ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂದಿ ಬೆದರಿಸಲು ಗಳ ಗಂಟೆ

Last Updated 16 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಬೆಳೆಗಳ ಮೇಲೆ ದಾಳಿ ಮಾಡುವ ಪ್ರಾಣಿಗಳ ನಿಯಂತ್ರಣಕ್ಕೆ ರೈತರು ವಿವಿಧ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಬೆಳೆಗಳ ನಡುವೆ ಬೆದರು ಬೊಂಬೆ ನಿಲ್ಲಿಸುವುದು ಹಳೆಯ ವಿಧಾನ. ಬೆಳೆ ತಾಕಿನ ಸುತ್ತ ಮಿರ ಮಿರನೆ  ಮಿಂಚುವ ಬಣ್ಣ ಬಣ್ಣದ ಟೇಪ್‌ಗಳನ್ನು ಕಟ್ಟುವುದು ಹೊಸ ವಿಧಾನಗಳಲ್ಲಿ ಒಂದು. ಗಾಳಿ ಬೀಸಿದಾಗ ವಿಚಿತ್ರ ಶಬ್ದ ಮಾಡುವ ಪ್ಲಾಸ್ಟಿಕ್ ಪಟ್ಟಿ, ಟೇಪ್ ರೆಕಾರ್ಡ್‌ರ್‌ನ ಹಳೇ ಟೇಪ್‌ಗಳನ್ನು ಕಂಡು ಪ್ರಾಣಿಗಳು ಅತ್ತ ಸುಳಿಯುವುದಿಲ್ಲ.

ಚಿಕ್ಕಮಗಳೂರು ಜಿಲ್ಲೆ ಸಖರಾಯಪಟ್ಟಣ ಸಮೀಪದ ಬುಕ್ಕಸಾಗರ ಗ್ರಾಮದ ವೀರಭದ್ರಪ್ಪ ಅವರು ಬೆಳೆಗೆ ದಾಳಿ ಮಾಡುವ ಹಂದಿಗಳ ನಿಯಂತ್ರಣಕ್ಕೆ ಹೊಸ ಉಪಾಯ ಕಂಡುಕೊಂಡಿದ್ದಾರೆ. ಉದ್ದನೆಯ ಕೋಲಿ(ಗಳ)ನ ತುದಿಗೆ ದಾರದ ನೆರವಿನಿಂದ ಖಾಲಿ ಬೀರ್ ಬಾಟಲಿಯೊಂದನ್ನು ಕಟ್ಟಿದ್ದಾರೆ. ಬಾಟಲಿಯ ಕುತ್ತಿಗೆಗೆ ದಾರ ಕಟ್ಟಿದ ಸಣ್ಣ ಕಲ್ಲೊಂದನ್ನು ಕಟ್ಟಿದ್ದಾರೆ. 

ತಳಭಾಗಕ್ಕೆ ಒಣಗಿದ ಅಡಕೆ ಪಟ್ಟೆಯನ್ನು ದಾರದ ಸಹಾಯದಿಂದ ತೂಗು ಹಾಕಿದ್ದಾರೆ. ಈ ಕೋಲನ್ನು ಹೊಲದ ನಡುವೆ ನೆಟ್ಟಿದ್ದಾರೆ. ಗಾಳಿ ಬೀಸಿದಾಗ ಹಗುರವಾದ ಅಡಿಕೆ ಪಟ್ಟೆ ಹಾರಾಡುತ್ತದೆ. ಜೊತೆಗೆ ಕಲ್ಲು ಕಟ್ಟಿದ ದಾರವೂ ನೇತಾಡುತ್ತದೆ. ಅದು ಬಾಟಲಿಗೆ ತಾಗಿದಾಗಲೆಲ್ಲ ‘ಟನ್ ಟನ್’ ಎಂಬ ಶಬ್ದ ಹೊಮ್ಮಿಸುತ್ತದೆ. ಗಾಳಿ ಬೀಸಿದಾಗಲೆಲ್ಲಾ ‘ಗಳ ಗಂಟೆ’ ಶಬ್ದ ಮಾಡುತ್ತಿರುತ್ತದೆ.

 ರಾತ್ರಿಯ ವೇಳೆಯಲ್ಲಿ ಈ ಗಂಟೆಯ ಶಬ್ದ ತುಸು ಜೋರಾಗಿ ಕೇಳುತ್ತದೆ. ಹಂದಿಗಳು ಶಬ್ದಕ್ಕೆ ಹೆದರಿ ಓಡುತ್ತವೆ. ಈ ‘ಗಳ ಗಂಟೆ’ ಅಳವಡಿಸಿದ ಮೇಲೆ ನಮ್ಮ ಜಮೀನಿನಲ್ಲಿ ಹಂದಿ ಕಾಟ ಕಡಿಮೆಯಾಗಿದೆ’ ಎನ್ನುತ್ತಾರೆ ವೀರಭದ್ರಪ್ಪ.

ಬೆಳಗಿನ ಹೊತ್ತು ಬೆಳೆ ಕಾಯಬಹುದು. ರಾತ್ರಿ ವೇಳೆ ಬೆಳೆ ಕಾಯುವುದು ಕಷ್ಟ. ಅದಕ್ಕೆ ಈ ದಾರಿ ಹುಡುಕಿಕೊಂಡೆವು ಎನ್ನುತ್ತಾರೆ.  ವಿಷ ಹಾಕಿ, ಗುಂಡಿಟ್ಟು ಪ್ರಾಣಿಗಳನ್ನು ಕೊಲ್ಲುವ ಬದಲು, ಅವುಗಳನ್ನು ಬೆದರಿಸಿ ಓಡಿಸುವುದು ಸೂಕ್ತ.  ಈ ಸರಳ ಉಪಾಯವನ್ನು ಯಾರು ಬೇಕಾದರೂ ಅನುಸರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT