ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನಾತಕೋತ್ತರ ಕೇಂದ್ರದಲ್ಲಿ ವಾರ್ಷಿಕೋತ್ಸವ ಸಂಭ್ರಮ

Last Updated 15 ಜೂನ್ 2011, 8:10 IST
ಅಕ್ಷರ ಗಾತ್ರ

ಕೋಲಾರ: ನಗರದ ಹೊರವಲಯದಲ್ಲಿ ನಿರ್ಮಾಣ ಹಂತದಲ್ಲಿ ಸ್ಥಗಿತಗೊಂಡಿರುವ ಸ್ನಾತಕೋತ್ತರ ಕೇಂದ್ರದ ನೂತನ ಕಟ್ಟಡ ಕಾಮಗಾರಿ ಶೀಘ್ರವೇ ಶುರುವಾಗಲಿದೆ. ಮುಂದಿನ ವರ್ಷದಿಂದ ಹೊಸ ಕಟ್ಟಡದಲ್ಲಿ ಕೇಂದ್ರ ಕಾರ್ಯನಿರ್ವಹಿಸಲಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಕೆ.ಬಿ.ವೇದಮೂರ್ತಿ ತಿಳಿಸಿದರು.

ನಗರದಲ್ಲಿರುವ ಸ್ನಾತಕೋತ್ತರ ಕೇಂದ್ರದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ `ವಸಂತ ಕಲರವ-ವಾರ್ಷಿಕೋತ್ಸವ~ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಟ್ಟಡದ ನಿರ್ಮಾಣದ ಹೊಣೆ ಹೊತ್ತಿರುವ ಗುತ್ತಿಗೆದಾರರಿಗೆ ನೀಡಬೇಕಾಗಿದ್ದ 59 ಲಕ್ಷ ರೂಪಾಯಿಯನ್ನು ವಿಶ್ವವಿದ್ಯಾಲಯ ಸೋಮವಾರವಷ್ಟೆ ಪಾವತಿಸಿದೆ. ಹೀಗಾಗಿ ನಿರ್ಮಾಣ ಕಾಮಗಾರಿ ಮತ್ತೆ ಶುರುವಾಗಲಿದೆ ಎಂದರು.

ಕೋಲಾರ ಜಿಲ್ಲೆಯವರೇ ಆಗಿರುವ, ಕುಲಪತಿ ಡಾ.ಪ್ರಭುದೇವ್, ನೂತನ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ತೀವ್ರ ವಿಷಾದವನ್ನು ಸದಾ ವ್ಯಕ್ತಪಡಿಸುತ್ತಿದ್ದರು. ಈಚೆಗೆ ಕೇಂದ್ರದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರ ಫಲವಾಗಿ, ಕಾಮಗಾರಿ ಶುರುವಾಗುವ ಸನ್ನಿವೇಶ ಸೃಷ್ಟಿಯಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಕೇಂದ್ರವು ಹೊಸ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದೆ ಎಂದರು.

ಕೇಂದ್ರದಲ್ಲಿ ಸಮಾಜ ಕಾರ್ಯ ವಿಭಾಗಕ್ಕೆ ಪೂರ್ಣ ಅವಧಿಯ ಉಪನ್ಯಾಸಕರೇ ಇಲ್ಲ ಎಂಬುದು ವಿಷಾದನೀಯ. ಮುಂದಿನ ಶೈಕ್ಷಣಿಕ ವರ್ಷದ ಹೊತ್ತಿಗೆ ಆ ಕೊರತೆ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕುಲಪತಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಮತ್ತೊಬ್ಬ ಸಿಂಡಿಕೇಟ್ ಸದಸ್ಯ ಎಂ.ಡಿ.ಗಿರೀಶ್, ವಿಶ್ವವಿದ್ಯಾಲಯದ ಮುಖ್ಯ ಗ್ರಂಥಪಾಲಕ ಡಾ.ಪಿ.ಕೊಣ್ಣೂರು ಮಾತನಾಡಿದರು. ಇದೇ ಸಂದರ್ಭದಲ್ಲಿ, ಕೇಂದ್ರದ ನಿರ್ದೇಶಕ ಡಾ.ಸಿ.ನಾಗಭೂಷಣ ಅವರನ್ನು ಬೋಧಕೇತರ ಸಿಬ್ಬಂದಿ ಸನ್ಮಾನಿಸಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಜಗನ್ನಾಥರೆಡ್ಡಿ ವೇದಿಕೆಯಲ್ಲಿದ್ದರು.

ಸಿಹಿ-ಕಹಿ:
ಇದೇ ಸಂದರ್ಭದಲ್ಲಿ ಮಾತನಾಡಿದ ಅಂತಿಮ ವರ್ಷದ ವಿದ್ಯಾರ್ಥಿಗಳು, ಕೇಂದ್ರದಲ್ಲಿ ಎರಡು ವರ್ಷದ ಅವಧಿಯಲ್ಲಿನ ತಮ್ಮ ಅನುಭವ ಸ್ಮರಿಸಿದರು. ಹಲವು ಮೂಲಸೌಕರ್ಯ ಕೊರತೆ, ಸಮಸ್ಯೆ ನಡುವೆಯೂ ಕಲಿಯುವ ಬದ್ಧತೆ ಬಿಡದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಶೈಕ್ಷಣಿಕ ಉತ್ಸಾಹವನ್ನು ಶ್ಲಾಘಿಸಿದರು.

ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿರುವುದು ಸೇರಿದಂತೆ ಹಲವು ಸಮಸ್ಯೆ ನಿವಾರಿಸುವಲ್ಲಿ ವಿಶ್ವವಿದ್ಯಾಲಯ ವಿಳಂಬ ನೀತಿ ಮತ್ತು ನಿರ್ಲಕ್ಷ್ಯ ಧೋರಣೆ ಅನುಸರಿಸಿರುವುದು ಸಲ್ಲ ಎಂದು ಆಕ್ಷೇಪಿಸಿದರು. ಕನ್ನಡ, ಅರ್ಥಶಾಸ್ತ್ರ, ಸಮಾಜಕಾರ್ಯ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಅನಿಸಿಕೆಗಳು ವೈವಿಧ್ಯತೆ ಮತ್ತು ಮುಕ್ತ ನಿಲುವುಗಳಿಂದ ಗಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT