ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಿರ ಪ್ರದರ್ಶನ ನಮ್ಮ ಗುರಿ

Last Updated 31 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಕಳೆದ ಎರಡು ರಣಜಿ ಋತುವಿನಲ್ಲೂ ನಮ್ಮ ತಂಡ ಉತ್ತಮ ಪ್ರದರ್ಶನ ತೋರಿದೆ. ಈಗ ಆಟಗಾರರು ಮತ್ತಷ್ಟು ಪಕ್ವವಾಗಿದ್ದಾರೆ. ಸ್ಥಿರ ಪ್ರದರ್ಶನ ಮುಂದುವರಿಸಿಕೊಂಡು ಹೋಗುವುದು ಈಗ ನಮ್ಮ ಗುರಿ~ ಎಂದು ಕರ್ನಾಟಕ ರಣಜಿ ತಂಡದ ಕೋಚ್ ಕೆ.ಜಸ್ವಂತ್ ನುಡಿದರು.

ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, `ಆಟಗಾರರು ಈಗ ಸವಾಲಿಗೆ ಸನ್ನದ್ಧರಾಗಿದ್ದಾರೆ. ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ಅನುಭವ ಇರುವ ಆಟಗಾರರು ತಂಡದಲ್ಲಿದ್ದಾರೆ. ಅದು ನಮ್ಮ ನೆರವಿಗೆ ಬರಲಿದೆ~ ಎಂದರು.

ಈ ಬಾರಿ ರಣಜಿ ಕ್ರಿಕೆಟ್‌ನಲ್ಲಿ ಕರ್ನಾಟಕ ತನ್ನ ಮೊದಲ ಪಂದ್ಯವನ್ನು ಹಾಲಿ ಚಾಂಪಿಯನ್ ರಾಜಸ್ತಾನ ಎದುರು ಉದಯಪುರದ ಫೀಲ್ಡ್ ಕ್ಲಬ್ ಕ್ರೀಡಾಂಗಣದಲ್ಲಿ ನವೆಂಬರ್ ಮೂರರಿಂದ ಆರರವರೆಗೆ ಆಡಲಿದೆ. ಅದಕ್ಕಾಗಿ ಆರ್.ವಿನಯ್ ಕುಮಾರ್ ಸಾರಥ್ಯದ ತಂಡ ಮಂಗಳವಾರ ಬೆಳಿಗ್ಗೆ ತೆರಳಲಿದೆ. ಸನತ್ ಕುಮಾರ್ ಬದಲಿಗೆ ಈ ಬಾರಿ ಜಸ್ವಂತ್ ತಂಡದ ಕೋಚ್ ಆಗಿ ನೇಮಕವಾಗಿದ್ದಾರೆ.

ಚಾಂಪಿಯನ್ ಆಗುವ ಭರವಸೆ ಇದೆ: `ಕಳೆದ ಎರಡು ಬಾರಿ ನಾವು ಪ್ರಶಸ್ತಿಯ ಸನಿಹ ಬಂದು ಎಡವಿದ್ದೆವು. ಆದರೆ ಈ ಬಾರಿ ಆ ತಪ್ಪು ಪುನರಾವರ್ತನೆ ಆಗದಂತೆ ನೋಡಿಕೊಳ್ಳುತ್ತೇವೆ. ನಮ್ಮದು ಯುವ ಆಟಗಾರರನ್ನೊಳಗೊಂಡ ತಂಡ. ಈ ಬಾರಿ ಚಾಂಪಿಯನ್ ಆಗುವ ವಿಶ್ವಾಸವಿದೆ~ ಎಂದು ನಾಯಕ ಆರ್.ವಿನಯ್ ಕುಮಾರ್ ನುಡಿದರು.

`ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ ಅನುಭವ ನೆರವಿಗೆ ಬರಲಿದೆ. ಎಲ್ಲಾ ಆಟಗಾರರು ಈ ಬಾರಿಯ ರಣಜಿ ಋತುವಿನ ಮೊದಲ ಪಂದ್ಯವನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ~ ಎಂದು ಅವರು ಹೇಳಿದರು.

ಕರ್ನಾಟಕ ತಂಡ ಈ ಬಾರಿ ಎಲೈಟ್ `ಎ~ ಗುಂಪಿನಲ್ಲಿ ಸ್ಥಾನ ಪಡೆದಿದೆ. ಇದೇ ಗುಂಪಿನಲ್ಲಿ ರಾಜಸ್ತಾನ, ಮುಂಬೈ, ರೈಲ್ವೇಸ್, ಉತ್ತರ ಪ್ರದೇಶ, ಪಂಜಾಬ್, ಸೌರಾಷ್ಟ್ರ ಹಾಗೂ ಒಡಿಸ್ಸಾ ತಂಡಗಳಿವೆ. ಪ್ರತಿ ತಂಡಗಳು ತಲಾ ಏಳು ಲೀಗ್ ಪಂದ್ಯ ಆಡಲಿವೆ. ಕರ್ನಾಟಕ ಈ ಬಾರಿ ತವರಿನಲ್ಲಿ ಮೂರು ಹಾಗೂ ಹೊರರಾಜ್ಯದಲ್ಲಿ ನಾಲ್ಕು ಪಂದ್ಯಗಳನ್ನು ಆಡಲಿದೆ.

ಶಿವಮೊಗ್ಗದಲ್ಲಿ ಪಂದ್ಯ: ಉತ್ತರ ಪ್ರದೇಶ ವಿರುದ್ಧದ ಲೀಗ್ ಪಂದ್ಯವೊಂದು ಶಿವಮೊಗ್ಗದಲ್ಲಿ ನಡೆಯಲಿದೆ. ಇಲ್ಲಿನ ಜವಾಹರ ಲಾಲ್ ನೆಹರೂ ಎಂಜಿನಿಯರಿಂಗ್ ಕಾಲೇಜ್‌ನಲ್ಲಿ ಡಿಸೆಂಬರ್ 21ರಿಂದ 24ರವರೆಗೆ ಈ ಪಂದ್ಯ ನಡೆಯಲಿದೆ. 

2010-11ರಲ್ಲಿ ಕರ್ನಾಟಕ ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ ವಡೋದರದಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಬರೋಡಾ ತಂಡದ ಎದುರು ಆಘಾತ ಅನುಭವಿಸಿತ್ತು. 2009-10ರಲ್ಲಿ ಫೈನಲ್ ತಲುಪಿದ್ದ ಕರ್ನಾಟಕ ಮುಂಬೈ ಎದುರು ಸೋಲು ಕಂಡಿತ್ತು.

ಕರ್ನಾಟಕ  ತಂಡ ಇಂತಿದೆ:  ಆರ್.ವಿನಯ್ ಕುಮಾರ್ (ನಾಯಕ), ರಾಬಿನ್ ಉತ್ತಪ್ಪ, ಕೆ.ಬಿ.ಪವನ್, ಮನೀಷ್ ಪಾಂಡೆ, ಗಣೇಶ್ ಸತೀಶ್ (ಉಪನಾಯಕ), ಅಮಿತ್ ವರ್ಮ, ಸ್ಟುವರ್ಟ್ ಬಿನ್ನಿ, ಸಿ.ಎಂ.ಗೌತಮ್ (ವಿಕೆಟ್ ಕೀಪರ್), ಕೆ.ಪಿ.ಅಪ್ಪಣ್ಣ, ಅಭಿಮನ್ಯು ಮಿಥುನ್, ಎಸ್.ಅರವಿಂದ್, ಭರತ್ ಚಿಪ್ಲಿ, ಎಸ್.ಕೆ.ಮೊಯಿನುದ್ದೀನ್, ಸುನಿಲ್ ಎನ್.ರಾಜು, ಎಸ್.ಎಲ್.ಅಕ್ಷಯ್ ಹಾಗೂ ಕೆ.ಜೆ.ಗೌತಮ್.

ಕೋಚ್: ಕೆ.ಜಸ್ವಂತ್. ಸಹಾಯಕ ಕೋಚ್: ಸೋಮಶೇಖರ ಶಿರಗುಪ್ಪಿ. ಮ್ಯಾನೇಜರ್: ಸುಧಾಕರ್ ರಾವ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT