ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾತ್ಮಕ ಯುಗದಲ್ಲೂ ಎಲ್‌ಐಸಿ ಮುಂಚೂಣಿಯಲ್ಲಿ

Last Updated 2 ಸೆಪ್ಟೆಂಬರ್ 2013, 19:42 IST
ಅಕ್ಷರ ಗಾತ್ರ

ಬೆಂಗಳೂರು: `ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ತನ್ನ 57 ನೇ ಸಪ್ತಾಹವನ್ನು ಸಂಭ್ರಮದಿಂದ ಆಚರಿಸುತ್ತಿದೆ. ಕೇಂದ್ರ ಸರ್ಕಾರವು ಆರಂಭದಲ್ಲಿ ನಿಗಮದ ಸ್ಥಾಪನೆಗೆ ರೂ5 ಕೋಟಿ ಹಣವನ್ನು ನೀಡಿತ್ತು. ಆದರೆ, ಈಗ ನಿಗಮದ ಆಸ್ತಿಯು ರೂ15,60,481.84 ಕೋಟಿಯನ್ನು ತಲುಪಿದೆ' ಎಂದು ನಿಗಮದ ಬೆಂಗಳೂರು ವಿಭಾಗದ ಪ್ರಾದೇಶಿಕ ಅಧಿಕಾರಿ ಕೆ.ಎಂ.ರಾಜೇಗೌಡ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಅವರು, `ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲೂ ಭಾರತೀಯ ಜೀವ ವಿಮಾ ನಿಗಮವು ಮುಂಚೂಣಿಯಲ್ಲಿದ್ದು, 2013 ರ ಜೂನ್ ತಿಂಗಳಿಗೆ ಶೇ 81.98 ರಷ್ಟು ಪಾಲಿಸಿಗಳ ಮಾರಾಟ ಹಾಗೂ ಶೇ 74.39 ರಷ್ಟು ಪ್ರೀಮಿಯಂ ಸಂಗ್ರಹಿಸಿದೆ' ಎಂದರು.

`ರಾಜ್ಯದಲ್ಲಿ 8 ವಿಭಾಗಗಳು, 138 ಶಾಖಾ ಕಚೇರಿಗಳು, 82 ಉಪಗ್ರಹ ಸಂಪರ್ಕ ಶಾಖೆಗಳು, 100 ಲೈಫ್ ಪ್ಲಸ್ ಕಚೇರಿಗಳನ್ನು ಹೊಂದಿದೆ.  ರಾಜ್ಯದ ಮೂಲೆ ಮೂಲೆಗಳಲ್ಲಿ ಪ್ರೀಮಿಯಂ ಸಂಗ್ರಹಣಾ ಕೇಂದ್ರಗಳನ್ನು ಹೊಂದಿದೆ. ರಾಜ್ಯದಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆಯಿರುವ ಪ್ರದೇಶಗಳಲ್ಲಿ 30 ಮಿನಿ ಕಚೇರಿಗಳನ್ನು ತೆರೆಯಲಾಗಿದೆ' ಎಂದು ವಿವರಿಸಿದರು.

`2012-13 ನೇ ಆರ್ಥಿಕ ವರ್ಷದಲ್ಲಿ, ಕರ್ನಾಟಕದಲ್ಲಿ 24 ಲಕ್ಷ ಪಾಲಿಸಿಗಳು, ರೂ1,825.20 ಕೋಟಿ ಪ್ರೀಮಿಯಂ ಆದಾಯವನ್ನು ಶೇಖರಿಸಿದೆ. ಪ್ರಸ್ತುತ 2013-14 ನೇ ಆರ್ಥಿಕ ವರ್ಷದಲ್ಲಿ ಇಲ್ಲಿಯವರೆಗೆ 4.83 ಲಕ್ಷ ಪಾಲಿಸಿಗಳು ಮಾರಾಟವಾಗಿದ್ದು, ರೂ381.02 ಕೋಟಿಯನ್ನು ಸಂಗ್ರಹಿಸಲಾಗಿದೆ' ಎಂದು ಮಾಹಿತಿ ನೀಡಿದರು.

`ಬೆಂಗಳೂರು ವಿಭಾಗ-1 ರ ಪ್ರಸಕ್ತ ವರ್ಷದ ಹೊಸ ವ್ಯವಹಾರ ರೂ100 ಕೋಟಿ ಪ್ರೀಮಿಯಂ ಹಾಗೂ 1 ಲಕ್ಷ ಪಾಲಿಸಿಗಳನ್ನು ಪೂರ್ಣಗೊಳಿಸಿದ್ದು, ಬೆಂಗಳೂರು ವಿಭಾಗ-2 ಸುಮಾರು ರೂ83 ಕೋಟಿ ಪ್ರೀಮಿಯಂ ಹಾಗೂ ರೂ81,000 ಪಾಲಿಸಿಗಳನ್ನು ಪೂರ್ಣಗೊಳಿಸಿದೆ' ಎಂದರು.

`ರಾಜ್ಯ ಸರ್ಕಾರದ ಭಾಗ್ಯಲಕ್ಷ್ಮಿ ಯೋಜನೆ ಅಡಿಯಲ್ಲಿ 17.12 ಲಕ್ಷ ಹೆಣ್ಣುಮಕ್ಕಳಿಗೆ ವಿಮಾ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಈ ವರೆಗೆ ರೂ2,561.23 ಲಕ್ಷ ಪಾವತಿ ಮಾಡಲಾಗಿದೆ' ಎಂದು ಹೇಳಿದರು.

`ಭಾರತೀಯ ಜೀವ ವಿಮಾ ನಿಗಮದ ವತಿಯಿಂದ ಅನೇಕ ಗ್ರಾಹಕ ಸ್ನೇಹಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಗೋಲ್ಡ್ ಕ್ಲಬ್ ಸದಸ್ಯರು ಹಾಗೂ ನಿತ್ಯದ ಗ್ರಾಹಕರಿಗೆ `ಗಾಹಕ ಸ್ನೇಹಿ ವಲಯ' ದ ಮೂಲಕ ವಿಶೇಷ ಸೇವೆಯನ್ನು ನೀಡಲಾಗುತ್ತಿದೆ. ಕಾಲ್ ಸೆಂಟರ್‌ಗಳು ಚಾಲ್ತಿಯಲ್ಲಿದ್ದು ಗ್ರಾಹಕರ ಎಲ್ಲಾ ಪ್ರಶ್ನೆಗಳಿಗೆ ಸ್ಪಂದಿಸುವಂತಹ ವ್ಯವಸ್ಥೆಯನ್ನು ಮಾಡಲಾಗಿದೆ. ಇಂಟರ್‌ನೆಟ್‌ನಲ್ಲಿ ಆನ್‌ಲೈನ್ ಪ್ರೀಮಿಯಂ ಪಾವತಿಯ ಸೌಲಭ್ಯವನ್ನೂ ನೀಡಲಾಗಿದೆ' ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT