ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪೀಕರ್ ಹುದ್ದೆಯ ಗೌರವ ರಕ್ಷಣೆ

Last Updated 26 ಜನವರಿ 2012, 19:30 IST
ಅಕ್ಷರ ಗಾತ್ರ

ವಿಧಾನಸಭೆ ಅಧ್ಯಕ್ಷರು (ಸ್ಪೀಕರ್) ಶಾಸಕರ ಅನರ್ಹತೆಗೆ ಸಂಬಂಧಿಸಿ ನೀಡುವ ತೀರ್ಪು ಅಂತಿಮವಲ್ಲ; ಅದು ನ್ಯಾಯಾಂಗದ ಪರಿಶೀಲನೆಗೆ ಒಳಪಡುತ್ತದೆ ಎಂದು ಸುಪ್ರೀಂ ಕೋರ್ಟ್ ಪೀಠ ನೀಡಿರುವ ತೀರ್ಪು ಸಂಸದೀಯ ಪ್ರಜಾಸತ್ತೆಯಲ್ಲಿ ಮಹತ್ವದ್ದಾಗಿದೆ. ಆಡಳಿತ ಪಕ್ಷಕ್ಕೆ ಸೇರಿದವರೇ ಆಗಿರುತ್ತಿದ್ದ ವಿಧಾನ ಸಭಾಧ್ಯಕ್ಷರು ಸರ್ಕಾರಗಳು ಬಹುಮತ ಕಳೆದುಕೊಳ್ಳುವ ಸಂಕಟದಲ್ಲಿದ್ದಾಗ ಬಂಡೆದ್ದ ಶಾಸಕರನ್ನು ಸದಸ್ಯತ್ವದಿಂದ ಅನರ್ಹಗೊಳಿಸುವ ಮೂಲಕ ಸರ್ಕಾರಗಳನ್ನು ಪಾರು ಮಾಡುತ್ತಿದ್ದ ಪ್ರಕರಣಗಳು ವಿವಿಧ ರಾಜ್ಯಗಳಲ್ಲಿ ನಡೆದಿವೆ. ಕೆಲವು ಸಂದರ್ಭಗಳಲ್ಲಿ ವಿಧಾನಸಭಾಧ್ಯಕ್ಷರು ಕೈಗೊಂಡ ತೀರ್ಪುಗಳಲ್ಲಿ ಮಧ್ಯೆಪ್ರವೇಶಿಸಲು ನ್ಯಾಯಾಲಯಗಳು ಆಸಕ್ತಿ ತೋರಿಲ್ಲ. ಶಾಸಕಾಂಗದ ಪರಮಾಧಿಕಾರವನ್ನು ನ್ಯಾಯಾಂಗವು ಒಪ್ಪಿಕೊಂಡು ವಿಧಾನಸಭಾಧ್ಯಕ್ಷರ ತೀರ್ಮಾನಗಳನ್ನು ಪರಿಶೀಲಿಸಲು ನಿರಾಕರಿಸಿದ ಸಂದರ್ಭಗಳಿವೆ. ಆದರೆ, ಕರ್ನಾಟಕ ವಿಧಾನಸಭಾಧ್ಯಕ್ಷರ ತೀರ್ಮಾನ ದುರುದ್ದೇಶದಿಂದ ಕೂಡಿದ್ದು, ಸಂವಿಧಾನದ ಹತ್ತನೇ ಶೆಡ್ಯೂಲ್‌ನ ಕೆಲವು ಅಂಶಗಳಿಗೆ ವಿರುದ್ಧವಾಗಿದ್ದ ಕಾರಣ ಅದನ್ನು ಸುಪ್ರೀಂ ಕೋರ್ಟ್‌ನ ಪೀಠ ರದ್ದುಪಡಿಸಿದೆ. ಕಳೆದ ಮೇ 13ರಂದು ಈ ತೀರ್ಪನ್ನು ನೀಡಿದ್ದರೂ ಅದಕ್ಕೆ ಸಂಬಂಧಿಸಿದ ವಿವರಣೆಯನ್ನು ಎರಡು ದಿನಗಳ ಹಿಂದೆ ಪ್ರಕಟಿಸಲಾಗಿದೆ. ಸುಪ್ರೀಂ ಕೋರ್ಟ್‌ನ ಈ ತೀರ್ಪು, ಕರ್ನಾಟಕ ವಿಧಾನಸಭಾಧ್ಯಕ್ಷರು 2010ರ ಅಕ್ಟೋಬರ್ 10 ರಂದು ಐವರು ಪಕ್ಷೇತರರನ್ನು ಸದಸ್ಯತ್ವದಿಂದ ಅನರ್ಹಗೊಳಿಸಿದ್ದಕ್ಕೆ ಸಂಬಂಧಿಸಿದೆ. ಪಕ್ಷೇತರರನ್ನು ಅನರ್ಹಗೊಳಿಸುವಲ್ಲಿ ಅನಗತ್ಯ ಅವಸರ ತೋರಿದ್ದಾರೆ ಮತ್ತು ಆಡಳಿತಪಕ್ಷಕ್ಕೆ ಅಧಿಕಾರದಲ್ಲಿ ಮುಂದುವರಿಯಲು ಅವಕಾಶವಾಗುವಂತೆ ವರ್ತಿಸಿದ್ದಾರೆ ಎಂಬುದು ವಿಧಾನಸಭಾಧ್ಯಕ್ಷರ ವರ್ತನೆಯ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯ. ವಾಸ್ತವವಾಗಿ ಇದು, ಈ ಹುದ್ದೆಯನ್ನು ನಿರ್ವಹಿಸುತ್ತಿದ್ದ ವ್ಯಕ್ತಿ ಈ ಸ್ಥಾನಕ್ಕೆ ಅರ್ಹವಲ್ಲದ ರೀತಿಯಲ್ಲಿ ವರ್ತಿಸಿದ್ದಾರೆ ಎಂಬುದನ್ನು ಎತ್ತಿ ಹೇಳಿದ ತೀರ್ಮಾನ.

ಸುಪ್ರೀಂ ಕೋರ್ಟ್‌ನ ಈ ತೀರ್ಪು ವಿಧಾನಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಕೆ.ಜಿ.ಬೋಪಯ್ಯ ತಮ್ಮ ಕಾರ್ಯನಿರ್ವಹಣೆಯಲ್ಲಿ ನ್ಯಾಯಪಕ್ಷಪಾತಿಯಾಗಿ ವರ್ತಿಸಿಲ್ಲ ಎಂಬುದನ್ನು ಖಚಿತಪಡಿಸಿದೆ. ಪಕ್ಷೇತರ ಸದಸ್ಯರ ಬೆಂಬಲ ಹಿಂತೆಗೆದುಕೊಂಡ ಕಾರಣಕ್ಕೆ ಅಲ್ಪಮತಕ್ಕೆ ಇಳಿದಿದ್ದ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಮುಂದುವರಿಯಲು ಅವಶ್ಯಕವಾದ ಬಹುಮತವನ್ನು ಕೃತಕವಾಗಿ ಪಡೆಯುವಂತೆ ತಮ್ಮ ಸ್ಥಾನವನ್ನು ಅವರು ದುರುಪಯೋಗಪಡಿಸಿಕೊಂಡುದನ್ನೂ ಎತ್ತಿ ಹೇಳಿದೆ. ಅಲ್ಪಮತಕ್ಕೆ ಇಳಿಯುವ ಮೂಲಕ ಜನಾದೇಶವನ್ನು ಕಳೆದುಕೊಂಡಿದ್ದ ಸರ್ಕಾರ, ಅಕ್ರಮ ವಿಧಾನದಿಂದ ಅಧಿಕಾರದಲ್ಲಿ ಮುಂದುವರಿಯುವಂತೆ ಮಾಡಿದ್ದು ಸಂವಿಧಾನಕ್ಕೂ ಎಸಗಿದ ಅಪಚಾರ.

ವಿಧಾನಸಭಾಧ್ಯಕ್ಷರ ಸ್ಥಾನ ಪಕ್ಷಾತೀತವಾದ ನಡವಳಿಕೆಯನ್ನು ನಿರೀಕ್ಷಿಸುವ ಸಾಂವಿಧಾನಿಕ ಹುದ್ದೆ. ಈ ಸ್ಥಾನದಲ್ಲಿದ್ದು ನೀಡಿದ ನಿರ್ಣಯ ನ್ಯಾಯಾಲಯದ ಟೀಕೆಗೆ ಒಳಗಾಗಿ ತಿರಸ್ಕೃತವಾಗುವಂತೆ ಮಾಡುವ ಮೂಲಕ ವಿಧಾನಸಭಾಧ್ಯಕ್ಷರ ಹುದ್ದೆಯ ಗೌರವವನ್ನೂ ಕುಂದಿಸಿದ ಬೋಪಯ್ಯ ಅವರದು ಸಂಸದೀಯ ಪ್ರಜಾಸತ್ತೆಯಲ್ಲಿ ಸಲ್ಲದ ನಡವಳಿಕೆ. ದೇಶದಲ್ಲಿ ಉನ್ನತ ಪರಂಪರೆಯ ಇತಿಹಾಸ ಇರುವ ಕರ್ನಾಟಕ ವಿಧಾನಮಂಡಲಕ್ಕೆ ಮಸಿ ಬಳಿಯುವಂತೆ ನಡೆದುಕೊಂಡ ಈ ವರ್ತನೆ ಸಂಸದೀಯ ಪ್ರಜಾಸತ್ತೆಯ ಬಗ್ಗೆ ಜನತೆ ಇಟ್ಟ ವಿಶ್ವಾಸಕ್ಕೂ ಭಂಗ ತಂದಿದೆ. ತಮ್ಮ ತೀರ್ಪಿನಿಂದ ವಿಧಾನಸಭಾಧ್ಯಕ್ಷರ ಸ್ಥಾನಕ್ಕೆ ಅಧಿಕಾರ ದುರುಪಯೋಗದ ಕಳಂಕ ಹತ್ತಿಸಿರುವ ಬೋಪಯ್ಯ ಆ ಸ್ಥಾನದ ಪಾವಿತ್ರ್ಯವನ್ನು ರಕ್ಷಿಸುವ ದೃಷ್ಟಿಯಿಂದ ತಕ್ಷಣವೇ ಆ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರಾಜಕೀಯ ದುರುದ್ದೇಶದ ನಿರ್ಣಯ ಕೈಗೊಂಡ ವ್ಯಕ್ತಿಯೆಂದು ಸುಪ್ರೀಂ ಕೋರ್ಟಿನಿಂದ ಟೀಕೆಗೆ ಒಳಗಾದ ವ್ಯಕ್ತಿ ವಿಧಾನಸಭಾ ಕಲಾಪಗಳನ್ನು ನಡೆಸುವುದು ರಾಜ್ಯದ ಜನತೆಗೆ ಮಾಡುವ ಅಪಮಾನ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT