ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣದ ಹೊಳೆಯೊಂದಿಗೆ ಹರಿಯುತ್ತಿದೆ ಕೊಳೆ...

Last Updated 27 ಮೇ 2012, 19:30 IST
ಅಕ್ಷರ ಗಾತ್ರ

ಮ್ಯಾಚ್ ಫಿಕ್ಸಿಂಗ್ ಅಥವಾ ಅದರ ಕಿರು ರೂಪ ಎನಿಸಿರುವ `ಸ್ಪಾಟ್ ಫಿಕ್ಸಿಂಗ್~ನಲ್ಲಿ ಕೇವಲ ಆಟಗಾರರು ಮಾತ್ರ ಭಾಗಿಯಾಗಿದ್ದಾರೆ ಎಂಬುದನ್ನು ನಂಬುವುದು ಕಷ್ಟ.

ಗುಜರಾತ್‌ನಲ್ಲಿ ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸಿರುವುದರಿಂದ ಅಲ್ಲಿನ ಜನರು ಕುಡಿತವನ್ನೇ ನಿಲ್ಲಿಸಿದ್ದಾರೆ ಎನ್ನುವಂತಿಲ್ಲ. ಕದ್ದುಮುಚ್ಚಿ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಮದ್ಯದ ಮಾರಾಟದಿಂದ ರಾಜ್ಯದ ಬೊಕ್ಕಸಕ್ಕೆ ಸೇರಬೇಕಿದ್ದ ವರಮಾನ ಎಲ್ಲೋ ಹೋಗುತ್ತದೆ. ಅಕ್ರಮ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ.

ಭಾರತದಲ್ಲಿ ಜೂಜಾಟವನ್ನು ನಿಷೇಧಿಸಲಾಗಿದೆ. ಅಂದರೆ ಜನರು ಬೆಟ್ಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದರ್ಥವೇ? ಇಲ್ಲಿ ಬೆಟ್ಟಿಂಗ್ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಜೂಜಾಟದಲ್ಲಿ ಸಂಗ್ರಹವಾದ ಹಣ ಮಾತ್ರ ಅಕ್ರಮವಾದದ್ದು. ಈ ಹಣ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ.

ಭಾರತದ ಕ್ರಿಕೆಟ್‌ನ ಆಡಳಿತ ವ್ಯವಸ್ಥೆಯನ್ನೊಮ್ಮೆ ನೋಡಿ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನಲ್ಲಿರುವ ಭಾರಿ ಸಂಪತ್ತನ್ನು ಎಲ್ಲ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳ ಜೊತೆ ಹಂಚಿಕೊಳ್ಳುತ್ತದೆ. ಆದರೆ ರಾಜ್ಯ ಕ್ರಿಕೆಟ್ ಸಂಸ್ಥೆಗಳು ವೃತ್ತಿಪರ ರೀತಿಯಲ್ಲಿ ಕಾರ್ಯನಿರ್ವಹಿಸುವುದು ವಿರಳ. ಅಲ್ಲಿ ಪಾರದರ್ಶಕತೆ ಎಂಬುದು ಮಾಯವಾಗಿದೆ.

ರಾಜ್ಯ ಕ್ರಿಕೆಟ್ ಸಂಸ್ಥೆಗಳ ಅಧಿಕಾರಿಗಳು ಆಟಗಾರರ ಹಣದಿಂದ ಮೋಜಿನ ಜೀವನ ನಡೆಸುತ್ತಿದ್ದಾರೆ. ಆಟಗಾರರ ಹಣ ಕಸಿದುಕೊಳ್ಳುವ ವ್ಯವಸ್ಥಿತ ಪದ್ಧತಿಯೊಂದು ಹೆಚ್ಚಿನ ರಾಜ್ಯ ಸಂಸ್ಥೆಗಳಲ್ಲಿ ಜಾರಿಯಲ್ಲಿದೆ. ಆಯ್ಕೆ ಸಮಿತಿ ಸದಸ್ಯರು ತಮ್ಮದೇ ಅಕಾಡೆಮಿಗಳನ್ನು ನಡೆಸುತ್ತಾ, ಭಾರಿ ಶುಲ್ಕ ವಿಧಿಸುತ್ತಾರೆ.

ಮತ್ತೆ ಕೆಲವು ಅಧಿಕಾರಿಗಳು ಐಪಿಎಲ್ ಫ್ರಾಂಚೈಸಿಗಳಲ್ಲಿ ಕೆಲಸ ಕಂಡುಕೊಂಡಿದ್ದಾರೆ. ಬಿಸಿಸಿಐ ಅಧಿಕಾರಿಗಳು ಐಪಿಎಲ್ ತಂಡಗಳಲ್ಲಿ ಹಣ ಹೂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಕ್ರಿಕೆಟ್ ವ್ಯವಸ್ಥೆಯ ಮೇಲೆ ಐಪಿಎಲ್ ಭ್ರಷ್ಟಾಚಾರದ ಕರಿನೆರಳನ್ನು ಬೀರಿದೆ.

ಐಪಿಎಲ್ ಬಗ್ಗೆ ಚರ್ಚಿಸುವ ಮುನ್ನ ಭಾರತದ ಕ್ರಿಕೆಟ್‌ನಲ್ಲಿರುವ ಕೆಲವು ಸಾಮಾನ್ಯ ಸಮಸ್ಯೆಗಳನ್ನು ನಾನು ನಿಮ್ಮ ಮುಂದಿಡುವೆ.

ಒಂದು ರಾಜ್ಯ ಸಂಸ್ಥೆಗೆ ಸೇರಿದ ಆಟಗಾರನೊಬ್ಬ ಸಲಹೆ ಪಡೆಯುವ ಉದ್ದೇಶದಿಂದ ನನ್ನನ್ನು ಭೇಟಿಯಾಗಿದ್ದ. ರಣಜಿ ತಂಡದಲ್ಲಿ ಸ್ಥಾನ ಪಡೆದರೂ ಅಂತಿಮ ಇಲೆವೆನ್‌ನಲ್ಲಿ ಮಾತ್ರ ಆತನಿಗೆ ಅವಕಾಶ ಲಭಿಸುತ್ತಿರಲಿಲ್ಲ. ಭೇಟಿಯ ಸಂದರ್ಭ ಆತ ಒಂದು ಸತ್ಯವನ್ನು ಬಹಿರಂಗಪಡಿಸಿದ. ರಣಜಿ ಪ್ಲೇಟ್ ವಿಭಾಗದ ತಂಡವೊಂದು ಅಂತಿಮ ಇಲೆವೆನ್‌ನಲ್ಲಿ ಸ್ಥಾನ ನೀಡುವ ಮಾತುಕೊಟ್ಟಿದೆ. ಆದರೆ ಪಂದ್ಯ ಶುಲ್ಕದ ಶೇ 50 ರಷ್ಟು ಮೊತ್ತವನ್ನು ಸಂಸ್ಥೆಯ ಜೊತೆ ಹಂಚಿಕೊಳ್ಳಬೇಕು~ ಎಂದು ಆತ ನನ್ನಲ್ಲಿ ಹೇಳಿದ್ದ.

ನನಗೆ ಆಟಗಾರನ ಮೇಲೆ ಕನಿಕರ ಹುಟ್ಟಿತು. ಆತ ಪ್ರತಿನಿಧಿಸುವ ರಾಜ್ಯ ಸಂಸ್ಥೆಯ ಆಯ್ಕೆದಾರರು ಅಕಾಡೆಮಿಗಳ ಮೂಲಕ ಹಣ ಸಂಪಾದಿಸುವುದರಲ್ಲಿ ಬ್ಯುಸಿಯಾಗಿದ್ದು, ಆಯ್ಕೆಯ ಸಂದರ್ಭ ತಮ್ಮ ಪ್ರಭಾವ ಬೀರುವಷ್ಟರ ಮಟ್ಟಿಗೆ ಬೆಳೆದಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಆ ಆಟಗಾರ ಉತ್ತಮ ಪ್ರದರ್ಶನ ನೀಡಿದರೂ ಆಯ್ಕೆಯಾಗುವುದಾದರೂ ಹೇಗೆ ?

ಕೆಲವು ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳ ಆಯ್ಕೆ ಸಮಿತಿಯ ಅಧಿಕಾರಿಗಳು ಪ್ರತಿವರ್ಷ ಅಕ್ರಮವಾಗಿ ಕನಿಷ್ಠ 10 ಲಕ್ಷ ರೂ. `ಆದಾಯ~ ಪಡೆಯುವರು. ಆದರೆ ಬಿಸಿಸಿಐ ಮಾತ್ರ ತನ್ನ ವರಮಾನದ ಮೊತ್ತವನ್ನು ಎಲ್ಲ ರಾಜ್ಯ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುತ್ತಲೇ ಇದೆ. ಸಂಸ್ಥೆಗಳು ಕ್ರಿಕೆಟ್‌ಗಾಗಿ ಎಷ್ಟು ಖರ್ಚು ಮಾಡಿದೆ ಎಂಬುದನ್ನು ಅರಿತುಕೊಳ್ಳುವ ಪ್ರಯತ್ನ ನಡೆಸುವುದಿಲ್ಲ.

ಕ್ರಿಕೆಟ್‌ನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಮೂಲ ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಗಳ ಆಡಳಿತ ವ್ಯವಸ್ಥೆಯಲ್ಲೇ ಅಡಗಿದೆ. ಬಿಸಿಸಿಐ ಹಾಗೂ ಅದರ ನೋಂದಾಯಿತ ರಾಜ್ಯ ಸಂಸ್ಥೆಗಳು ವೃತ್ತಿಪರ ರೀತಿಯಲ್ಲಿ ರಚನೆಗೊಂಡಿಲ್ಲ. ಈ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದ ಕಾಲದಲ್ಲಿ ಕ್ರಿಕೆಟ್ ಜನಪ್ರಿಯತೆ ಪಡೆದಿರಲಿಲ್ಲ.

60ರ ದಶಕದ ಬಳಿಕ ಕ್ರಿಕೆಟ್ ಆಟಗಾರರಲ್ಲಿ ಅಲ್ಪ ವೃತ್ತಿಪರತೆ ಕಾಣತೊಡಗಿತು. 60 ಮತ್ತು 70ರ ದಶಕದಲ್ಲಿ ಬ್ಯಾಂಕ್ ಹಾಗೂ ಕೆಲವು ಖಾಸಗಿ ಕಂಪೆನಿಗಳು ಕ್ರಿಕೆಟಿಗರಿಗೆ ವಿವಿಧ ಹುದ್ದೆ ನೀಡತೊಡಗಿದವು. ಆ ಕಾಲದಲ್ಲಿ ಬ್ಯಾಂಕ್ ಅಥವಾ ರೈಲ್ವೆಯಲ್ಲಿ ನೌಕರಿ ದೊರೆಯುವುದು ಕ್ರಿಕೆಟ್ ಆಟಗಾರರಿಗೆ ಪ್ರತಿಷ್ಠೆಯ ವಿಷಯವಾಗಿತ್ತು.

ದೂರದರ್ಶನವು ಕ್ರಿಕೆಟ್ ಪಂದ್ಯಗಳ ಪ್ರಸಾರದ ಮೇಲೆ ಹೊಂದಿದ್ದ ಏಕಸ್ವಾಮ್ಯ ಮುರಿದುಬಿದ್ದ ಬಳಿಕ ಈ ಕ್ರೀಡೆಯತ್ತ ಹಣದ ಹೊಳೆಯೇ ಹರಿಯಲಾರಂಭಿಸಿತು. 2004 ರಲ್ಲಿ ಈ ಹರಿಯುವಿಕೆಯ ವೇಗ ಮತ್ತಷ್ಟು ಹೆಚ್ಚಿತು. ಐಪಿಎಲ್ ಜನ್ಮತಾಳಿದ ಬಳಿಕವಂತೂ ಇದು ತುತ್ತತುದಿ ತಲುಪಿತು. ಇದು ಕ್ರಿಕೆಟ್‌ನಲ್ಲಿ ಹೊಸ ಬದಲಾವಣೆಗೆ ಹಾದಿಯೊದಗಿಸುವ ಜೊತೆಗೆ ಭ್ರಷ್ಟಾಚಾರವನ್ನೂ ಪೋಷಿಸತೊಡಗಿತು.

ಹೆಚ್ಚಿನ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳು ಹಳೆಯ ಕಾಲದ ಕಾನೂನಿನ ಅಡಿಯಲ್ಲಿ ನೋಂದಾವಣೆಗೊಂಡಿವೆ. ಅಲ್ಲಿ ಬಿಗಿಯಾದ ನಿಯಮಗಳು ಇಲ್ಲ. ರಾಜಕಾರಣಿಗಳು ಕ್ರಿಕೆಟ್‌ನತ್ತ ಆಕರ್ಷಿತಗೊಂಡ ಬಳಿಕವಂತೂ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ಕ್ರಿಕೆಟ್‌ನ ಪ್ರತಿಯೊಂದು ವಿಭಾಗದಲ್ಲೂ ಭ್ರಷ್ಟಾಚಾರ ತಾಂಡವವಾಡತೊಡಗಿತು.

ತಂಡದ ಆಯ್ಕೆ, ಅಧಿಕಾರಿಗಳ ನೇಮಕ, ಆಟಗಾರರ ಗುತ್ತಿಗೆ, ಆಟಗಾರರು ಹಾಗೂ ಅಧಿಕಾರಿಗಳ ಪ್ರಯಾಣ ಮತ್ತು ವಾಸ್ತವ್ಯ, ಕಾರ್ಯಕ್ರಮ ಆಯೋಜನೆ ಒಳಗೊಂಡಂತೆ ಎಲ್ಲ ಕಡೆಗಳಲ್ಲೂ `ಕಮಿಷನ್~ ಪಡೆಯುವುದು ಒಂದು ಅಲಿಖಿತ ಸಂಪ್ರದಾಯವಾಗಿ ಬದಲಾಗಿದೆ. ಈ ಎದ್ದಿರುವ ಮ್ಯಾಚ್‌ಫಿಕ್ಸಿಂಗ್/ ಸ್ಪಾಟ್ ಫಿಕ್ಸಿಂಗ್ ಎಂಬ`ಭೂತ~ವನ್ನು ನಾವು ಈ ಹಿನ್ನೆಲೆಯಿಂದ ನೋಡಬೇಕಾಗುತ್ತದೆ.

ಕ್ರೀಡಾಂಗಣದ ನಿರ್ಮಾಣದ ಹೆಸರಲ್ಲಿ ರಾಜ್ಯ ಸಂಸ್ಥೆಗಳು ಮಾಡುತ್ತಿರುವ ಅಕ್ರಮಗಳಿಗೆ ಲೆಕ್ಕವಿಲ್ಲ. ಪರಿಸ್ಥಿತಿ ಹೀಗಿರುವಾಗ ಕೇವಲ ಆಟಗಾರರು ಮಾತ್ರ ಹಣದ ವ್ಯಾಮೋಹಕ್ಕೆ ಬಲಿಯಾಗುತ್ತಿದ್ದಾರೆ ಎಂದು ನಾವು ದೂಷಿಸುವುದು ಎಷ್ಟು ಸರಿ?

ಕ್ರಿಕೆಟ್ ಪ್ರಸಾರದ ಹಕ್ಕು ದೂರದರ್ಶನದ ಕೈತಪ್ಪಿದ ಬಳಿಕ ಆಟಗಾರರು ಜಾಹೀರಾತು ಒಳಗೊಂಡಂತೆ ತಮ್ಮ ವ್ಯವಹಾರ ನೋಡಿಕೊಳ್ಳಲು ಏಜೆಂಟ್‌ಗಳನ್ನು ನೇಮಿಸತೊಡಗಿದರು. ವರ್ಷ ಕಳೆದಂತೆ ಈ ಏಜೆಂಟ್‌ಗಳ ಕಾರ್ಯವೈಖರಿಯಲ್ಲಿ ಬದಲಾವಣೆ ಕಂಡುಬರತೊಡಗಿತು. ತಮ್ಮ ಕೈಕೆಳಗಿನ ಆಟಗಾರನಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಖಚಿತವಾದರೆ ಮಾತ್ರ ತಮಗೆ ಹಣ ಮಾಡಲು ಸಾಧ್ಯ ಎಂಬುದನ್ನು ಏಜೆಂಟರು ಮನಗಂಡರು. ಇದಾದ ಬಳಿಕ ಐಪಿಎಲ್‌ನ ಆಗಮನವಾಯಿತು. ಜಾಹೀರಾತು ದೊರೆಯುವ ವಿಶ್ವಾಸ ಇಲ್ಲದ ಆಟಗಾರರು ಕೂಡಾ ಏಜೆಂಟ್‌ಗಳನ್ನು ನೇಮಿಸತೊಡಗಿದರು. ಇದರ ಕಾರಣ ಏನೆಂಬುದು ಎಲ್ಲರಿಗೂ ತಿಳಿದಿರುವುದೇ.
ಮಹೇಂದ್ರ ಸಿಂಗ್ ದೋನಿ ಅವರ ಏಜೆಂಟ್ ಆಯ್ಕೆ ಸಮಿತಿಯ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂಬ ಆರೋಪ ಇದೆ. ವಿಶ್ವ ಫುಟ್‌ಬಾಲ್‌ನ ಆಡಳಿತ ನೋಡಿಕೊಳ್ಳುತ್ತಿರುವ ಫಿಫಾ ಆಟಗಾರರ ಏಜೆಂಟ್‌ಗಳ ಮೇಲೆ ಕೆಲ ನಿರ್ಬಂಧಗಳನ್ನು ಹೇರಿದೆ. ಆದರೆ ಬಿಸಿಸಿಐ ಮಾತ್ರ ಅದಕ್ಕೆ ಮುಂದಾಗಿಲ್ಲ.

ಐಪಿಎಲ್ ಈಗ ಲಾಭ ಗಳಿಸುವ ಉದ್ಯಮವಾಗಿ ಬದಲಾಗಿದೆ. ತಂಡಗಳ ಮಾಲೀಕರಿಗೆ ಕ್ರಿಕೆಟ್ ಬಗ್ಗೆ ಅಲ್ಪ ಜ್ಞಾನ ಮಾತ್ರ ಇದೆ. ಐಪಿಎಲ್‌ನಲ್ಲಿ ಅಂತಿಮ ಇಲೆವೆನ್‌ನ ಆಯ್ಕೆಯ ವೇಳೆ ಯಾವುದೇ ಮಾನದಂಡಗಳನ್ನು ಅನುಸರಿಸುವುದಿಲ್ಲ. ಕೇವಲ ಎರಡು ಅಥವಾ ಮೂರು ಗಂಟೆಗಳ ಕಾಲದ ಟ್ರಯಲ್ಸ್ ಬಳಿಕ ಎಲ್ಲವನ್ನೂ ನಿರ್ಧರಿಸಲಾಗುತ್ತದೆ. ಇದು ಭ್ರಷ್ಟಾಚಾರಕ್ಕೆ ಮತ್ತಷ್ಟು ಅವಕಾಶ ಕಲ್ಪಿಸಿಕೊಟ್ಟಿದೆ.

ಈ ಬಾರಿಯ ರಣಜಿ ಋತುವಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರತ್ತ ಒಮ್ಮೆ ಗಮನಹರಿಸಿ. ಎಲ್ಲರೂ `ಡಗ್‌ಔಟ್~ನಲ್ಲಿ ಕುಳಿತು ಬೆಂಚು ಕಾಯಿಸುತ್ತಿದ್ದಾರೆ. ಈ ಋತುವಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 1200ಕ್ಕೂ ಅಧಿಕ ರನ್ ಪೇರಿಸಿರುವ ರಾಬಿನ್ ಬಿಸ್ಟ್ ಅಂತಹ ಯುವ ಪ್ರತಿಭೆಗೆ ಐಪಿಎಲ್‌ನಲ್ಲಿ ಆಡಲು ಅವಕಾಶ ದೊರೆತಿಲ್ಲ. ಅದೇ ರೀತಿ ರಿತುರಾಜ್ ಸಿಂಗ್ ಅವರಂತಹ ಪ್ರತಿಭಾನ್ವಿತರಿಗೆ ಐಪಿಎಲ್‌ನ ಬಾಗಿಲು ತೆರೆಯುವುದೇ ಇಲ್ಲ. ದೇಸಿ ಕ್ರಿಕೆಟ್‌ನಲ್ಲಿ ರನ್ ಮಳೆ ಸುರಿಸಿರುವ ಅಭಿನವ್ ಮುಕುಂದ್ ಮತ್ತು ಚೇತೇಶ್ವರ ಪೂಜಾರ ಅಪರೂಪಕ್ಕೊಮ್ಮೆ ಮಾತ್ರ ಅಂತಿಮ ಇಲೆವೆನ್‌ನಲ್ಲಿ ಕಾಣಿಸಿಕೊಳ್ಳುವರು.

ಆದರೆ ಯಾರೂ ಹೆಸರು ಕೇಳಿರದಂತಹ ಆಟಗಾರನೊಬ್ಬ ಇದ್ದಕ್ಕಿದ್ದಂತೆ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳುತ್ತಾನೆ. ರಾಹುಲ್ ಶುಕ್ಲಾ ಎಂದರೆ ಯಾರು? ಧವಳ್ ಕುಲಕರ್ಣಿಯನ್ನು ಹಿಂದಿಕ್ಕಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಅವರು ಸ್ಥಾನ ಪಡೆಯುವುದು ಹೇಗೆ? ವೀರ್‌ಪ್ರತಾಪ್ ಸಿಂಗ್ ಹೆಸರು ಎಷ್ಟು ಜನ ಕೇಳಿದ್ದೀರಿ? ಇಲ್ಲಿ ತೆರೆಮರೆಯಲ್ಲಿ ಏನೋ ನಡೆಯುತ್ತಿರುವುದು ಸ್ಪಷ್ಟ. ಪತ್ರಕರ್ತರು ಹಾಗೂ ಮಾಜಿ ಕ್ರಿಕೆಟಿಗರು ಕೂಡಾ ಏಜೆಂಟ್ ಆಗಿ ಬದಲಾಗುತ್ತಿರುವುದು ಹೊಸ ಬೆಳವಣಿಗೆ.

ಐಪಿಎಲ್‌ನಲ್ಲಿ ತಂಡದ ಆಯ್ಕೆ ಮತ್ತು ಆಟಗಾರರ ಹರಾಜಿಗೆ ಸಂಬಂಧಿಸಿದ ನಿಯಮಗಳಿಗೆ ಅರ್ಥವಿಲ್ಲ. ಅಂತರರಾಷ್ಟ್ರೀಯ ಪಂದ್ಯಗಳನ್ನಾಡದ ವಿದೇಶದ ಆಟಗಾರರು ಹರಾಜಿನ ವ್ಯಾಪ್ತಿಗೆ ಬರುವರು. ಆದರೆ ಭಾರತದ ಆಟಗಾರರಿಗೆ ಈ ಅವಕಾಶವಿಲ್ಲ. ಐಪಿಎಲ್‌ನ `ಟ್ರೇಡಿಂಗ್ ವಿಂಡೊ~ ಕೂಡಾ ಏಜೆಂಟ್‌ಗಳ ಹಿಡಿತದಲ್ಲಿದೆ.

ಕ್ರೀಡೆಯಲ್ಲಿ ಸರ್ಕಾರ ಹಸ್ತಕ್ಷೇಪ ನಡೆಸುವುದನ್ನು ನಾನು ಇದುವರೆಗೆ ವಿರೋಧಿಸುತ್ತಾ ಬಂದಿದ್ದೇನೆ. ಆದರೆ ಕ್ರಿಕೆಟ್ ಸಂಸ್ಥೆಗಳು ಇಂತಹ ಅಕ್ರಮಕ್ಕೆ ನಿಯಂತ್ರಣ ಹೇರದಿದ್ದರೆ, ಟ್ರಾಯ್ ಮತ್ತು ಕಂಪೆನಿ ಲಾ ಬೋರ್ಡ್ ರೀತಿಯಲ್ಲಿ ಇಲ್ಲೂ ನಿಯಂತ್ರಣ ಪ್ರಾಧಿಕಾರ ನೇಮಿಸುವುದು ಅನಿವಾರ್ಯ.

ಒಟ್ಟಿನಲ್ಲಿ ಹೇಳುವುದಾದರೆ, `ಮ್ಯಾಚ್ ಫಿಕ್ಸಿಂಗ್~ ಅಥವಾ `ಸ್ಪಾಟ್ ಫಿಕ್ಸಿಂಗ್~ ಎಂಬುದು ಗಂಭೀರ ಸಮಸ್ಯೆ. ಕೇವಲ ಐಪಿಎಲ್‌ನ್ನು ಸರಿಪಡಿಸಿದರೆ ಇದನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಕ್ರಿಕೆಟ್‌ನ ಆಡಳಿತ ವ್ಯವಸ್ಥೆಯಲ್ಲೇ ಸುಧಾರಣೆ ತರಬೇಕು.

(ಲೇಖಕರು ರಾಜಸ್ತಾನ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ರಾಜಸ್ತಾನ ಕ್ರಿಕೆಟ್ ಸಂಸ್ಥೆಯ ಮಾಜಿ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT