ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕಿಲೋಕದಲ್ಲಿ ಶಿವಸಂಚಾರ

Last Updated 18 ಜುಲೈ 2012, 19:30 IST
ಅಕ್ಷರ ಗಾತ್ರ

ಶಿವಶಂಕರ್‌ಗೆ ಏನಿರಲಿಲ್ಲ? ಈ ಕಾಲದ ಪಾಲಕರು ನಿರೀಕ್ಷಿಸುವ ಎಲ್ಲವೂ ಇತ್ತು. ಒಂದು ಎಂಜಿನಿಯರಿಂಗ್ ಪದವಿ, ಅದರ ಮೇಲೆ ಎಂಜಿನಿಯರಿಂಗ್‌ನಲ್ಲೇ ಸ್ನಾತಕೋತ್ತರ ಪದವಿ. ಈ ಅರ್ಹತೆಗೆ ದೊರೆಯುವ ಒಂದು ಒಳ್ಳೆಯ ಉದ್ಯೋಗ, ಅದೂ ಅಮೆರಿಕ ಮತ್ತು ಸಿಂಗಾಪುರದಲ್ಲಿ. ಆದರೂ ಅವರನ್ನು ಹಕ್ಕಿಗಳು ಕೈಬೀಸಿ ಕರೆದವು.

ಕ್ಯಾಮೆರಾ ಎಂಬ ಕುಂಚ ಕೈಬಿಡಲಾರೆ ಎಂದಿತು. ಒಟ್ಟಾರೆ ಅಮೆರಿಕ ಮತ್ತು ಸಿಂಗಾಪುರಕ್ಕಿಂತ ಕಾರ್ಕಳವೇ ಸುಂದರ ಎನಿಸಿತು. ಆ ಕ್ಷಣವೇ ಅಮೆರಿಕಕ್ಕೆ ಟಾಟಾ ಹೇಳಿ ವಿಮಾನ ಹತ್ತಿದ ಶಿವಶಂಕರ್ ಬಂದಿಳಿದದ್ದು ಕಾರ್ಕಳಕ್ಕೆ. ಕೈಗೆತ್ತಿಕೊಂಡದ್ದು ಕ್ಯಾಮೆರಾ. ದಾಖಲಿಸಿದ್ದು ಹಕ್ಕಿಗಳನ್ನು!

ಶಿವಶಂಕರ್ ಮಣ್ಣಿನ ವಾಸನೆ ಹಿಡಿದು ಕಾರ್ಕಳಕ್ಕೆ ಮರಳಿದ್ದರಿಂದ ಒಳ್ಳೆಯದಾದದ್ದು ಕೇವಲ ಅವರಿಗಷ್ಟೇ ಅಲ್ಲ ಎಂಬುದನ್ನು `ಕರ್ನಾಟಕದ ದಕ್ಷಿಣ ಕರಾವಳಿಯ ಹಕ್ಕಿಗಳು~ ಎಂಬ ಸುಂದರ, ವರ್ಣರಂಜಿತ ಪುಸ್ತಕವೇ ಹೇಳುತ್ತಿದೆ. 

ಮೂಲತಃ ಕಾರ್ಕಳದವರೇ ಆದ ಶಿವಶಂಕರ್‌ಗೆ ಈಗ 38ರ ಹರೆಯ. ಹಾಸನದ ಮಲ್ನಾಡ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಪದವಿ, ಮಣಿಪಾಲದಿಂದ ಎಂಎಸ್ ಪದವಿ ಪಡೆದಿದ್ದಾರೆ.
 
ಕೈಯಲ್ಲಿ ಮೌಸ್ ಹಿಡಿದು ಕಂಪ್ಯೂಟರನ್ನು ಎಷ್ಟು ಚೆನ್ನಾಗಿ ದುಡಿಸಬಲ್ಲರೋ ಅಷ್ಟೇ ಸೊಗಸಾಗಿ ಕ್ಯಾಮರಾ ಕಣ್ಣಿನಿಂದ ಹಕ್ಕಿಗಳನ್ನು ಸೆರೆ ಹಿಡಿಯಬಲ್ಲರು. ಏಕಲವ್ಯನ ಹಾಗೆ ಕ್ಯಾಮರಾ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡು ಇದೀಗ ರಾಜ್ಯದ ಅತ್ಯುತ್ತಮ ಛಾಯಾಗ್ರಾಹಕರಲ್ಲಿ ಒಬ್ಬರೆನಿಸಿದ್ದಾರೆ.
 
ಸಾಗರವಾಸಿ ಹಕ್ಕಿಗಳೂ ಸೇರಿದಂತೆ ದಕ್ಷಿಣ ಕರಾವಳಿ ಕರ್ನಾಟಕದಲ್ಲಿ ವೀಕ್ಷಿಸಿರುವ 389 ಬಗೆಯ ಹಕ್ಕಿ ಜಾತಿಗಳಲ್ಲಿ ಶೇ 70ಕ್ಕೂ ಮಿಕ್ಕಿ ಜಾತಿಯ ಹಕ್ಕಿಗಳನ್ನು ಛಾಯಾಚಿತ್ರಗಳ ಮೂಲಕ ದಾಖಲಿಸಿದ್ದಾರೆ. ಅವರು ಕ್ಲಿಕ್ಕಿಸಿರುವ ಹಕ್ಕಿಗಳ ಒಟ್ಟು ಛಾಯಾಚಿತ್ರಗಳನ್ನು ಲೆಕ್ಕ ಹಾಕಿದರೆ ಅದು ಲಕ್ಷವನ್ನೂ ಮೀರಿದೆ!

ಅರಬ್ಬಿ ತೀರದಿಂದ ಸುಮಾರು ಹತ್ತು ಕಿ.ಮೀ. ಒಳಗೆ ಸಮುದ್ರ ಗರ್ಭದ ಮೇಲೆ ಗಾಳಿಯಲ್ಲಿ ಸರ್ಕಸ್ ಮಾಡುವ ಸಾಗರವಾಸಿ ಹಕ್ಕಿಗಳಿಂದ  (ಪೆಲಾಜಿಕ್) ಹಿಡಿದು ಪಶ್ಚಿಮ ಘಟ್ಟದ ನಿತ್ಯಹರಿದ್ವರ್ಣ ಕಾಡಿನ ಹಕ್ಕಿಗಳವರೆಗೆ ಛಾಯಾಗ್ರಹಣ ಮಾಡಿದ್ದಾರೆ.

ಅಂದರೆ ವರ್ಷಗಟ್ಟಲೆ ಭೂಮಿ ಮೇಲೆ ಇಳಿಯದ ಸಾಗರವಾಸಿ `ಕಡಲ ಕಪೋತ~ದಿಂದ (ವಿಲ್ಸನ್ಸ್ ಸ್ಟಾರ್ಮ್ ಪೆಟ್ರೆಲ್) ಹಿಡಿದು ಪಶ್ವಿಮ ಘಟ್ಟದ ಬೃಹತ್ ಮರಗಳನ್ನೇ ಆಶ್ರಯಿಸಿರುವ `ಮಲೆ ದಾಸ ಮಂಗಟ್ಟೆ~ (ಮಲಬಾರ್ ಪೈಡ್ ಹಾರ್ನ್‌ಬಿಲ್) ವರೆಗಿನ ಹಕ್ಕಿಗಳ ಚಿತ್ರ ಅವರ ಸಂಗ್ರಹದಲ್ಲಿದೆ.

ದಕ್ಷಿಣ ಕರಾವಳಿಯ ಅಷ್ಟೊಂದು ವೈವಿಧ್ಯಮಯ ಜಾತಿಯ ಹಕ್ಕಿಗಳನ್ನು ಅಷ್ಟೊಂದು ಸಂಖ್ಯೆಯಲ್ಲಿ ಛಾಯಾಗ್ರಹಣ ಮಾಡಿದವರಲ್ಲಿ ಬಹುಶಃ ಶಿವಶಂಕರ್ ಮೊದಲನೆಯವರೇ ಇರಬೇಕು.

ಹಕ್ಕಿಗಳ ಬೆನ್ನು ಬಿದ್ದ ಶಿವಶಂಕರ್‌ಗೆ ರೋಚಕ ಅನುಭವಗಳಾಗಿವೆ. ಸಾಗರವಾಸಿ ಹಕ್ಕಿಗಳ ಛಾಯಾಚಿತ್ರಗ್ರಹಣ ಅನನ್ಯ ಅನುಭವ ನೀಡಿದೆಯಂತೆ. ಸಮಾನ ಮನಸ್ಕ ಗೆಳೆಯರೊಂದಿಗೆ ಬೋಟ್ ಬಾಡಿಗೆಗೆ ಪಡೆದು ಬೆಳಿಗ್ಗೆ ಹೊರಟು ರಾತ್ರಿಯಿಡೀ ಸಮುದ್ರದಲ್ಲೇ ತೇಲಾಡುತ್ತ ಛಾಯಾಗ್ರಹಣ ಮಾಡಿ ಮರುದಿನ ವಾಪಸ್ ಬಂದಿದ್ದಾರೆ.
ಸಾಗರ ವಾಸಿ ಹಕ್ಕಿಗಳ ಛಾಯಾಗ್ರಹಣ ಅತ್ಯಂತ ಸವಾಲಿನದ್ದು ಎನ್ನುತ್ತಾರೆ ಶಿವಶಂಕರ್.
ಬುಲ್‌ಬುಲ್ ಗಾತ್ರದ `ಕಡಲ ಕಪೋತ~ ಅತಿ ಚುರುಕು ಹಕ್ಕಿ. ಒಂದೆಡೆ ನೀರಿನ ಅಲೆಯ ಚಲನೆ, ಇನ್ನೊಂದೆಡೆ ಓಲಾಡುವ ಬೋಟ್ ಜತೆಗೆ ವೇಗವಾಗಿ ಮುನ್ನುಗ್ಗುವ ಹಕ್ಕಿ, ಈ ಎಲ್ಲ ಚಲನೆಯನ್ನು ಸಮತೂಗಿಸಿಕೊಂಡು ಹಕ್ಕಿಯನ್ನು ಕ್ಯಾಮರಾ ಫ್ರೇಮ್‌ನಲ್ಲಿ ಬಂಧಿಸಿ ಕ್ಲಿಕ್ಕಿಸಬೇಕು. ನಿಜಕ್ಕೂ ಅದೊಂದು ಸವಾಲು. ಶಿವಶಂಕರ್ ಹೀಗೆ ಕ್ಲಿಕ್ಕಿಸಿದ `ಕಡಲ ಕಪೋತ~ದ ಚಿತ್ರ ಉತ್ಕೃಷ್ಟವಾಗಿದೆ. ದೇಶದಲ್ಲೇ ಆ ಚಿತ್ರಕ್ಕೆ ಮನ್ನಣೆ ಸಿಕ್ಕಿದೆ.

ಇನ್ನೊಂದೆಡೆ `ದೊಡ್ಡ ಜುಟ್ಟಿನ ರೀವ~ (ಗ್ರೇಟ್ ಕ್ರೆಸ್ಟೆಡ್ ಟರ್ನ್) ಸಮುದ್ರದ ಮೇಲ್ಮೈಗೆ ಬಂದ ಮೀನನ್ನು ಕೊಕ್ಕಿನಿಂದ ಹಿಡಿದೆತ್ತಿ ಇನ್ನೇನು ನುಂಗಿ ಬಿಡಬೇಕು ಎನ್ನುವಷ್ಟರಲ್ಲಿ ದೊಡ್ಡ ಗಾತ್ರದ `ಆರ್ಕ್‌ಕ್ಟಿಕ್ ಸ್ಕುವಾ~ ಆ ಮೀನಿಗಾಗಿ ಅಟ್ಟಿಸಿಕೊಂಡು ಬಂತು. ನೀರಿನ ಆ ವಿಶಾಲ ವೇದಿಕೆಯ ಮೇಲೆ ಆಹಾರ ಕಸಿದುಕೊಳ್ಳಲು ಗಾಳಿಯಲ್ಲೇ ಕಡಲ ಹಕ್ಕಿಗಳ ಜಟಾಪಟಿ ನಡೆಯಿತು.
 
ಉದಾಸೀನ ಮನೋಭಾವದ `ಸ್ಕುವಾ~ಗೆ `ಟರ್ನ್~ ಬಾಯಿಯಲ್ಲಿನ ಮೀನೇ ಬೇಕು! ಕೊನೆಗೂ ಸ್ಕುವಾ ಕೀಟಲೆ ಮಾಡಿ ಟರ್ನ್ ಕೊಕ್ಕಿನಲ್ಲಿದ್ದ ಮೀನನ್ನು ಉದುರಿಸಿತು. ಆ ಮೀನು ನೀರಿಗೆ ಬೀಳುವ ಮೊದಲೇ ಸ್ಕುವಾ ಗಾಳಿಯಲ್ಲೇ ಡೈವ್ ಹೊಡೆದು ಮೀನನ್ನು ಕೊಕ್ಕಿನಲ್ಲಿ ಹಿಡಿಯಿತು. ಕಡಲ ಹಕ್ಕಿಗಳ ಆ ರೋಚಕ ಕಾದಾಟವನ್ನು ಶಿವಶಂಕರ್ ಸೊಗಸಾಗಿ ಸೆರೆ ಹಿಡಿದಿದ್ದಾರೆ.

ವಿಶಾಲ ಜಲರಾಶಿಯ ಮೇಲೆ ತೇಲಾಡುತ್ತ ಕಡಲ ಹಕ್ಕಿಗಳ ಲೋಕದಲ್ಲಿ ವಿಹರಿಸುವುದೇ ಒಂದು ವಿಶಿಷ್ಟ ಅನುಭವ. ಅದರಲ್ಲೂ ರಾತ್ರಿಯ ಹೊತ್ತು ಬೋಟ್ ಎಂಜಿನ್ ಆಫ್ ಮಾಡಿದ ಮೇಲೆ ಬರೀ ನೀರಿನ ಸದ್ದು. ಎತ್ತ ನೋಡಿದರೂ ನೀರೇ ನೀರು! ಬೋಟ್‌ನ್ಲ್ಲಲೇ ಮಲಗಿ ಬೆಳಿಗ್ಗೆ ಎದ್ದಾಗ ಬೋಟ್ ಎಂಟು ಕಿ.ಮೀ. ದಕ್ಷಿಣಕ್ಕೆ ಸರಿದಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ಶಿವಶಂಕರ್.

ಕರಾವಳಿಯ ನೆಲ ಹಾಗೂ ಮರ ಹಕ್ಕಿಗಳ ಛಾಯಾಗ್ರಹಣವೂ ಸೊಗಸಾಗಿದೆ. ಅದರಲ್ಲೂ ರಾತ್ರಿ ಸಂಚಾರಿ `ಸಿಲೋನ್ ಕಪ್ಪೆಬಾಯಿ~ (ಶ್ರೀಲಂಕನ್ ಫ್ರಾಗ್‌ಮೌತ್) ಹಕ್ಕಿಯ ಛಾಯಾಗ್ರಹಣಕ್ಕೆ ಹದಿನೈದು ದಿನಗಳೇ ಬೇಕಾಯಿತಂತೆ. ಮರಸು ಬಣ್ಣದ ಆ ರಾತ್ರಿ ಸಂಚಾರಿಯನ್ನು ಪತ್ತೆ ಹಚ್ಚುವುದೇ ಕಷ್ಟ. ಹಕ್ಕಿಯ ಕೂಗಿನಿಂದಷ್ಟೆ ಅದರ ಅಸ್ತಿತ್ವವನ್ನು ಪತ್ತೆ ಹಚ್ಚಬಹುದು.

 ಒಂದು ಮುಸ್ಸಂಜೆ ಕತ್ತಲು ಆವರಿಸುವ ಸಮಯ, ಹೆಬ್ರಿಯಿಂದ ಕಾರ್ಕಳಕ್ಕೆ ಬರುವಾಗ ಹಕ್ಕಿಯೊಂದರ ಕೂಗು ಆಲಿಸಿದರು. ಅದು `ಸಿಲೋನ್ ಕಪ್ಪೆಬಾಯಿ~ಯ ಕೂಗು ಇರಬಹುದೇ? ಎಂಬ ಸಂದೇಹ. ಅದಕ್ಕಾಗಿಯೇ ಕೇರಳದ ತಟ್ಟೇಕಾಡಿಗೆ ಹೋಗಿ ಅಲ್ಲಿ ಸಿಗುವ ಅದೇ ಹಕ್ಕಿಯ ಕೂಗನ್ನು ಆಲಿಸಿದರು.

ಹೌದು ಅದೇ ಕೂಗು! `ಸಿಲೋನ್ ಕಪ್ಪೆಬಾಯಿ~ ಕಾರ್ಕಳದ ಸುತ್ತಮುತ್ತಲೂ ಇದೆ ಎಂದು ಸ್ಪಷ್ಟವಾಯಿತು. ಹಕ್ಕಿಯ ಧ್ವನಿ ಮುದ್ರಿಸಿ ತಂದರು. ಕಾರ್ಕಳದ ಅವರ ಮನೆಯಿಂದ ಸುಮಾರು ಮೂರು ಕಿ.ಮೀ ದೂರದ ದುರ್ಗಾ ಕಾಡಿನಲ್ಲೂ ಕೂಡ ರಾತ್ರಿ ಹೊತ್ತು ಅದೇ ಕೂಗು ಕೇಳಿದರು. ಹಗಲಿನ ಹೊತ್ತು ಎಲೆಗಳ ಮರೆಯಲ್ಲಿ ಸುಮ್ಮನೆ ಕೂತಿರುವ ಹಕ್ಕಿಯನ್ನು ಪತ್ತೆ ಹಚ್ಚುವುದು ತುಂಬ ಕಷ್ಟ.

ಹಾಗಾಗಿ ಮುಸ್ಸಂಜೆ ಹೊತ್ತು ಪತ್ನಿ ಮಲ್ಲಿಕಾ ಹಾಗೂ ಮಕ್ಕಳಾದ ಸಮೀಕ್ಷಾ, ಶ್ಲೋಕ್ ಜತೆಗೆ ಆಸಕ್ತ ಇಬ್ಬರು ವಿದ್ಯಾರ್ಥಿಗಳನ್ನು ಕರೆಸಿಕೊಂಡು ಟಾರ್ಚ್, ಫ್ಲಾಷ್ ಲೈಟ್‌ನೊಂದಿಗೆ ದುರ್ಗಾ ಕಾಡಿಗೆ ಓಡಿದರು.

ಅಲ್ಲಿ ಹಕ್ಕಿಯ ಕೂಗನ್ನು ಮತ್ತೆ ಪತ್ತೆ ಹಚ್ಚಿದರು. ಹಕ್ಕಿಯ ಮುದ್ರಿತ ಕೂಗಿನ ದನಿಗೆ ಆ ಹಕ್ಕಿ ಪ್ರತಿಕ್ರಿಯಿಸುತ್ತಿತ್ತು! ಅಂತೂ `ಸಿಲೋನ್ ಕಪ್ಪೆಬಾಯಿ~ ಕಣ್ಣಿಗೆ ಬಿತ್ತು. ಮಲ್ಲಿಕಾ ಟಾರ್ಚ್ ಬೆಳಗಿದರು, ಆ ಬೆಳಕಿನಲ್ಲಿ ಕಪ್ಪೆಬಾಯಿಯ ಚಿತ್ರ ಶಿವಶಂಕರ್ ಕ್ಯಾಮರಾದಲ್ಲಿ ಬಂಧಿಯಾಗಿತ್ತು.

ಹಾಗೆಯೇ ನಿತ್ಯ ಹರಿದ್ವರ್ಣ ಕಾಡಿನಲ್ಲಿ ಸಿಗುವ ಅತ್ಯಾಕರ್ಷಕ ಬಣ್ಣದ ಕಾಕರಣೆ ಹಕ್ಕಿ (ಮಲಬಾರ್ ಟ್ರೋಗನ್), ಹಕ್ಕಿಗಳಲ್ಲೇ ಅತ್ಯಂತ ವೇಗದ ಕಂದು ಚಾಣ (ಪೆರೆಗ್ರೈನ್ ಫಾಲ್ಕನ್), ಮಂಗಟ್ಟೆ ಹಕ್ಕಿಗಳ (ಹಾರ್ನ್‌ಬಿಲ್) ಛಾಯಾಗ್ರಹಣ ಶಿವಶಂಕರ್‌ಗೆ ಖುಷಿ ಜತೆಗೆ ಹೆಸರನ್ನೂ ತಂದಿವೆ.
 
ದಕ್ಷಿಣ ಕರಾವಳಿಯ 300ಕ್ಕೂ ಮಿಕ್ಕಿ ಜಾತಿಯ ಹಕ್ಕಿಗಳನ್ನು ಚಿತ್ರಗಳ ಮೂಲಕ ದಾಖಲಿಸಿರುವುದು ದಕ್ಷಿಣ ಕರಾವಳಿ ಜೀವ ಪರಿಸರಕ್ಕೆ ಅವರು ನೀಡಿದ ದೊಡ್ಡ ಕೊಡುಗೆ ಎನಿಸಿದೆ.

ಇಂಗ್ಲೆಂಡಿನ ನ್ಯೂ ಹಾಲೆಂಡ್ ಪಬ್ಲಿಷರ್ಸ್‌ ಅವರ `ಪೆರೆಗ್ರೇನ್ ಫಾಲ್ಕನ್~ ಚಿತ್ರವನ್ನು ಬಳಿಸಿಕೊಂಡಿದೆ. ಎಚ್‌ಇಎಲ್‌ಎಂ (ಲಂಡನ್) ಪ್ರಕಾಶನದ `ಕೂಕೂಸ್ ಆಫ್ ದ ವರ್ಲ್ಡ್~ ಪುಸ್ತಕ, ಕಾರ್ಲಟನ್ ಪ್ರಕಾಶನದ `ರೈನ್ ಫಾರೆಸ್ಟ್ ಸಪಾರಿ~ ಪುಸ್ತಕ, ಫೌನ ಆಫ್ ಪಾಂಡಿಚೇರಿ ಯೂನಿವರ್ಸಿಟಿ ಕ್ಯಾಂಪಸ್ ಪುಸ್ತಕ ಸೇರಿದಂತೆ ದೇಶ, ವಿದೇಶದ ಪ್ರತಿಷ್ಠಿತ ಪುಸ್ತಕಗಳಲ್ಲಿ ಅವರ ಛಾಯಾಚಿತ್ರಗಳು ಪ್ರಕಟಗೊಂಡಿವೆ.

ಪಕ್ಷಿ ವೀಕ್ಷಣೆ ಒಳ್ಳೆಯ ಹವ್ಯಾಸ. ಇದರಿಂದ ಮನಸ್ಸು, ಕಣ್ಣು ಚುರುಕಾಗುವುದು. ಹಕ್ಕಿಗಳನ್ನು ಹುಡುಕುತ್ತಾ ನಡೆದಾಡುವುದರಿಂದ ದೇಹಕ್ಕೆ ಉತ್ತಮ ವ್ಯಾಯಾಮ ಸಿಗುವುದು. ಸಮಯದ ಸದುಪಯೋಗವಾಗುವುದು.

ಒಟ್ಟಿನಲ್ಲಿ ಪಕ್ಷಿ ವೀಕ್ಷಕ ತನ್ನ ಕಣ್ಣು ಮತ್ತು ಕಿವಿಗಳನ್ನು ತೆರೆದಿಟ್ಟು, ಬರಿಗಣ್ಣಿನಿಂದಲೇ ಹಕ್ಕಿಗಳನ್ನು ಗುರುತಿಸಿ, ಅವುಗಳ ಚಲನವಲನ ಗಮನಿಸಬೇಕು. ಅವುಗಳ ಧ್ವನಿಗಳನ್ನು ಆಲಿಸಿ ನೆನಪಿನಲ್ಲಿಟ್ಟುಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು. ದೃಷ್ಟಿ ಮತ್ತು ಶ್ರವಣ ಶಕ್ತಿಯನ್ನು ಚುರುಕಾಗಿಟ್ಟುಕೊಂಡರೆ ಉತ್ತಮ ಪಕ್ಷಿವೀಕ್ಷಕನಾಗಬಹುದು ಎನ್ನುತ್ತಾರೆ ಶಿವಶಂಕರ್.

ಹಕ್ಕಿಗಳ ಛಾಯಾಗ್ರಹಣ ಒಂದು ಸಾಹಸಮಯ ಹವ್ಯಾಸ. ನಾವೇ ಕ್ಲಿಕ್ಕಿಸಿದ ಹಕ್ಕಿಗಳ ಚಿತ್ರಗಳನ್ನು ನೋಡಿ ಆನಂದಿಸುವುದು ಪರಮ ಸುಖ. ಪಕ್ಷಿಗಳ ಛಾಯಾಚಿತ್ರಗ್ರಹಣ ಒಂದು ಸೃಜನಶೀಲ ಕಲೆ ಹಾಗೂ ದುಬಾರಿ ಹವ್ಯಾಸ. ಆಸಕ್ತಿ, ತಾಳ್ಮೆ ಇದ್ದಲ್ಲಿ ಸೀಮಿತ ವೆಚ್ಚದಲ್ಲಿ ಕೂಡ ಹಕ್ಕಿಗಳ ಛಾಯಾಚಿತ್ರಗ್ರಹಣ ಕೈಗೊಳ್ಳಬಹುದು ಎನ್ನುತ್ತಾರೆ ಅವರು.

ಹಕ್ಕಿಗಳ ಛಾಯಾಚಿತ್ರಗ್ರಹಣದ ಮೊದಲು ಹಕ್ಕಿಗಳ ವರ್ತನೆ, ಆಕಾರ, ಆಹಾರ ಪದ್ಧತಿ, ಆವಾಸ ನೆಲೆ, ಜೀವನ ಶೈಲಿ ಕುರಿತ ಮೂಲ ಮಾಹಿತಿಗಳನ್ನು ತಿಳಿದುಕೊಳ್ಳುವುದು ಅಗತ್ಯ. ಎಲ್ಲಕ್ಕಿಂತ ಮುಖ್ಯವಾಗಿ ಛಾಯಾಗ್ರಾಹಕ ಕೆಲವು ನೀತಿ ಸಂಹಿತೆಗಳನ್ನು ಪಾಲಿಸಲೇಬೇಕು.
 
ಯಾವ ಕಾರಣಕ್ಕೂ ಛಾಯಾಗ್ರಾಹಕನಿಂದ ಹಕ್ಕಿಗಳಿಗೆ ತೊಂದರೆ ಆಗಬಾರದು. ಹಕ್ಕಿಗಳು ಸಂತಾನಭಿವೃದ್ಧಿ ನಡೆಸುವಾಗ ಅವುಗಳ ಗೂಡುಗಳ ಛಾಯಾಗ್ರಹಣ ಮಾಡಲೇಬಾರದು. ಗೂಡಿನ ಛಾಯಾಗ್ರಹಣದಿಂದ ಕಾಗೆಗಳಂತಹ ಭಕ್ಷಕ (ಪ್ರಿಡೇಟರ್) ಹಕ್ಕಿಗಳಿಗೆ ನಾವೇ ಗೂಡು ತೋರಿಸಿಕೊಟ್ಟಂತಾಗುವುದು ಎಂದು ಎಚ್ಚರಿಸುತ್ತಾರೆ ಶಿವಶಂಕರ್.

ಇತ್ತೀಚಿನ ದಿನಗಳಲ್ಲಿ ಸುಶಿಕ್ಷಿತ ಯುವಜನರು ಹಕ್ಕಿಗಳೂ ಸೇರಿದಂತೆ ವನ್ಯಜೀವಿಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದು ಆಶಾದಾಯಕ ಬೆಳವಣಿಗೆ. ಅವರ ಛಾಯಾಗ್ರಹಣದ ಆಸಕ್ತಿ ಕೇವಲ `ಮೋಜಿ~ಗಾಗಿ ಇರಬಾರದು. ಆಸಕ್ತಿ ಸಂರಕ್ಷಣೆಯ ಕಡೆಗೆ ವಾಲಬೇಕು. ಪರಿಸರ ಹಾಗೂ ವನ್ಯಜೀವಿಗಳ ಬಗ್ಗೆ ನಿಜವಾದ ಕಾಳಜಿ ಇರಬೇಕು ಎನ್ನುತ್ತಾರೆ ಶಿವಶಂಕರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT