ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಜಾರೋಂ ಖ್ವಾಯಿಷೆ ಐಸಿ...

ಮಿದು ಮಾತು: ಹೆಣ್ಣೊಬ್ಬಳ ಒಡಲಾಳದ ಹಾಡು ಪಾಡು
Last Updated 14 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮಿರ್ಜಾ ಗಾಲಿಬ್‌ನ ಈ ರಚನೆ ಕೇಳ್ದಾಗೆಲ್ಲ, ಭಾಳ ಲಗೂನೆ ಅಂತರ್ಮುಖಿಯಾಗ್ತೀವಿ. ಹೌದು ಅಂಥ ಸಾವಿರ, ಸಾವಿರಾರು ಬಯಕಿಗಳಿರ್ತಾವ. ಎಲ್ಲಾರಿಗೂ.
ಅದರೊಳಗ ನಮಗ ಭಾಳ ಕಾಡುವ ಬಯಕಿ ಅಂದ್ರ ಒಮ್ಮಮ್ಮೆ ಗಪ್ಪನೆ ಸತ್ತುಬಿಡಬೇಕು. ಹಂಗ ಅಂದ್ಕೊಳ್ಳದೇ ಇರುವ ಹೆಣ್ಮಕ್ಕಳೇ ಇರ್ಲಿಕ್ಕಿಲ್ಲ. ಮುಂಜೇನೆ ಆಗೂದ್ರೊಳಗ ನಾ ಇರಬಾರ್ದು. ಅಥವಾ ಸಂಜೀ ಸೂರ್ಯನ ಜೊತಿಗೆ ನಾವೂ, ನಮ್ಮ ಜೀವನದೊಂದಿಗೆ ಮುಳುಗಬೇಕು. ಹಿಂಗ ಭಾಳಸಲೆ ಅನ್ನಿಸಿರ್ತದ.
ಕಾರಣ ಏನರೆ ಇರಲಿ, ಸಾವಿನ ಮೋಹ ಆವರಿಸ್ಕೊಂಡು ಬಿಡ್ತದ. ಒಂದ ಕಾಲಕ್ಕಂತೂ ಸಾವನ್ನು ಪ್ರೀತಿ ಮಾಡಾಕ ಸುರು ಮಾಡಿಬಿಡ್ತೀವಿ. ಅದೊಂಥರ ನಿರಾಳ. ನಿಶ್ಚಿಂತ. ಅಮ್ಮ- ಅಪ್ಪಾಜಿಗೆ ಅಪ್ಗೊಳ್ಳು ಬದಲು ಅದನ್ನೇ ಅಪ್ಗೊಂಡು, ಎಚ್ಚರ ಇರಲಾರ್ದ ನಿದ್ದಿ ಮಾಡಿಬಿಡೂನು ಅನ್ನಸ್ತದ.

ಹೌದು! ಯಾಕ ಜೀವನ ನಮಗ ಸಾವಿನತ್ತ ನೂಕ್ತದ? ಅಥವಾ ಸಾವು ಯಾಕ ತನ್ನತ್ತ ಸೆಳೀತದ? ಜೀವನಕ್ಕಿಂತ ಸಾವಿನ ಸೆಳೆತನ ಹೆಚ್ಚಾಗ್ತದ. ಅವಾಗ ಆಪ್ತರ ಪ್ರೀತಿ ಸಿಗಲಿಲ್ಲ ಅಂದ್ರ ನಾವು ದುರ್ಬಲರಾಗ್ತೀವಿ. ಸಾವು ಮೇಲುಗೈ ಸಾಧಸ್ತದ. ಹೆಣ್ಮಕ್ಕಳು ಭಾಳ ಲಗೂನ ನಿರಾಶರಾಗ್ತಾರ ಹೌದು. ಆದ್ರ ಹತಾಶ­ರಾಗೂದಿಲ್ಲ. ಭಾಳ ಲಗೂನೆ ಹತಾಶರಾದ್ರ, ಎಲ್ಲೇ ಲಯ ತಪ್ಪೇದ ಅಂತನ ಅರ್ಥ.

ಎಲ್ಲಾರೂ ಸಾಯಾಕ ಹುಟ್ಟಿರ್ತೀವಿ. ಆದ್ರ ನಮಗ ಸಿಕ್ಕ ಜೀವನ ಇನ್ನೊಮ್ಮೆ ಸಿಗಾಂಗಿಲ್ಲ ಅನ್ನೂ ಸಣ್ಣದೊಂದು ಖಬರು ನಮಗ ಇರಬೇಕು. ಜೀವನದ ಬಗ್ಗೆ ಪ್ರೀತಿ ಹುಟ್ಟಬೇಕಂದ್ರ ಸಾವಿನೊಂದಿಗೆ ಮೋಹನೂ ಇರಾಕಬೇಕು. ನಮ್ಮಣ್ಣ ಯವಾಗಲೂ ಹೇಳಂವ. ತನಗ ‘ಸಾವಿನ ಬಗ್ಗೆ ಎಂಥ ಮೋಹನೂ ಇಲ್ಲ. ಇವೊತ್ತು ನನ್ ಮುಂದ ಸಾವು ಬಂದು ಬಾರಲೆ ಮಗನೆ ಅಂತ ಕರದ್ರೂ, ನಾನು ಬರೂದಿಲ್ಲ ಹೋಗಲೆ, ನನ್ನುವು ಮಕ್ಳದಾವ. ತಮ್ಮ ತಂಗಿ, ಅಪ್ಪ ಅಮ್ಮ ಅದಾರ. ಅವರಿಗೆ ಬಿಟ್ಟ ಬರೂದಿಲ್ಲ ಅಂತೀನಿ’ ಅಂತ. ಅದು ಜೀವನದ ಬಗ್ಗೆ ಅವನಿಗಿರುವ ಪ್ರೀತಿ. ಅಷ್ಟೇ ಅಲ್ಲ, ತನ್ನವರ ಬಗೆಗಿನ ಮಮಕಾರ. ಜೊತಿಗೆ ಬದ್ಧತೆ ಎತ್ತಿ ತೋರಸ್ತೈತಿ.

ಹೆಣ್ಮಕ್ಕಳಿಗೆ ಮಮಕಾರ, ಮಮತೆ, ವಾತ್ಸಲ್ಯ ಎಲ್ಲ ಎದಿ ಝರಿಯೊಂದಿಗೆ ಒರತೆ ಮೂಡ್ತಾವ. ಆದ್ರೂ ಅದ್ಯಾಕ ಮಕ್ಳನ್ನೂ ಕಟ್ಕೊಂಡು ಸಾಯೂ ವಿಚಾರ ಮಾಡ್ತೀವಿ?

ಆ ಗಳಿಗಿ ದಾಟಿದ ಮ್ಯಾಲೆ, ಮಕ್ಕಳು ಆಟಾ ಆಡೂಮುಂದ, ಅವು ಛಂದ ಕಾಣೂಮುಂದ, ಇದೆಲ್ಲ ನೋಡೂದು ಬಿಟ್ಟು, ಫೋಟೊದಾಗ ಕುಂದರಾಕ ಹೊಂಟಿದ್ವೆಲ್ಲ ಅಂತ ಅದೆಷ್ಟು ಸಲ ಗಲ್ಲಗಲ್ಲ ಬಡ್ಕೋಳೂದಿಲ್ಲ? ಇದು ಮಕ್ಕಳಿದ್ದವರ ಕತಿ ಆತು. ಇನ್ನ ಜೀವನಾನೇ ನೋಡಲಾರ್ದೆ, ಇಷ್ಟೆ ಜೀವನ ಅಂತ ಹದಿಹರೆಯದ ಹೊಸ್ತಲನಾಗ ಸಾವನ್ನು ಅಪ್ಗೊಳ್ಳೋ­ರಿಗೆ ಏನು ಹೇಳಬೇಕು?

ಮನಶಾ ಭಾಳ ಸ್ವಾರ್ಥಿ. ತನ್ನ ನಿರೀಕ್ಷೆಗಳನ್ನೇ ಪ್ರೀತಿಸ್ತಾನ. ತನ್ನ ಬಯಕೇನೆ ದೊಡ್ದು ಅಂತಾನ. ತನಗ ಬಿಟ್ರ ಜಗತ್ತೇ ಇಲ್ಲ ಅಂದ್ಕೊಂಡಿರ್ತಾನ. ಇಂಥ ನಂಬಿಕಿಗಿ ಒಂದು ಏಟು ಬಿದ್ದಾಗ, ಒಳಗೊಳಗೇ ಮುರಕೊಂಡು ಹೋಗ್ತಾನ. ನಮಗ ಭಾಳ ತ್ರಾಸಾಯ್ತು ಅಂತ ಹೇಳ್ತೀವಲ್ಲ, ಅದೂ ಇಂಥಾದ್ದೇ ಬ್ಯಾನಿ. 

ನಮ್ಮ ಮಕ್ಕಳು ಸುಳ್ಳು ಹೇಳಿದ್ರು ಅಂತ ತ್ರಾಸ ಮಾಡ್ಕೋತೀವಿ. ಅದು ಅವರು ಸುಳ್ಳು ಹೇಳಿದ್ದಕ್ಕಲ್ಲ, ನಮ್ಮ ನಂಬಿಕಿಗಿ ಹೊಡ್ತ ಬಿದ್ದಿದ್ದಕ್ಕ ತ್ರಾಸ ಆಗಿರ್ತದ.
ಹೆಚ್ಚಾಗಿ ಹೆಣ್ಮಕ್ಕಳು ತ್ರಾಸ ಮಾಡ್ಕೊಳ್ಳೂದು ಇಂಥವೇ ಪರಿಸ್ಥಿತಿಯೊಳಗ. ಆದ್ರ ಅದೊಂದು ಕ್ಷಣ. ದಾಟಿಬಿಡಬೇಕು ಅಷ್ಟೆ.

ಕೆಟ್ಟ ಸಮಯ, ಛೊಲೊ ಸಮಯ ಅಂತಿರ್ತದಲ್ಲ, ಅದು ಗೋಡಿ ಮ್ಯಾಲಿನ ಗಡಿಯಾರ ಇದ್ಹಂಗ. ಅದೆಲ್ಲಿಯೂ ನಿಲ್ಲೂದಿಲ್ಲ. ಮುಳ್ಳು ಸರದಂಗ ಸರಕ್ಕೊಂತ ಹೋಗ್ತದ. ಒಮ್ಮಮ್ಮೆ ಅದು ಒಂದೊಂದು ಮುಳ್ಳಾಗ್ತದ. ಆನಂದ ಅನ್ನೂದು ಯವಾಗಲೂ ಸೆಕೆಂಡಿನ ಮುಳ್ಳೇ ಆಗಿರ್ತದ. ಸರಸರ ಸರೀತದ. ಕಷ್ಟ ಅನ್ನೂದು ತಾಸಿನ ಮುಳ್ಳಿದ್ದಂಗ ಮುಂದಕ್ಕೋಡೂದೇ ಇಲ್ಲ ಅಂತ. ಆದ್ರ ನಿಂದ್ರೂದು ಇಲ್ಲ ಅನ್ನೂದು ಅಷ್ಟೇ ಖರೆ.

ಇಷ್ಟೆಲ್ಲ ನಮ್ಮಳಗಿನ ವಿಚಾರ ಕಿಲುಬು ಹತ್ತಿದ ತಾಮ್ರದ ತಂಬಿಗಿಗೆ ಹುಂಚೀಹಣ್ಣು ಹಚ್ಚಿ ತೊಳ್ದಾಗ ಹೊಳೀತದಲ್ಲ ಹಂಗ ಹೊಳಿಯೂದು, ನಮ್ಮ ಮನಸಿನ ಮಾತುಗಳನ್ನು ಒಬ್ಬರು ಹಾಡದಾಗ. ಆಡದಾಗ. ಮಿರ್ಜಾ ಗಾಲಿಬ್‌ನ ‘ಹಜಾರೋಂ ಖ್ವಾಯಿಷೆ ಐಸಿ, ಹರ್ ಖ್ವಾಯಿಷ್ ಪೆ ದಮ್ ನಿಕಲೆ’ ಅನ್ನೂ ರಚನೆಯನ್ನ ನಾಸಿರುದ್ದೀನ್ ಶಾ ಗಾಲಿಬ್‌ಪಾತ್ರಕ್ಕ ಜೀವ ತುಂಬಿದ್ರ, ಜಗ್ಜಿತ್ ಸಿಂಗ್ ಧ್ವನಿ ನಮ್ಮ ಆತ್ಮವನ್ನು ಆವರಿಸಿಕೊಂತದ. ಇದೊಂದೆ ಹಾಡಲ್ರಿ, ಇಂಥಾವು ಹತ್ತಾರು ಹಾಡು ನಮ್ಮ ಪಾಡನ್ನು ಸಹನೀಯಗೊಳಿಸಿಬಿಡ್ತಾವ.

ನಾವೆಲ್ಲ ಸಾವಿನತ್ತ ಸರಿಯೂದು ಯಾಕಂದ್ರ, ಎಲ್ಲೋ ಒಂದು ಕಡೆ ನಮಗ ಅತೀ ಬೇಕಾದವ್ರಿಗೆ ನಾವು ಬ್ಯಾಡ ಅಂತ ಅನಸಾಕತ್ತದ ಅನ್ನೂದೊಂದು ಹುಳ ನಮ್ಮ ಮನಸಿಗೆ ಹೊಕ್ಕಬಿಡ್ತದ. ಹಗರಕ ಮಿದುಳು ತಿಂತದ. ಅವರಾಡುವ ಪ್ರತಿ ಮಾತು, ಪ್ರತಿ ಚಲನೆಯೇ ತಿರಸ್ಕಾರದ ಪ್ರತೀಕವಾಗಿ ಕಾಣ್ತಾವ. ಈ ಧಿಕ್ಕಾರವನ್ನು ಸ್ವೀಕರಿಸುವ ಮನಃಸ್ಥಿತಿ ಇರ್ಲಿಲ್ಲಂದ್ರ, ಸಾವು ಸೆಳ್ಯಾಕ ಸುರು ಮಾಡ್ತದ. ಅದೊಂದು ಸುಳಿ ಇದ್ದಂಗ. ಅದಕ್ಕೇ ಆ ಸಮಯ ಅನ್ನೂ ಮೂರೂ ಮುಳ್ಳನ್ನು ಹೊತ್ಗೊಂಡ್ರು, ತಾ ಸ್ಥಿರವಾಗಿಯೇ ಜೀವಸಾವುಗಳ ನಡುವೆ ಓಲಾಡುವ ಪೆಂಡಲೂಮ್ ಇದ್ದಂಗ ನಾವಿರಬೇಕು. ಅವಾಗ ಇಂಥ ತಿರಸ್ಕಾರ, ಧಿಕ್ಕಾರ ಎಲ್ಲವನ್ನೂ ಗೆಲ್ಲಬಹುದು.

ಈ ಸೋಲು-ಗೆಲುವು ಅನ್ನೂ ಮಾತು ಬಂತಂದ್ರ ಮತ್ತದು ನಮ್ಮ ಆತ್ಮಪ್ರತಿಷ್ಠೆಯ ಮಾತಾಗ್ತದ. ಮನಸು ಭಾಳ ವಿಚಿತ್ರ ಮತ್ತು ವಿಕ್ಷಿಪ್ತ. ಪ್ರೀತಿಯನ್ನು ತೆರೆದ ತೆಕ್ಕೆಯಿಂದ ಬಳ್ಕೊಂತದ. ಆದ್ರ ನಿರ್ಲಕ್ಷ್ಯದ  ಉಗುರಿನಂಚನ್ನೂ ಸಹಿಸೂದಿಲ್ಲ. ಇದನ್ನ ತಡೀಬೇಕಂದ್ರ, ನಮ್ಮೊಳಗನ್ನು ಎರಡನ್ನೂ ಸ್ವೀಕರಿಸುಹಂಗ ಮನಸನ್ನೂ ಕೋತೀನ್ನ ತರಬೇತಿಗೊಳಸಬೇಕು. ನೀ ಕೊಟ್ಟಿದ್ದು, ಪ್ರೀತಿನೂ ಬೇಕು. ತಿರಸ್ಕಾರನೂ ಬೇಕು. ಪ್ರೀತಿನ ತುಟಿಗೊತ್ತಿಕೊಂಡ್ರ, ತಿರಸ್ಕಾರನ್ನ ಕಣ್ಣಿಗೊತ್ಕೊತೀವಿ ಅನ್ನೂ ಮನಃಸ್ಥಿತಿ ಬರಬೇಕು. ಇದಕ್ಕೇನು ಭಾಳ ತಿಪ್ಪರಲಾಗ ಹಾಕಬೇಕಾಗಿಲ್ಲ. ನಾವು, ನಮ್ಮ ವಿಚಾರ ಬೆಳದ್ರೂ ಮನಸು ಮಕ್ಕಳ ಹಂಗೇ ಇರಬೇಕು. ಮುಗ್ಧತನ ಕಳಕೋಬಾರದು.

ನಮ್ಮನಿ ಕೂಸಿಗೆ ನಾವ ಪ್ರೀತಿ ಮಾಡೂಮುಂದ ಹಲ್ಲು ಕಡಿದು, ಒಸಡಿ ಗಟ್ಟಿ ಹಿಡದು, ಹಣಿಗೆ ಗಂಟ್ಹಾಕಿಕೊಂಡು ಗುದ್ತೀನಲೆ ಅಂದಾಗಲೂ ಅದು ಬೊಚ್ಚುಬಾಯಿ ಬಿಟ್ಟು ನಗ್ತದ. ಹೂ ಮುಟ್ದಂಗ ಮುತ್ತಿಟ್ಟಾಗಲೂ ಅಷ್ಟೇ ಛಂದ ನಗ್ತದ. ಹಂಗ ಜೀವನ ಕೊಡೂ ಪೆಟ್ಟುಗಳನ್ನು ಮಗುವಿನಹಂಗ ಸ್ವೀಕರಿಸಬೇಕು. ಇದೇ ವಾದ ಇನ್ನೊಂದು ದೃಷ್ಟಿಯಿಂದಲೂ ನೋಡಬಹುದು. ಜೀವನಾನೇ ನಮ್ಮ ಉಡಿಯೊಳಗ ಇರುವ ನಮ್ಮ ಕೂಸಿನ್ಹಂಗ ಅಂದ್ಕೊಬೇಕು. ಅವಾಗ ಜೀವನ ಹೊಡದ್ರೂ, ಬಡದ್ರೂ, ಹೇಸಿಗಿ ಅನಸೂಹಂಗ ಮಾಡಿದ್ರೂ ಎತ್ತಿ ಅಪ್ಪಿ ಮುದ್ದಿಡುವ ಪ್ರೀತಿ ಮೂಡ್ತದ. ಅದೇ ಜೀವನ ಪ್ರೀತಿ.

ಒಮ್ಮೆ ನಮ್ಮ ಮಾವ ಹೇಳ್ತಿದ್ರು. ‘ನಿಮ್ಮ ಮಕ್ಕಳಿಗೆ ಯಾವ್ದರೆ ಸಾಲೀಗಿ ಕಳಸ್ರಿ. ಅವರು ಅಲ್ಲಿ ಹೆಂಗ ಬದುಕಬೇಕು ಅನ್ನೂದು ಕಲತ್ರ ಸಾಕು. ಇಲ್ಲಾಂದ್ರ ನೀವು ಅವರಿಗೆ ಬದುಕಿನ ಬಗ್ಗೆ ಅಚಲ ನಂಬಕಿ, ಅಪರಿಮಿತ ಪ್ರೀತಿ, ಅದಮ್ಯ ವಿಶ್ವಾಸ ಮೂಡೂಹಂಗ ಮಾಡ್ರಿ. ಮುಂದಿಂದು ಅವರೇ ಕಲೀತಾರ’ ಅಂತ.  ಆದ್ರ ನಾವು ಕುಂತು ಅಕ್ಷರ ತೀಡೂದು ಕಲಿಸ್ತೀವಿ. ಹೋಮ್‌ವರ್ಕ್ ಮಾಡಸ್ತೀವಿ. ಹಟಕ್ಕ ಬಿದ್ದೋರ್ ಹಂಗ ಹೊಡೀತೀವಿ, ಬಡೀತೀವಿ. ಮತ್ತ ಕಲಸಾಕ ಕುಂದರ್ತೀವಿ. ಅಲ್ಲಿ ನಂಬಕಿ, ಪ್ರೀತಿ, ವಿಶ್ವಾಸ ಎಲ್ಲಾನೂ ಅಂಗೈಯಾಗಿನ ಉಸುಕು ಸೋರಿ ಹೋದಂಗ ಹೋಗ್ತಿರ್ತಾವ. ಮತ್ಹೆಂಗ ಮಕ್ಕಳು ಜೀವನ್ಮುಖಿ ಆಗಾಕ ಸಾಧ್ಯ?

ಖರೇವಂದ್ರ ಮನಶಾ ಅಗ್ದಿ ಸಣ್ಣ ಸಣ್ಣ ಆಶಾ ಇಟ್ಗೊಂಡಿರ್ತಾನ. ಉಳಿದಿದ್ದು ಏನಿದ್ರೂ ಅದು ಅವನ ಸಾಮರ್ಥ್ಯದ ಮುಂದಿರುವ ಗುರಿಗಳು ಅಷ್ಟೆ. ಉದ್ದೇಶ ಇಟ್ಗೊಂಡು ಮುಂದ ಹೊಂಟ್ರ ಅವನ್ನು ಸಾಧಸೂದು ಸರಳ ಆಗ್ತದ. ಆದ್ರ ಕೊನೀತನಾನೂ ಮನಶಾ ಹುಡಕೂದು, ತಮ್ಮವರೊಳಗ ಪ್ರೀತಿ, ಅಂತಃಕರಣ, ವಿಶ್ವಾಸ, ನಂಬ್ಕಿ. ಇವಿಷ್ಟೂ ಎಲ್ಲೆಲ್ಲೋ ಹುಡುಕೂದ್ರಿಂದ ಸಿಗೂದಿಲ್ಲ. ನಮ್ಮೊಳಗ ಇರ್ತಾವ. ನಮ್ಮೊಳಗ ನಾವ ಹುಡಕಬೇಕು. ಗಾಲಿಬ್‌ನ ಆ ಕವಿತೆಯೊಳಗೊಂದು ಸಾಲು ಹೇಳ್ತದ, ‘ಮೊಹಬ್ಬತ್‌ಮೆ ನಹಿ ಹೈ ಫರ್ಕ್ ಜೀನೆ ಔರ್ ಮರ್ನೆ ಕಾ’ ಅಂತ. ಆ ಸಾಲನ್ನು ಅಪ್ಗೊಂಡು ಬಿಡೂನು. ಬದುಕನ್ನು ಅದೇ ತೀವ್ರತೆಯಿಂದ ಮೋಹಿಸಬಹುದು. ಪ್ರೀತಿಸಬಹುದು. ಕೈ ಚಾಚಿ ಅಪ್ಗೊಳ್ಳಾಕ ಕರಿಯೋ ಸಾವಿಗೆ, ‘ನಾ ಆಮ್ಯಾಲೆ ಬರ್ಲಿ’ ಅಂತ ಕೇಳಿ, ಛಂದಗೆ ಹುಸಿ ನಕ್ಕು ಕದಾ ಹಾಕೂನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT