ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಿಸ್ ಬ್ಯಾಂಕ್ ಹಣ ಇನ್ನೂ ಏಕೆ ತಂದಿಲ್ಲ

Last Updated 14 ಏಪ್ರಿಲ್ 2011, 6:40 IST
ಅಕ್ಷರ ಗಾತ್ರ

ತುಮಕೂರು: ಭಾರತೀಯರು ಸ್ವಿಸ್ ಬ್ಯಾಂಕಿನಲ್ಲಿಟ್ಟಿರುವ ಕಪ್ಪು ಹಣವನ್ನು ಇನ್ನೂ ಏಕೆ ವಾಪಸ್ ತಂದಿಲ್ಲವೆಂದು ಕೇಂದ್ರ ಸರ್ಕಾರವನ್ನು ಪ್ರತಿಯೊಬ್ಬರು ಪ್ರಶ್ನಿಸಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಇಲ್ಲಿ ಬುಧವಾರ ಕರೆ ನೀಡಿದರು.

ವಿದ್ಯೋದಯ ಕಾನೂನು ಕಾಲೇಜು ವಿದ್ಯಾರ್ಥಿ ಸಂಘದ ಸಮಾರೋಪದಲ್ಲಿ ಮಾತನಾಡಿ, ಕಪ್ಪು ಹಣ ವಾಪಸ್ ತರಿಸಲು ಕಾನೂನು ತಜ್ಞರೊಂದಿಗೆ ಸಮಾಲೋಚನೆ ಮಾಡುತ್ತಿದ್ದೇವೆ ಎಂದು ಕೇಂದ್ರ ಇನ್ನೂ ಹೇಳುತ್ತಲೇ ಇದೆ. ಎಷ್ಟು ದಿನಗಳವರೆಗೆ ಸಮಾಲೋಚನೆ ಮಾಡುತ್ತಿರಲೇಬೇಕು? ಒಂದು ಸಮೀಕ್ಷೆಯ ಅಂಕಿ ಸಂಖ್ಯೆ ಪ್ರಕಾರ 1 ಲಕ್ಷ 46 ಸಾವಿರ ಮಿಲಿಯನ್ ಅಮೆರಿಕನ್ ಡಾಲರ್ ಹಣ ಸ್ವಿಸ್ ಬ್ಯಾಂಕ್‌ನಲ್ಲಿದೆ. ಈ ಹಣವನ್ನು ವಾಪಸ್ ದೇಶಕ್ಕೆ ತಂದರೆ, ಅದರಿಂದ ಬರುವ ವಾರ್ಷಿಕ ಬಡ್ಡಿ ಹಣದಲ್ಲಿ ಎಲ್ಲ ರೀತಿಯ ತೆರಿಗೆ ರಹಿತ ಕೇಂದ್ರ ಬಜೆಟ್ ಮಂಡಿಸಬಹುದು, ಜತೆಗೆ 24 ತಾಸಿನೊಳಗೆ ವಿದೇಶಗಳಿಂದ ಪಡೆದಿರುವ ಸಾಲವನ್ನು ಸಂಪೂರ್ಣ ತೀರಿಸಬಹುದು. ಇಡೀ ದೇಶದ ಜನತೆ ಈ ಬಗ್ಗೆ ದನಿಯೆತ್ತಬೇಕಿದೆ ಎಂದು ಹೇಳಿದರು.

2007-08ರಲ್ಲಿ ಗ್ರಾಮೀಣ ಪ್ರದೇಶಕ್ಕೆ ಎಂಟು ಯೋಜನೆಗಳಿಗೆ ಮಂಜೂರಾದ ಕೋಟ್ಯಂತರ ರೂಪಾಯಿಯಲ್ಲಿ ಇಂದಿಗೂ 51 ಸಾವಿರ ಕೋಟಿ ಹಣ ಖರ್ಚಾಗಿರುವುದಕ್ಕೆ ಲೆಕ್ಕವಿಲ್ಲ.ರಾಜೀವ್‌ಗಾಂಧಿ ಕೇಂದ್ರದಿಂದ ಬಿಡುಗಡೆಯಾಗುವ ಒಂದು ರೂಪಾಯಿಯಲ್ಲಿ ಫಲಾನುಭವಿಗೆ ತಲುಪುವುದು ಕೇವಲ 15 ಪೈಸೆ ಮಾತ್ರ ಎಂದು ಹೇಳಿದ್ದರು. ಅದು ಇಂದಿಗೂ ನಿಜವೇ ಆಗಿದೆ. ದೇಶದ ಹೆಚ್ಚಿನ ಜನಸಂಖ್ಯೆ ಹಳ್ಳಿಗಳಲ್ಲಿರುವುದರಿಂದ ಅಧಿಕಾರ ವಿಕೇಂದ್ರೀಕರಣಕ್ಕೆ ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಆದರೆ ಆ ವ್ಯವಸ್ಥೆ ಮೂಲಕ ಇಂದು ಭ್ರಷ್ಟಾಚಾರ ಮತ್ತು ರಾಜಕೀಯವನ್ನು ಮಾತ್ರ ವಿಕೇಂದ್ರೀಕರಣಗೊಳಿಸಲಾಗಿದೆ ಎಂದು ವಿಷಾದಿಸಿದರು.

‘ಸದನಗಳಲ್ಲಿ ಜನರ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿಲ್ಲ. ಜನರಿಗೆ ಯಾವುದೇ ಬಿಲ್‌ಗಳು ಪಾಸಾಗದಿದ್ದರೂ ಜನಪ್ರತಿನಿಧಿಗಳ ಸಿಟ್ಟಿಂಗ್ ಬಿಲ್, ಈಟಿಂಗ್ ಬಿಲ್, ವಾಕಿಂಗ್ ಬಿಲ್‌ಗಳು ಮಾತ್ರ ಪಾಸಾಗುತ್ತಿವೆ’ ಎಂದು ವ್ಯಂಗ್ಯವಾಡಿದ ಅವರು, ಜನರು ತಾವು ಚುನಾಯಿಸಿದ ಜನಪ್ರತಿನಿಧಿಯನ್ನು ತಮ್ಮ ಸಮಸ್ಯೆಗಳ ಬಗ್ಗೆ ಎಂದಾದರೂ ಎದ್ದು ನಿಂತು ಪ್ರಶ್ನೆ ಕೇಳಿದ್ದೀರಾ? ಗಂಭೀರ ಚರ್ಚೆ ಮಾಡಿದ್ದೀರಾ? ಎಂದು ಪಟ್ಟುಹಿಡಿದು ಪ್ರಶ್ನಿಸಬೇಕು ಎಂದು ಸಲಹೆ ನೀಡಿದರು.

2ಜಿ ಸ್ಪೆಕ್ಟ್ರಂ ಹಗರಣ ಕುರಿತು ಜೆಪಿಸಿ ತನಿಖೆಯಾಗಬೇಕೆಂದು 24 ದಿನಗಳ ಕಾಲ ಚರ್ಚೆ ಮಾಡಿದರು. ಹಾಗೆ ನೋಡಿದರೆ ಜೆಪಿಸಿ ಮತ್ತು ಸಿವಿಸಿ ನಡುವೆ ಅಂತಹ ವ್ಯತ್ಯಾಸವೇನೂ ಇಲ್ಲ. ಯಾವುದೇ ತನಿಖೆ ಅಥವಾ ಶಿಕ್ಷೆಯಾಗಬೇಕಾದರೆ ಅದು ಪೊಲೀಸ್ ಅಥವಾ ಇನ್ನಿತರ ತನಿಖಾ ಸಂಸ್ಥೆ ಮೂಲಕವೇ ಆಗಬೇಕು ಎಂದು ಹೇಳಿದರು.

ವಿದ್ಯೋದಯ ಪ್ರತಿಷ್ಠಾನದ ಆಡಳಿತ ಮತ್ತು ಶೈಕ್ಷಣಿಕ ಮಂಡಳಿ ನಿರ್ದೇಶಕ ಪ್ರೊ.ಎಚ್.ಎಸ್.ಶೇಷಾದ್ರಿ, ಪ್ರತಿಷ್ಠಾನದ ಅಧ್ಯಕ್ಷ ಎಚ್.ಎಸ್.ಪುಟ್ಟಕೆಂಪಣ್ಣ, ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ವೆಂಕಟಾಚಲಪತಿಸ್ವಾಮಿ, ಪ್ರೊ.ಕೆ.ಚಂದ್ರಣ್ಣ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವಕುಮಾರನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT