ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದವರಿತ ಮಾತಿನ ಸುಖ

Last Updated 9 ಜುಲೈ 2012, 19:30 IST
ಅಕ್ಷರ ಗಾತ್ರ

`ಲಾಯರ್ ಆಗ್ತೀನಿ...~ ಯಾರಾದ್ರೂ `ಮುಂದೇನ್ ಆಗ್ತಿ?~ ಎಂದು ಕೇಳಿದರೆ ನಾನು ಇದನ್ನೇ ಹೇಳ್ತಿದ್ದೆ.ತುಂಬಾ ಮಾತಾಡ್ತಾ ಇದ್ದಿದ್ರಿಂದ ಉತ್ತರ ಕೇಳಿದವರೆಲ್ಲರೂ `ಹೂಂ... ಆಗು ಆಗು.. ಸಕ್ಸಸ್ ಆಗ್ತಿ~ ಅನ್ನೋರು. ಆದ್ರೆ ನನ್ನ ಮಾತು ಮತ್ತೆಲ್ಲೋ ಕೆಲಸಕ್ಕೆ ಬರುತ್ತೆ ಅನಿಸಿದ್ದು ಧಾರವಾಡದಲ್ಲಿ ಪತ್ರಿಕೋದ್ಯಮ ಓದುವಾಗ.

ನಾನು ಜರ್ನಲಿಸ್ಟ್ ಆಗ್ತೀನಿ ಅಂತ ದೇವರಾಣೆಗೂ ಊಹಿಸಿದವಳಲ್ಲ. ಸ್ವಂತ ಊರು ಉಡುಪಿ ಜಿಲ್ಲೆಯ ಪೆರ್ಡೂರು. ಪಕ್ಕಾ ಸೌತ್ ಕೆನರಾದವಳಾದರೂ ಜೋಳದರೊಟ್ಟಿ-ಕೆಂಪು ಚಟ್ನಿ ಬೇಕೇ ಬೇಕು. ಹುಟ್ಟಿದ್ದು ಕರಾವಳಿಯಲ್ಲಾದರೂ ಬೆಳೆದಿದ್ದು ಉತ್ತರ ಕರ್ನಾಟಕದ್ಲ್ಲಲಿ. ಆ ಕಡೆಯವರು ಯಾರೇ ಸಿಗಲಿ ಖುಷಿಯಾಗಿ `ಯಾ ಊರ‌್ರಿ ನಿಮ್ದು~ ಅಂತ ಪರಿಚಯ ಮಾಡ್ಕೊಂಡು ಮಾತಾಡ್ತೀನಿ. ಬೆಂಗಳೂರಿನಲ್ಲಿ `ಹಾಯ್-ಹಲೋ~ಗಳ ಮಧ್ಯೆ `ಅರಾಮದೀರಿ~ ಅಂತ ಕೇಳೋದ್ರಲ್ಲಿ ಸಿಗೋ ಸುಖ ಅಷ್ಟಿಷ್ಟಲ್ಲ.

ಹೀಗೆ ಮೂರೂ ಕಡೆಯ ಮಾತುಗಳ ಸಿಹಿಯುಂಡು ಈಗ ಎಲ್ಲಾ ಭಾಗದ ಜನರಿಗೂ ಅರ್ಥವಾಗುವಂತೆ ಕಾರ್ಯಕ್ರಮ ನಡೆಸಿಕೊಡಬೇಕು. ಅದರಲ್ಲೂ ಹೆಚ್ಚಾಗಿ ಆರೋಗ್ಯ ವಿಚಾರವನ್ನೇ ಕೈಗೆತ್ತಿಕೊಳ್ಳುವುದರಿಂದ ವೈದ್ಯಕೀಯ ವಿಚಾರವನ್ನು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಮಂಡಿಸಬೇಕು.

ಮಾತು ಜರ್ನಲಿಸ್ಟ್‌ಗಳ ಬಂಡವಾಳ. ಅದರಲ್ಲೂ ಟೀವಿ ಮಾಧ್ಯಮಗಳಲ್ಲಿ ಒಂದೊಂದು ಅಕ್ಷರವನ್ನೂ ಅಳೆದೂ ತೂಗಿ ಮಾತನಾಡಬೇಕು.ಸುವರ್ಣ ನ್ಯೂಸ್‌ನಲ್ಲೇ. ಈ ಐದು ವರ್ಷದ ಅವಧಿಯಲ್ಲಿ ರಿರ್ಪೋರ್ಟರ್ ಆಗಿ, ಕಾಪಿ ಎಡಿಟರ್ ಆಗಿ, ವಾಯ್ಸ ಓವರ್ ಆರ್ಟಿಸ್ಟ್ (ಹಿನ್ನೆಲೆ ಧ್ವನಿ) ಆಗಿ ಕೆಲಸ ಮಾಡಿದ್ದೇನೆ.

ಸದ್ಯ ಕಾರ್ಯಕ್ರಮ ನಿರ್ಮಾಪಕಿಯಾಗಿ ಮಹಿಳಾ ಕಾರ್ಯಕ್ರಮವೊಂದನ್ನು ನಡೆಸಿಕೊಂಡು ಹೋಗ್ತಿದ್ದೇನೆ.ನಿರೂಪಣೆ ಎನ್ನುವುದು ಇನ್ನೊಂದು ಅದ್ಭುತ ಅನುಭವ. ಇಲ್ಲಂತೂ ಮಾತಿನ ಗಮ್ಮತ್ತಿಗೇ ಹೆಚ್ಚು ಅಂಕ. ನಿರೂಪಕರು `ಫೇಸ್ ಆಪ್ ದಿ ಚಾನಲ್.~  ಮಾತಿನ ಜೊತೆಗೆ ವಿಷಯ ಜ್ಞಾನ, ಪ್ರಸಕ್ತ ವಿದ್ಯಮಾನಗಳ ಅರಿವು, ಭಾಷೆಯನ್ನು ಫೈನ್ ಟ್ಯೂನ್ ಮಾಡಲೊಂದಿಷ್ಟು ಓದು... ಎಲ್ಲವೂ ಅಗತ್ಯ.

ಒಂಚೂರು ಆಭಾಸವೆನಿಸಿದ್ರೂ ಇಡೀ ಕಾರ್ಯಕ್ರಮದ ಮೌಲ್ಯ ಕಳೆದುಹೋಗುತ್ತೆ. ನಿರೂಪಕರೆಲ್ಲರೂ ಸರ್ವಜ್ಞಾನಿಗಳಲ್ಲ. ಮಾತು ಸಂದರ್ಭೋಚಿತವಾಗಿದೆಯೇ ಎಂಬ ಅರಿವಿದ್ದರೆ ಸಾಕು.

ಎಷ್ಟೋ ಜನ ತಲೆಬುಡ ಗೊತ್ತಿಲ್ಲದಿದ್ದರೂ ನಿರರ್ಗಳವಾಗಿ ಮಾತನಾಡಿ ಜನಮನ ಗೆದ್ದು ಬಿಡ್ತಾರೆ. ಹಾಗಂತ ಅವರು ಉತ್ತಮ ನಿರೂಪಕರಲ್ಲ ಅಂತ ಹೇಳಲಾಗದು. ಕೆಲ ಸಂದರ್ಭ, ಕೆಲ ಕಾರ್ಯಕ್ರಮಗಳಿಗೆ `ಪ್ರಸೆಂಟೇಶನ್~ ಮುಖ್ಯವಾಗುತ್ತೆ. ಆದ್ರೆ ಅನೇಕ ಕಾರ್ಯಕ್ರಮಗಳಲ್ಲಿ ಅಂದ-ಚೆಂದದ ಜೊತೆಗೆ ವಿಷಯ ಮಂಡನೆ, ಚರ್ಚೆ-ವಿಶ್ಲೇಷಣೆ ಮಾಡುವ ಕೌಶಲ ಬೇಕೇಬೇಕು.

ಆರಂಭದಲ್ಲಿ ಒಂದು ಕಾರ್ಯಕ್ರಮ ನಡೆಸುವುದೆಂದರೆ ಏನೋ ಆತಂಕ ಕಾಡ್ತಿತ್ತು. `ಸಖತ್ ಡೈಲಾಗ್ ಹೊಡಿತೀಯಾ~ ಎಂದು ಎಲ್ಲರೂ ಹೇಳಿದರೂ ಕಾರ್ಯಕ್ರಮ ನಿರೂಪಣೆ ವೇಳೆ ಮಾತ್ರ ಕೆಲವೊಮ್ಮೆ ಬ್ಲಾಂಕ್ ಆಗಿ ಬಿಡ್ತಿದ್ದೆ. ಆವತ್ತಿನ ವಿಷಯದ ಬಗ್ಗೆ ನಂಗೆ ಗೊತ್ತಿದ್ರೂ ತಡಬಡಾಯಿಸೋದು ಮಾತ್ರ ತಪ್ತಾ ಇರ‌್ಲಿಲ್ಲ. ಕಾರ್ಯಕ್ರಮ ಚೆನ್ನಾಗಿ ಮಾಡ್ಬೇಕು ಅಂತ ಹೇಳ್ತಾನೇ ಕಾನ್ಶಿಯಸ್ ಆಗ್ತಿದ್ದೆ.

ಆದರೆ ಈಗ ಆ ಹಂತ ದಾಟಿದ್ದೇನೆ ಅನಿಸುತ್ತೆ. ಆಯಾ ವಿಷಯದ ಬಗ್ಗೆ ಒಂದಷ್ಟು ಪೂರ್ವ ತಯಾರಿ ಮಾಡಿಕೊಂಡು ಮಾತಿಗೆ ಕುಳಿತರೆ ನಂಗೀಗ ಯಾವ ಭಯನೂ ಇಲ್ಲ. ಮಾತಿನಲ್ಲಿ ತೊದಲೋದಿಲ್ಲ. ಅಪ್ಪಿತಪ್ಪಿ ಫಂಬಲ್ ಆದ್ರೂ ಅಲ್ಲೇ ತಿರುಚಿ ಎಲ್ಲೂ ಮುಜುಗರವಾಗದಂತೆ ಬ್ಯಾಲೆನ್ಸ್ ಮಾಡುವಷ್ಟು ಹಿಡಿತ ಸಿಕ್ಕಿದೆ.

ಸಾಕಷ್ಟು ಹಿನ್ನೆಲೆ ಕೆಲಸ ಮಾಡಿಕೊಂಡರೆ ಕಾರ್ಯಕ್ರಮವನ್ನು ಹೆಚ್ಚು ಕಾನ್ಫಿಡಂಟ್ ಆಗಿ ಮಾಡಬಹುದು.ಈ ಹಂತ ತಲುಪಲು ಕಾರಣರಾದ ಎಲ್ಲರನ್ನೂ ಸ್ಮರಿಸುತ್ತಾ ಇನ್ನೊಂದು ದಿನವನ್ನು ನಾನು ಎದುರುಗೊಳ್ಳುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT