ ಪ್ಲಾಸ್ಟರಿಂಗ್ ಮಾಡಿಸಲು ಕೆಲವೆಡೆ `ಜಿಪ್ಸಂ~ ಬಳಸಿದ್ದಾರೆ. ಇದಕ್ಕೆ ಸಾಮಗ್ರಿ-ನುರಿತ ಕಾರ್ಮಿಕರ ಕೂಲಿಯೂ ಸೇರಿ ಒಟ್ಟು ರೂ. 2 ಲಕ್ಷ ವೆಚ್ಚವಾಗಿದೆ.

`ಜಿಪ್ಸಂ~ ಪ್ಲಾಸ್ಟರಿಂಗ್ ಪರಿಸರ ಸ್ನೇಹಿಯೂ ಹೌದು. ಇದರಲ್ಲಿ ಮರಳು-ಸಿಮೆಂಟ್ ಬಳಕೆಯಾಗುವುದಿಲ್ಲ. ಕ್ಯೂರಿಂಗ್ ಸಹ ಬೇಕಿಲ್ಲ. ಪಟ್ಟಿಯ ಗೋಜಿಲ್ಲದೆ ನೇರವಾಗಿ ಪೇಂಟಿಂಗ್ ಮಾಡಬಹುದು. ಇದು ಮಾಮೂಲಿ ಕಾಂಕ್ರೀಟ್ ಪ್ಲಾಸ್ಟರಿಂಗ್‌ಗಿಂತ ಕೊಂಚ (ಶೇ 15ರಿಂದ 20ರಷ್ಟು) ದುಬಾರಿ ಎನಿಸಿದರೂ ಮನೆಯೊಳಗೆ ತಂಪು ಉಂಟು ಮಾಡುತ್ತದೆ ಮತ್ತು ದೀರ್ಘ ಕಾಲ ಬಾಳಿಕೆ ಬರುತ್ತದೆ ಎಂಬ ಅರಿವು ಅವರಿಗಿದೆ.

ಸಂಜೆ 7ರ ಸೂರ್ಯ ದಿಗಂತದಂಚಿನಲ್ಲಿ ಸಾಗುತ್ತಿದ್ದರೂ ಅವನ ಹೊಂಬಣ್ಣದ ಕಿರಣಗಳು ಮನೆಯ ಒಳಭಾಗವನ್ನೂ ಬೆಳಗುವಂತಿರಬೇಕು  ಎಂಬುದು `ಸಾಯಿ ಸ್ಕಂದ~ ನಿಲಯದ ಈ ದಂಪತಿಯ ಬಯಕೆಯಾಗಿತ್ತು. ಆ ಕಾರಣಕ್ಕೇ ತಾರಸಿಯಲ್ಲಿ ಮತ್ತು ಮನೆಯ ಎಡ-ಬಲ ಪಾರ್ಶ್ವದ ಗೋಡೆಗಳಲ್ಲಿ ಅಲ್ಲಲ್ಲಿ ವಿಶೇಷ ರೀತಿಯಲ್ಲಿ ಗಾಜಿನ ಇಟ್ಟಿಗೆಗಳನ್ನೇ ಬಳಸಲಾಗಿದೆ. ಹಾಗಾಗಿ ಸಂಧ್ಯಾಕಾಲದಲ್ಲೂ ಮನೆಯೊಳಗೆ `ರವಿತೇಜ~ನ ನಗು ಹರಡಿಕೊಂಡಿರುತ್ತದೆ.

ಮುಂಬಾಗಿಲು, ದೇವರ ಕೋಣೆ ಚೌಕಟ್ಟು-ಬಾಗಿಲಿಗೆ ತೇಗದ ಮರ ಬಳಸಲಾಗಿದೆ. ಇಷ್ಟು ವಿಶಾಲ ಮನೆಯಲ್ಲಿ ಒಟ್ಟು 10 ಕಿಟಕಿ, 17 ಬಾಗಿಲುಗಳಿದ್ದು, ಚೌಕಟ್ಟಿಗಷ್ಟೇ ಮರ.. ಒಟ್ಟಾರೆ 150 ಘನ ಅಡಿ ಮರ ಬಳಸಲಾಗಿದೆ. ಕೆಲವು ಬಾಗಿಲು(ಷಟರ್ಸ್) ಪ್ಲೈವುಡ್‌ನವು.

ಲಿವಿಂಗ್ ಮತ್ತು ಕಿಚನ್‌ನಲ್ಲಿ ಮಾತ್ರ ನೆಲಕ್ಕೆ ಗ್ರಾನೈಟ್ ಬಳಸಿದ್ದರೆ, ಮೂರು ಕೊಠಡಿಗಳಿಗೆ ವೆಟ್ರಿಫೈಡ್ ಟೈಲ್ಸ್ ಹೊದಿಸಲಾಗಿದೆ. ಮಾಸ್ಟರ್ ಬೆಡ್‌ರೂಂಗೆ ಮಾತ್ರ ಮರದ ನೆಲಹಾಸು.

ಕೆಲವೆಡೆ ಚೀನಾ ಆರ್ಟಿಫಿಷಿಯಲ್ ಮಾರ್ಬಲ್(1ಅಡಿಗೆ ರೂ. 225) ನೆಲಕ್ಕೆ ಹಾಕಲಾಗಿದೆ. ಜೋಡಿಸುವ ಕೂಲಿ ಸೇರಿ ಒಟ್ಟು 25ರಿಂದ 30 ಸಾವಿರ ವೆಚ್ಚವಾಗಿದೆ.

ನಿರ್ಮಾಣಸಾಮಗ್ರಿ- ಕಾರ್ಮಿಕರ ಆಯ್ಕೆ
 ಕಾಮಗಾರಿ ಕಾರ್ಮಿಕರ ವಿಚಾರದಲ್ಲಿಯೂ ಬಹಳ ಚ್ಯೂಸಿಯಾಗಿದ್ದ ಸುಬ್ರಹ್ಮಣ್ಯ ದಂಪತಿ, ಕಟ್ಟಡ ನಿರ್ಮಾಣಕ್ಕೆ ಸ್ಥಳೀಯ ಕಾರ್ಮಿಕರನ್ನೇ ಅವಲಂಬಿಸಿದ್ದರು. ಚದರ ಲೆಕ್ಕದಲ್ಲಿ ರೂ. 18000ದಂತೆ ಲೇಬರ್ ಕಾಂ ಟ್ರ್ಯಾಕ್ಟ್ ನೀಡಿದ್ದರು.

ಆದರೆ, ದಸರಾ ರಜೆಗೆ ಹೋದ ಮೊದಲ ತಂಡ ಕೈಕೊಟ್ಟಿತು. ಮತ್ತೆ ಹೊಸದಾಗಿ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕಾಗಿ ಬಂದಿದ್ದು, ಆಗ ಉಂಟಾಗಿದ್ದ ಆತಂಕ ಒತ್ತಡವನ್ನಿನ್ನೂ ದಂಪತಿ ಮರೆತಿಲ್ಲ.

ಎಲೆಕ್ಟ್ರಿಕಲ್ ಕೆಲಸಕ್ಕೂ ಸ್ಥಳೀಯರನ್ನೇ ಆಶ್ರಯಿಸಿದ್ದು, ಇಡೀ ಮನೆಯ ವೈರಿಂಗ್50000 ರೂಪಾಯಿಗೆ ಗುತ್ತಿಗೆ ನೀಡಿದ್ದರು. ಆದರೆ, ಸ್ವಿಚ್, ವೈರ್ ಸೇರಿದಂತೆ ಎಲೆಕ್ಟ್ರಿಕಲ್ ಫಿಟ್ಟಿಂಗ್‌ಗಳನ್ನು ಅಂತರ್ಜಾಲದಲ್ಲಿ ಜಾಲಾಡಿ, ಸರಿಯಾದ ಬ್ರಾಂಡ್ ಆಯ್ಕೆ ಮಾಡಿಕೊಂಡು ಸ್ವತಃ ಅಂಗಡಿಗೆ ತೆರಳಿ ಖರೀದಿಸಿದ್ದಾರೆ.

ಹಾಗಾಗಿ ಇಲ್ಲಿಯೂ ಅವರಿಗೆ ಗುಣಮಟ್ಟದ ಸಾಮಗ್ರಿಯ ಆಯ್ಕೆ ಮತ್ತು ಹಣದ ಉಳಿತಾಯ ಸಾಧ್ಯವಾಗಿದೆ.ನಲ್ಲಿ ಸಾಮಗ್ರಿ ಉತ್ತಮ ಬ್ರಾಂಡ್ ಆಗಿರುವುದರಿಂದ ರೂ. 1.50 ಲಕ್ಷವಾಗಿದೆ. ಜೋಡಣೆಗೆ ಸ್ಥಳೀಯ ಕಾರ್ಮಿಕರು ಒಟ್ಟು ಗುತ್ತಿಗೆ ಲೆಕ್ಕದಲ್ಲಿ ರೂ. 35000 ಪಡೆದಿದ್ದಾರೆ.ಕಾರ್ಪೆಂಟರಿಗೆ (ಮರದ ಕೆಲಸ) ರಾಜಸ್ತಾನದವರನ್ನು ಅನುಭವಿಗಳನ್ನು ಆಯ್ಕೆ ಮಾಡಿಕೊಂಡಿದ್ದರು.

ಇವರಿಗೆ ಚದರಡಿಗೆ ರೂ. 150ರಿಂದ 200ರವರೆಗೂ ನೀಡಲಾಗಿದೆ. ಕಾರಣ 14 ತಿಂಗಳ ಅವಧಿಯಲ್ಲಿ ಕೂಲಿಯಲ್ಲಿಯೂ ಏರಿಕೆಯಾಗಿದೆ. ಒಟ್ಟಾರೆ ಮರದ ಕೆಲಸಕ್ಕೇ ಒಟ್ಟು 3 ಲಕ್ಷದವರೆಗೂ ವೆಚ್ಚವಾಗಿದೆ. ಇಡೀ ಮನೆಗೆ ಬಣ್ಣ ಹೊಡೆಸಲು 1 ಲಕ್ಷ ರೂಪಾಯಿ ವೆಚ್ಚವಾಗಿದೆ. ಆದರೆ, ಉತ್ತರ ಪ್ರದೇಶದವರ ಕೆಲಸ ಗಮನ ಸೆಳೆಯುವಂತಿದೆ.

ಗ್ರಾನೈಟ್, ವೆಟ್ರಿಫೈಡ್ ಫ್ಲೋರಿಂಗ್ ಕೆಲಸ ಮಾಡಿದವರು ರಾಜಸ್ತಾನದವರೆ. ಇದನ್ನೂ ಚದರಡಿ ಲೆಕ್ಕದಲ್ಲಿ(ರೂ. 22ರಿಂದ 25) ಮಾಡಲಾಗಿದೆ. 1 ಸಾವಿರ ಚದರಡಿ ಗ್ರಾನೈಟ್ ಬಳಸಲಾಗಿದೆ(ಚದರಡಿಗೆ ರೂ. 120).ಚದರಕ್ಕೆ ರೂ. 30ರ ಲೆಕ್ಕದಲ್ಲಿ ಉತ್ತರ ಪ್ರದೇಶದ ಕಾರ್ಮಿಕರು ಜಿಪ್ಸಂ ಪ್ಲಾಸ್ಟರಿಂಗ್ ಮಾಡಿಕೊಟ್ಟಿದ್ದಾರೆ.

ತಳಪಾಯವೇನೂ ಸಾಂಪ್ರದಾಯಿಕ ಶೈಲಿಯ ಕಲ್ಲಿನ ಕಟ್ಟಡವಲ್ಲ. ಒಟ್ಟು 8 ಕಾಂಕ್ರಿಟ್ ಪಿಲ್ಲರ್‌ಗಳ ಮೇಲೆ ಇಡೀ ಮನೆ ನಿಂತಿದೆ. ತಾರಸಿಯ ಭಾರ ಹೊರಲು ಸಾಕಷ್ಟು ಬೀಮ್‌ಗಳನ್ನೂ ಬಳಸಿಕೊಳ್ಳಲಾಗಿದೆ. ಮಧ್ಯೆ ಕೆಲವೆಡೆ ಗೋಡೆಗಳಿಗೆ ಅಲಂಕಾರವೆಂಬಂತೆ ಕ್ಲೇಬ್ರಿಕ್ಸ್ ಸಹ ಬಳಕೆಯಾಗಿವೆ. ಅವುಗಳ ಕೆಂಪು ಬಣ್ಣವೂ ಮನೆಯ ಒಳ-ಹೊರ ನೋಟವನ್ನು ಪ್ರತ್ಯೇಕಗೊಳಿಸಿದೆ.

ಒಟ್ಟಾರೆ `ಸಾಯಿ ಸ್ಕಂದ~ ನಿಲಯ ತನ್ನ ವಿಶೇಷ ವಿನ್ಯಾಸ-ಬಣ್ಣದಿಂದಾಗಿ ಆ ಮಾರ್ಗದಲ್ಲಿ ಹೋಗಿಬರುವವರ ಗಮನ ಸೆಳೆಯುತ್ತದೆ. ದಾರಿಹೋಕರ ಕಣ್ಣು ತಮ್ಮ ಮನೆ ಮೇಲೆ ಬಿದ್ದು ಅವರ ಮುಖದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದನ್ನು ಮೊದಲ ಮಹಡಿಯ ದೊಡ್ಡ ಕಿಟಕಿಯಿಂದಲೇ ವೀಕ್ಷಿಸುವ ಮನೆ ಯಜಮಾನಿ ತ್ರಿವೇಣಿ, ಪುತ್ರಿ ಗ್ರೀಷ್ಮ ಮತ್ತು ಶ್ರಾವಣಿಗೆ ಒಳಗೊಳಗೇ ಖುಷಿ. ತಮ್ಮ `ಕನಸಿನ ಮನೆ~ ಬಗ್ಗೆ ಹೆಮ್ಮೆ!
`ಸಾಯಿ-ಸ್ಕಂದ~ ಒಳನೋಟ

ಒಟ್ಟು ನಾಲ್ಕು ಅಂತಸ್ತು. ನೆಲ ಅಂತಸ್ತಿನಲ್ಲಿ ಪ್ರವೇಶದಲ್ಲಿ ಸುವಿಶಾಲ ಪೋರ್ಟಿಕೊ. ಎರಡು ಮಾರುತಿ ಕಾರು ಆರಾಮವಾಗಿ ನಿಲ್ಲಬಲ್ಲಷ್ಟು 14್ಡ14 ಅಡಿ ಉದ್ದಗಲದ ಜಾಗ. ಪಕ್ಕದಲ್ಲಿ 10್ಡ14 ಅಡಿ ಅಗಲದ ಕೊಠಡಿ- ಅದು ಭವಿಷ್ಯದ ಆಡಿಟಿಂಗ್ ಆಫೀಸ್.

ಇಲ್ಲಿ 10್ಡ9 ಮತ್ತು 10್ಡ10 ಅಡಿ ವಿಸ್ತಾರದ ಎರಡು ಬೆಡ್‌ರೂಂನ ಮನೆಯೂ ಇದ್ದು, ಆಗಲೇ ಬಾಡಿಗೆಗೂ ಕೊಡಲಾಗಿದೆ.ಮೊದಲ ಮಹಡಿಯಿಂದ ಮೂರನೇ ಮಹಡಿವರೆಗೂ ಸುಬ್ರಹ್ಮಣ್ಯ ಕುಟುಂಬದ ವಾಸಕ್ಕೆ. ಮೊದಲ ಮಹಡಿಯಲ್ಲಿ ದೊಡ್ಡ ಲಿವಿಂಗ್ ರೂಂ. ಇದರ ವಿಶೇಷ `ಡ್ರೈ ಗಾರ್ಡನ್~. ಅಂದರೆ 14್ಡ3 ಅಡಿ ಉದ್ದಗಲದಲ್ಲಿಯೇ ಪುಟ್ಟ ಕೈತೋಟ ಮಾಡಿಕೊಳ್ಳಲು ಸ್ಥಳ ಮೀಸಲಾಗಿದೆ.

ಇದು ಹಾಲ್‌ಗೆ ವಿಶೇಷ ಆಕರ್ಷಣೆ ಒದಗಿಸಿದೆ. ಈ ಲಿವಿಂಗ್‌ನ ಒಳಾಂಗಣ ವಿನ್ಯಾಸ ಥಟ್ಟನೆ ಗಮನ ಸೆಳೆಯುವಂತಿದೆ. ಇದೇ ಅಂತಸ್ತಿನಲ್ಲಿ ಪಿರಮಿಡ್ ಆಕೃತಿ ಪೂಜಾಗೃಹ(ಬಾಗಿಲಿನ ಒಳಪಾರ್ಶ್ವ ಪುಟ್ಟ ಬೀರುವಂತೆ ಮಾಡಿರುವುದರಿಂದ ಪೂಜಾ ಸಾಮಗ್ರಿ ಇಟ್ಟುಕೊಳ್ಳಲು ಅನುಕೂಲವಾಗಿದೆ), ಓಪನ್ ಕಿಚನ್-ಡೈನಿಂಗ್, ಯುಟಿಲಿಟಿ ಮತ್ತು ಗೆಸ್ಟ್ ರೂಂ-ಬಾತ್ ರೂಂ ಅಟ್ಯಾಚ್ಡ್.

ಹೊರಭಾಗಕ್ಕೆ ಇರುವ ಮೆಟ್ಟಿಲುಗಳಿಗೇ ಗೋಡೆ ಸೇರುವಂತೆ ನಿರ್ಮಿಸಿರುವುದರಿಂದ ಈ ಮಹಡಿಯಲ್ಲಿ ಲಿವಿಂಗ್‌ಗೆ ಹೆಚ್ಚಿನ ಜಾಗ ಸಿಕ್ಕಂತಾಗಿದೆ. ಎರಡನೇ ಮಹಡಿಯಲ್ಲಿ ಮಾಸ್ಟರ್ ಬೆಡ್ ರೂಂ (11ಗಿ 24 ಅಡಿ) ಸೇರಿದಂತೆ ಒಟ್ಟು ಮೂರು ಕೊಠಡಿಗಳಿವೆ.

ಕೊಠಡಿಗಳ ನಡುವೆ ಇಲ್ಲಿಯೂ ಪುಟ್ಟ ಸೇತುವೆ ಇದೆ. ಎರಡು ಕೊಠಡಿಗೆ ಪ್ರತ್ಯೇಕ ಶೌಚಗೃಹ ಮತ್ತು ಡ್ರೆಸ್ಸಿಂಗ್ ರೂಂ ಇವೆ. ಡ್ರೆಸಿಂಗ್ ಜಾಗ ಪುಟ್ಟದೇ ಇದ್ದರೂ ವಾರ್ಡ್‌ರೋಬ್‌ಗಳಿಗೆ ಸ್ಲೈಡಿಂಗ್ ಡೋರ್ ಅಳವಡಿಸಿರುವುದರಿಂದ ಕಿಷ್ಕಿಂದೆ ಎನಿಸುವುದಿಲ್ಲ. ಬಾಗಿಲುಗಳ ಬೆನ್ನಿಗೇ ನಿಲುವುಗನ್ನಡಿ ಇದ್ದು ಅಲಂಕಾರಕ್ಕೆ ಸೂಕ್ತವಾಗಿದೆ.

ಮೂರನೇ ಮಹಡಿಯ ವಿಶೇಷ ಆಕರ್ಷಣೆ ಮೆಕ್ಸಿಕನ್ ಹುಲ್ಲಿನ ಪುಟ್ಟ ಉದ್ಯಾನ. ತಾರಸಿಯಾದ ಮೇಲೆ ಮೊದಲು ಜಲ್ಲಿಯ ಹೊದಿಕೆ, ಮೇಲೆ ಪುಟ್ಟ ಕಿಂಡಿಗಳ ಬಲೆ, ನಂತರ ಮರಳಿನ ಹಾಸಿಗೆ ಹೊದಿಸಿ ಉದ್ಯಾನ ಮಾಡಿರುವುದರಿಂದ ಜೋರು ಮಳೆಯಾದರೂ ನೀರು ಸರಾಗವಾಗಿ ಜಲ್ಲಿಕಲ್ಲುಗಳ ಸಂದಿಯಲ್ಲಿ ಬಸಿದುಹೋಗುವಂತೆ ಮಾಡಲಾಗಿದೆ.

ಇದೇ ಅಂತಸ್ತಿನಲ್ಲಿ ಪುಟ್ಟ ವ್ಯಾಯಾಮ ಶಾಲೆ, ದೊಡ್ಡ ನೀರಿನ ಟ್ಯಾಂಕ್, ಅದರ ಮೇಲೆ ಮಾಮೂಲಿಯಂತೆ ಸೋಲಾರ್ ವಾಟರ್ ಹೀಟರ್.
(ರಾಧಾ ರವಣಂ ಮೊ: 9845393580)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT