ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತಾರು ಆಕರ್ಷಣೆಗಳ ಮಾಲ್ ಸಂಸ್ಕೃತಿ

Last Updated 18 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಹತ್ತಿಪ್ಪತ್ತು ವರ್ಷಗಳ ಹಿಂದಿನವರೆಗೂ ಜನರಿಗೆ ಅಗತ್ಯ ವಸ್ತುಗಳ ಖರೀದಿ ಎಂದರೆ ಸಾಂಪ್ರದಾಯಿಕ ಶೈಲಿಯ ಮಾರುಕಟ್ಟೆಗಳೇ ಸಹಜ ಆಯ್ಕೆಯಾಗಿದ್ದವು. ಮದುವೆ, ಹಬ್ಬಗಳ ಸಂದರ್ಭಗಳಲ್ಲಿ ಅಗತ್ಯ ವಸ್ತುಗಳಿಗಾಗಿ ನಿಶ್ಚಿತ ಪ್ರದೇಶಗಳನ್ನೇ ಅರಸಿ ಹೋಗಬೇಕಿದ್ದಿತು.ರಾಜಧಾನಿ ಬೆಂಗಳೂರಿನಲ್ಲಿಯಂತೂ ಚಿಕ್ಕಪೇಟೆ, ಬಳೆಪೇಟೆ, ಅಕ್ಕಿಪೇಟೆ ಎಂದು ಆಯ್ದ ವಸ್ತುಗಳಿಗೆ ಮೀಸಲಾದ ಮಾರುಕಟ್ಟೆ ಪ್ರದೇಶಗಳಿವೆ. ಇಲ್ಲಿ ಸಗಟು ಮತ್ತು ಚಿಲ್ಲರೆ ದರದಲ್ಲಿ ವಸ್ತುಗಳು ದೊರಕುತ್ತವೆ. ಆದರೆ ಇಲ್ಲಿ ಖರೀದಿಗೆ ಸ್ವಲ್ಪವಾದರೂ ಅನುಭವ-ಮಾಹಿತಿ ಇರಬೇಕು.

ಮದುವೆ ಬಂದಿತೆಂದರೆ ಜವಳಿಗೆ, ಚಿನ್ನಕ್ಕೆ, ದಿನಸಿಗೆ, ಪೂಜೆ ಸಾಮಗ್ರಿಗಳಿಗೆ, ಅಲಂಕಾರ ಸಾಮಗ್ರಿಗಳಿಗಾಗಿ ವಿವಿಧ ಮಾರುಕಟ್ಟೆಗಳಲ್ಲಿ ಓಡಾಡಿ ಚೌಕಾಸಿ ಮಾಡಿ ಖರೀದಿಸುವ ಭರಾಟೆ ಜೋರಿರುತ್ತಿತ್ತು. ಈ ಕೆಲಸವನ್ನು ಮನೆ ಮಂದಿ ಹಂಚಿಕೊಳ್ಳುತ್ತಿದ್ದರು, ಹಲವು ಗುಂಪುಗಳಾಗಿ ಪೇಟೆ ಸುತ್ತಾಡುತ್ತಿದ್ದರು.
ಕಾಲ ಬದಲಾಗಿದೆ, ಜನರೂ ಬದಲಾಗಿದ್ದಾರೆ. ಅವರ ಆಯ್ಕೆ, ಖರೀದಿ ವಿಧಾನವೂ ಬದಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಖರೀದಿ ಸಡಗರ-ಓಡಾಟ ಷಾಪಿಂಗ್ ಮಾಲ್‌ಗಳಿಗೆ ಸ್ಥಳಾಂತರಗೊಂಡಿದೆ. ಅಗತ್ಯವಾದ ಎಲ್ಲ ವಸ್ತುಗಳೂ ಒಂದೇ ಛಾವಣಿಯಡಿ ದೊರಕುತ್ತವೆ, ಆಯ್ಕೆಗೂ ಬಹಳ ಅವಕಾಶಗಳಿರುತ್ತವೆ, ಷಾಪಿಂಗ್ ಮಾಡುವ ಖುಷಿಯೂ ಭಿನ್ನ ಎಂಬ ಅಂಶಗಳೇ ಷಾಪಿಂಗ್ ಮಾಲ್‌ಗಳತ್ತ  ಜನರ ಆಕರ್ಷಣೆಗೆ ಪ್ರೇರಣೆ.

ಅಲ್ಲದೆ, ಖರೀದಿ ವೇಳೆ ದಣಿವಾದರೆ ವಿಶ್ರಮಿಸಿಕೊಳ್ಳಲು, ಹಸಿದ ಹೊಟ್ಟೆ ತುಂಬಿಸಿಕೊಳ್ಳಲು ಅಕ್ಕಪಕ್ಕದಲ್ಲಿಯೇ ರೆಸ್ಟೋರೆಂಟ್‌ಗಳಿರುತ್ತವೆ. ಕ್ಷಣ ಬೇಸರವಾದರೆ ಮನರಂಜನೆಗೆ ಸಿನಿಮಾ   ಮಂದಿರಗಳು, ಹಠ ಹಿಡಿಯುವ ಪುಟ್ಟ ಮಕ್ಕಳನ್ನು ಸುಧಾರಿಸಲು ಅವರಿಷ್ಟದ ಆಟದ ತಾಣಗಳೂ ಇರುವುದು ಜನರು(ಗೃಹಿಣಿಯರು) ಷಾಪಿಂಗ್ ಮಾಲ್‌ಗಳತ್ತ ಕಾಲು ಹಾಕಲು ಕಾರಣ.ಮೆಟ್ರೊಗಳಲ್ಲಿಯಷ್ಟೇ ಅಲ್ಲ 2-3ನೇ ಹಂತದ ನಗರಗಳಲ್ಲಿಯೂ ಷಾಪಿಂಗ್ ಮಾಲ್ ಸಂಖ್ಯೆ ಹೆಚ್ಚುತ್ತಿದೆ. ಈ ಉದ್ಯಮಕ್ಕೆ ಹೊಸ ಕಂಪೆನಿಗಳು ಪ್ರವೇಶಿಸುತ್ತಲೇ ಇವೆ.

ಮೊದಲೆಲ್ಲ ಬೆಂಗಳೂರಿನಲ್ಲಷ್ಟೇ ಕೇಂದ್ರೀಕೃತವಾಗಿದ್ದ ಮಾಲ್ ಸಂಸ್ಕೃತಿ ಈಗ ಮೈಸೂರು, ಮಂಗಳೂರು, ಹುಬ್ಬಳ್ಳಿ, ಹಾಸನ ಮೊದಲಾದ ನಗರಗಳಿಗೂ ಕಾಲಿಟ್ಟಿದೆ. ಬೆಂಗಳೂರಿನಲ್ಲಂತೂ ಪ್ರತಿ ವರ್ಷ ಹೊಸ ಷಾಪಿಂಗ್ ಮಾಲ್ ಸೇರ್ಪಡೆ ಆಗುತ್ತಲೇ ಇದೆ. ಒರಿಯನ್, ಕೂಪನ್ ಮಾಲ್, ಸ್ಟಾರ್ ಬಜಾರ್ ಇತ್ತೀಚಿನ ಸೇರ್ಪಡೆ.

ಷಾಪಿಂಗ್ ಮಾಲ್ ಸಂಸ್ಕೃತಿಯಲ್ಲಿ ಇತ್ತೀಚೆಗೆ ವಿಭಿನ್ನ ಬೆಳವಣಿಗೆ ಗೋಚರಿಸುತ್ತಿವೆ. ಮಾಲ್‌ಗಳೊಳಗೆ ರಿಯಾಯಿತಿ ದರದ ಫಲಕಗಳ ರಾಶಿಯೇ ಕಾಣುತ್ತವೆ. ಶೇ 10ರಿಂದ ಶೇ 50ರವರೆಗೂ ರಿಯಾಯಿತಿ ದರದ ಮಾರಾಟದ ಆಮಿಷ ಕಾಣುತ್ತವೆ. ಇಂಥ ಮಳಿಗೆಗಳು ಸಹಜವಾಗಿಯೇ ಗ್ರಾಹಕರನ್ನು ಆಕರ್ಷಿಸುತ್ತಿವೆ.

ಹಾಗೆಂದು ಭಾರತೀಯ ಗ್ರಾಹಕರು ಎಲ್ಲವನ್ನೂ ಕಣ್ಣುಮುಚ್ಚಿ ಒಪ್ಪಿಕೊಂಡು ಬಿಡುತ್ತಾರೆ ಎಂದೇನೂ ಇಲ್ಲ. ಅವರು ಖರೀದಿ ಅಭ್ಯಾಸ ಮತ್ತು ರೂಢಿಗಳು ಬಹಳ ಭಿನ್ನ. ಖರೀದಿಸುವ ವಸ್ತುವಿನ ಬೆಲೆ, ಬಾಳಿಕೆ ವಿಚಾರದತ್ತ ಗಮನ ಕೊಡುವುದು ಭಾರತೀಯರ ಸಹಜ ಸ್ವಭಾವ. ಬಟ್ಟೆಗಳ ವಿಚಾರದಲ್ಲಂತೂ ವಿನ್ಯಾಸ, ಬಣ್ಣ, ಧಾರಣೆ ಕುರಿತು ಗ್ರಾಹಕರ ಪ್ರಶ್ನೆಗಳು ಹೆಚ್ಚು. ಬ್ರ್ಯಾಂಡ್ ಹಾಗೂ ಫ್ಯಾಷನ್ ಉತ್ಪನ್ನಗಳಿಗಾಗಿ ಹಣ ವೆಚ್ಚ ಮಾಡಲು ಸಿದ್ಧರಿದ್ದರೂ, ಹಣಕ್ಕೆ ತಕ್ಕ ಮೌಲ್ಯವನ್ನೂ ಹೊಸ ತಲೆಮಾರಿನ ಗ್ರಾಹಕರು ನಿರೀಕ್ಷಿಸುತ್ತಾರೆ. ಈ ಅಂಶವನ್ನು ಇತ್ತೀಚಿನ ಸಮೀಕ್ಷೆಗಳೂ ಸ್ಪಷ್ಟಪಡಿಸಿವೆ.

ಗ್ರಾಹಕರ ಈ ಮನೋಭಾವದ ಕಾರಣದಿಂದಾಗಿ ಸಿದ್ಧ ಉಡುಪು ಉದ್ದಿಮೆಯಲ್ಲಿಯೂ ಮಹತ್ವದ ಬದಲಾವಣೆಗೆ ಕಾರಣವಾಗಿದೆ. ಹೊಸ ವಿನ್ಯಾಸ, ಶೈಲಿ, ಗುಣಮಟ್ಟದ ಬಗ್ಗೆ ಸಿದ್ಧ ಉಡುಪು ಉದ್ಯಮವೂ ಗಮನ ಹರಿಸುತ್ತಿದೆ. ಇದೇ ಕಾರಣವಾಗಿ ತಮ್ಮ ಸಂಸ್ಥೆಯೂ ಗ್ರಾಹಕಸ್ನೇಹಿ ಮಾರುಕಟ್ಟೆ ತಂತ್ರ ಅಳವಡಿಸಿಕೊಂಡಿದೆ ಎನ್ನುತ್ತಾರೆ ಕೂಪನ್ ಮಾಲ್‌ನ ಮಾತೃಸಂಸ್ಥೆ `ಪ್ರತೀಕ್ ಅಪೇರಲ್ಸ್'ನ ನಿರ್ವಾಹಕ ನಿರ್ದೇಶಕ ಸಂಜಯ್ ದಾಲ್ಮಿಯ.

ಬಹುತೇಕ ಭಾರತೀಯರು ಹೆಚ್ಚಿನ ಪ್ರಮಾಣದ ಖರೀದಿ ನಡೆಸುವುದು ಹಬ್ಬದ ಋತುಮಾನಗಳಲ್ಲಿ ಮತ್ತು ಕುಟುಂಬದಲ್ಲಿ ವಿಶೇಷ ಸಮಾರಂಭ  ಸಂದರ್ಭಗಳಲ್ಲಿ. ಇನ್ನೊಂದು ವಿಶೇಷತೆ ಎಂದರೆ,  ಬಹುತೇಕ ಗ್ರಾಹಕರು ಕೆಲವು ತಿಂಗಳಲ್ಲಿ ನಡೆಯುವ `ವಿಶೇಷ ರಿಯಾಯಿತಿ ಮಾರಾಟ' ಸಂದರ್ಭಗಳಿಗಾಗಿ  ಕಾಯುತ್ತಾರೆ. ಪ್ರಮುಖ ಬ್ರ್ಯಾಂಡ್, ಮೌಲ್ಯ ಹೆಚ್ಚಿಸುವ ಫ್ಯಾಷನ್ ಅಂಶಗಳು ಸೇರಿ ತಮ್ಮಲ್ಲಿ ಖರೀದಿಗೆ ಬರುವ ಗ್ರಾಹಕರಿಗೆ ತಾವು ನೀಡುವ ಹಣಕ್ಕೆ ತಕ್ಕ ಮೌಲ್ಯ ಸಿಗುತ್ತದೆ ಎಂಬ ನಂಬಿಕೆ ಇದೆ ಎನ್ನುವುದು ದಾಲ್ಮಿಯ (95383 89334) ಅವರ ವಿಶ್ವಾಸದ ನುಡಿ.

ಇತ್ತೀಚೆಗೆ, ಆಧುನಿಕ ರಿಟೇಲ್ ಅಂಗಡಿ ಸರಣಿಗಳು ವರ್ಷವಿಡೀ ಇಂತಹುದೇ ರಿಯಾಯಿತಿ ಮಾರಾಟದ ಅನುಭವ ನೀಡುತ್ತಿರುವುದರಿಂದ ಜನರ ಖರೀದಿ ಪ್ರವೃತ್ತಿಯಲ್ಲಿ ಬದಲಾವಣೆ ಕಂಡುಬರುತ್ತಿದೆ. ಜತೆಗೆ ತಮ್ಮ ಇಚ್ಛೆಯ ಬ್ರ್ಯಾಂಡ್‌ನ ವಸ್ತ್ರಗಳಿಗಾಗಿ ಹಲವು ಮಳಿಗೆಗಳನ್ನಷ್ಟೇ ಅಲ್ಲ, ಬೇರೆ ಬೇರೆ ಮಾಲ್‌ಗಳನ್ನೂ ಸುತ್ತುತ್ತಾರೆ. ಅದಕ್ಕಾಗಿ ಸಾಕಷ್ಟು ಸಮಯ ಮೀಸಲಿಡಬೇಕಾಗಿ ಬಂದರೂ ತಮ್ಮ ಇಚ್ಛೆಯ ವಸ್ತ್ರ ಖರೀದಿಗೇ ಜೋತುಬೀಳುತ್ತಾರೆ ಎನ್ನುವುದು ದಾಲ್ಮಿಯ ಅವರ ಅನುಭವದ ಮಾತು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT