ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಯಂ ಘೋಷಿತ ಆಸ್ತಿ ತೆರಿಗೆ ಹೆಚ್ಚಳಕ್ಕೆ ವಿರೋಧ

Last Updated 13 ಸೆಪ್ಟೆಂಬರ್ 2011, 10:10 IST
ಅಕ್ಷರ ಗಾತ್ರ

ತುಮಕೂರು: ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಶೇ 15ರಿಂದ 30ರಷ್ಟು ಹೆಚ್ಚಿಸುವ ಪ್ರಸ್ತಾಪವನ್ನು ನಗರಸಭೆ ಸದಸ್ಯರು ಬಲವಾಗಿ ವಿರೋಧ ವ್ಯಕ್ತಪಡಿಸಿದರು.

ಸೋಮವಾರ ನಡೆದ ನಗರಸಭೆ ಸಾಮಾನ್ಯಸಭೆಯ ಮುಂದುವರಿದ ಮೂರನೇ ದಿನದ ಸಭೆಯಲ್ಲಿ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತಾರೂಢ ಬಿಜೆಪಿ ಸದಸ್ಯ ಕೆ.ಪಿ.ಮಹೇಶ್, ಇಡೀ ದೇಶದಲ್ಲಿ ಈ ನಗರಸಭೆ ವಿಧಿಸಿರುವಷ್ಟು ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಎಲ್ಲೂ ವಿಧಿಸಲಾಗಿಲ್ಲ.

ನಗರಾಭಿವೃದ್ಧಿ ಸಚಿವ ಸುರೇಶ್‌ಕುಮಾರ್ ಕೂಡ ಇಲ್ಲಿನ ಸ್ವಯಂ ಘೋಷಿತ ಆಸ್ತಿ ತೆರಿಗೆ ಹೆಚ್ಚಿದೆ ಎಂದು ಹೇಳಿದ್ದಾರೆ. ಹೀಗಿದ್ದರೂ ಮತ್ತೇ ಹೆಚ್ಚಳ ಮಾಡಲು ಹೋಗುವುದು ಬೇಡ ಎಂದರು.

ಪೌರಾಡಳಿತ ನಿರ್ದೇಶನದಂತೆ ಪ್ರತಿ ಮೂರು ವರ್ಷಕ್ಕೊಮ್ಮೆ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಪರಿಷ್ಕರಿಸಬೇಕು. ಶೇ 15ರಿಂದ ಶೇ 30ರಷ್ಟು ತೆರಿಗೆ ದರವನ್ನು ಹೊಸದಾಗಿ ಪ್ರಕಟವಾಗಿರುವ ಸ್ಥಿರಾಸ್ತಿಯ ಪರಿಷ್ಕೃತ ಮೌಲ್ಯವನ್ನು ಆಧರಿಸಿ ಹೆಚ್ಚಿಸುವಂತೆ ನಿರ್ದೇಶನ ನೀಡಿ ಪತ್ರ ಬರೆದಿದೆ. ಪೌರಾಡಳಿತದ ನಿರ್ದೇಶನವನ್ನು ಪಾಲಿಸದಿದ್ದರೆ ನಗರಸಭೆಯನ್ನು ಸೂಪರ್‌ಸೀಡ್ ಮಾಡಬಹುದಾಗಿದೆ. ಹೀಗಾಗಿ ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕಾಗಿದೆ ಎಂಬ ವಾದವು ಸಭೆಯಲ್ಲಿ ಕೇಳಿಬಂತು.

ಸರ್ಕಾರ ಹೇಳಿದೆಲ್ಲವನ್ನು ಪಾಲಿಸಬೇಕಾಗಿಲ್ಲ. ನಗರದ ಜನರ ಪರಿಸ್ಥಿತಿಯೇನು. ತೆರಿಗೆ ಹೆಚ್ಚಳಕ್ಕೆ ಯಾವ ಮಾನದಂಡ ಅನುಸರಿಸಲಾಗಿದೆ ಎಂಬ ಅರಿವು ಇರಬೇಕು. ಜನಪರ ನಿಲುವು ತೆಗೆದುಕೊಳ್ಳಬೇಕೆ ಹೊರತು ಸರ್ಕಾರದ ಆದೇಶವನ್ನು ಯಥಾವತ್ತಾಗಿ ಜಾರಿ ಮಾಡುವುದು ಬೇಡ. ಈಗ ತೆರಿಗೆ ಹೆಚ್ಚಳ ಮಾಡಿದರೆ ಏಪ್ರಿಲ್‌ನಿಂದ ಈವರೆಗೂ ತೆರಿಗೆ ಕಟ್ಟಿರುವವರಿಂದ ಹೆಚ್ಚುವರಿ ಹಣವನ್ನು ವಸೂಲಿ ಮಾಡುವುದಾದರೂ ಹೇಗೆ? ಎಂದು ಸದಸ್ಯ ಮಹೇಶ್ ಪ್ರಶ್ನಿಸಿದರು.

ಬಿಜೆಪಿಯ ಲಕ್ಷ್ಮೀನರಸಿಂಹರಾಜು ಮಾತನಾಡಿ, ರಾಜ್ಯದ ಇತರೆ ನಗರಸಭೆಗಳಲ್ಲಿ ಎಷ್ಟು ತೆರಿಗೆ ವಿಧಿಸಲಾಗಿದೆ ಎಂಬ ಪಟ್ಟಿ ತರಿಸಿ ತುಲನೆ ಮಾಡಿ ನೋಡೋಣ ಎಂಬ ಸಲಹೆಗೆ ಸಭೆಯಲ್ಲಿ ವಿರೋಧ ಕಂಡುಬಂತು.

ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರು, ಸಂಘ-ಸಂಸ್ಥೆ, ಸಾರ್ವಜನಿಕರ ಸಭೆ ಕರೆದು ತೆರಿಗೆ ಹೆಚ್ಚಳದ ಕುರಿತು ಸುದೀರ್ಘ ಚರ್ಚೆ ನಡೆಸಿದ ನಂತರ ತೀರ್ಮಾನ ಮಾಡೋಣ ಎಂಬ ಸಲಹೆಗೆ ಸದಸ್ಯರಾದ ಅಪೀಜ್, ಮಂಜುನಾಥ್ ವಿರೋಧ ವ್ಯಕ್ತಪಡಿಸಿದರು.

ನಗರಸಭೆಯಲ್ಲಿ ಶಾಸಕರು, ಸಂಸದರು ಸುಪ್ರೀಂ ಅಲ್ಲ, ಸದಸ್ಯರು ಸುಪ್ರೀಂ. ಪೌರಾಡಳಿತದ ಆದೇಶವನ್ನು ಪಾಲಿಸೋಣ. ಕಾನೂನಿನಂತೆ ತೆರಿಗೆ ಹೆಚ್ಚಳ ಮಾಡೋಣ ಎಂಬ ಅಪೀಜ್, ಮಂಜುನಾಥ್ ಸಲಹೆಗೆ ಭಾರೀ ವಿರೋಧ ವ್ಯಕ್ತವಾಯಿತು. ಕಾಂಗ್ರೆಸ್ ಸದಸ್ಯ ತರುಣೇಶ್ `ಪೌರಾಡಳಿತ ನಿರ್ದೇಶನ ಪಾಲಿಸಲು ಆಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದರೂ ಸಾರ್ವಜನಿಕರ ಸಭೆ ಕರೆದು ಚರ್ಚಿಸಿದ ನಂತರ ತೀರ್ಮಾನ ಮಾಡೋಣ~ ಎಂದರು.

ಶಾಸಕರು, ಸಂಸದರು, ಸಾರ್ವಜನಿಕರ ಸಭೆಯಲ್ಲಿ ಚರ್ಚಿಸಿ ನಂತರ ತೆರಿಗೆ ಹೆಚ್ಚಳ ತೀರ್ಮಾನ ಮಾಡುವುದಾಗಿ ಪೌರಾಡಳಿತ ನಿರ್ದೇಶನಕ್ಕೆ ಪತ್ರ ಬರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಕುಡಿಯುವ ನೀರು
ಕುಡಿಯುವ ನೀರಿನ ದರ ಹೆಚ್ಚಳ ಪ್ರಸ್ತಾವಕ್ಕೆ ವಿರೋಧ ವ್ಯಕ್ತವಾಯಿತು. ಆದರೆ ಹೇಮಾವತಿ 2ನೇ ಹಂತದ ನೀರು ಪೂರೈಕೆ ಯೋಜನೆ ಜಾರಿಯಾದ ಬಳಿಕ ನೀರಿನ ದರ ಪರಿಷ್ಕರಣೆಗೆ ಸಭೆ ಅನುಮತಿಸಿತು. ಆಯುಕ್ತ ಅನುರಾಗ್ ತಿವಾರಿ, ನಗರಸಭೆ ಅಧ್ಯಕ್ಷೆ ಯಶೋಧಾ ಗಂಗಪ್ಪ, ಉಪಾಧ್ಯಕ್ಷ ಅಸ್ಲಾಂ ಪಾಷಾ ಇದ್ದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT