ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಚಿಕೆಯ ಲೆಕ್ಕಾಚಾರದಲ್ಲಿ ಎಲ್ಲರೂ ಬ್ಯುಸಿ

Last Updated 4 ಅಕ್ಟೋಬರ್ 2012, 7:45 IST
ಅಕ್ಷರ ಗಾತ್ರ

ಕೋಲಾರ: ಜಿ.ಪಂ ಅಧ್ಯಕ್ಷೆ-ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ಒಂದು ದಿನ ಬಾಕಿ ಉಳಿದಿರುವಂತೆ ಅಧ್ಯಕ್ಷ ಸ್ಥಾನದ `ಹಂಚಿಕೆಯ ಲೆಕ್ಕಾಚಾರ~ದಲ್ಲಿ ಸದಸ್ಯರು, ಪಕ್ಷಗಳ ಮುಖಂಡರು ಅಕ್ಷರಶಃ ಬ್ಯುಸಿಯಾಗಿದ್ದಾರೆ.
ಒಳಮರ್ಮವನ್ನು ಬಿಟ್ಟುಕೊಡದ ಕೆಲ ಸದಸ್ಯರ ಮೊಬೈಲ್‌ಫೋನ್‌ಗಳು ಸ್ಥಗಿತಗೊಂಡಿವೆ.


20 ತಿಂಗಳ ಅವಧಿಗೆ ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾಗುತ್ತಿದ್ದಂತೆಯೇ ಚುರುಕಾದ ಲಾಬಿ ಈಗ ತೀವ್ರಗೊಂಡಿದೆ. ಸದ್ಯದ ಸನ್ನಿವೇಶಗಳನ್ನು ಗಮನಿಸಿದರೆ ಸಾಮಾನ್ಯ ವರ್ಗಕ್ಕೆ ಮೀಸಲಾದ ಅಧ್ಯಕ್ಷರ ಹುದ್ದೆ 20 ತಿಂಗಳ ಅವಧಿಯಲ್ಲಿ ಹಲವು ಮಂದಿಯನ್ನು ಕಾಣುವ ಸಾಧ್ಯತೆಗಳು ಗೋಚರಿಸುತ್ತಿವೆ. `ಹಂಚಿಕೊಂಡು ಅಧಿಕಾರ ಅನುಭವಿಸುವ ಲೆಕ್ಕಾಚಾರ~ ಮೇಲುಗೈ ಪಡೆದಿದೆ. ಪ್ರಭಾವಿ ಆಕಾಂಕ್ಷಿಗಳು ಮುಖಂಡರ ನೆರಳಲ್ಲಿ ಆಶಾವಾದದಿಂದ ಮುಂದುವರಿದಿದ್ದರೆ, ಮುನಿಸಿಕೊಂಡವರು ವ್ಯಾಪ್ತಿ ಪ್ರದೇಶದಿಂದ ದೂರ ಉಳಿದು ಮುಖಂಡರಲ್ಲಿ ಚಿಂತೆಯ ಗೆರೆ ಮೂಡಿಸಿದ್ದಾರೆ.

ಚುನಾವಣೆಯ ದಿನವಾದ ಶುಕ್ರವಾರ ಯಾರು ಯಾರೊಡನೆ ಯಾವ ರೀತಿ ಕಾಣಿಸಿಕೊಳ್ಳುತ್ತಾರೆ ಎಂದು ರಾಜಕಾರಣದ ಅಂಕಣದಲ್ಲಿರುವ ಯಾರೂ ಹೇಳುವ ಸ್ಥಿತಿಯಲ್ಲಿ ಇಲ್ಲ.

ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಏರ್ಪಟ್ಟರೆ ಮೊದಲು ತಮಗೆ ಅಧ್ಯಕ್ಷ ಸ್ಥಾನವನ್ನು ನೀಡಬೇಕು ಎಂದು ಕಾಂಗ್ರೆಸ್‌ನ ಪ್ರಮುಖರಾದ ಕೆ.ಎಚ್.ಮುನಿಯಪ್ಪ, ಕೆ.ಆರ್.ರಮೇಶಕುಮಾರ್, ನಸೀರ್ ಅಹ್ಮದ್, ವಿ.ಆರ್.ಸುದರ್ಶನ್ ಜೆಡಿಎಸ್ ಮುಖಂಡರಿಗೆ ಷರತ್ತು ವಿಧಿಸಿದ್ದಾರೆ ಎಂಬುದು ಆಕಾಂಕ್ಷಿ ಬೇತಮಂಗಲ ಕ್ಷೇತ್ರದ ಎ.ಎಂ.ಲಕ್ಷ್ಮಿನಾರಾಯಣ ಅವರ ನುಡಿ. ತಮ್ಮ ಪರವಾಗಿ ಎಲ್ಲ ಮುಖಂಡರಿದ್ದಾರೆ. ಉಳಿದಿದ್ದು ದೈವೇಚ್ಛೆ ಎಂದು ಅವರು ಮೇಲೆ ನೋಡುತ್ತಾರೆ.

ಇಲ್ಲಿಯೂ ಹಂಚಿಕೆಯ ಒಪ್ಪಂದಕ್ಕೆ ಆಗ್ರಹ ನಡೆದಿರುವುದು ಗಮನಾರ್ಹ. 20 ತಿಂಗಳ ಅವಧಿಯಲ್ಲಿ 6 ತಿಂಗಳ ಅವಧಿಗೆ ಕಾಂಗ್ರೆಸ್‌ನವರು ಅಧ್ಯಕ್ಷರಾಗಲಿ, ಉಳಿದ 4 ತಿಂಗಳಿಗೆ ತಮ್ಮವರೊಬ್ಬರು ಅಧ್ಯಕ್ಷರಾಗಲಿ ಎಂಬುದು ಜೆಡಿಎಸ್‌ನ ಪಟ್ಟು.

ಯಾರಿಗೆ ಮೊದಲು ಅಧ್ಯಕ್ಷ ಸ್ಥಾನ ಎಂಬುದು ಸದ್ಯ ಈ ಮೈತ್ರಿ ಲೆಕ್ಕಾಚಾರದ ಮೊದಲ ಪ್ರಮುಖ ಪ್ರಶ್ನೆ ಮತ್ತು ಸವಾಲು. ವಿಪರ್ಯಾಸವೆಂದರೆ ಇದು ಎರಡೂ ಪಾಳೆಯದಲ್ಲಿ ಬಗೆಹರಿಯದ ಸಮಸ್ಯೆಯಾಗಿಬಿಟ್ಟಿದೆ. ಎಷ್ಟು ಅವಧಿಯ ಒಪ್ಪಂದ ಎಂಬ ಪ್ರಶ್ನೆಯೂ ಜೊತೆಗಿದೆ.

ಕಳೆದ ಬಾರಿ ಅಧ್ಯಕ್ಷ ಸ್ಥಾನವನ್ನು ತಮಗೆ ದೊರಕಿಸದೆ ಮಾಲೂರಿನ ಮಂಜುಳಾ ಅವರಿಗೆ ದೊರಕಿಸಿದ್ದರಿಂದ ಬಿಜೆಪಿಯ ಪ್ರಮುಖರ ಮೇಲೆ ಸಿಟ್ಟಾಗಿ ಕಾಮಸಮುದ್ರದ ಕ್ಷೇತ್ರದ ಸಿಮೌಲ್ ಜೆಡಿಎಸ್‌ನ ಜೊತೆಗೆ ಸಂಪರ್ಕದಲ್ಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ. ಆದರೆ ಪ್ರತಿಕ್ರಿಯೆಗೆ ಅವರು ದೊರಕಿಲ್ಲ.

ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಎನ್ನಲಾಗಿರುವ ಜೆಡಿಎಸ್‌ನ ಎಸ್.ಬಿ.ಮುನಿವೆಂಕಟಪ್ಪ, ಮಂಗಮ್ಮ ಮುನಿಸ್ವಾಮಿ, ಆರ್.ನಾರಾಯಣಸ್ವಾಮಿ, ಕಾಂಗ್ರೆಸ್‌ನ ಡಿ.ವಿ.ಹರೀಶ್, ಸಚಿವ ವರ್ತೂರು ಪ್ರಕಾಶ್ ಬಣದ ಪಕ್ಷೇತರ ಸದಸ್ಯೆ ಚೌಡೇಶ್ವರಿ, ಪಕ್ಷೇತರ ಸದಸ್ಯ ಎಂ.ಎಸ್.ಆನಂದ್ ಸೇರಿದಂತೆ ಹಲವರ ಫೋನ್‌ಗಳು ಸ್ಥಗಿತಗೊಂಡಿವೆ. ಅವರು ಎಲ್ಲಿದ್ದಾರೆ? ಯಾರೊಂದಿಗಿದ್ದಾರೆ ಎಂಬ ಬಗ್ಗೆಯೂ ಖಚಿತ ಮಾಹಿತಿ ಇಲ್ಲ. ಮುಖಂಡರೂ ಮೌನವಾಗಿದ್ದಾರೆ. ಹೀಗಾಗಿ ಸಾಕಷ್ಟು ಊಹಾಪೋಹಗಳು ಎದ್ದಿವೆ. ಆದರೆ ಅವುಗಳನ್ನು ನಂಬುವಂತಿಲ್ಲ.

ಉಪಾಧ್ಯಕ್ಷ: ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿಯ ಮಹಿಳೆಗೆ ಮೀಲಾಗಿದೆ. ಪ್ರಸ್ತುತ ಪಂಚಾಯತ್‌ನಲ್ಲಿ ಆ ಜಾತಿಯ ಐವರು ಮಹಿಳೆಯರಿದ್ದಾರೆ. ಜೆಡಿಎಸ್‌ನ ಮಂಗಮ್ಮ ಮುನಿಸ್ವಾಮಿ, ರತ್ನಮ್ಮ, ಅಲಮೇಲಮ್ಮ, ಬಿಜೆಪಿಯ ಯಲ್ಲಮ್ಮ, ಮುತ್ಯಾಲಮ್ಮ ಇದ್ದಾರೆ.

ಕಳೆದ ಸಾಲಿನಲ್ಲಿ ಈ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಮಂಗಮ್ಮ ಈ ಮುಂಚೆ ಅಧ್ಯಕ್ಷರಾಗಿದ್ದವರು. ಈಗಲೂ ಅವರು ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವುದರಿಂದ ಉಪಾಧ್ಯಕ್ಷ ಸ್ಥಾನದ ಕಡೆಗೆ ಅವರ ಗಮನ ಕಡಿಮೆ ಎನ್ನಲಾಗಿದೆ. ಉಳಿದಂತೆ ಇಬ್ಬರು ಜೆಡಿಎಸ್, ಇಬ್ಬರು ಬಿಜೆಪಿ ಸದಸ್ಯೆಯರ ನಡುವೆ ಪೈಪೋಟಿ ಏರ್ಪಟ್ಟಿದೆ.

ಜಿ.ಪಂ. ಚುನಾವಣೆ ವೇಳಾಪಟ್ಟಿ

ಜಿಲ್ಲಾ ಪಂಚಾಯತಿಗಳ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಚುನಾವಣೆ ಬೆಂಗಳೂರು ಪ್ರಾದೇಶಿಕ ಆಯುಕ್ತ ಕೆ.ಶಿವರಾಮು ಅವರ ಅಧ್ಯಕ್ಷತೆಯಲ್ಲಿ ಜಿಪಂ ಸಭಾಂಗಣದಲ್ಲಿ ಅ 5ರ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ನಾಮ ನಿರ್ದೇಶನ ಪತ್ರವನ್ನು ಬೆಳಿಗ್ಗೆ 10ರಿಂದ ಮಧ್ಯಾಹ್ನ 12 ಗಂಟೆಯೊಳಗೆ ಸಲ್ಲಿಸಬೇಕು. ಮಧ್ಯಾಹ್ನ 2 ಗಂಟೆಯಿಂದ  ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗುತ್ತದೆ.

ಸದಸ್ಯರ ಹಾಜರಾತಿ ಪಡೆದ ನಂತರ ನಾಮಪತ್ರಗಳ ಪರಿಶೀಲನೆ. ನಂತರ ಕ್ರಮಬದ್ಧ ನಾಮನಿರ್ದೇಶಿತರಾದ ಅಭ್ಯರ್ಥಿಗಳ ಹೆಸರುಗಳನ್ನು ಸಭೆಗೆ ಓದಲಾಗುವುದು. ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು 5 ನಿಮಿಷಗಳ ಕಾಲಾವಕಾಶ. ಒಬ್ಬರೇ ಅಭ್ಯರ್ಥಿಯು ಕಣದಲ್ಲಿ ಉಳಿದಲ್ಲಿ ಫಲಿತಾಂಶ ಘೋಷಣೆ. ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರೆ ಚುನಾವಣೆ ನಡೆಯಲಿದೆ. ಅಧ್ಯಕ್ಷ ಸ್ಥಾನದ ಚುನಾವಣೆಯ ನಂತರ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT