ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವೆಟರ್... ಸ್ವೆಟರ್...

Last Updated 2 ಜನವರಿ 2012, 19:30 IST
ಅಕ್ಷರ ಗಾತ್ರ

ನೂರಾರು ನೆನಪುಗಳನ್ನು ಹೊತ್ತ ಮಾಗಿಯ ಚಳಿ ಮತ್ತೆ ಬಂದಿದೆ... ಪ್ರತಿ ವರ್ಷವೂ ಹಾಗೆ... ಬದಲಾಗುತ್ತಿರುವ ಪ್ರಕೃತಿ, ಅದರ ಸೌಂದರ್ಯ...ಅದು ವರ್ಣನೆಗೆ ನಿಲುಕುವ ವಸ್ತುವಲ್ಲ; ಅದರ ಅನುಭವವೇ ಸುಮಧುರ, ಸೊಗಸು...

ತುಟಿಯಂಚಿನಲ್ಲಿ ಪಸೆಯನ್ನೂ ಉಳಿಯಗೊಡದಂತೆ ಬೀಸುವ ಒಣಗಾಳಿ, ಸೊಂಪಾದ ಗಿಡದ ಮೇಲೆ ಬಿದ್ದ ಇಬ್ಬನಿಯ ಅಂದ, ಅದರೊಂದಿಗೆ ಅರಳಿದ ಕಾಡುಹೂಗಳ ಘಮ, ನವಿರಾದ ಹೂ ಹೊತ್ತು ಮೈ ಬಳುಕಿಸುತ್ತಾ ನಿಂತ ಮಾಮರ, ಕಣ್ಮಣಗಳನ್ನೂ ತಣಿಸುವ ಸೂರ್ಯೋದಯದ ಸೊಗಸು, ಸಂಜೆಯಾಗುತ್ತಲೇ ಬಾನಂಚಿನಲ್ಲಿ ಓಡಾಡುವ ಮೋಡಗಳ ಹಿಂಡು, ದಿನದ ಕರ್ತವ್ಯ ಮುಗಿಸಿ ಹಿಂದಿರುಗುವ ದಿನಕರ, ಸಂಜೆಯಾಗುತ್ತಲೇ ಸೂಸುವ ಬೆಳದಿಂಗಳು... 

ಎಲ್ಲವೂ ಮಾಗಿಯ ಚಳಿಗೆ ಮೆರುಗು ನೀಡಿ ತಮ್ಮ ಸ್ವರೂಪದೊಂದಿಗೆ ಮೇಳೈಸುತ್ತಿರುತ್ತವೆ. ಸದಾ `ಬ್ಯುಸಿ~ ಎಂಬ ಹಣೆಪಟ್ಟಿ ಹೊತ್ತಿರುವ ಸಿಲಿಕಾನ್ ಸಿಟಿಯೂ ಮಾಗಿಯ ಚಳಿಯನ್ನ ಮೈಮೇಲೆ ಹೊದ್ದು ಕಂಪಿಸುತ್ತಿದೆ.

ಸಂಜೆಯಾಗುತ್ತಿದ್ದಂತೆ ಬೀಸುವ ತಂಗಾಳಿಗೆ ಮಾನವ ನಿರ್ಮಿತ, ಬೆಚ್ಚನೆಯ ಅನುಭವ ನೀಡುವ ದಪ್ಪದ ನಿಲುವಂಗಿಯಾಗಲಿ, ಮೇಲಂಗಿಗಳಾಗಿ ಚಳಿಗೆ ಸಾಟಿ ಇಲ್ಲ...

ಸುಯ್ಯನೆ ಬೀಸಿದ ಗಾಳಿ ಕಿವಿಯೊಳಗೆ ಹೊಕ್ಕಾಗ ರೋಮ ರೋಮಗಳೂ ನಿಮಿರಿ ಮೈ ಕಂಪಿಸದಿರಲು ಸಾಧ್ಯವೇ... ಈ ಸಮಯ ಕುದಿಯುವ ಕಾಫಿ-ಟೀ, ಇಡ್ಲಿ-ವಡೆ ಬಾಯಿಗೆ ಮಧುರವಾಗುವುದಿಲ್ಲ. ಎಂದಿನ ಕುರುಕಲುಗಳು ಇಷ್ಟವಾಗುವುದಿಲ್ಲ. ಹೊಸತನವನ್ನು ಬಯಸುವ ಹಾಗೂ ಅದನ್ನೇ ಕಾಣಬಯಸುವುದೇ ಈ ಮಾಗಿಯ ವೈಶಿಷ್ಟ್ಯ.

ಪ್ರಕೃತಿ ಸಹಜವಾದ ಈ ಬದಲಾವಣೆ ಜನಸಾಮಾನ್ಯನ ದಿನ ನಿತ್ಯದ ಬದುಕಿನ ಮೇಲೂ ಹಲವು ಪರಿಣಾಮಗಳನ್ನು ಬೀರುತ್ತಿದೆ. ನಿನ್ನೆ ಮೊನ್ನೆಯವರೆಗೆ ಅದೇ ರಸ್ತೆ ಬದಿಯಲ್ಲಿ ಬೋಂಡಾ -ಬಜ್ಜಿ ಮಾರುತ್ತಿದ್ದರೂ ತಿರುಗಿ ನೋಡದ ಮಂದಿಯ ಲಕ್ಷ್ಯ ಈಗ ಅತ್ತ ಸೆಳೆಯುತ್ತಿದೆ. ಪಾದಗಳೂ ನಮಗರಿವಿಲ್ಲದಂತೆ ಆ ಕಡೆ ಅಡಿಯಿಡುತ್ತಿವೆ. ಪಾನಿಪೂರಿ, ಮಸಾಲಪೂರಿಗಳ ವ್ಯಾಪಾರವೂ ಭರ್ಜರಿಯಾಗಿಯೇ ನಡೆಯುತ್ತಿದೆ.

`ಭಾರೀ ಚಳಿ ನೋಡಿ, ಅದಕ್ಕೆ ಸಹಜವಾಗಿ ವ್ಯಾಪಾರವೂ ಹೆಚ್ಚಿದೆ. ಪ್ರತಿ ವರ್ಷ ಚಳಿಗಾಲ ಬಂತೆಂದರೆ ವ್ಯಾಪಾರದ ಭರಾಟೆಯೂ ಹೆಚ್ಚುತ್ತದೆ. ಆದರೆ ಸಂಜೆ 4ರಿಂದ 7ರವರೆಗೆ ಮಾತ್ರ. 8 ಗಂಟೆಯೊಳಗೆ ಎಲ್ಲರೂ ಮನೆ ಸೇರಲು ಬಯಸುವುದರಿಂದ ಈ ಮೂರು ಗಂಟೆಯಲ್ಲೇ ವಹಿವಾಟು ಮುಗಿದು ಹೋಗುತ್ತದೆ. ರಜಾದಿನಗಳಲ್ಲಿ ದಿನವೊಂದಕ್ಕೆ ರೂ.3,000ದವರೆಗೆ ವ್ಯಾಪಾರ ನಡೆಯುತ್ತದೆ~ ಎನ್ನುತ್ತಾರೆ ಇಂದಿರಾನಗರ ಸಮೀಪದ ತಳ್ಳುಗಾಡಿ ವ್ಯಾಪಾರಿ ಆನಂದ.

ಇದರೊಂದಿಗೆ ನಗರದಲ್ಲಿ ಸ್ವೆಟರ್ ವ್ಯಾಪಾರವೂ ಗರಿಗೆದರಿದೆ. `ಅಕ್ಟೋಬರ್ ಕೊನೆಯ ವಾರದಿಂದಲೇ ಸ್ವೆಟರ್  ಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ. ಫುಲ್ ಹ್ಯಾಂಡ್, ಸ್ಲೀವ್ ಲೆಸ್, ಆಫ್ ಸ್ಲೀವ್, ವಿದ್ ಕ್ಯಾಪ್, ಕಾಲರ್ ಲೆಸ್ ಸ್ವೆಟರ್‌ಗಳಿಗೆ ಭಾರೀ ಬೇಡಿಕೆಯಿದೆ. ತಮಗಿಷ್ಟವಾದ ಸಿದ್ಧ ಮಾದರಿಯ ಬೇಡಿಕೆಯೊಂದಿಗೇ ಬರುವ ಗ್ರಾಹಕರೂ ಬಣ್ಣಗಳ ವಿಷಯದಲ್ಲೂ `ಚೂಸಿ~ಯಾಗಿರುತ್ತಾರೆ. ಬೇಡಿಕೆ ಹೆಚ್ಚಿರುವುದರಿಂದ ಇಲ್ಲೂ ಹಲವು ವಿಧದ ವಿನ್ಯಾಸಗಳು ಲಭ್ಯವಿದೆ. ಡಿಸೆಂಬರ್ ಮೊದಲ ವಾರದಲ್ಲೇ ಚಳಿ ಪ್ರಮಾಣ ಹೆಚ್ಚಿರುವುದರಿಂದ ವ್ಯಾಪಾರದ ಬಿಸಿಯೂ ಏರಿದೆ~ ಎನ್ನುತ್ತಾರೆ ಜಯನಗರ 4ನೇ ಬ್ಲಾಕ್‌ನ ಉದ್ಯಮಿ ಮುಸ್ತಫಾ.

ಬೆಳ್ಳಂಬೆಳಿಗ್ಗೆ ಕಿಟಕಿಯ ಸರಳಿನೆಡೆಯಿಂದ ಕಿರಣಗಳನ್ನು ಸೂಸಿ ಕಳ್ಳ ನೋಟ ಬೀರುವ ಸೂರ್ಯನನ್ನೂ ಲೆಕ್ಕಿಸಿದೆ ಕಾಡುವ ಚಳಿ ನಮ್ಮೆಲ್ಲರಲ್ಲೂ ಮತ್ತಷ್ಟು ಸೋಮಾರಿತನವನ್ನು ತುಂಬಿದೆ. ಪ್ರತಿದಿನ ಹೋಗುತ್ತಿದ್ದ ವಾಕ್ ವಾರಕ್ಕೊಂದು ದಿನಕ್ಕೆ ಸೀಮಿತವಾಗಿದೆ.

ಮುಂಜಾನೆ 6 ಗಂಟೆಗೇ ತೆರೆಯುತ್ತಿದ್ದ ರಸ್ತೆ ಕೊನೆಯ ರಂಗಣ್ಣನ ಚಹ ಅಂಗಡಿಯ ಕದ ಇದೀಗ ಗಂಟೆ 7 ಕಳೆದರೂ ಸರಿಯುತ್ತಿಲ್ಲ. ಪೇಪರ್-ಹಾಲು ಮಾರುವ ಹುಡುಗ ಅರ್ಧ ಗಂಟೆ ತಡವಾಗಿ ಮನೆ ತಲುಪುತ್ತಾನೆ. ಕಚೇರಿ ಬಾಗಿಲುಗಳು ಎಂದಿನ ಸಮಯಕ್ಕೆ ತೆರೆದರೂ ಉದ್ಯೋಗಿಗಳು ಒಳಪ್ರವೇಶಿಸುವುದು ಅರ್ಧ ಗಂಟೆ ತಡವಾಗಿಯೇ.
 
ಹಾಗೆಂದು ಸಂಜೆಯ ಚಟುವಟಿಕೆಗಳಿಗೆ ವಿರಾಮ ದೊರೆತಿಲ್ಲ. ಅವು ಇನ್ನಷ್ಟು ತುರಾತುರಿಯೊಂದಿಗೆ ಮುಗಿದು ಹೋಗುತ್ತವೆ. ಮಾಗಿಯ ಚಳಿ ಜನಸಾಮಾನ್ಯರ ನಿತ್ಯದ ಬದುಕಿನಲ್ಲಿ ಏರುಪೇರು ತಂದಿರುವುದು ಅಷ್ಟೇ ಸತ್ಯ. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT