ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಾಟ್ ಫಿಕ್ಸಿಂಗ್: ಮತ್ತಷ್ಟು ವಿವರ ಬಹಿರಂಗ ಸಾಧ್ಯತೆ

Last Updated 2 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹೊಸದಾಗಿ ತನಿಖೆ ನಡೆಸಲು ಮುಂದಾಗಿದೆ. ಇದು 2010ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಪಾಕಿಸ್ತಾನ ತಂಡದ ಮತ್ತಷ್ಟು ವಿವರಗಳನ್ನು ಬಹಿರಂಗಗೊಳಿಸುವ ಸಾಧ್ಯತೆ ಇದೆ.

ಈ ಪ್ರಕರಣದಲ್ಲಿ ಸಲ್ಮಾನ್ ಬಟ್ ಹಾಗೂ ಮೊಹಮ್ಮದ್ ಆಸಿಫ್ ಅವರು ತಪ್ಪಿತಸ್ಥರು ಎಂದು ಲಂಡನ್ ನ್ಯಾಯಾಲಯ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಐಸಿಸಿಯ ಭ್ರಷ್ಟಾಚಾರ ವಿರೋಧಿ ಹಾಗೂ ಭದ್ರತಾ ಘಟಕ ಈ ಹೆಜ್ಜೆ ಇರಿಸಿದೆ.

ಆ ಪ್ರವಾಸದ ಅವಧಿಯಲ್ಲಿ ನಡೆದ ಪಂದ್ಯಗಳ ವೇಳೆ ಮತ್ತಷ್ಟು `ಸ್ಪಾಟ್ ಫಿಕ್ಸಿಂಗ್~ ಘಟನೆಗಳು ನಡೆದಿರುವ ಸಾಧ್ಯತೆಯ ಸುಳಿವು ಐಸಿಸಿಗೆ ಲಭಿಸಿದೆ. ಸೌತ್‌ವಾಕ್ ಕ್ರೌನ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ ಈ ಅಂಶ ಬಹಿರಂಗವಾಗಿದೆ.
 
ಬುಕ್ಕಿ ಮಜರ್ ಮಸೀದ್ ಅವರಿಂದ ವಶಪಡಿಸಿಕೊಂಡಿರುವ ಮೊಬೈಲ್‌ನ ಸಂದೇಶಗಳಿಂದ ಅದು ಗೊತ್ತಾಗಿದೆ. ಅಷ್ಟು ಮಾತ್ರವಲ್ಲದೇ, ಆ ಪ್ರವಾಸದಲ್ಲಿ ಪಾಕ್‌ನ ಮತ್ತಷ್ಟು ಆಟಗಾರರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಪ್ರಮುಖವಾಗಿ ವಿಕೆಟ್ ಕೀಪರ್ ಕಮ್ರನ್ ಅಕ್ಮಲ್ ಹಾಗೂ ಎಡಗೈ ವೇಗಿ ವಹಾಬ್ ರಿಯಾಜ್ ಅವರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ ಎಂದು `ದಿ ಡೈಲಿ ಟೆಲಿಗ್ರಾಫ್~ ವರದಿ ಮಾಡಿದೆ.

`ಪೊಲೀಸರು ಕಲೆ ಹಾಕಿರುವ ಸಾಕ್ಷಿಗಳನ್ನು ಐಸಿಸಿ ಮತ್ತೊಮ್ಮೆ ಪರಿಶೀಲನೆ ನಡೆಸಲಿದೆ. ಈ ಪ್ರಕರಣದ ವಿಚಾರಣೆ ವೇಳೆ ಅಕ್ಮಲ್ ಹಾಗೂ ರಿಯಾಜ್ ಅವರ ಹೆಸರು ಕೇಳಿಬಂದಿತ್ತು. ಹಾಗಾಗಿ ಅವರ ಬಗ್ಗೆ ಸಂಶಯವಿದೆ~ ಎಂದು ಆ ವರದಿ ತಿಳಿಸಿದೆ.
 
ಲಂಡನ್ ಪೊಲೀಸರು ಹಾಗೂ ನ್ಯಾಯಾಲಯ ಈ ವಿಚಾರಣೆ ಕೈಗೆತ್ತಿಕೊಂಡಿದ್ದ ಕಾರಣ ಪ್ರಕರಣದ ಬಗ್ಗೆ ಪೂರ್ಣ ತನಿಖೆ ನಡೆಸಲು ಈ ಹಿಂದೆ ಐಸಿಸಿಗೆ ಸಾಧ್ಯವಾಗಿರಲಿಲ್ಲ. ಫಿಕ್ಸಿಂಗ್ ಪ್ರಕರಣ 2010ರ ಆಗಸ್ಟ್‌ನಲ್ಲಿ ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ಹಾಗೂ ಪಾಕ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಸಂಭವಿಸಿತ್ತು.

ಆ ಪಂದ್ಯದಲ್ಲಿ ಪಾಕ್‌ನ ಮೊಹಮ್ಮದ್ ಅಮೀರ್ ಹಾಗೂ ಆಸಿಫ್ ಉದ್ದೇಶಪೂರ್ವಕವಾಗಿ ನೋಬಾಲ್ ಎಸೆದಿದ್ದರು. ಸಲ್ಮಾನ್ ಬಟ್ ಆ ಪಂದ್ಯದಲ್ಲಿ ನಾಯಕರಾಗಿದ್ದರು. ಬಳಿಕ ಅಮೀರ್ ತಪ್ಪೊಪ್ಪಿಕೊಂಡಿದ್ದರು.

ಇದೊಂದು ಎಚ್ಚರಿಕೆ: ಬಟ್ ಹಾಗೂ ಆಸಿಫ್ ತಪ್ಪಿತಸ್ಥರು ಎಂದು ಸೌತ್‌ವಾಕ್ ಕ್ರೌನ್ ನ್ಯಾಯಾಲಯ ತೀರ್ಪು ನೀಡಿರುವುದು ಉಳಿದ ಆಟಗಾರರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ ಎಂದು ಐಸಿಸಿ ನುಡಿದಿದೆ. ಅಷ್ಟು ಮಾತ್ರವಲ್ಲದೇ, ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರವನ್ನು ಹೋಗಲಾಡಿಸಲು ಐಸಿಸಿ ಕಠಿಣ ನಿಲುವು ತೆಗೆದುಕೊಳ್ಳುವುದು ಅಗತ್ಯ ಎಂದು ಮಾಜಿ ಕ್ರಿಕೆಟಿಗರು ಆಗ್ರಹಿಸಿದ್ದಾರೆ.

2000ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲೂ ಮೋಸದಾಟ ನಡೆದಿರುವ ಬಗ್ಗೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಸಂಶಯ ವ್ಯಕ್ತಪಡಿಸಿದ್ದಾರೆ. `ಕರಾಚಿಯಲ್ಲಿ ನಡೆದ ಆ ಪಂದ್ಯದಲ್ಲಿ ನಾವು ಗೆಲುವು ಸಾಧಿಸಿದ್ದೆವು. ಆದರೆ ಪಂದ್ಯದ ಮೇಲೆ ಹಿಡಿತ ಹೊಂದಿದ್ದ ಪಾಕಿಸ್ತಾನ ಒಮ್ಮೆಲೆ ಕುಸಿತ ಕಂಡಿತ್ತು. ಹಾಗಾಗಿ ಆ ಗುರಿಯನ್ನು ಬೆನ್ನಟ್ಟಲು ನಮಗೆ ಸುಲಭವಾಗಿತ್ತು. ಏನೋ ತಪ್ಪು ನಡೆದಿದೆ ಎಂಬ ಸಂಶಯ ಬಂದಿತ್ತು~ ಎಂದು ಹೇಳಿದ್ದಾರೆ.

`ಸ್ಪಾಟ್ ಫಿಕ್ಸಿಂಗ್ ಘಟನೆ ಐಸಿಸಿಗೆ ಕೂಡ ಎಚ್ಚರಿಕೆಯ ಸಂದೇಶ ರವಾನಿಸಿದೆ. ಈ ಪ್ರಕರಣ ಬಯಲಿಗೆಳೆದಿದ್ದು ಒಂದು ಪತ್ರಿಕೆ. ಐಸಿಸಿ ಕೂಡ ಭ್ರಷ್ಟಾಚಾರ ನಿಯಂತ್ರಿಸುವ ನಿಟ್ಟಿನಲ್ಲಿ ಕಠಿಣ ಕ್ರಮಕ್ಕೆ ಮುಂದಾಗಬೇಕು~ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸೀರ್ ಹುಸೇನ್ ನುಡಿದಿದ್ದಾರೆ.

ಇಂದು ಶಿಕ್ಷೆ ತೀರ್ಪು ಪ್ರಕಟ
ಲಂಡನ್ (ಪಿಟಿಐ):
ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವ ಪಾಕಿಸ್ತಾನದ ಕ್ರಿಕೆಟಿಗರಾದ ಸಲ್ಮಾನ್ ಬಟ್, ಮೊಹಮ್ಮದ್ ಆಸಿಫ್ ಹಾಗೂ ಮೊಹಮ್ಮದ್ ಅಮೀರ್ ಅವರು ಶಿಕ್ಷೆಯ ತೀರ್ಪಿನ ವಿಚಾರಣೆ ಎದುರಿಸಲು ಬುಧವಾರ ಮತ್ತೆ ನ್ಯಾಯಾಲಯಕ್ಕೆ ಆಗಮಿಸಿದರು.

ಬಟ್ ಹಾಗೂ ಆಸಿಫ್ ಲಂಚ ಪಡೆಯಲು ಮತ್ತು ವಂಚನೆಗೆ ಪಿತೂರಿ ನಡೆಸಿದ್ದರು ಎಂಬುದು ಈಗಾಗಲೇ ಸಾಬೀತಾಗಿದೆ. ಅಮೀರ್ ಸೆಪ್ಟೆಂಬರ್‌ನಲ್ಲಿಯೇ ತಪ್ಪೊಪ್ಪಿಕೊಂಡಿದ್ದರು. ಗುರುವಾರ ಶಿಕ್ಷೆಯ ಪ್ರಮಾಣದ ತೀರ್ಪು ಹೊರಬೀಳುವ ನಿರೀಕ್ಷೆಯಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT