ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಂಕಿ ರಸ್ತೆ ವಿಸ್ತರಣೆಗೆ ಬದ್ಧ: ಬಿಬಿಎಂಪಿ

Last Updated 30 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸ್ಯಾಂಕಿ ರಸ್ತೆ ವಿಸ್ತರಣೆ ಬಗ್ಗೆ ಸ್ಥಳೀಯರು ಹಾಗೂ ವಿವಿಧ ಸಂಘಟನೆಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ರಸ್ತೆ ವಿಸ್ತರಣೆ ಕಾರ್ಯ ಕೈಗೊಳ್ಳುವುದಾಗಿ ಬಿಬಿಎಂಪಿ ಪ್ರಕಟಿಸಿದೆ.

ಪಾಲಿಕೆ ಕೇಂದ್ರ ಕಚೇರಿಯಲ್ಲಿ ಗುರುವಾರ ಉಪಮೇಯರ್ ಎಸ್. ಹರೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿಯೂ ಸ್ಯಾಂಕಿ ರಸ್ತೆ ವಿಸ್ತರಣೆ ಕಾಮಗಾರಿಯ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಪದಾಧಿಕಾರಿಗಳು ಹಾಗೂ ಪರಿಸರವಾದಿಗಳ ನಡುವೆ ಈ ರೀತಿ ಭಿನ್ನ ಅಭಿಪ್ರಾಯಗಳು ವ್ಯಕ್ತವಾದವು. ಕೊನೆಗೆ ರಸ್ತೆ ವಿಸ್ತರಣೆ ಅನಿವಾರ್ಯವಾಗಿರುವ ಹಿನ್ನೆಲೆಯಲ್ಲಿ ಕಾಮಗಾರಿ ಮುಂದುವರಿಯಲಿದೆ ಎಂದು ಉಪಮೇಯರ್ ಪ್ರಕಟಿಸಿದರು.

ವಿಸ್ತರಣೆಗೆ ವಿರೋಧ:  ಮೊದಲಿಗೆ ಮಾತ ನಾಡಿದ ಸಿಟಿಜನ್ ಆಕ್ಷನ್ ಫೋರಂ ಅಧ್ಯಕ್ಷ       ಎನ್.ಎಸ್. ಮುಕುಂದ್, `ವಿಸ್ತರಣೆ ಹಿನ್ನೆಲೆಯಲ್ಲಿ ಎಷ್ಟು ಮರಗಳನ್ನು ಕಡಿಯಲಾಗುತ್ತಿದೆ ಎಂಬ ಬಗ್ಗೆ ಅನುಮಾನಗಳಿವೆ. ವಿಸ್ತರಣೆ ಅಗತ್ಯತೆ ಕುರಿತು ಮಾಹಿತಿ ನೀಡಿ. ಯಾವ ಕಾರಣಕ್ಕೆ ವಿಸ್ತರಣೆ ಕಾರ್ಯ ಕೈಬಿಡಲು ಸಾಧ್ಯವಿಲ್ಲ ಎಂಬುದನ್ನು ತಿಳಿಸಿ~ ಎಂದರು.

`ವಿಸ್ತರಣೆ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡಿ. ಅವರ ಅಭಿಪ್ರಾಯ ಪಡೆದ ಬಳಿಕ ಮುಂದಿನ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೆ ಕಾಮಗಾರಿ ಸ್ಥಗಿತಗೊಳಿಸಿ~ ಎಂದರು.

ಪರಿಸರವಾದಿ ಸುರೇಶ್ ಹೆಬ್ಳೀಕರ್, `ನಗರದ ರಸ್ತೆಗಳು ಕೇವಲ 7 ಲಕ್ಷ ವಾಹನಗಳ ಸಂಚಾರ ವನ್ನಷ್ಟೇ ತಡೆದುಕೊಳ್ಳಬಲ್ಲವು. ಆದರೆ ಸದ್ಯ 35 ಲಕ್ಷಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತಿವೆ. ಇದನ್ನೇ ನೆಪ ಮಾಡಿಕೊಂಡು ಎಲ್ಲ ರಸ್ತೆಗಳನ್ನು ವಿಸ್ತರಿಸುವುದು ಸೂಕ್ತವಲ್ಲ.  ಸಂಚಾರ ವ್ಯವಸ್ಥೆ ನಿಯಂತ್ರಣಕ್ಕೆ ಒತ್ತು ನೀಡಬೇಕು. ಅಲ್ಲದೇ ಈ ಭಾಗದಲ್ಲಿ ಅಪರೂಪ ಎನಿಸುವ ಅತ್ತಿ ಮರಗಳಿವೆ. ವಾಹನಗಳ ಸಂಖ್ಯೆ ಹೆಚ್ಚಾ ದಂತೆ ರಸ್ತೆ ವಿಸ್ತರಣೆ ಕೈಗೊಳ್ಳುವುದು ಸರಿಯಲ್ಲ. ಹಾಗಾಗಿ ಈ ವಿಸ್ತರಣೆ ಕಾರ್ಯವನ್ನು ಕೈಬಿಡಬೇಕು~ ಎಂದು ಒತ್ತಾಯಿಸಿದರು.

ಜನಸ್ನೇಹಿ ಅಲ್ಲ: ಹಸಿರು ಉಸಿರು ಸಂಘಟನೆಯ ವಿನಯ್ ಶ್ರೀನಿವಾಸ್, `ರಸ್ತೆ ವಿಸ್ತರಣೆ ಜನ ಸ್ನೇಹಿಯಲ್ಲ. ಸಾರ್ವಜನಿಕರ ಅಭಿಪ್ರಾಯ ಪಡೆಯದೇ ವಿಸ್ತರಣೆಗೆ ಮುಂದಾಗಿರುವುದು ಖಂಡನೀಯ. ಈ ಬಗ್ಗೆ ಪಾಲಿಕೆ ಪುನರ್ ಪರಿಶೀಲನೆ ನಡೆಸಬೇಕು~ ಎಂದರು.

`ಸ್ವಾಭಿಮಾನ~ ಮಲ್ಲೇಶ್ವರ ನಿವಾಸಿಗಳ ಕ್ಷೇಮಾ ಭಿವೃದ್ಧಿ ಸಂಘದ ಸದಸ್ಯೆ ಮೀನಾಕ್ಷಿ ಭರತ್, `ರಸ್ತೆ ವಿಸ್ತರಣೆಯಿಂದ ಅಪಘಾತಗಳು ಹೆಚ್ಚಾಗುತ್ತವೆ. ಅಲ್ಲದೇ ವಿದ್ಯಾರ್ಥಿಗಳು ಹಾಗೂ ಪಾದಚಾರಿಗಳು ರಸ್ತೆ ದಾಟುವುದೇ ಕಷ್ಟವಾಗುತ್ತದೆ. ವಾಹನ ದಟ್ಟಣೆ ನಿಯಂತ್ರಿಸಲು ಸಿಗ್ನಲ್ ಮುಕ್ತ ವ್ಯವಸ್ಥೆ ಪರಿಹಾರವಲ್ಲ~ ಎಂದರು.

ಆಶಾ ಎಂಬುವರು ಮಾತನಾಡಿ, `ಈ ಹಿಂದೆ ರೇಸ್‌ಕೋರ್ಸ್ ರಸ್ತೆ ಸಾಕಷ್ಟು ಮರಗಳಿಂದ   ಕಂಗೊಳಿಸುತ್ತಿತ್ತು. ಆ ಮರಗಳನ್ನೆಲ್ಲಾ ಕಡಿದು ಪರಿಸರ ಹಾಳು ಮಾಡಲಾಗಿದೆ. ಬೆಂಗಳೂರಿನ ಸೌಂದರ್ಯ ಹಾಗೂ ವಾತಾವರಣಕ್ಕೆ ಹಾನಿಯಾಗುವ ಯಾವುದೇ ಅಭಿವೃದ್ಧಿ ಬೇಡ~ ಎಂದು ಹೇಳಿದರು.

ಇಷ್ಟೊಂದು ವಿರೋಧ ಏಕೆ?
`ಕೇವಲ 500 ಮೀಟರ್ ಉದ್ದದ ರಸ್ತೆ ವಿಸ್ತರಣೆಗೆ ಇಷ್ಟೊಂದು ವಿರೋಧ ಏಕೆ ಎಂಬುದೇ ಗೊತ್ತಾಗುತ್ತಿಲ್ಲ. ನಾವು ಕೇವಲ ಇಂದಿನ ಪರಿಸ್ಥಿತಿಯನ್ನು ಗಮನಿಸಿದರಷ್ಟೇ ಸಾಲದು. ಮುಂದಿನ ಪೀಳಿಗೆಯವರಿಗೆ ಅನುಕೂಲವಾಗುವ ರೀತಿಯಲ್ಲಿ ಅಭಿವೃದ್ದಿ ಕೈಗೊಳ್ಳಬೇಕು. ನಗರದಲ್ಲಿ ಈ ಹಿಂದೆ ಸಾವಿರಾರು ಮರಗಳನ್ನು ಕಡಿದಾಗ ಸುಮ್ಮನಿದ್ದ ಮಂದಿ ಈಗ 19 ಮರಗಳನ್ನು ಕಡಿಯುವುದಕ್ಕೆ ದೊಡ್ಡದಾಗಿ ವಿರೋಧಿಸುತ್ತಿ ರುವುದು ಅಚ್ಚರಿ ಮೂಡಿಸಿದೆ. ಬೆಳಿಗ್ಗೆ ಹಾಗೂ ಸಂಜೆ ವೇಳೆ ವಿಪರೀತ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ವಿಸ್ತರಣೆ ಕೈಗೊಳ್ಳುವುದು ಸೂಕ್ತ~.
-ಬಿ.ಎಂ.ನಟರಾಜ್, ಪರಿಸರವಾದಿ

`ನಾನು ನಿತ್ಯ ಸದಾಶಿವನಗರದಿಂದ ತುಮಕೂರಿಗೆ ಹೋಗಿ ಬರುತ್ತೇನೆ. ತುಮಕೂರಿನಿಂದ ಗೊರಗುಂಟೆ ಪಾಳ್ಯಕ್ಕೆ ಬರಲು ಒಂದು ಗಂಟೆಯಾದರೆ, ಅಲ್ಲಿಂದ ಸದಾಶಿವನಗರಕ್ಕೆ ಬರಲು ಒಂದು ಗಂಟೆ ಬೇಕಾಗುತ್ತದೆ. ವಾಹನ ದಟ್ಟಣೆಯಿಂದ ನಿತ್ಯ ಪರದಾಡುವಂತಾಗಿದೆ. ಶೀಘ್ರವಾಗಿ ವಿಸ್ತರಣೆ ಕಾರ್ಯ ಆರಂಭಿಸಿ~.
-ಜಗದೀಶ್, ಸದಾಶಿವನಗರ ನಿವಾಸಿ

`ಸ್ಯಾಂಕಿ ರಸ್ತೆಯಲ್ಲಿ ವಾಹನ ದಟ್ಟಣೆ ತೀವ್ರ ವಾಗಿರುತ್ತದೆ. ಈ ಬಗ್ಗೆ ಅರಿವಿಲ್ಲದ ಜನ ಅನಗತ್ಯ ವಿಸ್ತರಣೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ರಸ್ತೆ ಕಿರಿದಾಗಿರುವುದರಿಂದ ತೊಂದರೆ ಅನುಭವಿ ಸುತ್ತಿರುವವರು ನಾವು. ಹಾಗಾಗಿ ವಿಸ್ತರಣೆ ಸೂಕ್ತ~,
-ವೀರಣ್ಣಗೌಡ, ಮಲ್ಲೇಶ್ವರ

`ಸ್ಟೆಲ್ಲಾ ಮೇರಿಸ್ ಶಾಲೆಯ ಆಡಳಿತ ಮಂಡಳಿ ಪಾಲಿಕೆ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿದ್ದು, ಸರ್ವಿಸ್ ರಸ್ತೆ ಬಂದ್ ಮಾಡಿದ್ದಾರೆ. ಹಾಗಾಗಿ ಒತ್ತುವರಿ ತೆರವುಗೊಳಿಸಿ ವಿಸ್ತರಣೆ ಕಾರ್ಯ ಕೈಗೊಳ್ಳಿ~.
-ಗೋವಿಂದರಾಜು

`ಈ ರಸ್ತೆ ವಿಸ್ತರಣೆ ತೀರಾ ಅಗತ್ಯವಿದೆ. ಏಕೆಂದರೆ ಇದು ತುಮಕೂರು ರಸ್ತೆಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಒಂದು. ರಸ್ತೆ ವಿಸ್ತರಣೆ ಕಾರ್ಯ ಕೈಗೊಳ್ಳಲಿ. ಕಡಿದ ಮರಗಳಿಗೆ ಬದಲಾಗಿ ಹೆಚ್ಚು ಸಸಿಗಳನ್ನು ನೆಡಲಿ~.
-ರಾಮು, ಆರ್‌ಎಂವಿ ಬಡಾವಣೆ

`ಭಾಷ್ಯಂ ವೃತ್ತದಿಂದ ಅಯ್ಯಪ್ಪ ಸ್ವಾಮಿ ದೇವಾಲಯದವರೆಗಿನ ರಸ್ತೆ ಕಿರಿದಾಗಿದ್ದು, ದಟ್ಟಣೆ ಉಂಟಾಗುತ್ತಿದೆ. ಅಲ್ಲಿಯ ಮರಗಳು ಅಪರೂಪ ಪ್ರಭೇದಗಳಲ್ಲ ಎಂದು ಮರ ಕಡಿ ಯುವುದು         ಸರಿಯಲ್ಲ. ಆದರೆ ವಿಸ್ತರಣೆ ಅಗತ್ಯವಿರುವುದರಿಂದ ಮುಂದುವರಿಸುವುದು ಸೂಕ್ತ~.
-ಜಗದೀಶ್‌ಚಂದ್ರ, ನಿವೃತ್ತ ಪ್ರಧಾನ ಅರಣ್ಯ   ಸಂರಕ್ಷಣಾಧಿಕಾರಿ

`ಮನುಷ್ಯರ ಬಗ್ಗೆಯೂ ಕಾಳಜಿ ಇರಲಿ~
`ಸ್ಯಾಂಕಿ ರಸ್ತೆಯಲ್ಲಿನ ಮರಗಳ ಬಗ್ಗೆ ತೋರುವ ಕಾಳಜಿ ಮನುಷ್ಯರ ಬಗ್ಗೆಯೂ ಇರಲಿ. ತಿರುವಿನ ರಸ್ತೆಯಿಂದಾಗಿ ಅಪಘಾತಗಳು ಸಂಭವಿಸಿ ಪ್ರಾಣಾಪಾಯ ಉಂಟಾದರೆ ಯಾರು ಹೊಣೆ~.

-ರಸ್ತೆ ವಿಸ್ತರಣೆ ಬಗ್ಗೆ ನಡೆದ ಸಭೆಯ ಬಳಿಕ ಉಪಮೇಯರ್ ಎಸ್. ಹರೀಶ್ ನೀಡಿದ ಪ್ರತಿಕ್ರಿಯೆ ಇದು.

`ನಗರದಲ್ಲಿ ಮೇ ತಿಂಗಳಲ್ಲಿ 163 ಮರಗಳು ಹಾಗೂ 83 ಕಡೆ ಕೊಂಬೆಗಳು ಮುರಿದುಬಿದ್ದಿವೆ. ಜೂನ್‌ನಲ್ಲಿ 166 ಮರಗಳು ಹಾಗೂ 217 ಕಡೆಗಳಲ್ಲಿ ರೆಂಬೆಗಳು ಬಿದ್ದಿವೆ. ಇದರಿಂದ ಸಾಕಷ್ಟು ತೊಂದರೆ ಆಗಿದೆ.

ಸ್ಯಾಂಕಿ ರಸ್ತೆಯಲ್ಲಿರುವ ಹಲವು ಮರಗಳು ಶಿಥಿಲಗೊಂಡಿದ್ದು, ಅದನ್ನು ತೆರವುಗೊಳಿಸಲಾಗುತ್ತಿದೆ. ಬದಲಿಗೆ ಸಾಕಷ್ಟು ಸಸಿಗಳನ್ನು ನೆಡಸಲಾಗುವುದು~ ಎಂದರು.

`ಪರಿಷ್ಕೃತ ಮಹಾನಕ್ಷೆ 2015ರ ಅನ್ವಯ ಈ ರಸ್ತೆಯನ್ನು 32 ಮೀಟರ್‌ಗೆ ವಿಸ್ತರಿಸಬೇಕಿತ್ತು. ಆದರೆ 33 ಮರಗಳನ್ನು ಉಳಿಸುವ ಉದ್ದೇಶದಿಂದ 27 ಮೀಟರ್‌ಗೆ ಸೀಮಿತಗೊಳಿಸಲಾಗಿದೆ. ವಿಸ್ತರಣೆಗೆ ಅಗತ್ಯ ಭೂಮಿ ಬಿಟ್ಟುಕೊಡುವ ಖಾಸಗಿ ಆಸ್ತಿಗಳ ಮಾಲೀಕರಿಗೆ ಸೂಕ್ತ ಪರಿಹಾರ ನೀಡಲಾಗುವುದು~ ಎಂದು ಹೇಳಿದರು.

ಪ್ರಚಾರಕ್ಕಾಗಿ ವಿರೋಧ ಬೇಡ:
`ಕೇವಲ ಪ್ರಚಾರ ಪಡೆಯುವ ಉದ್ದೇಶದಿಂದ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಈ ಹಿಂದೆ ಬಿಐಎಎಲ್, `ಮೆಟ್ರೊ~ ರೈಲು ಕಾಮಗಾರಿ ಆರಂಭಿಸುವಾಗ ಸಾವಿರಾರು ಮರಗಳನ್ನು ಕಡಿಯಲಾಯಿತು.

ಏಕೆಂದರೆ ಅನಿವಾರ್ಯ ವಾಗಿತ್ತು. ಇದೀಗ 19 ಮರಗಳನ್ನು ಕಡಿಯಲು ಮುಂದಾಗಿರುವುದಕ್ಕೆ ಅಡ್ಡಿಪಡಿಸುತ್ತಿರುವವರ ವರ್ತನೆ ಅನುಮಾನ ಮೂಡಿಸುತ್ತಿದೆ~ ಎಂದರು.

`ಸ್ಟೆಲ್ಲಾ ಮೇರಿಸ್ ಶಾಲೆಯವರು ಪಾಲಿಕೆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿ ತೆರವುಗೊಳಿಸಿ ಉಳಿದ ಭಾಗದಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣವಾಗಲಿದೆ. ತೆರವುಗೊಳಿಸುವ ಮರಗಳಿಗೆ ಬದಲಾಗಿ ಸಸಿಗಳನ್ನು ನೆಡಲಾಗುವುದು~ ಎಂದು ಹೇಳಿದರು.

`ಅಭಿವೃದ್ಧಿ ಕಾಮಗಾರಿಗಳಿಗೆ ಈ ರೀತಿ ಅಡ್ಡಿಪಡಿಸುತ್ತಿದ್ದರೆ ಮುಂದಿನ ದಿನಗಳಲ್ಲಿ ರಸ್ತೆ, ಅಂಡರ್‌ಪಾಸ್, ಕಾಲುವೆ ನಿರ್ಮಾಣ ಕಾರ್ಯವನ್ನೆಲ್ಲಾ ಕೈಬಿಟ್ಟು ಎಲ್ಲೆಡೆ ಸಸಿಗಳನ್ನೇ ನೆಡಬೇಕಾಗುತ್ತದೆಯಷ್ಟೇ. ಬೆಂಗಳೂರಿನ ಅಭಿವೃದ್ಧಿ ದೃಷ್ಟಿಯಿಂದ ಕೆಲವು ರಸ್ತೆಗಳ ವಿಸ್ತರಣೆ ಅಗತ್ಯವಿದ್ದು, ಜನತೆ ಸಹಕರಿಸಬೇಕು~ ಎಂದು ಮನವಿ ಮಾಡಿದರು.

ಹರಾಜು ಪೂರ್ಣ: `ಈಗಾಗಲೇ ಮರಗಳ ತೆರವಿಗೆ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ. ರಸ್ತೆ ವಿಸ್ತರಣೆ ಅಗತ್ಯವಿದ್ದು, ಕಾಮಗಾರಿಯನ್ನು ಮುಂದುವರಿಸಲಾಗುವುದು~ ಎಂದರು.

ನೀವೆಲ್ಲಾ ಜನರಲ್ಲವೇ:
ಸುಮಾರು ಒಂದೂವರೆ ಗಂಟೆ ಕಾಲ ಚರ್ಚೆ ನಡೆದ ಬಳಿಕವೂ ಆ ಪ್ರದೇಶದಲ್ಲಿ ಸಾರ್ವಜನಿಕ ಸಂವಾದ ಏರ್ಪಡಿಸಬೇಕು ಎಂದು ಕೆಲವು ಕೋರಿದಾಗ ಹರೀಶ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

`ರಸ್ತೆ ವಿಸ್ತರಣೆ ಕುರಿತು ಇಷ್ಟೆಲ್ಲಾ ಮಂದಿಯ ಅಭಿಪ್ರಾಯ ಪಡೆದು ಚರ್ಚೆ ನಡೆಸಿದ ನಂತರವೂ ಮತ್ತೊಂದು ಸಂವಾದ ನಡೆಸುವ ಅಗತ್ಯವೇನು. ಹಾಗಾದರೆ ನೀವೆಲ್ಲಾ ಜನರಲ್ಲವೇ. ನಿಮ್ಮ ಅಭಿಪ್ರಾಯಕ್ಕೆ ನಾವು ಮನ್ನಣೆ ನೀಡಿಲ್ಲವೇ~ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT