ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಕೊಡದ ಗ್ರಾ.ಪಂ.: ಕೈಪಂಪ್ ಕಿತ್ತೊಯ್ದ ಭೂಪ

Last Updated 15 ಅಕ್ಟೋಬರ್ 2012, 8:50 IST
ಅಕ್ಷರ ಗಾತ್ರ

ಯಾದಗಿರಿ: ಬರಗಾಲದ ಪರಿಸ್ಥಿತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಕೋಟ್ಯಂತರ ಅನುದಾನ ಜಿಲ್ಲೆಗೆ ಬಂದಿದ್ದರೂ, ಕೆಲ ಗ್ರಾಮಗಳ ಜನರಿಗೆ ಆ ಹಣದ ಉಪಯೋಗ ಮಾತ್ರ ಆಗಿಲ್ಲ. ಇದಕ್ಕೊಂದು ನಿದರ್ಶನ ಎನ್ನುವಂತಿದೆ ಸಮೀಪದ ತುಮಕೂರಿನಲ್ಲಿ ನಡೆದಿರುವ ಘಟನೆ.

ಶಹಾಪುರ ತಾಲ್ಲೂಕಿನ ಬೆಂಡೆಬೆಂಬಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಸೇರಿರುವ ತುಮಕೂರ ಗ್ರಾಮದಲ್ಲಿ ಕೊಳವೆ ಬಾವಿ ದುರಸ್ತಿ ಮಾಡಿಸಿದ ಪಂಚಾಯಿತಿಯವರು, ಹಣವನ್ನು ಪಾವತಿಸದೇ ಇರುವುದರಿಂದ ದುರಸ್ತಿ ಮಾಡಿದ ವ್ಯಕ್ತಿ ಕೈಪಂಪ್ ತೆಗೆದುಕೊಂಡು ಹೋಗಿದ್ದಾನೆ. ಶನಿವಾರ ರಾತ್ರಿಯಿಂದ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ.

ಒಂಬತ್ತು ತಿಂಗಳ ಹಿಂದೆ ಬೆಂಡೆಬೆಂಬಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕೆಟ್ಟು ನಿಂತ ಕೊಳವೆಬಾವಿಗಳನ್ನು ದುರಸ್ತಿ ಮಾಡಿಸಲಾಗಿತ್ತು. ಪಂಚಾಯಿತಿಯಿಂದ ದುರಸ್ತಿಮಾಡಿದ ವ್ಯಕ್ತಿಗೆ ಸುಮಾರು ರೂ. 45 ಸಾವಿರ ಪಾವತಿ ಆಗಬೇಕಾಗಿದೆ. ಅನೇಕ ಬಾರಿ ಪಂಚಾಯಿತಿ ಅಧಿಕಾರಿಗಳಿಗೆ ಹಣ ಕೊಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತ ವ್ಯಕ್ತಿ ಕಳೆದ ರಾತ್ರಿ ತುಮಕೂರ ಗ್ರಾಮದ ಸುಮಾರು ಏಳೆಂಟು ಕೊಳವೆಬಾವಿಗಳಿಗೆ ಅಳವಡಿಸಿದ್ದ ಕೈಪಂಪ್‌ಗಳನ್ನು ತೆಗೆದುಕೊಂಡು ಹೋಗಿದ್ದಾನೆ.

ಇದೀಗ ಗ್ರಾಮದ ಜನರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮಸ್ಥರು ಕೊಳವೆ ಬಾವಿ ದುರಸ್ತಿ ಮಾಡಿದ ವ್ಯಕ್ತಿಯನ್ನು ಕೇಳಿದರೆ, ಪಂಚಾಯಿತಿಯಿಂದ ಸುಮಾರು ರೂ. 45 ಸಾವಿರ ಬರಬೇಕು. ಅದಕ್ಕಾಗಿ ಕೈ ಪಂಪ್‌ಗಳನ್ನು ತೆಗೆದಿರುವುದಾಗಿ ಹೇಳುತ್ತಾನೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಈ ವಿಷಯದ ಬಗ್ಗೆ ಚರ್ಚಿಸಲು ಗ್ರಾಮದ ಶಂಕರಲಿಂಗ ದೇವಸ್ಥಾನದಲ್ಲಿ ಸಭೆ ಸೇರಿ ದುರಸ್ತಿ ಮಾಡಿದ ವ್ಯಕ್ತಿಯನ್ನು ಕರೆಸಲಾಯಿತು. ಹಣ ಕೊಡಿಸುವ ಭರವಸೆ ನೀಡಿ, ಕೈಪಂಪ್‌ಗಳನ್ನು ಜೋಡಿಸುವಂತೆ ಮನವೊಲಿಸಲಾಯಿತು.

ಇದಕ್ಕೆ ಆ ವ್ಯಕ್ತಿ ಒಪ್ಪಿಗೆ ನೀಡಿದ್ದಾನೆ. ಇದರಿಂದಾಗಿ ತಾತ್ಕಾಲಿಕವಾಗಿ ಗ್ರಾಮದ ಸಮಸ್ಯೆ ಬಗೆಹರಿದಂತಾಗಿದ್ದು, ಕೂಡಲೇ ಗ್ರಾಮ ಪಂಚಾಯಿತಿಯವರು ಹಣ ಪಾವತಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸಭೆಯಲ್ಲಿ ಗ್ರಾಮದ ಹಿರಿಯರಾದ ಭೀಮಣಗೌಡ, ಕರವೇ ಪ್ರಧಾನ ಕಾರ್ಯದರ್ಶಿ ರಂಗಯ್ಯ ಮುಸ್ತಾಜೀರ, ಸುರೇಶ, ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀನಿವಾಸ, ಮುಂದಿನ ಸಭೆಯಲ್ಲಿ ದುರಸ್ತಿ ಹಣ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT