ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ಭಾರತ ಅಭಿಯಾನ: ಆಗಬೇಕಾದ್ದೇನು?

Last Updated 9 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಅಕ್ಟೋಬರ್ ೨ರ ಗಾಂಧಿ ಜಯಂತಿ­ಯಂದು ದೇಶದ ಪ್ರಧಾನಿ ನರೇಂದ್ರ ಮೋದಿ­ಯವರು ಸ್ವತಃ ಕೈಯಲ್ಲಿ ಪೊರಕೆ ಹಿಡಿದು, ಸ್ವಚ್ಛ­ಗೊಳಿಸಿ, ಸ್ವಚ್ಛಭಾರತ ಅಭಿಯಾನ­ಕ್ಕೆ ಚಾಲನೆ­ನೀಡುವ ಮೂಲಕ ದೇಶದ ಜನ­ರಲ್ಲಿ ರೋಮಾಂಚ­­ನವುಂಟು ಮಾಡಿದ್ದಾರೆ. ಹೆಚ್ಚಿನ ಸಾರ್ವ­­ಜನಿಕ ಪ್ರದೇಶಗಳಲ್ಲಿ ಕೊಳೆ, ಕಸ­ಗಳನ್ನು ನೋಡಿ ನೋಡಿ ತಾವೇನೂ ಮಾಡ­ಲಾ­ಗದೇ ಅವು­ಗಳಿಗೆ ಅನಿವಾರ್ಯವಾಗಿ ಹೊಂದಿ­ಕೊಂಡಂತಿದ್ದ ಬಹ­ಳಷ್ಟು ಜನರಲ್ಲಿ ಆಶಾ­ಭಾವನೆಗಳು ಚಿಗುರೊ­ಡೆದಿವೆ. ಮೋದಿಯವರು ಸಾರ್ವ­ಜನಿಕರಿಗೆ ತಮ್ಮ ಪ್ರದೇಶ­­ಗಳನ್ನು ಸ್ವಚ್ಛ­ವಾಗಿ­ಟ್ಟುಕೊಳ್ಳಲು ಕರೆ ನೀಡು­­ವುದರ ಜೊತೆ ಅಂಬಾನಿ, ಸಚಿನ್‌ ತೆಂಡೂಲ್ಕರ್‌­ರಂತಹ ಪ್ರಭಾವಿ ವ್ಯಕ್ತಿಗಳಿಗೆ ಒಂದು ಪ್ರದೇಶ­ವನ್ನು ಸ್ವಚ್ಛ­ಗೊಳಿ­ಸುವುದು ಹಾಗೂ ಇನ್ನಿತ­ರ­ರಿಗೂ ಅದೇ ರೀತಿ ಮಾಡು­ವಂತೆ ಕರೆ ನೀಡುವ ಮೂಲಕ ಅಭಿ­ಯಾನಕ್ಕೆ ಕೈಜೋಡಿಸಲು ಆಹ್ವಾನಿ­ಸಿದ್ದು, ಇದಕ್ಕೆ ಹಲವು ದಿಗ್ಗಜರ ಬೆಂಬಲ ಹಾಗೂ ಪೂರಕ ಸ್ಪಂದನೆಗಳಿಂದ ಈ ಅಭಿಯಾನವು ಇನ್ನಷ್ಟು ಚುರುಕುಗೊಂಡಿದೆ.

ಹೆಚ್ಚಿನವರು  ಸಾರ್ವ­ಜನಿಕ­­ವಾಗಿಯೂ ಈ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತ­ಪಡಿ­ಸುತ್ತಿದ್ದಾರೆ. ಸ್ವತಃ ಪ್ರಧಾನಿ­ಯವರ ಒತ್ತಾಸೆ, ಇತರ ಪ್ರಮುಖರ ಹಾಗೂ ಸರ್ಕಾ­ರೇತರ ಸಂಸ್ಥೆ­ಗಳ ಬೆಂಬಲ, ಸಾರ್ವಜನಿಕರ ಸಹ­ಭಾಗಿತ್ವ, ಜಾಲತಾಣ, ಮಾಧ್ಯಮಗಳ ಮೂಲಕ ಸ್ವಚ್ಛ­ತೆಯ ವಿಷಯದ ಕುರಿತ ಪ್ರಚಾರ... ಈ ರೀತಿಯ ಕ್ರಮ­ಗಳು ಕಸ ನಿರ್ವ­ಹಣೆಯ ಹೊಣೆ ಹೊತ್ತಿ­ರುವ ಸ್ಥಳೀಯ ಆಡಳಿತಗಳಿಗೆ ಹಾಗೂ ಎಲ್ಲೆಂದ­ರಲ್ಲಿ ಕಸವನ್ನು ಬಿಸಾ­ಡುತ್ತಿದ್ದ ಜನರಿಗೂ ಒಂದಷ್ಟು ಒತ್ತಡ ಉಂಟುಮಾಡಿವೆ. ಆದರೆ ಇವಿಷ್ಟೇ ಸ್ವಚ್ಛ ಭಾರತ ಕಲ್ಪನೆ­ಯನ್ನು ಸಾಕಾರ­ಗೊಳಿ­ಸುತ್ತವೆಯೇ ಎಂಬುದು ಪ್ರಮುಖ ಪ್ರಶ್ನೆ­.

ನಮ್ಮ ದೇಶದ ಹೆಚ್ಚಿನ ನಾಗರಿಕರ ಸಾರ್ವ­ಜನಿಕ ನಡ­ವಳಿಕೆ­ಗಳಾದ ಎಲ್ಲೆಂದರಲ್ಲಿ ಉಗು­ಳು­ವುದು, ಕಸ ಬಿಸಾಡುವುದು, ಸರದಿ ಸಾಲನ್ನು ಮುರಿ­ಯುವುದು, ಸಾರ್ವಜನಿಕ ಆಸ್ತಿಗ­ಳನ್ನು ಸರಿ­ಯಾಗಿ ನಿರ್ವಹಿಸದಿರುವುದು, ಇವು­ಗಳಿಗೆ ಕೆಲ­ವೊಮ್ಮೆ ತಿಳಿ­ವಳಿಕೆಯ ಕೊರತೆ ಕಾರ­ಣ­ವಾದರೆ, ಇನ್ನೂ ಕೆಲ­ವೊಮ್ಮೆ ಅಂತಹ ರೂಢಿಗತ ನಡವ­ಳಿ­ಕೆ­ಗಳು ಅಭ್ಯಾಸ­­ವಾಗಿರುವುದು ಪ್ರಮುಖ ಕಾರಣ ಎನ್ನ­ಬಹುದು. ಮನೋವೈಜ್ಞಾನಿ­ಕವಾಗಿ ವಿಶ್ಲೇಷಿ­ಸು­­ವು­ದಾದರೆ ಪುನರಾ­ವ­ರ್ತಿತ ಕ್ರಿಯೆ ಅಥವಾ ವರ್ತ­ನೆಗಳು ನಿಧಾನವಾಗಿ ಅಭ್ಯಾಸ ಅಥವಾ ಹವ್ಯಾಸ­ಗಳಾಗಿ ರೂಢಿಯಾಗುತ್ತವೆ. ನಾವು ತೋರುವ ದೋಷ­­ಪೂರಿತ ನಡವಳಿಕೆಗಳಿಗೆ ಈ ಹಿಂದೆ ಯಾವುದೇ ದಂಡ ಅಥವಾ ಶಿಕ್ಷೆ ವಿಧಿಸದೇ ಇರು­ವುದೂ ಅದು ಮುಂದುವರೆಯಲು ಒಂದು ಪ್ರಮುಖ ಕಾರಣವಾಗಿದೆ.

ಒಮ್ಮೆ ಇಂತಹ ನಡವಳಿಕೆಗಳು ರೂಢಿಯಾಗಿ ಬಿಟ್ಟರೆ ಅವುಗಳಿಂದ ಬಿಡಿಸಿಕೊಳ್ಳುವುದು ಅಸಾ­ಧ್ಯ­ವ­ಲ್ಲ­ವೆಂದರೂ ಸ್ವಲ್ಪ ಕಠಿಣವೇ ಸರಿ. ಈ ಹಿನ್ನೆಲೆ­ಯಿಂದ ಗಮನಿಸಿದಲ್ಲಿ ಹೆಚ್ಚಿನ ಪಾಲು ಸುಶಿಕ್ಷಿತರೇ ಇರುವ ಬೆಂಗಳೂರಿನ ನಾಗರಿಕರು ಯಾಕೆ ಎಲ್ಲೆಂದ­ರಲ್ಲಿ ಕಸ ಬಿಸಾಡುತ್ತಾರೆ? ಮೂಲದಲ್ಲೇ ಹಸಿ ಕಸ, ಒಣ ಕಸವೆಂದು ಏಕೆ ಬೇರ್ಪಡಿಸು­ವುದಿಲ್ಲ? ಎಂಬ ಪ್ರಶ್ನೆಗಳೇಳುತ್ತವೆ. ಕೆಲವು ವರ್ಷಗಳ ಹಿಂದೆ ಇಡೀ ದೇಶಕ್ಕೇ ಕಸದ ಸಂಗ್ರ­ಹಣೆಯ ವಿಷಯದಲ್ಲಿ ಬೆಂಗಳೂರಿನ ಸಾಧ­ನೆ­­ಯು ಉತ್ತಮವಾಗಿಯೇ ಇತ್ತು. ರಸ್ತೆಯ ಮೂಲೆ­­ಯ­ಲ್ಲಿರಿಸಿರುತ್ತಿದ್ದ ದೊಡ್ಡ ತೊಟ್ಟಿಗಳಿಗೆ ಜನ ಕಸ ಸುರಿಯುತ್ತಿದ್ದುದನ್ನು ತಪ್ಪಿಸಲಾ­ಯಿತು. ನಂತರ ಮನೆ ಮನೆಯ ಮುಂದೆ ತಳ್ಳು ಗಾಡಿಯು ಬಂದು ಗಂಟೆಯ ಶಬ್ದ ಮಾಡು­ತ್ತಿತ್ತು. ಶಬ್ದ ಕೇಳಿ ಹೊರಬರುತ್ತಿದ್ದ ಜನರು ಕಸ­ವನ್ನು ನೀಡುತ್ತಿದ್ದರು.

ಬೆಂಗಳೂರಿನ ಜನಸಂಖ್ಯೆ ಏರಿದಂತೆ ತಳ್ಳುವ ಗಾಡಿ ಬದಲು, ಚಿಕ್ಕ ವಾಹನ­ಗಳು ಮನೆಯ ಮುಂದೆ ಬಂದು ಕಸ ಸಂಗ್ರಹಿ­ಸುವುದು ಪ್ರಾರಂಭವಾ­ಯಿತು. ಹೀಗೆ ಸಂಗ್ರಹಿ­ಸಿದ ಕಸ ಗುಡ್ಡ, ಪರ್ವತ­ವಾಗಿ ಬೆಳೆದು, ಸಮರ್ಪ­ಕವಾದ ಹಾಗೂ ವೈಜ್ಞಾ­ನಿ­ಕವಾದ ವಿಲೇವಾ­ರಿಯ ವ್ಯವಸ್ಥೆಯಿಲ್ಲದೆ ಕಸ­ವನ್ನು ಒಂದೆಡೆ ಶೇಖ­ರಿಸಿ ಇಡಲಾಯಿತು. ಇದರ ಜೊತೆ ಪ್ರತಿದಿನ ಬರು­ತ್ತಿದ್ದ ಕಸದ ವಾಹನ ಆಗಾಗ್ಗೆ ಕೈ ಕೊಡ­ತೊ­ಡಗಿತು. ಮನೆಯ ಮುಂದೆ ನಿರ್ದಿಷ್ಟ ಸಮಯಕ್ಕೆ ಸರಿ­ಯಾಗಿ ತಳ್ಳುಗಾಡಿಗೆ ತಪ್ಪದೆ ಕಸ ನೀಡುತ್ತಿದ್ದ ಜನರು ಒಮ್ಮೆ ಬಂದು ಮತ್ತೊಮ್ಮೆ ಬಾರದ, ಸರಿ­ಯಾಗಿ ಮನೆಯ ಮುಂದೆ ನಿಲ್ಲಿಸದ ಚಿಕ್ಕ ವಾಹನಕ್ಕೆ ಕಸ ತಲುಪಿಸುವಲ್ಲಿ ತೊಂದರೆ ಅನುಭ­ವಿಸ­ಬೇಕಾಯಿತು. ಇದರಿಂದ ರಸ್ತೆಯ ಮೂಲೆ­ಯಲ್ಲಿ ಕಸವನ್ನು ಚೀಲ ಅಥವಾ ಪ್ಲಾಸ್ಟಿಕ್ ಕವರ್‌­ಗಳಲ್ಲಿರಿಸಿ ಎಸೆಯತೊಡಗಿ­ದರು. ಪಾಪ! ಅವರು ತಾನೇ ಕಸವನ್ನು ಎಷ್ಟು ದಿನ ಮನೆಯಲ್ಲಿ­ಟ್ಟು­ಕೊಂಡಾರು? ಜನ ಎಸೆದ ಚೀಲ­ಗಳನ್ನು ನಾಯಿ­­ಗಳು ಎಳೆದಾಡಿ, ಮೂಲೆ­ಯಲ್ಲಿದ್ದ ಕಸ ಇಡೀ ರಸ್ತೆಗೆ ವ್ಯಾಪಿಸುವ ಜೊತೆ ಒಂದು ರೀತಿಯ ದುರ್ವಾಸನೆ ಹರಡಿತು.

ಇನ್ನು ಕಸವನ್ನು ವಿಂಗಡಿಸಲು ಈಗ್ಗೆ ಕೆಲವು ತಿಂಗಳು­ಗಳ ಹಿಂದೆ ಬಿ.ಬಿ.ಎಂ.ಪಿ, ಅಭಿಯಾನ ಪ್ರಾರಂ­ಭಿಸಿತ್ತು. ಆದರೆ ಅದರಿಂದ ಹೆಚ್ಚೇನೂ ಲಾಭ­ವಾಗಲಿಲ್ಲ. ಜನರು ಬೇರ್ಪಡಿಸಿದ ಕಸವನ್ನು ಮತ್ತೆ ಜತೆಗೂಡಿಸಿಕೊಳ್ಳುತ್ತಿದ್ದ ಕಸ ಸಂಗ್ರ ಹಣೆಯ ವಾಹನವನ್ನು ನೋಡಿದ ಜನ ವಿಂಗ­ಡ­ಣೆಯ ಗೋಜನ್ನೇ ಬಿಟ್ಟರು. ಇಲ್ಲಿ ನಾನು ಹೇಳ ಹೊರ­ಟಿರುವುದು ಜನರು ಮಾಡಿ­ಕೊಳ್ಳುವ ಅಭ್ಯಾಸಗಳಿಗೆ ಕಸ ನಿರ್ವಹಣೆಯ ಹೊಣೆ ಹೊತ್ತ ವ್ಯವಸ್ಥೆ ಹೇಗೆ ಕಾರಣವಾಗುತ್ತದೆ ಹಾಗೂ ತನ್ಮೂಲಕ ಯಾವ ರೀತಿ ಸಮಸ್ಯೆಯ ತೀವ್ರತೆ­-ಯನ್ನು ಹೆಚ್ಚಿಸುತ್ತದೆ ಎಂಬುದರ ಕುರಿತು. ಮೇಲಿನ ಅಂಶಗಳ ಹಿನ್ನೆಲೆಯಲ್ಲಿ ಪ್ರಭಾವಿ ವ್ಯಕ್ತಿ­­ಗಳ ಅಥವಾ ಸರ್ಕಾರೇತರ ಸಂಸ್ಥೆಗಳ ಸಾಂಕೇ­ತಿಕ ಸ್ವಚ್ಛಗೊಳಿಸುವಿಕೆ, ಉತ್ಸಾಹಿ ನಾಗ­ರಿಕರ ತೊಡ­­ಗಿ­ಸಿ­­ಕೊಳ್ಳುವಿಕೆ ಹಾಗೂ ಮಾಧ್ಯಮ, ಜಾಲ­ತಾಣ­ಗಳಲ್ಲಿ ಪ್ರಚಾರ ಮುಂತಾದವುಗ­ಳಿಂದಷ್ಟೇ ‘ಸ್ವಚ್ಛ ಭಾರತ ಅಭಿಯಾನ’ ಯಶಸ್ವಿ ಆಗು­ತ್ತದೆ ಎಂದು ನಿರೀಕ್ಷಿಸಲಾಗದು.

ಏಕೆಂದರೆ ಸಾಂಕೇತಿಕ ಆಚರಣೆಗಳು ನಮ್ಮಲ್ಲಿ­ರ­ಬಹು­ದಾದ ಸಮಾಜ ಸೇವೆಯ ತುಡಿತಗಳನ್ನು ಹೆಚ್ಚು ಮಾಡಬಹುದೇ ಹೊರತು ಅದರಿಂದಲೇ ಸಮಸ್ಯೆ ಪೂರ್ಣ ನಿವಾರಣೆ ಆಗುವುದಿಲ್ಲ. ಎಷ್ಟೇ ಆಗಲಿ ವ್ಯವಸ್ಥೆಗೆ ವ್ಯಕ್ತಿ ಪರ್ಯಾಯ­ವಾಗಲು ಸಾಧ್ಯ­ವಿಲ್ಲ. ಅದರಲ್ಲೂ ಕಸನಿರ್ವಹಣೆ­ಯಂತಹ ವಿಷಯ­­ಗಳು ಒಮ್ಮೆ ಕೈಗೊಂಡು ಪೂರ್ಣ­ಗೊಳಿಸು­ವಂಥ­ದ್ದಲ್ಲ. ಬದಲಾಗಿ ದಿನನಿತ್ಯ ವ್ಯವಸ್ಥಿತ­ವಾದ ಶ್ರಮ ಹಾಗೂ ನಿರಂತರ ಮೇಲು­ಸ್ತು­ವಾರಿ ಬೇಡುವ ವಿಷಯಗಳಾಗಿವೆ. ಹಾಗಾದರೆ ಈ ರೀತಿಯ ಅಭಿಯಾನಗಳಿಂದ  ಪ್ರಯೋಜನ­ವಿಲ್ಲ ಎಂದಲ್ಲ. ಖಂಡಿತವಾಗಿಯೂ ಸಾರ್ವಜನಿ­ಕರ ಸಕ್ರಿಯ ಭಾಗವಹಿ­ಸುವಿಕೆಯಿ­ಲ್ಲದೇ ಯಾವುದೇ ಯೋಜನೆ ಯಶಸ್ವಿಯಾಗದು. ಹಾಗಾದರೆ ಮಾಡ­­ಬೇಕಿರುವುದೇನು? ಕಸ ಸಂಗ್ರಹಣೆ ಹಾಗೂ ಅದರ ವೈಜ್ಞಾನಿಕ ನಿರ್ವಹ­ಣೆಯು ಆಧುನಿಕ ಜಗತ್ತಿನ ಸಂಕೀರ್ಣತೆ­ಯನ್ನೊಳ­ಗೊಂಡ ಹಲವು ಸವಾಲುಗಳಲ್ಲೊಂದು.  

ಈ ಸಮಸ್ಯೆಗೆ ದೂರದೃಷ್ಟಿ ಒಳಗೊಂಡ ವ್ಯವಸ್ಥಿ­ತ­­ವಾದ ಯೋಜನೆಯ ಅಗತ್ಯವಿದೆ. ಯೋಜನೆ ಹಾಗೂ ಅದಕ್ಕನುಸರಿಸಬೇಕಾದ ಕಾರ್ಯ­ತಂತ್ರ­ಗಳನ್ನು ವಿನ್ಯಾಸಗೊಳಿಸಲು ತ್ಯಾಜ್ಯ ಸಂಗ್ರಹಣೆ ಹಾಗೂ ಅದರ ನಿರ್ವಹಣೆಯ ವಿಷಯದಲ್ಲಿ ತಜ್ಞತೆ ಹೊಂದಿದ ಅನುಭವಿಗಳು ಹಾಗೂ ಸಾರ್ವ­ಜನಿಕರ ಅಭಿಪ್ರಾಯಗಳನ್ನು ಪಡೆಯ­ಬೇಕು. ಈ ಯೋಜನೆಯ ಆಧಾರದ ಮೇಲೆ ರಾಷ್ಟ್ರ ಹಂತದಲ್ಲಿ ಒಂದು ಬಿಗಿ ಕಾನೂನಿನ ರಚನೆ­­ಯಾ­ಗಬೇಕು. ಇದರ ಅಡಿಯಲ್ಲಿಯೇ ಪ್ಲಾಸ್ಟಿಕ್ ಬಳಕೆ­ಯನ್ನು ರದ್ದುಗೊಳಿಸಲು ಅಥವಾ ಮಿತಿ­ಗೊಳಿಸಲು, ಸಾರ್ವಜನಿಕರು ಎಲ್ಲೆಂದ­ರಲ್ಲಿ ಉಗುಳು­ವುದನ್ನು ನಿಯಂತ್ರಿಸಲು ವಿವರವಾದ ಕಾರ್ಯ ತಂತ್ರವಿರಬೇಕು.

ಕುಟುಂಬದ ಹಂತದಲ್ಲಿ ತ್ಯಾಜ್ಯ ವಿಂಗಡಣೆಯ ವಿಧಾನ, ಕುಟುಂಬದಿಂದ ಸ್ಥಳೀಯ ಆಡಳಿತವು ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿಗೆ ಅನುಸ­ರಿಸುವ ವಿಧಾನಗಳ ಕುರಿತ ಸಮಗ್ರ  ಅಂಶಗಳನ್ನು ನೂತನ ಕಾನೂನು ಹೊಂದಿರ­ಬೇಕು. ಈ ಕಾನೂ­ನ­ನ್ನು ಉಲ್ಲಂಘಿ­ಸುವ­ವರಿಗೆ ವಿಧಿಸ­ಲಾಗುವ ದಂಡದ ಪ್ರಮಾಣ­ಗಳ ವಿವರ­ಗಳು ಹಾಗೂ ತ್ಯಾಜ್ಯದ ಪರಿಣಾಮ­ಕಾರಿ ನಿರ್ವ­ಹಣೆ ಕುರಿತಂತೆ ವ್ಯಾಪಕ ಪ್ರಚಾರ ನೀಡಬೇಕು. ಕಾನೂ­ನನ್ನು ಉಲ್ಲಂಘಿ­­ಸುವವರ ಬಗ್ಗೆ ಸಾಮಾ­ಜಿಕ ಜಾಲ­ತಾಣ­­ಗಳಲ್ಲಿ ವ್ಯಾಪಕ ಪ್ರಚಾರ ನೀಡುವ ಮೂಲಕ ಅವರ ಕ್ರಮಗಳನ್ನು ನಿರುತ್ತೇಜಿ­ಸಬೇಕು. ತ್ಯಾಜ್ಯ ಸಂಗ್ರ­ಹಣೆ ಮತ್ತು ನಿರ್ವ­ಹಣೆಯ ಕುರಿ­ತಂತೆ ಜಾಗೃತಿ, ಪರಿಣಾ­ಮಕಾರಿ ಕಾನೂ­­ನಿನ ಅನು­ಷ್ಠಾನ, ಕಾನೂನು ಉಲ್ಲಂಘಿ­ಸುವವರಿಗೆ ಶಿಕ್ಷೆ ಮತ್ತು ಸರಿ­ದಾರಿಗೆ ಬಾರದ ಜನ­ರಿಗೆ ಜಾಗೃತ ನಾಗ­­ರಿ­ಕರಿಂದ ಜಾಲ­ತಾಣ, ಮಾಧ್ಯ­ಮಗಳ ಮೂಲಕ ಛೀಮಾರಿ. ಶಾಲೆ ಕಾಲೇಜು­ಗಳ ವಿದ್ಯಾ­ರ್ಥಿ­­ಗಳನ್ನು ಈ ಅಭಿಯಾನ­ದಲ್ಲಿ ಬಳಸಿ­­ಕೊಳ್ಳುವುದು.. ಈ ರೀತಿಯ ಕ್ರಮಗಳು ಸ್ವಚ್ಛ ಭಾರತದ ಸಾಕಾರಕ್ಕೆ ಸಹಕಾರಿ ಆಗುವುದರಲ್ಲಿ ಸಂದೇಹವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT