ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನಾನದ ಕೋಣೆಯಲ್ಲಿ ಅವಿತಿದ್ದ ರಾಜೀವ್!

Last Updated 20 ಮೇ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮಾಜಿ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂ ಅವರು ಡೂನ್ ಶಾಲೆಯಲ್ಲಿ ಓದುತ್ತಿದ್ದ ತಮ್ಮ ಮೊಮ್ಮಗ 11 ವರ್ಷದ ರಾಜೀವ್ ಗಾಂಧಿಯ ಭೇಟಿಗೆ ಹೋಗಿದ್ದಾಗ ಬಾಲಕ ರಾಜೀವ್ ಸ್ನಾನದ ಕೋಣೆಯಲ್ಲಿ ಬುಟ್ಟಿಯೊಂದರಲ್ಲಿ ಅವಿತುಕೊಳ್ಳಲು ಯತ್ನಿಸಿದ್ದ!  -ಹೀಗೆ ಹೇಳಿದವರು ಕಾಂಗ್ರೆಸ್ ಮುಖಂಡ ಮಣಿ ಶಂಕರ್ ಅಯ್ಯರ್.

`ಡೂನ್ ಶಾಲೆಯ ಮುಖ್ಯ ಶಿಕ್ಷಕರಾಗಿದ್ದ ಜಾನ್ ಮಾರ್ಟಿನ್ ಅವರ  ಪತ್ನಿ ಮ್ಯಾಡಿ ಮಾರ್ಟಿನ್ ಅವರು ಬರೆದಿರುವ ಪುಸ್ತಕದಲ್ಲಿ ನಾನು ಈ ವಿಷಯವನ್ನು ಓದಿದ್ದೆ. ಬಳಿಕ ಈ ಘಟನೆಯನ್ನು ರಾಜೀವ್ ಗಾಂಧಿ ಅವರೂ ದೃಢಪಡಿಸಿದ್ದರು~ ಎಂದು  ರಾಜ್ಯ ಸಭಾ ಸದಸ್ಯರಾಗಿರುವ ಮಣಿ ಶಂಕರ್ ಅಯ್ಯರ್ ಹೇಳಿದರು.

ಹಿಂದಿನ ಘಟನೆಗಳನ್ನು ಸ್ಮರಿಸಿದ ಅಯ್ಯರ್, `1985ರಲ್ಲಿ ನಾನು ರಾಜೀವ್ ಗಾಂಧಿ ಅವರ ಜಂಟಿ ಕಾರ್ಯದರ್ಶಿ ಆಗಿದ್ದೆ. ಅವರು ಪ್ರಧಾನಿ ಆಗಿದ್ದರು. ಡೂನ್ ಶಾಲೆಯ ಸ್ಥಾಪನಾ ದಿನದ 50ನೇ ವರ್ಷಾಚರಣೆಯಲ್ಲಿ ಭಾಗವಹಿಸಲು ರಾಜೀವ್ ಅವರೊಂದಿಗೆ ಪ್ರಯಾಣಿಸುತ್ತಿದೆ. ಆಗ ವಿಮಾನದಲ್ಲಿ ಮಾರ್ಟಿನ್ ಬರೆದ ಪುಸ್ತಕವನ್ನು ಓದುತ್ತಿದ್ದೆ. ಅಂದಿನ ಪ್ರಧಾನಿ ನೆಹರೂ ಅವರು ಮೊಮ್ಮಗನನ್ನು ಭೇಟಿ ಮಾಡಲು ಶಾಲೆಗೆ ತೆರಳಿದ್ದಾಗ ರಾಜೀವ್ ಎಲ್ಲೂ ಕಂಡು ಬಂದಿರಲಿಲ್ಲ~ ಎಂದು ಹೇಳಿದರು.

`ಎಲ್ಲಾ ಕಡೆ ಹುಡುಕಾಡಿದ ಮೇಲೆ 11 ವರ್ಷದ ಬಾಲಕ ಸ್ನಾನದ ಕೋಣೆಯಲ್ಲಿ ಬುಟ್ಟಿಯೊಂದರಲ್ಲಿ ಅವಿತು ಕುಳಿತಿದ್ದ. ರಾಜೀವ್ ಅವರು ನಾಚಿಕೆ ಸ್ವಭಾವದವರಾಗಿದ್ದರಿಂದ ಈ ರೀತಿ ಮಾಡಿದ್ದರು ಎಂದು ಪುಸ್ತಕದಲ್ಲಿ ಬರೆಯಲಾಗಿತ್ತು~ ಎಂದು ಅಯ್ಯರ್ ತಿಳಿಸಿದರು.

`ಶಾಲೆಯ ಸ್ಥಾಪನಾ ದಿನಾಚರಣೆಯಂದು ಮಾಡಬೇಕಾಗಿರುವ ಭಾಷಣವನ್ನು ಅಂತಿಮಗೊಳಿಸಲು ನಾನು ರಾಜೀವ್ ಅವರನ್ನು ಭೇಟಿಯಾಗಬೇಕಿತ್ತು. ಆ ಸಂದರ್ಭದಲ್ಲಿ ಪುಸ್ತಕದಲ್ಲಿ ದಾಖಲಿಸಲಾಗಿರುವ ಈ ಘಟನೆಯ ಬಗ್ಗೆ ಕೇಳಿದೆ. ಅದು ನಿಜ ಎಂದು ಹೇಳಿದ್ದರು. ಆದರೆ, ಅವಿತುಕೊಳ್ಳುವುದಕ್ಕೆ ಬೇರೆ ಕಾರಣಗಳಿದ್ದವು ಎಂದೂ ತಿಳಿಸಿದ್ದರು~ ಎಂದು ಕಾಂಗ್ರೆಸ್ ಮುಖಂಡ ಅಯ್ಯರ್ ಹೇಳಿದರು.

ರಾಜೀವ್ ಗಾಂಧಿ ಅವರು ಈ ಘಟನೆಯನ್ನು ತಮ್ಮ ಭಾಷಣದಲ್ಲೂ ಪ್ರಸ್ತಾಪಿಸಿದ್ದರು ಎಂದು ಅಯ್ಯರ್ ಅವರು ಸ್ಮರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT