ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತೆ, ಏಕತೆಗೆ ಆದ್ಯತೆ: ನರೇಂದ್ರ ಮೋದಿ

Last Updated 12 ಏಪ್ರಿಲ್ 2014, 9:51 IST
ಅಕ್ಷರ ಗಾತ್ರ

ಗುಲ್ಬರ್ಗ: ಸ್ವಚ್ಛತೆ, ಆರೋಗ್ಯ, ಶಿಕ್ಷಣ, ತಂತ್ರಜ್ಞಾನ, ಆಹಾರ, ಏಕತೆಗೆ ಆದ್ಯತೆ ನೀಡುವ ಮೂಲಕ ಅಭಿವೃದ್ಧಿ ಹಾಗೂ ಉತ್ತಮ ಆಡಳಿತ ನೀಡುವುದೇ ನಮ್ಮ ಗುರಿ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದರು.

ನಗರದ ಖೂಬಾ ಮೈದಾನದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಸಭೆಯನ್ನು ‘ಹೋಲೊಗ್ರಾಂ ತಂತ್ರ­ಜ್ಞಾನ’ದ ಮೂಲಕ ಉದ್ದೇಶಿಸಿ ಅವರು ಮಾತನಾಡಿದರು. ದೇಶದ 20 ರಾಜ್ಯ­ಗಳ 100 ಪಟ್ಟಣಗಳಲ್ಲಿ ಏಕಕಾಲದಲ್ಲಿ ಭಾಷಣ ಬಿತ್ತರಿಸಲಾಗಿತ್ತು.

ದೇಶದಲ್ಲಿ ಜನಸಂಖ್ಯಾ ಸ್ವರೂಪ, ಪ್ರಜಾಪ್ರಭುತ್ವ ಮತ್ತು ಬೇಡಿಕೆ ಎಂಬ ಪ್ರಬಲ ಆಸ್ತಿಯಿದೆ. ಅದನ್ನು ಬಳಸಿ­ಕೊಳ್ಳಬೇಕಾಗಿದೆ. ಯುವ–ಡಿಜಿಟಲ್‌ ಭಾರತ, ಹಳ್ಳಿಗೆ ತಂತ್ರಜ್ಞಾನ, ದೇಶ ರಕ್ಷಣೆಗೆ ಬಲಿದಾನ ನೀಡಿದವರಿಗೆ ಗೌರವ ನಮ್ಮ ಗುರಿ. ದೇಶಕ್ಕೆ ಸಂಕಟ­ದಿಂದ ಮುಕ್ತಿ ನೀಡಬೇಕಿದ್ದು, ಅಧಿಕಾರ ಬದಲಾಗಬೇಕಾಗಿದೆ ಎಂದರು.

ಕೊಳವೆ ಬಾವಿಗೆ ಮಗು ಬಿದ್ದರೆ ಮಾಧ್ಯಮ ಬಂದು 24 ಗಂಟೆ ನೇರ ಪ್ರಸಾರ ಕೊಡುತ್ತಾರೆ. ಜನ ಉಸಿರು ಬಿಗಿಹಿಡಿದು ನೋಡುತ್ತಾರೆ. ಆದರೆ ದಿನನಿತ್ಯ ಸಾಯುವ ತಾಯಿ–ಮಕ್ಕಳ ಬಗ್ಗೆ ಕಾಳಜಿಯಿಲ್ಲ. ಶಾಲೆ ಮತ್ತು ಆಸ್ಪತ್ರೆ ದುಬಾರಿಯಾಗಿದ್ದು, ಮಧ್ಯಮ ವರ್ಗದ ಕೈಗೆಟಕುತ್ತಿಲ್ಲ. ಅದಕ್ಕಾಗಿ ಉತ್ತಮ ಶಿಕ್ಷಣ, ಜಿಲ್ಲೆಗೊಂದು ಆಸ್ಪತ್ರೆ, ವೈದ್ಯಕೀಯ ಕಾಲೇಜು, ಉತ್ತಮ ಆರೋಗ್ಯ ಸೇವೆಯೇ ನಮ್ಮ ಗುರಿ ಎಂದರು.

2019ರಲ್ಲಿ ಗಾಂಧೀಜಿ 150ನೇ ಜನ್ಮವರ್ಷ. ಸ್ವಚ್ಛತೆ ಮೂಲಕ ಅವರನ್ನು ಗೌರವಿಸಬೇಕು. ಈ ನಿಟ್ಟಿನಲ್ಲಿ ದೇಶದ 500 ನಗರಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ಹಾಗೂ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪಿಸಲಾಗು­ವುದು. ಆ ಮೂಲಕ ಒಂದೆಡೆ ಕಸದಿಂದ ರಸ ತೆಗೆದರೆ, ಶುದ್ಧಿಕರಿಸಿದ ನೀರನ್ನು ರೈತರಿಗೆ ನೀಡಲಾಗುವುದು. ರೈತರು ಹೆಚ್ಚು ತರಕಾರಿ ಬೆಳೆದಾಗ ಬೆಲೆ ಇಳಿಕೆಯಾಗುತ್ತದೆ. ಜನರ ಪೌಷ್ಠಿಕತೆ ಹೆಚ್ಚಾಗುತ್ತದೆ. ಇಂತಹ ಹಲವು ಯೋಜನೆ ಮುಂದಿದೆ ಎಂದರು.

ಕಾಂಗ್ರೆಸ್‌ ನಾಯಕರು ಮತ್ತು ಅವರ ಸುಪುತ್ರರು ಭ್ರಷ್ಟಾಚಾರದಿಂದ ಬೇಸರ ತರಿಸಿದ್ದಾರೆ. ಸಂಪ್ರದಾಯದ ಹೆಸರಲ್ಲಿ ಭೀತಿ ಹುಟ್ಟಿಸಿದ್ದಾರೆ. ಜಾತಿವಾರು ಒಡೆದಿದ್ದಾರೆ. ಹೀಗಾಗಿ ದೇಶದಲ್ಲಿ ರಾಜಕೀಯದ ಲೆಕ್ಕಾಚಾರ ಹೋಗಿ ಭಾವನೆಯ ಕೆಮೆಸ್ಟ್ರಿ (ರಸಾಯನ ಶಾಸ್ತ್ರ) ಬಂದಿದೆ. ಮೂರನೇ ಹಂತದಲ್ಲಿ ಮತದಾನ ಹೆಚ್ಚಾಗಿರುವುದು ಆಶಾಭಾವನೆ ಹೆಚ್ಚಿಸಿದೆ ಎಂದರು.

ಹೋಲೋಗ್ರಾಂ ಹೀಗಿದೆ...
ಸ್ಟುಡಿಯೋದಲ್ಲಿರುವ ವ್ಯಕ್ತಿಯ ದೃಶ್ಯವನ್ನು ಲೇಸರ್‌ ಬೆಳಕಿನ ವಿವರ್ತನೆ, ಮುಖಾಮುಖಿ, ಅಲೆಗಳು, ತೀವ್ರತೆ ಇತ್ಯಾದಿ ಮೂಲಕ ಮೂರು ಆಯಾಮ (3ಡಿ)ದಲ್ಲಿ ಸೆರೆ ಹಿಡಿಯಲಾಗುತ್ತದೆ. ದಾಖಲಿಸಿಕೊಂಡ ಚಿತ್ರಣವನ್ನು ಇನ್ನೊಂದೆಡೆ 3 ಡಿ ಮಾದರಿಯಲ್ಲಿ ಪ್ರಸ್ತುತ ಪಡಿಸುವುದೇ ಹೋಲೋಗ್ರಾಂ ತಂತ್ರಜ್ಞಾನ.

ವೇದಿಕೆಯಲ್ಲಿ ಶೂನ್ಯವಿದ್ದರೂ ಲೇಸರ್ ಬೆಳಕು ದೃಶ್ಯವನ್ನು ರೂಪಿಸಿ, ಸ್ವತಃ ಸ್ಟುಡಿಯೋ ಚಿತ್ರಣವೇ ಮೂಡುತ್ತಿರುವ ಹಾಗೆ ಭ್ರಮೆ ಮೂಡಿಸುತ್ತದೆ. 2012ರ ಗುಜರಾತ್‌ ಚುನಾವಣೆಯಲ್ಲಿ ಮೋದಿ ಮೊದಲ ಬಾರಿ ಹೋಲೋಗ್ರಾಂ ಮೂಲಕ ಪ್ರಚಾರ  ಆರಂಭಿಸಿದ್ದರು. ಬಿಜೆಪಿ ಸಂವಹನ ಘಟಕ ಮತ್ತು ಸಿಎಜಿ ಸಂಸ್ಥೆಯು ನಗರದಲ್ಲಿ ಈ ಕಾರ್ಯಕ್ರಮ ಆಯೋಜಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT