ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣತೆ ಆರಿದೆ, ಬೆಳಕು ಉಳಿದಿದೆ

Last Updated 23 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಇದು ನಿಶ್ಶಬ್ದದಲ್ಲಿ ನಿಂತು ನೆನೆಯುವ ಹೊತ್ತು. ಹಾಗೆ ನೆನಪಿಸಿ­ಕೊಳ್ಳಲು ಹೇಳಿಕೊಟ್ಟವರೂ ಅವರೇ. ‘ಸದ್ದು ಗದ್ದಲದ ತುತ್ತೂರಿ ದನಿಗಳಾಚೆಗೆ ನಿಂತು/ನಿಶ್ಶಬ್ದದಲ್ಲಿ ನೆನೆಯುತ್ತೇನೆ/ ಗೌರವ­ದಿಂದ’ ಎಂದು ತಮ್ಮ ಪ್ರಿಯ­ಗುರು­ಗಳಾದ ಕುವೆಂಪು ಅವರನ್ನು ಕುರಿತು ಜಿ.ಎಸ್. ಶಿವರುದ್ರಪ್ಪನವರು ಉದ್ಗರಿ­ಸಿದ್ದರು.

ಅದು ಜಿಎಸ್‌ಎಸ್ ಅವರನ್ನು ನೆನಪಿಸಿಕೊಳ್ಳುವ ಅರ್ಥ­ಪೂರ್ಣ ದಾರಿಯೂ ಹೌದು. ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ಅವರ ನೆನಪುಗಳಲ್ಲಿ ಎಷ್ಟೊಂದು ಚಿತ್ರ­ಗಳಿವೆ: ತಲೆ ಎತ್ತಿ ನಿಲ್ಲುವುದು, ಕಿರುಕುಳ­ಗಳಿಗೆ ಜಗ್ಗದೆ ನಿರ್ಭಯವಾಗಿ ನಡೆವುದು ಹಾಗೂ ಸದ್ದಿರದೆ ಬದುಕುವುದು. ಜಿಎಸ್‌ಎಸ್ ಅವರು ತಮ್ಮ ಗುರು­ಗಳಿಂದ ದಾನ ಪಡೆದ ಕೀಲಿಕೈಗಳಿವು. ಈಗವರು ನೆನಪಾಗಿ ಕಾಡುತ್ತಿರುವ ಸಂದರ್ಭದಲ್ಲಿ, ಇವೆಲ್ಲವೂ ಅವರ ಬದುಕಿನ ನಂಬಿಕೆ­ಗಳಂತೆ ಹಾಗೂ ನಮ­ಗಾಗಿ ಬಿಟ್ಟುಹೋದ ಮೌಲ್ಯ­ಗಳಂತೆ ಕಾಣಿಸು­­ತ್ತವೆ. ಅವರು ಸಾಗಿಬಂದ ಬದುಕಿನ ದಾರಿಯನ್ನು ನೋಡಿದರೆ ಈ ನಂಬಿಕೆ- ಮೌಲ್ಯಗಳ ಸಾಚಾತನ ಅರ್ಥವಾಗುತ್ತದೆ.

ಜಿಎಸ್‌ಎಸ್ ಅವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವರು (ಜನನ: ಫೆ. ೭, ೧೯೨೬). ಅವರ ತಂದೆ ಶಾಂತ­ವೀರಪ್ಪ­ನವರು ಶಾಲಾ ಉಪಾ­ಧ್ಯಾಯರು. ಮಗನಿಗೆ ಪ್ರಾಪಂಚಿಕ ಜ್ಞಾನ ದೊರೆಯುವ ಮೊದಲೇ ತಾಯಿ ವೀರಮ್ಮ ತೀರಿಕೊಂಡರು. ಸ್ವಾತಂತ್ರ್ಯ­ಪೂರ್ವ ದಿನ­ಗಳ ಶಾಲಾ ಮಾಸ್ತರರ ಮನೆಯಲ್ಲಿ ಸಿರಿತನ ಎಲ್ಲಿಂದ ಬರಬೇಕು. ತುಮಕೂರು ಜಿಲ್ಲೆಯ ಕೊರಟಗೆರೆ ಸಮೀಪದ ಗ್ರಾಮವೊಂದರಲ್ಲಿ ಜಿಎಸ್‌ಎಸ್ ಅವರ ಪ್ರಾಥಮಿಕ ಶಿಕ್ಷಣ ನಡೆ­ಯಿತು. ಸೆಕೆಂಡರಿ ಶಿಕ್ಷಣ ನಡೆದುದು ಗುಬ್ಬಿಯಲ್ಲಿ. ಆನಂತರ ಸಿದ್ದಗಂಗಾ ಮಠ­ದಲ್ಲಿದ್ದುಕೊಂಡು ತುಮಕೂರಿನ ಇಂಟರ್‌­­ಮೀಡಿಯೆಟ್ ಕಾಲೇಜಿಗೆ ಸೇರಿ­ಕೊಂಡರು.

ಮಗ ಶಿಕ್ಷಣ ಮುಂದುವರೆ­ಸುವುದು ಕುಟುಂಬದ ಆರ್ಥಿಕ ದೃಷ್ಟಿ­ಯಿಂದ ಸರಿಯಲ್ಲ ಎಂದು ಶಾಂತ­ವೀರಪ್ಪನವರಿಗೆ ಅನ್ನಿಸಿರಬೇಕು; ಅಮಲ್ದಾ­­ರ­ರನ್ನು ವಿನಂತಿಸಿಕೊಂಡ ಅವರು ಮಗನಿಗೆ ಗುಮಾಸ್ತನ ಹುದ್ದೆ ಕೊಡಿಸಿದರು. ಎರಡನೇ ಮಹಾ­ಯುದ್ಧದ ದಿನಗಳವು. ತರುಣ ಶಿವ­ರುದ್ರಪ್ಪ ಕೆಲಸ ಮಾಡುತ್ತಿದ್ದುದು ಜೇನು­ಹುಟ್ಟಿನಂಥ ಆಹಾರ ಇಲಾಖೆಯಲ್ಲಿ. ಬಿಸಿರಕ್ತದ ಯುವಕನ ಪ್ರಾಮಾಣಿಕತೆ ಮೇಲಿನ ಅಧಿಕಾರಿಗಳಿಗೆ ಪಥ್ಯವಾಗಲಿಲ್ಲ. ಈ ಸಿಟ್ಟು, ಒಮ್ಮೆ ಶಿವರುದ್ರಪ್ಪನವರು ರಜೆ ಕೇಳಿದಾಗ ಸ್ಫೋಟಗೊಂಡಿತು. ರಜೆ ಕೊಡುವುದಿಲ್ಲ ಎಂದು ಮೇಲಧಿಕಾರಿ ಪಟ್ಟು ಹಿಡಿದಾಗ, ಜಿಎಸ್ಸೆಸ್‌ ರಾಜೀ­ನಾಮೆ ನೀಡಿದರು.

ಮೈಸೂರಿನಲ್ಲಿ ಪುಟಗೊಂಡ ಪ್ರತಿಭೆ: ಚಿನ್ನದಂಥ ಕೆಲಸ ಬಿಟ್ಟುಬಂದ ಮಗನ ನಡವಳಿಕೆ ಅಪ್ಪನಿಗೆ ಸರಿ ಅನ್ನಿಸಲಿಲ್ಲ. ಆದರೆ, ಕಾಲ ಮಿಂಚಿ­ಹೋಗಿತ್ತು. ಮುಂದೇನು ಮಾಡುವುದು ಎನ್ನುವ ಪ್ರಶ್ನೆ ತಲೆದೋರಿ­ದಾಗ ಬೆಳಕಿಂಡಿಯಂತೆ ಕಾಣಿಸಿದ್ದು ಮೈಸೂರಿನ ಮಹಾರಾಜಾ ಕಾಲೇಜು. ಅಲ್ಲಿನ ಕನ್ನಡ ಆನರ್ಸ್ ವಿಭಾಗಕ್ಕೆ ಜಿಎಸ್‌ಎಸ್ ಸೇರಿ­ಕೊಂಡರು. ಗುಮಾಸ್ತನಾಗಿದ್ದ ತರುಣನಲ್ಲಿ ಕಾವ್ಯದ ಬೀಜಗಳು ಮೊಳೆ­ಯಲು ಕಾರಣವಾದ ತಿರುವಿದು. ಉಳಿದುಕೊಳ್ಳಲಿಕ್ಕೆ ಗೆಳೆ­ಯರು ನೆರವು ನೀಡಿದರೆ, ಹೊಟ್ಟೆ ತುಂಬಿ­ಸಿ­ಕೊಳ್ಳಲು ಸುತ್ತೂರು ಮಠದ ಅನ್ನ­ದ ಪಾತ್ರೆಯಿತ್ತು. ಮಹಾರಾಜಾ ಕಾಲೇಜಿನ ಪರಿಸರದಲ್ಲಿ ಜಿಎಸ್‌ಎಸ್ ಅವರ ಕಾವ್ಯ­ಪ್ರೇಮಕ್ಕೆ ಸ್ಪಷ್ಟ ದಿಕ್ಕು ದೊರೆಯಿತು. ತ.ಸು. ಶಾಮರಾಯರು, ಎ.ಆರ್. ಕೃಷ್ಣ­ಶಾಸ್ತ್ರಿ ಹಾಗೂ ಕುವೆಂಪು ಅವರ ಶಿಷ್ಯ­ವಾತ್ಸಲ್ಯ ಜಿಎಸ್‌ಎಸ್ ಅವರನ್ನು ಪೊರೆ­ಯಿತು. ‘ಕಟ್ಟಿ ಹರಸಿದ್ದೀರಿ ಕನ್ನಡದ ಕಂಕಣ­ವನ್ನು ಕೈಗೆ’ ಎನ್ನುವುದು ಗುರು­ಗಳ ವಾತ್ಸಲ್ಯದ ಬಗ್ಗೆ ಶಿಷ್ಯನ ಮಾತು.

ಹಾಗೆ ನೋಡಿದರೆ, ಹೈಸ್ಕೂಲು ದಿನ­ಗಳಲ್ಲೇ ಶಿವರುದ್ರಪ್ಪನವರು ಕಾವ್ಯದ ಹಾಗೂ ಕುವೆಂಪು ಅವರ ಸೆಳೆತಕ್ಕೊಳ­ಗಾಗಿದ್ದರು. ಗಣಿತದ ಮೇಷ್ಟ್ರು ರೇವಣ್ಣ ತರಗತಿಗಳಲ್ಲಿ ಲೆಕ್ಕಕ್ಕಿಂತಲೂ ಮಿಗಿಲಾಗಿ ಕುವೆಂಪು ಕವಿತೆಗಳನ್ನು ಹೇಳಿಕೊಡು­ತ್ತಿದ್ದರು. ‘ರಕ್ತಾಕ್ಷಿ’ ನಾಟಕವನ್ನು ಓದಿ ಹೇಳುತ್ತಿದ್ದರು. ಸಿದ್ಧಗಂಗೆಗೆ ಹೋಗುವ ವೇಳೆಗೆ ಜಿಎಸ್ಸೆಸ್ ಸಾಕಷ್ಟು ಕವಿತೆ ಬರೆದಿದ್ದರು. ಶಾಲಾದಿನಗಳಲ್ಲಿ ಆರಂಭ­ವಾದ ಈ ‘ಕುವೆಂಪು ನಂಟು’ ಜೀವನ­ದುದ್ದಕ್ಕೂ ಅವರಿಗೆ ಬದುಕಿನ ದ್ರವ್ಯವಾಗಿ ಒದಗಿ­ಬಂತು. ಗುರುಗಳು ಅಲಂಕರಿಸಿದ್ದ ’ರಾಷ್ಟ್ರಕವಿ’ ಗೌರವ ಜಿಎಸ್ಸೆಸ್ ಅವ­ರಿಗೂ ಒಲಿ­ಯಿತು (ಗೋವಿಂದ ಪೈ ‘ರಾಷ್ಟ್ರ­ಕವಿ’ ಗೌರವಕ್ಕೆ ಪಾತ್ರರಾದ ಮತ್ತೊಬ್ಬರು).

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬಿ.ಎ. ಆನರ್ಸ್ (೧೯೪೯) ಹಾಗೂ ಎಂ.ಎ. (೧೯೫೩) ಪದವಿಯನ್ನು ಅತ್ಯು­ತ್ತಮ ದರ್ಜೆ­ಯೊಂದಿಗೆ ತೇರ್ಗಡೆ ಹೊಂದಿ ಮೂರು ಚಿನ್ನದ ಪದಕಗಳನ್ನು ಪಡೆ­ದರು. ೧೯೬೫ರಲ್ಲಿ ಕುವೆಂಪು ಮಾರ್ಗ­ದರ್ಶನದಲ್ಲಿ ಜಿಎಸ್ಸೆಸ್‌ ಬರೆದ ‘ಸೌಂದರ್ಯ ಸಮೀಕ್ಷೆ’ ಗ್ರಂಥಕ್ಕೆ ಪಿಎಚ್.ಡಿ ಪದವಿ ದೊರೆಯಿತು. ಇದು ಕನ್ನಡದ ಅತ್ಯು­ತ್ತಮ ಪ್ರೌಢ ಪ್ರಬಂಧಗಳ­ಲ್ಲೊಂದು. ಮೈಸೂರು ವಿಶ್ವವಿದ್ಯಾಲಯ­ದಲ್ಲೇ ಕನ್ನಡ ಅಧ್ಯಾಪಕ ವೃತ್ತಿಯನ್ನು ಆರಂಭಿ­ಸಿದ (೧೯೪೯) ಅವರು, ಹೈದರಾ­ಬಾದಿನ ಉಸ್ಮಾನಿಯಾ ವಿಶ್ವ­ವಿದ್ಯಾಲ­­ಯದ ಕನ್ನಡ ವಿಭಾಗದ ಮುಖ್ಯಸ್ಥ­ರಾಗಿಯೂ (೧೯೬೩–-೧೯೬೬) ಸೇವೆ ಸಲ್ಲಿಸಿದರು.

ಮೈಸೂರು ಶಿವರುದ್ರಪ್ಪನವರ ಸಾಂಸ್ಕೃ­­ತಿಕ ವ್ಯಕ್ತಿತ್ವವನ್ನು ಹದ­ಗೊಳಿಸಿದ ಊರು. ಅಲ್ಲಿ ತಮ್ಮನ್ನು ಪ್ರಭಾವಿಸಿದ ಸಾಹಿತ್ಯಿಕ- ಸಾಂಸ್ಕೃತಿಕ ಪರಿಸರವನ್ನು ಬೆಂಗಳೂರಿನಲ್ಲಿ ರೂಪಿಸಲು ಪ್ರಯತ್ನಿ­ಸಿದ ಅವರು, ಆ ಕೆಲಸದಲ್ಲಿ ಸಾಕಷ್ಟು ಯಶಸ್ವಿಯೂ ಆದರು. ಬೆಂಗಳೂರು ವಿಶ್ವ­ವಿದ್ಯಾಲಯ ಅವರ ಕ್ರಿಯಾಶೀಲತೆಗೆ ವೇದಿಕೆಯಾಗಿ ಒದಗಿತು. ಪ್ರಾಧ್ಯಾಪಕರಾಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅವರು ಮಾಡಿದ ಕನ್ನಡ ಕಟ್ಟುವ ಕೆಲಸ (೧೯೬೬ – -೧೯೮೭) ಬೆಲೆ ಬಾಳು­ವಂತಹದ್ದು.

ಘಟಾನುಘಟಿ ಶಿಷ್ಯರು: ಕನ್ನಡ ಮೇಷ್ಟ್ರು ಪರಂಪರೆಯ ಪ್ರಾತಃ­ಸ್ಮರಣೀ­ಯರನ್ನು ಗುರುಗಳಾಗಿ ಹೊಂದಿದ್ದ ಜಿಎಸ್ಸೆಸ್ ಸ್ವತಃ ಒಬ್ಬ ಅತ್ಯು­ತ್ತಮ ಮೇಷ್ಟ್ರಾಗಿದ್ದರು.ಲಂಕೇಶ್, ತೇಜಸ್ವಿ, ಡಿ.ಆರ್. ನಾಗರಾಜ್ ಅವರಂಥ ಘಟಾನುಘ­ಟಿಗಳು ಅವರ ಶಿಷ್ಯರು.ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಈ ಮೇಷ್ಟ್ರು ಮಾಡಿದ ಕೆಲಸ ಗುರುತರ­ವಾದುದು. ಆ ಅವಧಿಯಲ್ಲಿ ಅವರು ಪ್ರಕಟಿಸಿದ ‘ಸಾಲುದೀಪಗಳು’ ಕೃತಿ ಆಧುನಿಕ ಕನ್ನಡ ಲೇಖಕರ ಕುರಿತಂತೆ ಇಂದಿಗೂ ಪ್ರಮುಖ ಆಕರ ಕೃತಿ.

ಕುಟುಂಬ ವತ್ಸಲ: ಸ್ವಭಾವತಃ ಮಿತಭಾಷಿಯೂ ಅಂತರ್ಮುಖಿಯೂ ಆದ ಜಿಎಸ್ಸೆಸ್‌ ಅವರದು ಇಬ್ಬರು ಹೆಂಡಿರ ಕುಟುಂಬ. ಪದ್ಮಾವತಮ್ಮ ಹಾಗೂ ಜಿ.ಎಸ್‌. ರುದ್ರಾಣಿ ಅವರ ಸಂಗಾತಿಗಳು. ಚಾಮರಾಜ­ನಗರದಲ್ಲಿ ಬೀದಿ ಮಕ್ಕಳಿಗಾಗಿ ಆಶ್ರಮವನ್ನು ತೆರೆದಿರುವ ಜಯದೇವ್‌, ವೈದ್ಯರಾದ ಡಾ. ಪ್ರಸಾದ್‌, ಜಿಎಸ್ಸೆಸ್‌ ಅವರ ಪುತ್ರರು. ಜಯಂತಿ ಅವರ ಪುತ್ರಿ.

ಗೇಯತೆ-, ಗಟ್ಟಿತನದ ಕಾವ್ಯ: ಕನ್ನಡ ಸಾಹಿತ್ಯ ಪ್ರಪಂಚ ಅನೇಕ ಅತ್ಯು­ತ್ತಮ ಕವಿಗಳನ್ನು ಕಂಡಿದೆ. ಆದರೆ, ಕಾವ್ಯರಚನೆಯ ಜೊತೆಗೆ ತನ್ನದೇ ಆದ ಕಾವ್ಯ­ಮೀಮಾಂಸೆಯೊಂದನ್ನು ರೂಪಿಸಿ­ಕೊಂಡ ಕವಿಗಳು ಬೆರಳೆಣಿಕೆಯನ್ನು ಮೀರಲಾರರು. ಅಂಥ ಅಪರೂಪದ ಕವಿಗಳ ಸಾಲಿಗೆ ಸೇರಿದ ಜಿಎಸ್ಸೆಸ್, ಕಾವ್ಯವನ್ನು ವ್ರತದಂತೆ ಭಾವಿಸಿದವರು.

ಕುವೆಂಪು, ಬೇಂದ್ರೆ, ನರಸಿಂಹಸ್ವಾಮಿ, ಅಡಿಗ, ಗೋಕಾಕ್ ಸೇರಿದಂತೆ ಅನೇಕ ಘಟಾನುಘಟಿಗಳು ಕಾವ್ಯ ರಚಿಸುತ್ತಿದ್ದ ಕಾಲದಲ್ಲಿ, ಎಲ್ಲ ಪಂಥ-ಪರಂಪರೆಗಳ ಉತ್ತಮ ಅಂಶಗಳನ್ನು ತಮ್ಮದಾಗಿಸಿ­ಕೊಂಡು ತಮ್ಮದೇ ಆದ ಕಾವ್ಯಶೈಲಿಯೊಂದನ್ನು ರೂಪಿಸಿಕೊಂಡ ಅಗ್ಗಳಿಕೆ ಅವರದು. ‘ಎಲ್ಲ ಗ್ರಹಿಕೆಗಳನ್ನು ಮೀರಿ ಬರೆದಾಗಲೇ ಉತ್ತಮ ಕಾವ್ಯ ಸೃಷ್ಟಿಯಾಗಲು ಸಾಧ್ಯ. ಕವಿ ಬದ್ಧನಾಗಿರಬೇಕಾದದ್ದು ಕಾವ್ಯಕ್ಕೇ ಹೊರತು, ಪಂಥಕ್ಕಲ್ಲ’ ಎನ್ನುವುದು ಅವರ ಸ್ಪಷ್ಟ ನಿಲುವಾಗಿತ್ತು.

‘ನೋಡು ಇದೋ ಇಲ್ಲರಳಿ ನಗುತಿದೆ ಏಳು ಸುತ್ತಿನ ಮಲ್ಲಿಗೆ’ ಎನ್ನುವ ಕವಿತೆ ಬರೆದ ಅವರಿಗೆ, ‘ಮುಂಬೈ ಜಾತಕ’, ‘ಸಂಜೆ ದಾರಿ’, ‘ನಿರ್ಧಾರ’ಗಳಂಥ ಕವಿತೆ ಬರೆಯುವುದೂ ಸಾಧ್ಯವಾಯಿತು; ಎಲ್ಲೋ ಮಗು ಅಳುತಾ ಇರುವುದನ್ನು ಕೇಳಿಸಿಕೊಂಡ ಸಹೃದಯಿ ಅವರು. ಗೇಯತೆ ಹಾಗೂ ಗಟ್ಟಿತನದ ಮಿಳಿತ ಅವರ ಕಾವ್ಯ. ಆ ಕಾರಣದಿಂದಾಗಿಯೇ ಅವರ ‘ಎದೆತುಂಬಿ ಹಾಡಿದೆನು’, ‘ಎಲ್ಲೋ ಹುಡುಕಿದೆ’, ‘ಹಾಡು ಹಳೆಯದಾದರೇನು’, ‘ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ’ ಮುಂತಾದ ಅನೇಕ ಕವಿತೆಗಳು ಜನಪದ ಗೀತೆಗಳಂತೆ ನಾಲಗೆಗಳಲ್ಲಿ ಬದುಕುತ್ತಾ ಬಂದಿವೆ.

ಜಿಎಸ್ಸೆಸ್ ಅವರ ‘ಕಾವ್ಯಾರ್ಥ ಚಿಂತನ’ (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ) ಹಾಗೂ ‘ವಿಮರ್ಶೆಯ ಪೂರ್ವ ಪಶ್ಚಿಮ’ ಕೃತಿಗಳು ವಿಮರ್ಶಾ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡಿದ ಕೃತಿಗಳೆಂದೇ ಹೆಸರಾಗಿವೆ. ‘ಮಾಸ್ಕೋದಲ್ಲಿ ೨೨ ದಿನ’ (ಸೋವಿಯತ್ ಲ್ಯಾಂಡ್ ಪ್ರಶಸ್ತಿ ವಿಜೇತ) ಕೃತಿ ಪ್ರವಾಸ ಸಾಹಿತ್ಯ ಕೃತಿಗಳಿಗೆ ಮಾದರಿಯಾಗಿದೆ. ‘ಕರ್ಮಯೋಗಿ’ ಎನ್ನುವ ಕಾದಂಬರಿ­ಯನ್ನೂ ಬರೆದಿರುವ ಅವರ ಪ್ರಮುಖ ಕವನ ಸಂಕಲನಗಳಲ್ಲಿ ‘ಸಾಮಗಾನ’, ’ಚೆಲುವು ಒಲವು’, ’ಗೋಡೆ’, ’ವ್ಯಕ್ತಮಧ್ಯ’ ಸೇರಿವೆ. ಅವರ ಸಮಗ್ರಕಾವ್ಯ ಹಲವು ಮುದ್ರಣಗಳನ್ನು ಕಂಡಿದೆ.

ಜಿಎಸ್ಸೆಸ್ ಅವರ ಪಾಲಿಗೆ ಬರಹ ಆ ಕ್ಷಣದ ತುರ್ತು ಮಾತ್ರವಾಗಿರಲಿಲ್ಲ; ಅದೊಂದು ಅನ್ವೇಷಣೆ, ಆತ್ಮ ನಿರೀಕ್ಷಣೆ ಹಾಗೂ ಆತ್ಮ ಸಂತೋಷದ ಸಾಧನೆ. ಅವರ ಬರಹ ಮತ್ತು ಬದುಕಿನ ನಡುವೆ ಹೆಚ್ಚಿನ ಅಂತರ ಇರಲಿಲ್ಲ. ಲೋಕದ ಚಿಂತೆಗಳನ್ನು ಹಚ್ಚಿಕೊಂಡ ಸೃಜನಶೀಲ ವ್ಯಕ್ತಿಗೆ ಯಾವುದೋ ಒಂದು ಸಂದರ್ಭದಲ್ಲಿ ‘ಇದೆಲ್ಲ ತಲೆಭಾರ’ ಎಂದು ಅನ್ನಿಸುವುದು ಅಸಹಜವೇನೂ ಅಲ್ಲ. ಒಮ್ಮೆ ಶಿವರುದ್ರಪ್ಪನವರು- ‘ನನ್ನ ಬದುಕು ತುಂಬ ಭಾರವಾಗಿದೆ. ನಾನು ಇಷ್ಟೆಲ್ಲ ಹಚ್ಚಿಕೊಳ್ಳಬಾರದಿತ್ತು’ ಎಂದು ಲಂಕೇಶರಿಗೆ ಹೇಳಿದರಂತೆ. ಇದಕ್ಕೆ ಲಂಕೇಶರು ನೀಡಿದ ಉತ್ತರ- ‘ನೀವು ವ್ಯಥೆ ಪಡಬೇಕಾದ್ದು ಏನೂ ಇಲ್ಲ. ನೀವು ಮಾಡಿದ್ದು ಸರಿ’. ಕುವೆಂಪು ಅವರಂಥ ಗುರುಗಳಿಂದ ಬದುಕಿನ ದಾರಿಗಳ ಕೀಲಿಕೈಗಳನ್ನು ಪಡೆದವರು ವ್ಯಥೆ ಪಡುವಂತಹದ್ದನ್ನು ಏನು ತಾನೇ ಮಾಡಲು ಸಾಧ್ಯ.
ಕನ್ನಡದ ಸಮಾಜಕ್ಕೆ ಕವಿಗಳ ಬಗ್ಗೆ ತುಂಬಾ ಗೌರವ. ಬರವಣಿಗೆ ಮತ್ತು ವ್ಯಕ್ತಿತ್ವದಿಂದ ಕನ್ನಡದ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ಕವಿಗಳ ಸಾಲಿಗೆ ಜಿಎಸ್ಸೆಸ್‌ ಕೂಡ ಸೇರುತ್ತಾರೆ. ಬಹುಶಃ ಕನ್ನಡ ಸಮುದಾಯವನ್ನು ಬಹು ದೊಡ್ಡ ಪ್ರಮಾಣದಲ್ಲಿ ಪ್ರಭಾವಿಸಿದ ಹಾಗೂ ಜನರ ಪ್ರೀತಿಗೆ ಪಾತ್ರವಾದ ಕೊನೆಯ ದಂತಕಥೆ ಶಿವರುದ್ರಪ್ಪನವರೇ ಇರಬೇಕು. ಕನ್ನಡ ಕಾವ್ಯಲೋಕದಲ್ಲಿನ್ನು ತಾರೆಗಳಿಲ್ಲ.
ಹಣತೆ ಶಿವರುದ್ರಪ್ಪನವರಿಗೆ ತುಂಬಾ ಇಷ್ಟವಾದ ರೂಪಕ. ‘ಹಣತೆ ಹಚ್ಚುತ್ತೇನೆ ನಾನೂ / ಈ ಕತ್ತಲನ್ನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ’ ಎಂದ ಅವರಿಗೆ ಹಣತೆ ಬೆಳಗುವ ಮೂಲಕ ಕತ್ತಲೆಯನ್ನು ದಾಟುವ ಭ್ರಮೆಯೇನೂ ಇರಲಿಲ್ಲ. ‘ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು / ನೋಡಬಹುದೆಂಬ ಒಂದೇ ಒಂದು ಆಸೆಯಿಂದ’ ಎನ್ನುವ ಆಶಯ ಅವರದು.
ಈಗ ಹಣತೆ ಆರಿದೆ. ಬೆಳಕು ಉಳಿದಿದೆ. ಜಿಎಸ್ಸೆಸ್ ಅವರ ಬದುಕು ಹಾಗೂ ಸಾಹಿತ್ಯದ ಬೆಳಕಿಗೆ ಕೊನೆಯಾದರೂ ಎಲ್ಲಿ? 

‘ಚೈತ್ರ’ದಲ್ಲಿ ವಿಧಿವಶ
ಬೆಂಗಳೂರು: ‘ಹಣತೆ’ ಕವಿಯೆಂದೇ ಪ್ರಸಿದ್ಧರಾಗಿ­ರುವ ರಾಷ್ಟ್ರಕವಿ ಡಾ.ಜಿ.ಎಸ್‌.­ಶಿವರುದ್ರಪ್ಪ ಅವರು ಮೂತ್ರಪಿಂಡ ವೈಫಲ್ಯದಿಂದ ಸೋಮವಾರ ಮಧ್ಯಾಹ್ನ 12.10ಕ್ಕೆ ನಗರದ ಬನಶಂಕರಿ­ಯಲ್ಲಿರುವ ಸ್ವಗೃಹ ‘ಚೈತ್ರ’ದಲ್ಲಿ ವಿಧಿವಶರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಅವರಿಗೆ ಪತ್ನಿಯರಾದ ರುದ್ರಾಣಿ ಮತ್ತು ಪದ್ಮಾವತಮ್ಮ, ಪುತ್ರರಾದ ಪ್ರೊ. ಜಿ. ಎಸ್‌.ಜಯದೇವ, ಡಾ. ಶಿವಪ್ರಸಾದ್‌, ಪುತ್ರಿ ಜಯಂತಿ ಇದ್ದಾರೆ.

ಅವರು ಸುಮಾರು ಒಂದೂವರೆ ವರ್ಷದಿಂದ ಅನಾರೋಗ್ಯ ಪೀಡಿತರಾ­ಗಿದ್ದರು. ಎರಡು ಬಾರಿ ನಗರದ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಜಿ.ಎಸ್.ಎಸ್‌. ಅವರ ವಿನಂತಿ ಮೇರೆಗೆ ಮೂರು ತಿಂಗಳ ಹಿಂದೆ ಆಸ್ಪತ್ರೆಯಿಂದ ಮನೆಗೆ ಕರೆದು­ಕೊಂಡು ಬಂದು ಚಿಕಿತ್ಸೆ ಮುಂದುವರಿಸಲಾಗಿತ್ತು. ಎರಡು ತಿಂಗಳ ಹಿಂದೆ ಅವರು ಮಾತು ನಿಲ್ಲಿಸಿದ್ದರು. ಜನರ ಗುರುತೂ ಸಿಗುತ್ತಿರಲಿಲ್ಲ. ಇಬ್ಬರು ಸಹಾಯಕರ ನೆರವು ಪಡೆದು ಕುಟುಂಬ ಸದಸ್ಯರು ಜಿ.ಎಸ್‌.ಎಸ್‌ ಅವರ ಆರೈಕೆ ಮಾಡುತ್ತಿದ್ದರು. ನಳಿಕೆ ಮೂಲಕ ಅವರಿಗೆ ಆಹಾರ ನೀಡಲಾಗುತ್ತಿತ್ತು.ಡಿಸೆಂಬರ್‌ 2ರಂದು ‘ನೆನಪಿನಂಗಳ­ದಲ್ಲಿ – ಡಾ.ಜಿ.ಎಸ್. ಶಿವರುದ್ರಪ್ಪ­ನವರ ಬದುಕು–ಬರಹಗಳ ಅನುಶೀಲನ’ ಗ್ರಂಥದ ಬಿಡುಗಡೆ ಜಿ.ಎಸ್‌.ಎಸ್‌ ಅವರ ಮನೆಯಲ್ಲಿ ಆಗಿತ್ತು. ಸಮಾರಂಭದಲ್ಲಿ  ಶಿವಮೊಗ್ಗ ಸುಬ್ಬಣ್ಣ ಅವರು ರಸಋಷಿ ಕುವೆಂಪು ಅವರ ‘ಆನಂದಮಯ ಈ ಜಗಹೃದಯ’ ಗೀತೆಯನ್ನು  ಹಾಡುತ್ತಿ­ದ್ದಾಗ ಜಿ.ಎಸ್.ಎಸ್. ಮಲಗಿದಲ್ಲೇ  ಅರೆಗಣ್ಣು ತೆರೆದು, ನಸುನಕ್ಕಿದ್ದರು.

ಅವರ ಪಾರ್ಥಿವ ಶರೀರವನ್ನು ಸೋಮವಾರ ಸಂಜೆಯವರೆಗೆ ಮನೆಯಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇಡಲಾಗಿತ್ತು. ಅವರ ಪುತ್ರ ಡಾ.ಶಿವ­ಪ್ರಸಾದ್‌ ಇಂಗ್ಲೆಂಡಿನ ಬರ್ಮಿಂಗ್‌­ಹ್ಯಾಂನಲ್ಲಿ ನೆಲೆಸಿದ್ದು, ಬುಧವಾರ ಬೆಳಿಗ್ಗೆ ನಗರ ತಲುಪುವ ನಿರೀಕ್ಷೆ ಇದೆ. ಹೀಗಾಗಿ ಪಾರ್ಥಿವ ಶರೀರವನ್ನು ಸಂಜೆ ವೇಳೆಗೆ ಕಿಮ್ಸ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಗುರುವಾರ ಸಾರ್ವಜನಿಕ ದರ್ಶನ: ‘ಎರಡು ದಿನಗಳ ಕಾಲ ಆಸ್ಪತ್ರೆಯ ಶೈತ್ಯಾಗಾರದಲ್ಲಿ ಪಾರ್ಥಿವ ಶರೀರವನ್ನು ಇಡಲಾಗುವುದು. ಗುರುವಾರ ಬೆಳಿಗ್ಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಾಲ್ಕು ಗಂಟೆಗಳ ಕಾಲ ಸಾರ್ವಜನಿಕ ವೀಕ್ಷಣೆಗೆ ಅನುವು ಮಾಡಿಕೊಡಲಾಗುವುದು. ಮಧ್ಯಾಹ್ನದ ಬಳಿಕ ಅಂತ್ಯಕ್ರಿಯೆ ನಡೆಯಲಿದೆ’ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಗಣ್ಯರ ಭೇಟಿ: ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಕೆ.ಜೆ.ಜಾರ್ಜ್‌, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಕಾನೂನು ಸಚಿವ ಟಿ.ಬಿ.ಜಯಚಂದ್ರ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು, ಮಾಜಿ ಸಚಿವರಾದ ಬಸವರಾಜ ಬೊಮ್ಮಾಯಿ, ರಾಮ­ಚಂದ್ರೇ­ಗೌಡ ಮತ್ತಿತರರು ಅಂತಿಮ ದರ್ಶನ ಪಡೆದರು.

ಸಾಹಿತಿಗಳಾದ ಡಾ.ಚಂದ್ರಶೇಖರ ಕಂಬಾರ, ಚಿದಾನಂದ ಮೂರ್ತಿ, ಪ್ರೊ.ಎಂ.ಎಚ್.ಕೃಷ್ಣಯ್ಯ, ಸಿದ್ದಲಿಂಗಯ್ಯ, ಬರಗೂರು ರಾಮಚಂದ್ರಪ್ಪ, ಎಚ್‌.ಎಸ್‌.ವೆಂಕಟೇಶಮೂರ್ತಿ, ಬಿ.­ಆರ್‌.ಲಕ್ಷ್ಮಣ ರಾವ್‌, ನರಹಳ್ಳಿ ಬಾಲಸುಬ್ರಹ್ಮಣ್ಯ, ಅ.ರಾ.ಮಿತ್ರ. ಜಯಂತ ಕಾಯ್ಕಿಣಿ, ಪ್ರೊ.ಜಿ.ಕೆ.­ಗೋವಿಂದ ರಾವ್‌, ಪ್ರೊ.ಸಿ.ವೀರಣ್ಣ, ಕವಿ ಸಿದ್ದಲಿಂಗಯ್ಯ, ಬೆಂಗಳೂರು ವಿವಿ ಕುಲಪತಿ ಪ್ರೊ.ತಿಮ್ಮೇಗೌಡ, ರಂಗಕರ್ಮಿಗಳಾದ ಮಾಸ್ಟರ್‌ ಹಿರಣ್ಣಯ್ಯ, ಶ್ರೀನಿವಾಸ ಕಪ್ಪಣ್ಣ, ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ನಲ್ಲೂರು ಪ್ರಸಾದ್‌, ಗಾಯಕ ವೈ.ಕೆ.ಮುದ್ದುಕೃಷ್ಣ ಮತ್ತಿತರ ಗಣ್ಯರು ಅಂತಿಮ ದರ್ಶನ ಪಡೆದರು.

ಅಗ್ನಿಸಂಸ್ಕಾರ: ಜಿಎಸ್‌ಎಸ್‌ ಆಶಯ
‘ನಾನು ಯಾವುದೇ ಜಾತಿಗೆ ಸೇರಿದ­ವನಲ್ಲ. ನಾನು ಕರ್ನಾಟಕಕ್ಕೆ ಸೇರಿ­ದವನು. ಅಂತ್ಯಕ್ರಿಯೆಯ ವೇಳೆಗೆ ಯಾವುದೇ ಧಾರ್ಮಿಕ ಸಂಪ್ರದಾಯ­ಗಳನ್ನು ಅನುಸರಿಸ­ಬಾರದು. ನನ್ನನ್ನು ಸುಡಬೇಕು. ಬಳಿಕ ಒಂದು ಹಿಡಿ ಬೂದಿಯನ್ನು ಕಾವೇರಿ ನದಿಗೆ ಹಾಕಬೇಕು’
–ತಮ್ಮ ಅಂತ್ಯಸಂಸ್ಕಾರ ಯಾವ ರೀತಿಯಲ್ಲಿ ನಡೆಸಬೇಕು ಎಂಬುದರ ಬಗ್ಗೆ ಜಿ.ಎಸ್‌.ಎಸ್‌ ಅವರು ಬರೆದಿರುವ ಪತ್ರದ ಸಾರ ಇದು. ಅಲ್ಲದೆ ಪುತ್ರ ಜಿ.ಎಸ್‌.ಜಯದೇವ ಅವರಿಗೆ ಈ ಬಗ್ಗೆ ಸೂಚನೆಯನ್ನೂ ನೀಡಿದ್ದರು. ಈ ಪತ್ರವನ್ನು ಅವರು ಕೆಲವು ವರ್ಷಗಳ ಹಿಂದೆಯೇ ಬರೆದು ಇಟ್ಟಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

‘ಕುವೆಂಪು ಅಂತ್ಯಸಂಸ್ಕಾರ ನಡೆದ ಕವಿಶೈಲ ಈಗ ಪ್ರಖ್ಯಾತ ಸ್ಥಳ ಆಗಿದೆ. ಅದೇ ಮಾದರಿಯಲ್ಲೇ ಜಿ.ಎಸ್‌.ಎಸ್‌ ಅವರ ಅಂತ್ಯಸಂಸ್ಕಾರವನ್ನು ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮದಲ್ಲಿ ನಡೆಸಿ ಅಭಿವೃದ್ಧಿಪಡಿಸಬೇಕು ಎಂದು ಜಿ.ಎಸ್‌.ಎಸ್‌ ಟ್ರಸ್ಟ್‌ ವತಿಯಿಂದ ಸುಮಾರು ಎರಡು ತಿಂಗಳ ಹಿಂದೆ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು’ ಎಂದು ರಂಗಕರ್ಮಿ ಶ್ರೀನಿವಾಸ ಕಪ್ಪಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಸಂಬಂಧ ಎರಡು ತಿಂಗಳ ಹಿಂದೆ ಮುಖ್ಯಮಂತ್ರಿ ಅವರ ಕಚೇರಿಯಿಂದ  ವಿಶ್ವವಿದ್ಯಾಲಯಕ್ಕೆ ಕರೆ ಬಂದಿತ್ತು. ವಿ.ವಿ.ಯ ಸಹೋದ್ಯೋಗಿಗಳೊಂದಿಗೆ ಸಮಾಲೋಚಿಸಿ ಕಲಾಗ್ರಾಮದಲ್ಲಿ ಅಂತ್ಯಸಂಸ್ಕಾರಕ್ಕೆ ಒಪ್ಪಿಗೆ ನೀಡಲಾಗಿದೆ. ಕಲಾಗ್ರಾಮದಲ್ಲಿ 20 ಎಕರೆ ಜಾಗವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಗುತ್ತಿಗೆ ಮೇಲೆ ನೀಡಲಾಗಿದೆ. ಅಲ್ಲಿ ಒಂದು ಎಕರೆ ಜಾಗದಲ್ಲಿ ಸ್ಮಾರಕ ನಿರ್ಮಿಸ­ಬಹುದು. ಈ ಬಗ್ಗೆ ಮುಖ್ಯಮಂತ್ರಿ ಅವರು ಸೋಮವಾರ ನನ್ನನ್ನು ಕರೆಸಿ ಅಭಿಪ್ರಾಯ ಪಡೆದಿದ್ದಾರೆ’  ಎಂದು ಬೆಂಗಳೂರು ವಿವಿ ಕುಲಪತಿ ಪ್ರೊ.ಬಿ.ತಿಮ್ಮೇಗೌಡ ತಿಳಿಸಿದರು.

‘ಸರ್ಕಾರಿ ಗೌರವದೊಂದಿಗೆ ಅಂತ್ಯ­ಕ್ರಿಯೆ ನಡೆಸಲಾಗುವುದು. ಅಂತ್ಯಕ್ರಿಯೆ ಯಾವ ರೀತಿ ನಡೆಸಬೇಕು ಎಂಬ ಕುರಿತು ಕುಟುಂಬ ಸದಸ್ಯರ ಜತೆಗೆ ಚರ್ಚಿಸ­ಲಾಗಿದೆ. ಭವಿಷ್ಯದಲ್ಲಿ ಯಾವುದೇ ರೀತಿಯ ವಿವಾದ ಸೃಷ್ಟಿಯಾಗಬಾರದು ಎಂದು ಕುಟುಂಬ ಸದಸ್ಯರು ಮನವಿ ಮಾಡಿಕೊಂಡಿದ್ದಾರೆ. ಜ್ಞಾನಭಾರತಿ ಅಥವಾ ಕಲಾಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು. ಅವರ ನೆನಪಿನಲ್ಲಿ ಸ್ಮಾರಕ ನಿರ್ಮಿಸುವ ಚಿಂತನೆ ಇದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT