ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ಸುಧಾರಣಾ ಕ್ರಮ ಇಂದು ಪ್ರಕಟ;ಆರ್ಥಿಕ ಬಿಕ್ಕಟ್ಟಿಗೆ ಸ್ವದೇಶಿ ಪರಿಹಾರ

Last Updated 24 ಜೂನ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): `ದೇಶ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟುಗಳನ್ನು ನಿವಾರಿಸಿಕೊಳ್ಳಲು ಅಗತ್ಯವಾದ ನೆರವು ವಿಶ್ವ ಸಮುದಾಯದಿಂದಲೇ ಸಿಗಲಿದೆ ಎನ್ನುವ ನಿರೀಕ್ಷೆ ಇಟ್ಟುಕೊಳ್ಳಬಾರದು~ ಎಂದು ಪ್ರಧಾನಿ ಮನಮೋಹನ್ ಸಿಂಗ್ ಸ್ಪಷ್ಟವಾಗಿ ಹೇಳಿದ್ದಾರೆ.

ದೇಶದ  ಒಟ್ಟಾರೆ ಅರ್ಥ ವ್ಯವಸ್ಥೆಗೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಸರ್ಕಾರ ಸೋಮವಾರ ಸುಧಾರಣಾ ಕ್ರಮಗಳನ್ನು ಪ್ರಕಟಿಸಲಿರುವ ಹಿನ್ನೆಲೆಯಲ್ಲಿ ಪ್ರಧಾನಿಯವರ ಈ ಹೇಳಿಕೆ ಗಮನ ಸೆಳೆದಿದೆ.
`ಜಿ-20~ ಮತ್ತು ರಯೊ+ 20 ಶೃಂಗಸಭೆಯಲ್ಲಿ ಪಾಲ್ಗೊಂಡ ನಂತರ ತಾಯ್ನಾಡಿಗೆ ಹಿಂದಿರುಗುವ ವೇಳೆ ವಿಶೇಷ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.

`ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಯಾವುದೇ ಜಾಗತಿಕ ಪರಿಹಾರ ದೊರೆಯುವುದಿಲ್ಲ ಎಂಬುದು ಕಳೆದ ಕೆಲವು ದಿನಗಳ ವಿದ್ಯಮಾನಗಳನ್ನು ಗಮನಿಸಿದ ನಂತರ ನನಗೆ ಮನವರಿಕೆಯಾಗಿದೆ~ ಎಂದೂ ಅವರು ಹೇಳಿದರು.

ಇದೇ ವೇಳೆ ಯೂರೊ ವಲಯದ ಆರ್ಥಿಕ ಬಿಕ್ಕಟ್ಟು  ನಿವಾರಿಸುವ ಸಲುವಾಗಿ ಸ್ಥಾಪಿಸಿರುವ ಐಎಂಎಫ್ ನಿಧಿಗೆ, 1000 ಕೋಟಿ ಡಾಲರ್ (ಅಂದಾಜು 56,000 ಕೋಟಿ ರೂಪಾಯಿ) ಅನುದಾನ ನೀಡಿರುವ ಭಾರತ ಸರ್ಕಾರದ ಕ್ರಮವನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

ಅಗತ್ಯಬಿದ್ದರೆ ಮಾತ್ರ ಈ ನಿಧಿ ಬಳಕೆಯಾಗಲಿದೆ. ಅಲ್ಲದೇ ಈ ಮೊತ್ತ ರಾಷ್ಟ್ರದ ವಿದೇಶಿ ವಿನಿಮಯ ಮೀಸಲಾಗಿ ಪರಿಗಣನೆಯಾಗಲಿದೆ ಎಂದು ಮನಮೋಹನ್ ತಿಳಿಸಿದರು.ಕಪ್ಪು ಹಣವು ದೊಡ್ಡ ಪಿಡುಗು ಎಂಬುದು ನಿಜ. ಆದರೆ, ಅದರ ನಿವಾರಣೆಗೆ ಯಾವುದೇ ಮಂತ್ರದಂಡ ಇಲ್ಲ. ಅದರ ನಿವಾರಣೆ ಒಂದು ನಿಧಾನ ಪ್ರಕ್ರಿಯೆಯಾಗಲಿದೆ ಎಂದರು.

ದೇಶದ ವಿತ್ತೀಯ ಕೊರತೆಯನ್ನು ಪರಿಣಾಮಕಾರಿ ಹಾಗೂ ವಿಶ್ವಾಸಾರ್ಹವಾಗಿ ನಿಭಾಯಿಸಲು ಕ್ರಮ ಕೈಗೊಳ್ಳಲಾಗುವುದು. ಆರ್ಥಿಕ ಬೆಳವಣಿಗೆಗೆ ಪೂರಕವಾದ ಸನ್ನಿವೇಶ ಸೃಷ್ಟಿಸುವುದು ಅಗತ್ಯವಾಗಿದೆ. ಸರ್ಕಾರ ಈ ಕೆಲಸ ಮಾಡಬೇಕೆಂಬುದೇ ದೇಶಬಾಂಧವರ ಅಪೇಕ್ಷೆಯಾಗಿದೆ ಎಂದರು.

ಅಕ್ರಮ ಲೇವಾದೇವಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ, ಪಾರದರ್ಶಕತೆ ಹಾಗೂ ಜಾಗತಿಕ ಮಟ್ಟದಲ್ಲಿ ಸಮಗ್ರ ಮಾಹಿತಿ ವಿನಿಮಯ ರೂಢಿಗೆ ಬರಬೇಕೆಂದು `ಜಿ 20~ ಸಭೆಯಲ್ಲಿ ಪ್ರಧಾನಿ ಮನಮೋಹನ್ ಹಾಗೂ ಇನ್ನಿತರ ನಾಯಕರು ಅಭಿಪ್ರಾಯಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT