ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟೇರಿಂಗ್‌ ಬಿಗಿಯಿಂದ ಕಾರು ಕೆರೆ ಹಾದಿ ಹಿಡಿಯಿತು...

Last Updated 18 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಭದ್ರಾವತಿ: ತೀರ್ಥಹಳ್ಳಿ ಬಳಿಯ ಬೇಗುವಳ್ಳಿ ಗ್ರಾಮದ ಕೆರೆಗೆ ಮಂಗಳವಾರ ಮುಳುಗಿದ್ದ ಕಾರಿನಿಂದ ಎದ್ದು ಬಂದ ಭದ್ರಾವತಿಯ ಏಳು ಮಂದಿಯ ರೋಚಕ ಕಥೆಯ ಹಿಂದೆ ಹಲವರ ನೆರವಿನ ಹಸ್ತ ಸದ್ದಿಲ್ಲದೆ ಕೆಲಸ ಮಾಡಿದೆ.

ಹೌದು! ಕಾರ್ಕಳ ತಾಲ್ಲೂಕಿನ ಅಜೆಕಾರು ಎಂಬಲ್ಲಿಗೆ ಹೋಗಿದ್ದ ಇಲ್ಲಿನ ಹೊಸಮನೆ ಗಜಾನನ ಎಲೆಕ್ಟ್ರಿಕಲ್ಸ್‌ ಮಾಲೀಕ ಉದಯಕುಮಾರ್‌ ಹಾಗೂ ಅವರ ಆರು ಮಂದಿ ಕುಟುಂಬ, ವಿವಾಹ ನಿಶ್ಚಿತಾರ್ಥ ಮುಗಿಸಿಕೊಂಡು ಮಂಗಳವಾರ ಬೆಳಗಿನ ಜಾವ 4 ಗಂಟೆಗೆ ಅಲ್ಲಿಂದ ಹೊರಟಿತ್ತು.

ಬೆಳಗಿನ ಮಂಜು ಮುಸುಕಿದ ನಿಶ್ಶಬ್ದ ವಾತಾವರಣ, ಜನ ಸಂಚಾರ ಇಲ್ಲದ ಸಮಯದಲ್ಲಿ ಉದಯಕುಮಾರ್‌ ಕಾರು ಚಲಾಯಿಸಿಕೊಂಡು ಬೇಗುವಳ್ಳಿ ವಿಶಾಲ ತಿರುವಿನ ಬಳಿ ತಿರುಗಿದಾಗ ಇದ್ದಕ್ಕಿದ್ದಂತೆ ವಾಹನ ರಸ್ತೆ ಬದಿಯ ಕಲ್ಲಿಗೆ ಡಿಕ್ಕಿ ಹೊಡೆದು ಕೆರೆಗೆ ಇಳಿದಿದೆ.

‘ಸುಮಾರು 20 ಕಿ.ಮೀ. ಹಿಂದೆಯೇ ಜಿಲ್ಲಾ ಸಚಿವ ಕಿಮ್ಮನೆ ರತ್ನಾಕರ ಬೆಂಗಾವಲು ಪಡೆಯ ವಾಹನ ಹಿಂದಕ್ಕೆ ಹಾಕಿ ಸುಮಾರು ಒಂದು ಕಿ.ಮೀ ಅಂತರದಲ್ಲಿ ಮುಂದಿದ್ದೆ’ ಎಂದು ತಮ್ಮ ಅನುಭವ ತೆರೆದಿಡುವ ಉದಯಕುಮಾರ್‌ ಬಿಗಿಯಾದ ಸ್ಟೇರಿಂಗ್‌ ಇಷ್ಟೆಲ್ಲಾ ಅವಾಂತರಕ್ಕೆ ಕಾರಣ ಎನ್ನುತ್ತಾರೆ.

‘ಕೆರೆಗೆ ಇಳಿದ ಕಾರಿನ ಎಡಭಾಗದ ಕಿಟಿಕಿಯಿಂದ ನನ್ನ ಮಗ ನಿಶಾನ್‌ ನೀರಿಗಿಳಿದು ಈಜಿ ದಡ ಸೇರಿದರೆ, ಮಾವ ಸೀತಾರಾಮ್‌ ಸಹ ಇದೆ ರೀತಿ ರಸ್ತೆ ಸೇರಿದರು. ನಾನು ಕೆಳಗಿಳಿದು ಆಳ ಪರೀಕ್ಷಿಸಲು ಮುಂದಾದಾಗ ನನ್ನ ತಮ್ಮನ ಮಗ ವೈಷ್ಣವ್‌ ನನ್ನ ಭುಜದ ಮೇಲೆ ಕುಳಿತ ಪರಿಣಾಮ ನಾನು ಮತ್ತಷ್ಟು ಆಳಕ್ಕೆ ಇಳಿದು ಜ್ಞಾನತಪ್ಪಿದ ಸ್ಥಿತಿಗೆ ತಲುಪಿದೆ’ ಎಂದು ತಮ್ಮ ಭಯಾನಕ ಅನುಭವ ತೆರೆದಿಟ್ಟರು.

‘ಇಷ್ಟೆಲ್ಲಾ ನಡೆಯುವ ವೇಳೆಗೆ ಸಚಿವರ ಬೆಂಗಾವಲು ವಾಹನ ಕೆರೆ ಬಳಿ ಬಂದು ಅದರಲ್ಲಿದ್ದ ಸಿಬ್ಬಂದಿ ನಮ್ಮನ್ನು ನೀರಿನಿಂದ ಹೊರತಂದರು. ಅಷ್ಟರಲ್ಲಿ ಕಾರಿನಲ್ಲಿ ಕುಳಿತ್ತಿದ್ದ ಹೆಂಡತಿ ಸುಮಾ, ಅತ್ತೆ ಗುಲಾಬಿ, ವೈಷ್ಣವ್‌ ಅವರ ಕುತ್ತಿಗೆಯವರೆಗೆ ನೀರು ಬಂದಿತ್ತು’ ಎಂದು ಅವರು ವಿವರಿಸಿದರು.

’ಅಷ್ಟರಲ್ಲಿ ಅಲ್ಲಿ ನೂರಾರು  ಗ್ರಾಮಸ್ಥರು ನೆರೆದಿದ್ದರು. ನಂತರ ನಮ್ಮ ಕಾರನ್ನು ಹೊರತೆಗೆದು ಮಾಳೂರು ಠಾಣೆಗೆ ಒಯ್ಯಲಾಯಿತು. ಸಚಿವರ ವಾಹನ ಚಾಲಕ ಚಂದ್ರು ನನಗೆ ತಮ್ಮ ಬಳಿಯಿದ್ದ ಬಟ್ಟೆ ನೀಡಿದರು. ಸಚಿವರ ಬೆಂಗಾವಲು ಪಡೆಯ ಸಿಬ್ಬಂದಿಯಿಂದ ನಾವು ಬದುಕುಳಿದೆವು’ ಎಂದು ಉದಯಕುಮಾರ್‌ ನಿಟ್ಟುಸಿರಿಟ್ಟರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT