ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫೋಟದಲ್ಲಿ ಉಗ್ರರ ಕೈವಾಡ- ಚಿದಂಬರಂ

Last Updated 14 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಇಸ್ರೇಲ್ ರಾಯಭಾರ ಕಚೇರಿಗೆ ಸೇರಿದ ಕಾರು ಸ್ಫೋಟ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ, ದಾಳಿಯು ಭಯೋತ್ಪಾದನೆ ಪ್ರೇರಿತವಾಗಿದ್ದು, ನುರಿತ ತರಬೇತಿ ಪಡೆದ ವ್ಯಕ್ತಿಯೇ ಈ ಕೃತ್ಯ ಎಸಗಿದ್ದಾನೆ ಎಂದು ಮಂಗಳವಾರ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ಘಟನೆ ನಡೆದ ಬಳಿಕ ಮೊದಲ ಬಾರಿಗೆ ಬಹಿರಂಗ ಹೇಳಿಕೆ ನೀಡಿರುವ ಚಿದಂಬರಂ, `ಇತರ ರಾಷ್ಟ್ರಗಳಂತೆ ಇಸ್ರೇಲ್ ಜೊತೆಗೂ ಭಾರತ ಸೌಹಾರ್ದ ಕಾಪಾಡಿಕೊಂಡು ಬಂದಿದೆ. ಇಲ್ಲಿ ಎಲ್ಲ ರಾಷ್ಟ್ರಗಳ ರಾಯಭಾರಿಗಳೂ ಶಾಂತಿಯುತ ಬಾಳ್ವೆ ನಡೆಸುವ ಅಧಿಕಾರ ಹೊಂದಿದ್ದು, ರಾಜತಾಂತ್ರಿಕರು ಮತ್ತು ಅವರ ಕುಟುಂಬದ ಮೇಲೆ ನಡೆಯುವ ಯಾವುದೇ ದಾಳಿ ಖಂಡನಾರ್ಹ~ ಎಂದು ಹೇಳಿದ್ದಾರೆ. ಆದರೆ ದಾಳಿಯ ರೂವಾರಿಗಳು ಎಂದು ಯಾವುದೇ ನಿರ್ದಿಷ್ಟ ಸಂಘಟನೆಯತ್ತ ಬೆರಳು ತೋರಿಸಲಾರೆ ಎಂದು ಸಹ ಅವರು ಸ್ಪಷ್ಟಪಡಿಸಿದ್ದಾರೆ. `ಇಸ್ರೇಲ್ ಅಧಿಕಾರಿಯ ಪತ್ನಿಯನ್ನೇ ಗುರಿಯಾಗಿಟ್ಟುಕೊಂಡು ಈ ಕೃತ್ಯ ನಡೆಸಲಾಗಿದ್ದು, ಭಯೋತ್ಪಾದನಾ ದಾಳಿಯ ಜಾಡು ಹಿಡಿದೇ ತನಿಖೆ ಮುಂದುವರಿಸಬೇಕಾಗಿದೆ~ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

`ತನಿಖಾಧಿಕಾರಿಗಳು ಸಿಗ್ನಲ್ ಬಳಿಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ. ಆರೋಪಿಯ ಸ್ಪಷ್ಟ ಚಿತ್ರ ಪಡೆಯುವ ಅವಿರತ ಶ್ರಮ ನಡೆಸುತ್ತಿದ್ದಾರೆ. ಮೋಟಾರ್‌ಸೈಕಲ್ ಸವಾರನನ್ನು ಹಿಡಿಯಲು ವಿಶೇಷ ತಂಡವನ್ನು ನೇಮಿಸಲಾಗಿದೆ~ ಎಂದೂ ಅವರು ಹೇಳಿದರು.

ಭರವಸೆ: `ಘಟನೆಯ ಹಿನ್ನೆಲೆಯಲ್ಲಿ ವಿದೇಶಾಂಗ ಕಾರ್ಯದರ್ಶಿ ರಂಜನ್ ಮಥಾಯ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ ಮೆನನ್ ಅವರು ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ಜೊತೆ ಮಾತುಕತೆ ನಡೆಸಿದ್ದಾರಲ್ಲದೆ, ವಿದೇಶಾಂಗ ವ್ಯವಹಾರ ಸಚಿವ ಎಸ್.ಎಂ.ಕೃಷ್ಣ ತಮ್ಮ ಇಸ್ರೇಲ್ ಸಹವರ್ತಿಯೊಂದಿಗೂ ಚರ್ಚಿಸಿದ್ದಾರೆ. ಅಪರಾಧಿಗಳನ್ನು ಪತ್ತೆ ಹಚ್ಚುವವರೆಗೂ ತನಿಖೆ ಮುಂದುವರಿಸುವ ಭರವಸೆಯನ್ನು ಅವರು ನೀಡಿದ್ದಾರೆ~ ಎಂದು ಚಿದಂಬರಂ ತಿಳಿಸಿದರು.

ಕುರುಹಿಲ್ಲ: ಸ್ಫೋಟಕ್ಕೆ ಸಂಬಂಧಿಸಿ ನಿರ್ದಿಷ್ಟ ಸಂಘಟನೆಗಳನ್ನು ಗುರಿ ಮಾಡಲು ಇದುವರೆಗೆ ಯಾವುದೇ ಕುರುಹು ದೊರೆತಿಲ್ಲ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಆರ್.ಕೆ.ಸಿಂಗ್ ಹೇಳಿದ್ದಾರೆ.



ದೇಹಸ್ಥಿತಿ ಸ್ಥಿರ: ಸ್ಫೋಟದಲ್ಲಿ ಬೆನ್ನುಹುರಿ ಮತ್ತು ದೇಹದ ಇತರ ಭಾಗಗಳಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಇಸ್ರೇಲ್‌ನ ಮಹಿಳಾ ರಾಜತಾಂತ್ರಿಕ ಅಧಿಕಾರಿ ತಾಲ್ ಯೆಹೊಶುವಾ  (40) ಅವರ ಸ್ಥಿತಿ ಗಂಭೀರವಾಗಿದ್ದರೂ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಯೆಹೊಶುವಾ ಅವರಿಗೆ ಎರಡು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಅವರೀಗ ಪ್ರೈಮಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇದ್ದಾರೆ~ ಎಂದು ವೈದ್ಯ ದೀಪ್ ಮಕ್ಕರ್ ತಿಳಿಸಿದ್ದಾರೆ. ಆದರೆ ಬೆನ್ನುಹುರಿ, ನರಗಳಿಗೆ ತೀವ್ರ ಏಟು ತಗುಲಿರುವ ಕಾರಣ ಅವರು ಪಾರ್ಶ್ವವಾಯು ಪೀಡಿತರಾಗುವ ಸಾಧ್ಯತೆಯನ್ನು ವೈದ್ಯರು ತಳ್ಳಿಹಾಕಿಲ್ಲ.

`ವೈದ್ಯರ ಸಮ್ಮತಿಯ ಬಳಿಕವೇ ಯೆಹೊಶುವಾ ಆವರನ್ನು ಸ್ವದೇಶಕ್ಕೆ ಕಳುಹಿಸಲಾಗುವುದು~ ಎಂದು ಇಸ್ರೇಲ್ ರಾಯಭಾರಿ ಕಚೇರಿ ವಕ್ತಾರ ಡೇವಿಡ್ ಗೋಲ್ಡ್‌ಫ್ರಾಬ್ ಹೇಳಿದ್ದಾರೆ.

ಗಾಯಗೊಂಡ ಇನ್ನು ಮೂರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದು, ಇಬ್ಬರು ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನೊಬ್ಬರು ಸದ್ಯದಲ್ಲಿಯೇ ತೆರಳಲಿದ್ದಾರೆ ಎಂದು ತಿಳಿಸಿದ್ದಾರೆ.

ಇಬ್ಬರು ಉಗ್ರರ ಕೃತ್ಯ?
ಸ್ಫೋಟದಲ್ಲಿ ಇಬ್ಬರು ಉಗ್ರರು ಭಾಗಿಯಾಗಿರಬಹುದು ಎಂದು ತನಿಖಾಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಒಬ್ಬ ಬಾಂಬ್ ಜೋಡಿಸಿದರೆ ಇನ್ನೊಬ್ಬ ಅದನ್ನು ಸ್ಫೋಟಿಸಿರಬಹುದು ಎಂದಿರುವ ಅವರು, ದುಷ್ಕೃತ್ಯಕ್ಕೆ ಯಾವ ಸ್ಫೋಟಕವನ್ನು ಬಳಸಲಾಗಿದೆ ಎಂಬ ಕುರುಹು ದೊರೆತಿಲ್ಲ ಎಂದಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT