ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವೀಟಿ ರಾಧಿಕಾ ಯೂ-ಟರ್ನ್

Last Updated 18 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕಾಣುತ್ತಿದ್ದ ಕಾಲುಗಳನ್ನು ಗೌನ್‌ನಂಥ ಲಂಗದಿಂದಲೇ ಮುಚ್ಚಿಕೊಂಡು ಕುಳಿತರು ರಾಧಿಕಾ ಉರುಫ್ ರಾಧಿಕಾ ಕುಮಾರಸ್ವಾಮಿ. ಅವರನ್ನು ಹೀಗೆ ಕರೆಯಲೇಬೇಕು. ಯಾಕೆಂದರೆ, ಟೈಟಲ್ ಕಾರ್ಡ್‌ನಲ್ಲಿ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಎಂದೂ ನಟ-ನಟಿಯರ ಶೀರ್ಷಿಕೆ ಬರುವಾಗ ರಾಧಿಕಾ ಎಂದೂ ಅವರ ಹೆಸರು ಎರಡೆರಡು ಬಾರಿ ತೆರೆಮೇಲೆ ಮೂಡಲಿದೆ.

ಸಂಸಾರನೌಕೆಯಲ್ಲಿ ಒಂದಿಷ್ಟು ದೂರ ಪಯಣಿಸಿದ ನಂತರ ಅವರೀಗ ಸಿನಿಮಾ ದಡಕ್ಕೆ ಮರಳಿದ್ದಾರೆ. ಕೈಯಲ್ಲಿ ಅವಕಾಶದ ಅರ್ಜಿ. ವರ್ಷಕ್ಕೆ ಏಳು ಸಿನಿಮಾಗಳಲ್ಲಿ ನಟನೆ, ಮೂರರ ನಿರ್ಮಾಣ- ಇದು ಅವರ ಗುರಿ.
 
ಚುನಾವಣಾ ಕಣಕ್ಕೇನಿದ್ದರೂ ಮೂವತ್ತಾದ ಮೇಲೆಯೇ ಇಳಿಯುವುದು ಎಂದು ಹೇಳುವ ಮೂಲಕ ತಮ್ಮ ವಯಸ್ಸಿನ್ನೂ ಚಿಕ್ಕದು ಎಂಬ ಸಂದೇಶವನ್ನೂ ಅವರು ದಾಟಿಸಿದರು.

ಇದನ್ನು ಖಾತರಿಪಡಿಸಲು ಅವರು ಕೊಡುವ ಹೋಲಿಕೆ- `ನಾನು ರಕ್ಷಿತಾ ಅವರಿಗಿಂತ ಐದು ವರ್ಷ ಚಿಕ್ಕವಳು. ಅಂದರೆ, ವಯಸ್ಸು ಎಷ್ಟಿರಬೇಕು ನೀವೇ ಅಂದಾಜು ಮಾಡಿ~.

ಹಾಗಂತ ಚುನಾವಣಾ ಪ್ರಚಾರದಿಂದೇನೂ ಅವರು ದೂರ ಉಳಿಯುವುದಿಲ್ಲವಂತೆ. ಅಂದಮೇಲೆ, ರಾಧಿಕಾ ಸಿನಿಮಾದ ಮರುಪಯಣಕ್ಕೂ ರಾಜಕೀಯಕ್ಕೂ ಸಾವಯವ ಸಂಬಂಧ ಇದೆ ಎಂದಾಯಿತಲ್ಲವೇ?

ರಾಧಿಕಾ ತಾವು ಮುಂದೆ ಇಡಬೇಕಿರುವ ಹೆಜ್ಜೆಗಳನ್ನು ತುಂಬಾ ಸ್ಪಷ್ಟವಾಗಿ ತೀರ್ಮಾನಿಸಿದಂತಿದೆ. ಶಿವರಾಜ್‌ಕುಮಾರ್ ತಂಗಿಯಾಗಿ ಸೆಂಟಿಮೆಂಟ್ ಪೆಪ್ಪರಮಿಂಟ್ ತಿಂದಿದ್ದ ಅವರು ಮತ್ತೆ ಅಂಥ ಅವಕಾಶಗಳು ಬಂದರೆ ಸೆರಗೊಡ್ಡಲಿದ್ದಾರೆ.

ಪ್ರಶಸ್ತಿಗಾಗಿಯೇ ಸಿನಿಮಾ ಮಾಡುವ ಹುಕಿಯೂ ಅವರಿಗಿದೆಯಂತೆ. ಅರ್ಥಾತ್ ಆದಷ್ಟು ಬೇಗ ಚಿತ್ರರಂಗದಲ್ಲಿ ಖ್ಯಾತಿಯ `ಝಂಡಾ~ ಹಿಡಿದು ನಿಲ್ಲುವುದೇ ಅವರ ಅಜೆಂಡಾ.

`ಸ್ವೀಟಿ~ ಚಿತ್ರದ ಮುಹೂರ್ತದಲ್ಲಿ ಆಡಲೇಬೇಕಾದ ಮಾತುಗಳು ತಮ್ಮಲ್ಲಿ ಇವೆ ಎಂಬಂತೆ ಸಾವಕಾಶವಾಗಿ ಅವರು ಪ್ರಶ್ನೆಗಳನ್ನು ಎದುರುಗೊಂಡರು. ಆರು ವರ್ಷಗಳಾದ ಮೇಲೆ ನಾಯಕಿಯಾಗಿ ಅವರು ಮತ್ತೆ ಗಾರ್ಡ್ ತೆಗೆದುಕೊಂಡಿದ್ದಾರೆ. ಈ ಸಲ `ನೋಡಲಷ್ಟೇ ಗ್ಲಾಮರ್, ನೋ ಎಕ್ಸ್‌ಪೋಸ್~ ಎಂಬ ಚೌಕಟ್ಟನ್ನೂ ಹಾಕಿಕೊಂಡಿದ್ದಾರೆ. ಇನ್ನು ಮುಂದೆ ಮೂಡಿಬರಲಿರುವ ತಮ್ಮ ಚಿತ್ರಗಳಲ್ಲಿ ರಾಧಿಕಾ ಎಕ್ಸ್‌ಪೋಸ್ ಮಾಡುವುದಿಲ್ಲ... ಮಾಡುವುದಿಲ್ಲ... ಇಲ್ಲ. ಇದನ್ನು ಅವರು ಪ್ರತಿಧ್ವನಿ ಮೂಡುವಂತೆ ಪದೇಪದೇ ಹೇಳಿಕೊಂಡರು.

ಆರು ವರ್ಷಗಳ ಹಿಂದೆ `ಅನಾಥರು~ ರಾಧಿಕಾ ನಟಿಸಿದ ಕೊನೆಯ ಚಿತ್ರ. ಅದಕ್ಕೂ ಮೊದಲೇ ಚಿತ್ರೀಕರಣ ಮುಗಿಸಿದ್ದ `ಈಶ್ವರ್~ ಇನ್ನೂ ತೆರೆಕಂಡಿಲ್ಲ. ಅದಕ್ಕೊಂದಿಷ್ಟು ಸರ್ಜರಿ ಮಾಡಿದ ಮೇಲೆ ಬಿಡುಗಡೆ ಮಾಡುವ ಉದ್ದೇಶವೂ ಅವರಿಗಿದೆ. `ಈಶ್ವರ್~ನಲ್ಲಿ ಅವರಿಗೆ ಜೋಡಿಯಾಗಿದ್ದ ಆದಿತ್ಯ `ಸ್ವೀಟಿ~ಯಲ್ಲೂ ನಾಯಕ. ಆದಿತ್ಯ ಸೋದರತ್ತೆ ವಿಜಯಲಕ್ಷ್ಮಿ ಸಿಂಗ್ ಚಿತ್ರದ ನಿರ್ದೇಶಕಿ.

ಐದಾರು ವರ್ಷಗಳಿಂದ ಬಿ.ಎ.ಮಧು ಜೊತೆ ಪದೇಪದೇ ಚರ್ಚಿಸುತ್ತಾ ಹರಳುಗಟ್ಟಿದ ಚಿತ್ರಕತೆ ಈಗ `ಸ್ವೀಟಿ~ಯಾಗಿದೆ. ಶೀರ್ಷಿಕೆ ಚಿಕ್ಕದಾಗಿರಬೇಕು ಎಂಬ ಹಕ್ಕೊತ್ತಾಯ ರಾಧಿಕಾ ಅವರಿಂದ ಬಂದಿದ್ದರಿಂದ ಹೀಗೆ ಹೆಸರಿಡಲಾಗಿದೆ. `ನನ್ನ ಜೋಡಿ~ ಎಂಬುದು ಟ್ಯಾಗ್‌ಲೈನ್.

`ಇದು ಕಾರ್ಪೊರೇಟ್ ಕತೆಯ, ಸರಳವಾದ ಸಂಗತಿಯ ಸಾಂಸಾರಿಕ ಚಿತ್ರ~ ಎಂದು ವಿಜಯಲಕ್ಷ್ಮಿ ಮಾತಿಗಿಳಿದರು. 22 ದಿನಗಳ ಚಿತ್ರೀಕರಣಕ್ಕೆ ಈಗಾಗಲೇ ಅವರು ರೂಪುರೇಷೆ ಸಿದ್ಧಪಡಿಸಿಕೊಂಡಿದ್ದಾರೆ. ಕಂಠೀರವ ಸ್ಟುಡಿಯೋ ಆವರಣದಲ್ಲಿ ಅದಾಗಲೇ ಹಾಡೊಂದರ ಚಿತ್ರೀಕರಣಕ್ಕೆ ಢಾಳು ಕೆಂಬಣ್ಣದ ಸೆಟ್ ಸಿದ್ಧಪಡಿಸಿ ಆಗಿತ್ತು. ಆಸ್ಟ್ರೇಲಿಯನ್ ನರ್ತಕಿಯರು `ಸ್ಟೆಪ್ಟ್~ ಹಾಕಲು ಅಣಿಯಾಗುತ್ತಿದ್ದರು. ಆ ಹಾಡಲ್ಲಿ ಕಾಣಿಸಿಕೊಳ್ಳುವ `ಸ್ವೀಟಿ~ ಉರುಫ್ ರಾಧಿಕಾ ಕೂಡ ಪಕ್ಕಾ ಮೇಕಪ್ ಮಾಡಿಕೊಂಡೇ ಮಾತುಕತೆಗೆ ಬಂದದ್ದು.

ಬೆಂಗಳೂರು, ಸಕಲೇಶಪುರ, ಮೈಸೂರು, ಗೋವಾ ಎಲ್ಲೆಡೆ ಚಿತ್ರೀಕರಣ ಮಾಡಿದ ಮೇಲೆ ಹಾಡುಗಳಿಗಾಗಿಯೇ ವಿದೇಶಕ್ಕೂ ಹೋಗುವ ಉದ್ದೇಶ ವಿಜಯಲಕ್ಷ್ಮಿ ಸಿಂಗ್ ಅವರಿಗಿದೆ. ಋತುಮಾನ ನೋಡಿಕೊಂಡು ಯಾವ ದೇಶಕ್ಕೆ ಹೋಗಬೇಕು ಎಂದು ಆಮೇಲೆ ನಿರ್ಧರಿಸಲಿದ್ದಾರೆ.

ಆಧುನಿಕ ಕಾಲಮಾನದ ಪ್ರೇಮಕತೆಯನ್ನು ಕಮರ್ಷಿಯಲ್ ಚೌಕಟ್ಟಿನಲ್ಲಿ ತೆರೆಮೇಲೆ ತೋರಿಸಲು ಹೊರಟಿರುವ ವಿಜಯಲಕ್ಷ್ಮಿ ಬಜೆಟ್ ಇಂತಿಷ್ಟೇ ಎಂದೇನೂ ಅಂದುಕೊಂಡಿಲ್ಲ. ಸಿನಿಮಾ ಅಗತ್ಯಕ್ಕೆ ಎಷ್ಟು ಬೇಕೋ ಅಷ್ಟನ್ನು ಕೊಡುವುದಾಗಿ ನಿರ್ಮಾಪಕಿಯೂ ಆಗಿರುವ `ರಾಧಿಕಾ ಕುಮಾರಸ್ವಾಮಿ~ ಭರವಸೆ ಕೊಟ್ಟರು.

ತಮ್ಮ ಸೋದರಳಿಯನನ್ನು `ಡೆಡ್ಲಿ ಇಮೇಜ್~ನಿಂದಲೂ ರಾಧಿಕಾ ಅವರನ್ನು `ಟ್ರ್ಯಾಜಿಡಿ ಕ್ವೀನ್~ ಇಮೇಜ್‌ನಿಂದಲೂ ಹೊರಗೆಳೆದು ತಂದೇ ಈ ಚಿತ್ರವನ್ನು ವಿಜಯಲಕ್ಷ್ಮಿ ಪ್ರಾರಂಭಿಸಿದ್ದಾರೆ. ನಿರ್ಮಾಪಕಿ ಎಂಬ ಕಾರಣಕ್ಕೆ ನಾಯಕಿಗೆ ಈ ಚಿತ್ರದಲ್ಲಿ ಪ್ರಜ್ಞಾಪೂರ್ವಕವಾಗಿ ಅತಿ ಸ್ಕೋಪ್ ಕಲ್ಪಿಸಿಲ್ಲ ಎಂದ ಅವರು, ಕತೆಗೆ ತಕ್ಕಂತೆ ಎಲ್ಲಾ ಪಾತ್ರಗಳಿಗೂ ತೂಕವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದೇ ಮೊದಲ ಬಾರಿಗೆ ಸೋದರತ್ತೆಯ ನಿರ್ದೇಶನದಲ್ಲಿ ನಟಿಸುತ್ತಿರುವ ಆದಿತ್ಯಾ ಅವರಿಗೆ ಮಚ್ಚು, ಲಾಂಗು, ಗನ್ನು ಹಿಡಿದು ಸಾಕಾಗಿದೆಯಂತೆ. ಅವೆಲ್ಲವುಗಳಿಂದ ಬಿಡುವು ಕಲ್ಪಿಸಿಕೊಟ್ಟ ಈ ಚಿತ್ರದಲ್ಲಿ ಕಚಗುಳಿ ಇಡುವಂಥ ದೃಶ್ಯಗಳೂ ಇರುವುದರಿಂದ ಆಗಿರುವ `ನಟನಾ ಗಾಯ~ಕ್ಕೆ ಈ ಸಿನಿಮಾ ಮುಲಾಮಾಗಬಹುದು ಎಂಬುದು ಅವರ ನಿರೀಕ್ಷೆ. `ಮಹಿಳೆಯರು ಈ ಚಿತ್ರವನ್ನು ಸುಲಭವಾಗಿ ಕನೆಕ್ಟ್ ಮಾಡಿಕೊಳ್ಳುತ್ತಾರೆ~ ಎಂಬ ಅಭಿಪ್ರಾಯವೂ ಅವರಿಗಿದೆ.

ಗಿರೀಶ ಕಾರ್ನಾಡ್, ರಮ್ಯಾ ಕೃಷ್ಣ, ಜೈಜಗದೀಶ್, ಶರತ್ ಲೋಹಿತಾಶ್ವ, ತಬಲಾ ನಾಣಿ, ರೇಖಾ ದಾಸ್ ಮೊದಲಾದವರು ತಾರಾಗಣದಲ್ಲಿರುವ ಚಿತ್ರಕ್ಕೆ ಅಜಯ್ ವಿನ್ಸೆಂಟ್ ಛಾಯಾಗ್ರಹಣವಿದೆ. ಹಾಲಿವುಡ್‌ನ ಬಹುತೇಕ ಚಿತ್ರಗಳಿಗೆ ಬಳಸುವ `ಪ್ಯಾನಾ ವಿಷನ್ ಕ್ಯಾಮೆರಾ~ ಈ ಸಿನಿಮಾದಲ್ಲೂ ಉಪಯೋಗವಾಗಲಿದೆ. ಆ ಕುರಿತು ವಿಜಯಲಕ್ಷ್ಮಿ ಹೆಚ್ಚು ಉತ್ಸಾಹದಿಂದ ಮಾತನಾಡಿದರು. ಅಜಯ್ ವಿನ್ಸೆಂಟ್ ಅವರಿಗಿರುವ ಲೈಟಿಂಗ್ ಸೂಕ್ಷ್ಮಗಳನ್ನೂ ಕೊಂಡಾಡಿದರು.

ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು, ಕೆಂಪರಾಜ್ ಸಂಕಲನದ ಹೊಣೆ ಹೊತ್ತುಕೊಂಡಿದ್ದಾರೆ. ಬಿ.ಎ.ಮಧು ಮಾತುಗಳನ್ನು ಬರೆದಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ, ಮುಂದಿನ ವರ್ಷ ಇದೂ ಸೇರಿದಂತೆ ರಾಧಿಕಾ ನಟನೆಯ ಎರಡು ಚಿತ್ರಗಳು ಬಿಡುಗಡೆಯಾಗುವುದು ಖಾತರಿ.
 
ಅದಲ್ಲದೆ, ತೆಲುಗಿನ ಕೋಡಿ ರಾಮಕೃಷ್ಣ ಕೂಡ ಕತೆಯೊಂದನ್ನು ಹೇಳಿದ್ದು, ಅದೂ ಬಹುಭಾಷೆಗಳಲ್ಲಿ ಮೂಡಿಬರುವ ಸಾಧ್ಯತೆ ಇದೆ. ಒಟ್ಟಿನಲ್ಲಿ ರಾಧಿಕಾ ಸಾಕಷ್ಟು ಸಜ್ಜಾಗಿಯೇ ಮತ್ತೆ ಅಖಾಡಕ್ಕಿಳಿದ್ದಾರೆ.

ಅಂದಹಾಗೆ, ಈ ಚಿತ್ರ ಕೂಡ ಅವರ ಮಗಳು ಶಮಿಕಾ ಹೆಸರಿನ ಎಂಟರ್‌ಪ್ರೈಸಸ್‌ನಲ್ಲೇ ತಯಾರಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT