ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬಲಿ ಕನ್ನಡ ವಿಕಿಪೀಡಿಯ ರಸಬಳ್ಳಿ

ಅಕ್ಷರ ಗಾತ್ರ

ಒಂದು ಭಾಷೆ ಬೆಳೆಯಲು, ಉಳಿಯಲು ಆ ಭಾಷೆಯಲ್ಲಿನ ಸಾಹಿತ್ಯವೇ ಮೂಲ. ಮಾಹಿತಿಯ (ಜ್ಞಾನದ) ಲಭ್ಯತೆ ಕೂಡ ಭಾಷೆಯ ಬೆಳವಣಿಗೆಗೆ ಅಗತ್ಯ. ಭಾಷೆಯ ಉಳಿವಿಗೆ ಸಾಹಿತ್ಯದಷ್ಟೇ ಮುಖ್ಯವಾದುದು ಈ ಮಾಹಿತಿ. ಈ ಡಿಜಿಟಲ್ ಯುಗದಲ್ಲಿ ಮಾಹಿತಿ ಸಂಚಯ–ಪೂರೈಕೆಯ ಅವಶ್ಯಕತೆಗಾಗಿ ಹುಟ್ಟಿಕೊಂಡಿದ್ದು ಆನ್‌ಲೈನ್ ವಿಶ್ವಕೋಶ ‘ವಿಕಿಪೀಡಿಯ’.

ಬೆರಳ ತುದಿಯಲ್ಲಿ ಮಾಹಿತಿ ನೀಡುವ ವಿಕಿಪೀಡಿಯದಲ್ಲಿ ಇಂಗ್ಲಿಷ್‌ಗೆ ಅಗ್ರಸ್ಥಾನ. ಇಂಗ್ಲಿಷ್ ಹೊರತುಪಡಿಸಿ ಇಂಥ ಮಾಹಿತಿ ಬರವಣಿಗೆಯನ್ನು ಪ್ರಪಂಚದಾದ್ಯಂತ 262 ಭಾಷೆಗಳಲ್ಲೂ ಹೊರತರಲಾಗಿದೆ. ಕನ್ನಡದಲ್ಲಿ ‘ವಿಕಿಪೀಡಿಯ’ ರೂಪುಗೊಂಡ ಪ್ರಯತ್ನಕ್ಕೆ ಹತ್ತು ವರ್ಷಗಳು ತುಂಬಿವೆ.

ತೆರೆದ ಮನೆಯಂತಿರುವ ವಿಕಿಪೀಡಿಯಗೆ ಯಾರು ಬೇಕಾದರೂ ಲೇಖನಗಳನ್ನು ಬರೆಯಬಹುದು, ಬಳಕೆದಾರನೇ ಇಲ್ಲಿ ಸಂಪಾದಕ. ಮಾಹಿತಿ ಸೇರಿಸುವುದು, ಸಂಪಾದಿಸುವುದು, ತಪ್ಪು ತಿದ್ದುವುದು ಎಲ್ಲವೂ ಬಳಕೆದಾರನೇ. ಈ ಕೆಲಸವನ್ನು ಹಲವರು ಮಾಡುತ್ತಲೂ ಇದ್ದಾರೆ. ಆದರೂ ಕನ್ನಡದಲ್ಲಿ ಆನ್‌ಲೈನ್ ಮಾಹಿತಿ ಲಭ್ಯತೆಯ ಕೊರತೆ ಎದ್ದು ಕಾಣುತ್ತಿದೆ.

ಇಂಥ ಕೊರತೆ ನೀಗಲು ಹಾಗೂ ವಿದ್ಯಾರ್ಥಿಗಳಲ್ಲಿ ಕನ್ನಡದ ಕುರಿತು ಅಭಿಮಾನ ಬೆಳೆಯಲು ಬೇರೆಯದ್ದೇ ರೀತಿ ಯೋಜನೆ ರೂಪಿಸಿದ್ದು ಬೆಂಗಳೂರಿನ ಕ್ರೈಸ್ಟ್‌ ವಿಶ್ವವಿದ್ಯಾಲಯ. ಹನಿ ಹನಿ ಸೇರಿದರೆ ಹಳ್ಳ ಎನ್ನುವಂತೆ ಚಿಕ್ಕ ಪ್ರಯತ್ನದಿಂದಲೇ ಭಾಷೆ ಬೆಳವಣಿಗೆ ಸಾಧ್ಯವಾಗಿಸಲು ಹೊರಟಿದ್ದಾರೆ.

ಕ್ರೈಸ್ಟ್‌ ವಿದ್ಯಾಲಯದ ಪದವಿ ವಿದ್ಯಾರ್ಥಿಗಳು ಈಗ ಕನ್ನಡ ವಿಕಿಪೀಡಿಯ ಬೆಳವಣಿಗೆಯಲ್ಲಿ ಪಾಲುದಾರರು. ಪದವಿ ವಿದ್ಯಾರ್ಥಿಗಳಿಗೆ ಕನ್ನಡ ವಿಕಿಪೀಡಿಯದ ಪ್ರಾಜೆಕ್ಟ್‌ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಮಾಹಿತಿಯ ಅಗತ್ಯದ ಕುರಿತು ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ವಿದ್ಯಾಲಯ ಮಾಡುತ್ತಿದೆ.

ನವೆಂಬರ್ 2013ರಲ್ಲಿ ‘ಅಕ್ಸೆಸ್ ಟು ನಾಲೆಡ್ಜ್‌’ ಎಂಬ ಪರಿಕಲ್ಪನೆಯಲ್ಲಿ ಪಠ್ಯವಾಗಿ ವಿಕಿಪೀಡಿಯ ಪ್ರಾಜೆಕ್ಟ್‌ಅನ್ನು ಕಡ್ಡಾಯ ಮಾಡಿ ಜಾರಿಗೆ ತಂದಿತು ವಿಶ್ವವಿದ್ಯಾಲಯ. ಶಿಕ್ಷಣ ಎಂದರೆ ವ್ಯಾಪಾರದ ಸರಕಾಗಿರುವ ಇಂದಿನ ದಿನದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಜ್ಞಾನ ಪ್ರಕಾರದ ಕುರಿತು ಗಂಭೀರವಾಗಿ ಚಿಂತಿಸಿದ ವಿವಿಯ ರಿಜಿಸ್ಟ್ರಾರ್ ಅನಿಲ್ ಪಿಂಟೊ ವಿಕಿಪೀಡಿಯ ಪ್ರಯೋಗವನ್ನು ಜಾರಿಗೆ ತರಲು ಮುಂದಾದರು.

ಭಾಷೆಯ ಉಳಿವಿಗೆ ಡಿಜಿಟಲ್ ಸಂಸ್ಕೃತಿ
ತಂತ್ರಜ್ಞಾನದ ಸಾಧ್ಯತೆಗಳ ಕುರಿತು ವಿದ್ಯಾರ್ಥಿಗಳದು ಯಾವಾಗಲೂ ಬಿಡುಗಣ್ಣು. ಆ ಕಾರಣದಿಂದಲೇ ತಂತ್ರಜ್ಞಾನ ಹಾಗೂ ಮಾಹಿತಿ ಜ್ಞಾನ ಒಟ್ಟಾಗಿ ಬೆರೆತ ವಿಕಿಪೀಡಿಯ ಯೋಜನೆಯನ್ನು ಕೈಗೆತ್ತಿಕೊಂಡ ಅನಿಲ್, ಕನ್ನಡ ವಿಕಿಪೀಡಿಯದ ಸದಸ್ಯರೊಂದಿಗೆ ಕೈ ಜೋಡಿಸಿ ಪದವಿ ತರಗತಿಯಲ್ಲಿ ಎರಡನೇ ಹಾಗೂ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಕನ್ನಡ ವಿಕಿಪೀಡಿಯದಲ್ಲಿ ಲೇಖನ ಬರೆಯುವುದನ್ನು ಕಡ್ಡಾಯಗೊಳಿಸಿದರು.

ಬಿ.ಎ, ಬಿ.ಎಸ್ಸಿ, ಬಿ.ಕಾಂ, ಬಿ.ಬಿ.ಎಂ– ಹೀಗೆ ಎಲ್ಲಾ ಪದವಿ ತರಗತಿಯ ವಿದ್ಯಾರ್ಥಿಗಳಿಗೂ ವಿಕಿಪೀಡಿಯದಲ್ಲಿ ಲೇಖನ ಬರೆಯುವುದು ಪಠ್ಯದ ಭಾಗವಾಯಿತು. ಕನ್ನಡ ಮಾತ್ರವಲ್ಲದೆ ಹಿಂದಿ, ಸಂಸ್ಕೃತ, ತಮಿಳು, ಉರ್ದು– ಈ ಐದು ­ಭಾಷೆಯಲ್ಲಿ ವಿಶ್ವವಿದ್ಯಾಲಯದಲ್ಲಿ ವಿಕಿಪೀಡಿಯ ಕೆಲಸ ನಡೆಯುತ್ತಿದೆ. ಸದ್ಯಕ್ಕೆ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದಲ್ಲಿ ಸುಮಾರು 500 ವಿದ್ಯಾರ್ಥಿಗಳಿದ್ದಾರೆ.
‘ಕನ್ನಡ ವಿಕಿಪೀಡಿಯ ವಿಭಿನ್ನ ಪ್ರಯೋಗದಂತಿದೆ.

ಪ್ರಾಯೋಗಿಕ ಜ್ಞಾನ ವಿದ್ಯಾರ್ಥಿಗಳಿಗೆ ಎಷ್ಟು ಅಗತ್ಯ ಎಂಬುದನ್ನು ಅರಿತು ಈ ಪ್ರಾಜೆಕ್ಟ್‌ ಅನ್ನು ಕಡ್ಡಾಯ ಮಾಡಿದೆವು. ಅದಕ್ಕೆಂದೇ ಶಿಕ್ಷಕರನ್ನೂ ಅಣಿಗೊಳಿಸಿದೆವು. ಹೊಸ ರೀತಿಯ ಬರಹವನ್ನು ವಿದ್ಯಾರ್ಥಿಗಳು ಕಲಿತುಕೊಂಡಿದ್ದಾರೆ. ಈಗ ಬಹುಪಾಲು ವಿದ್ಯಾರ್ಥಿಗಳು ಕನ್ನಡದ ಮಾಹಿತಿ ಸಾಹಿತ್ಯದ ಕುರಿತು ಗಂಭೀರವಾಗಿ ಚಿಂತಿಸಲು ಆರಂಭಿಸಿದ್ದಾರೆ.

ಅವರಿಗೆ ಭಾಷೆ, ಅದರ ಪ್ರಾಮುಖ್ಯವೇನು ಎಂಬುದೂ ತಿಳಿದಿದೆ’ ಎಂದು ಸಂತೋಷದಿಂದ ಹೇಳಿಕೊಳ್ಳುತ್ತಾರೆ ಅನಿಲ್. ‘ಪಠ್ಯದ ವಿಷಯವಾಗಿ ಏನೇ ಪ್ರಾಜೆಕ್ಟ್‌ ಕೊಟ್ಟರೂ ವಿದ್ಯಾರ್ಥಿಗಳು ಅಲ್ಲಿಂದಿಲ್ಲಿಗೆ ಕಾಪಿ ಮಾಡಲೇಬೇಕಾಗುತ್ತದೆ. ಆ ಚಾಳಿಯನ್ನು ತಪ್ಪಿಸಬೇಕು ಎಂಬ ನಮ್ಮ ಉದ್ದೇಶ ಈ ಪ್ರಾಜೆಕ್ಟ್ನಿಂದ ಈಡೇರಿತು’ ಎನ್ನುತ್ತಾರೆ ಕನ್ನಡ ವಿಭಾಗದ ಮುಖ್ಯಸ್ಥ ಶಿವಪ್ರಸಾದ್.

‘ವಿದ್ಯಾರ್ಥಿಗಳಿಗೆ ಏನಾದರೂ ಹೊಸತನ್ನು ಕಲಿಸಬೇಕು, ಇದರಿಂದ ಮತ್ತೊಬ್ಬರಿಗೂ ನೆರವಾಗಬೇಕು. ಈ ಮೂಲಕ ನಮ್ಮ ಭಾಷೆಯೂ ಉಳಿಯಬೇಕು’ ಎಂದು ಅಭಿಮಾನದಿಂದ ಹೇಳುತ್ತಾರೆ ಅವರು. ಇಂಗ್ಲಿಷ್‌ಗೆ ಹೋಲಿಸಿದರೆ ಕನ್ನಡ ವಿಕಿಪೀಡಿಯ ರಕ್ತಹೀನತೆಯಿಂದ ಬಳಲುತ್ತಿರುವುದನ್ನು ಮನಗಂಡು, ವಿದ್ಯಾರ್ಥಿಗಳ ಮೂಲಕವಾದರೂ ಈ ಮಾಹಿತಿ ಸಾಹಿತ್ಯವನ್ನು ಸಶಕ್ತಗೊಳಿಸುವ ಕೆಲಸಕ್ಕೆ ಶುರುವಿಟ್ಟುಕೊಂಡ ಅಧ್ಯಾಪಕ ಬಳಗದವರಿಗೂ ಮೊದಲು ಕಂಡುಬಂದಿದ್ದು ವಿದ್ಯಾರ್ಥಿಗಳಿಂದ ಅಸಡ್ಡೆ. ಬದಲಾವಣೆಯ ಮೊದಲ ಹಂತ ಎಂದಿಗೂ ಸುಲಭವಲ್ಲ ಎಂಬುದನ್ನು ಅರಿತು ಯೋಜನೆಗೆ ಚಾಲನೆ ನೀಡಿದರು.

ಕ್ಯಾಂಪಸ್ ಅಂಬಾಸಿಡರ್‌
ಐನೂರು ಕನ್ನಡ ವಿದ್ಯಾರ್ಥಿಗಳಲ್ಲಿ ಸುಮಾರು 100 ವಿದ್ಯಾರ್ಥಿಗಳಿಗೆ ಮೊದಲು ತರಬೇತಿ ನೀಡಲಾಯಿತು. ಅವರನ್ನು ಕ್ಯಾಂಪಸ್ ಅಂಬಾಸಿಡರ್‌ಗಳೆಂದು ನೇಮಿಸಿ ಉಳಿದವರಿಗೆ ಅವರ ಮೂಲಕ ಮಾರ್ಗದರ್ಶನ ನೀಡಲಾಯಿತು. ಬರವಣಿಗೆಯ ವಿಷಯದ ಆಯ್ಕೆಯೂ ವಿದ್ಯಾರ್ಥಿಗಳದ್ದೇ. ವಿಷಯದ ಆಯ್ಕೆ, ಕಾಗುಣಿತ, ಬರೆಯುವ ರೀತಿ, ಸಂಪಾದನೆ ಸೇರಿದಂತೆ ತಾಂತ್ರಿಕ ಕೌಶಲ್ಯಕ್ಕೂ ಸೇರಿ ಅಂಕಗಳನ್ನು ನಿಗದಿಗೊಳಿಸಲಾಯಿತು.

‘ಎಲ್ಲ ಹಂತದಲ್ಲೂ ವಿದ್ಯಾರ್ಥಿಗಳೇ ಸ್ವಯಂ ಪ್ರೇರಣೆಯಿಂದ ತೊಡಗಿಕೊಳ್ಳುವಂತೆ ಮಾಡಲಾಯಿತು. ಸಾಮಾನ್ಯವಾಗಿ ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿಗಳಿಗೆ ಎರಡನೇ ಅಧ್ಯಯನ ಭಾಷೆಯ ಕುರಿತು ಅಸಡ್ಡೆ ಬೆಳೆದಿರುತ್ತದೆ. ಆ ಭಾಷೆಯನ್ನು ಮಾತನಾಡಲು, ಬರೆಯಲಷ್ಟೇ ರೂಢಿಸಿಕೊಂಡಿರುತ್ತಾರೆ. ಅದರಿಂದಾಚೆಗೆ ಅವರು ಯೋಚಿಸಿಯೂ ಇರುವುದಿಲ್ಲ. ಈಗ ಕನ್ನಡ ವಿಕಿಪೀಡಿಯ ಅವರಿಗೆ ತಮ್ಮ ಚೌಕಟ್ಟನ್ನು ಮೀರಿ ಯೋಚಿಸುವುದನ್ನು ಕಲಿಸಿದೆ’ ಎನ್ನುತ್ತಾರೆ ಕನ್ನಡ ಪ್ರಾಧ್ಯಾಪಕಿ ಎಂ.ಟಿ. ರತಿ.

‘ದಿ ಸೆಂಟರ್ ಫಾರ್ ಇಂಟರ್‌ನೆಟ್‌ ಅಂಡ್ ಸೊಸೈಟಿಯ ಯು.ಬಿ. ಪವನಜ ಅವರು ಈ ಪ್ರಾಜೆಕ್ಟ್‌ ಕುರಿತು ಪ್ರಸ್ತಾಪ ಮುಂದಿಟ್ಟಾಗ ಮೂರು ತಿಂಗಳು ಈ ಕುರಿತು ಚರ್ಚೆ ನಡೆಯಿತು. ನಾವೇಕೆ ನಮ್ಮ ವಿದ್ಯಾರ್ಥಿಗಳಿಂದ ಈ ಕೆಲಸ ಮಾಡಿಸಬಾರದು ಎಂಬ ಯೋಚನೆ ಹೊಳೆದಿದ್ದೇ, ಸರಳ ವಿಷಯಗಳಿಂದ ಕೆಲಸ ಶುರುವಿಟ್ಟುಕೊಂಡೆವು. ಈ ಮೂಲಕ ನಮ್ಮ ಭಾಷೆ, ಸಂಸ್ಕೃತಿಯನ್ನೂ ಪ್ರಪಂಚಕ್ಕೆ ಪರಿಚಯಿಸುವ ಖುಷಿ ನಮಗಿದೆ.

ಈಗ ಎಲ್ಲವೂ ಇಂಟರ್‌ನೆಟ್ ಅವಲಂಬಿತ. ಆದ್ದರಿಂದ ಅದನ್ನೇ ಬಳಸಿಕೊಂಡು ನಮ್ಮ ಭಾಷೆಯನ್ನು ಬೆಳೆಸುವ ಮಾರ್ಗ ಕನ್ನಡ ವಿಕಿಪೀಡಿಯ ಎನಿಸಿತು. ಅಷ್ಟೊಂದು ವಿದ್ಯಾರ್ಥಿಗಳಲ್ಲಿ ಕನಿಷ್ಠ ಐವತ್ತರಿಂದ ಎಪ್ಪತ್ತೈದು ವಿದ್ಯಾರ್ಥಿಗಳು ಈ ಪ್ರಾಜೆಕ್ಟ್‌ ಕುರಿತು ಗಂಭೀರವಾಗಿ ಚಿಂತಿಸಿದ್ದಾರೆ. ಇಷ್ಟು ಸಾಕಲ್ಲವೇ ನಮ್ಮ ಭಾಷೆಯ ಬೆಳವಣಿಗೆಗೆ?’ ಎನ್ನುತ್ತಾರೆ ರತಿ.

ಕೊಡುವ ಖುಷಿ!
ಸಾಮಾನ್ಯವಾಗಿ ವಿದ್ಯಾರ್ಥಿಗಳಾಗಿದ್ದಾಗ, ಜ್ಞಾನವನ್ನು ಪಡೆದಷ್ಟೇ ಗೊತ್ತಿರುತ್ತದೆ. ಆದರೆ ನಮ್ಮಿಂದ ಪ್ರಪಂಚಕ್ಕೆ ಏನಾದರೂ ನೀಡಲು ಸಾಧ್ಯವಿದೆ ಎಂಬುದನ್ನು ಕನ್ನಡ ವಿಕಿಪೀಡಿಯ ಮೂಲಕ ತೋರಿಸಿಕೊಟ್ಟಿದ್ದೇವೆ ಎನ್ನುತ್ತಿದ್ದಾರೆ ವಿದ್ಯಾರ್ಥಿಗಳು. ‘ಕನ್ನಡ ವಿಕಿಪೀಡಿಯದಲ್ಲಿ ಕೆಲಸ ಮಾಡಿದ್ದು ಸಾಕಷ್ಟು ಒಳ್ಳೆಯ ಅನುಭವಗಳನ್ನು ನೀಡಿದೆ. ಮಾಹಿತಿ ತಿಳಿದುಕೊಳ್ಳುವುದು, ಒಟ್ಟುಗೂಡಿಸುವುದು, ಸಂಶೋಧನೆ ಮಾಡುವುದು, ಭಾಷಾಂತರ ಮಾಡುವುದು ಎಲ್ಲವೂ ಸವಾಲೆನಿಸಿತ್ತು.

ಕನ್ನಡವನ್ನು ಮಾತಾಡುತ್ತಿದ್ದೆವೇ ಹೊರತು ಅದರಲ್ಲಿ ಲೇಖನಗಳನ್ನು ಸಿದ್ಧಪಡಿಸುವುದು ಗೊತ್ತಿರಲಿಲ್ಲ. ಬೇಕೆಂದಾಗ ಪದಗಳೂ ಸಿಗುತ್ತಿರಲಿಲ್ಲ. ಆದರೆ ವಿಕಿಪೀಡಿಯಗೆ ಕೆಲಸ ಮಾಡುತ್ತಿದ್ದಾಗ ಈ ಕುರಿತು ಗಂಭೀರವಾಗಿ ಯೋಚಿಸುವುದನ್ನು ಕಲಿತೆವು. ಇಬ್ಬಿಬ್ಬರು ಸೇರಿ ಪ್ರಾಜೆಕ್ಟ್‌ ಮಾಡಿದ್ದೆವು. ತೆಗೆದುಕೊಂಡ ವಿಷಯದ ಕುರಿತು ಒಂದು ವಾರ ಮಾಹಿತಿ ಪಡೆಯುವುದು, ಅದನ್ನು ಸಂಪಾದಿಸುವುದು, ಭಾಷಾಂತರ ಮಾಡುವುದು ಎಲ್ಲವನ್ನೂ ಮಾಡಿದೆವು.

ಸ್ವಲ್ಪ ಕಷ್ಟವೆನಿಸಿದರೂ ಇಷ್ಟವಾಗುತ್ತಾ ಹೋಯಿತು. ನಮ್ಮ ಹಳ್ಳಿಗಳಲ್ಲಿ ಇಂಗ್ಲಿಷ್ ಅಷ್ಟಾಗಿ ತಿಳಿದವರು ಇರುವುದಿಲ್ಲ, ಅಂಥವರಿಗೆ ಕನ್ನಡದ ಈ ಲೇಖನಗಳು ಎಷ್ಟು ಉಪಯೋಗಕ್ಕೆ ಬರುತ್ತವೆ ಎಂಬುದನ್ನು ತಿಳಿದಾಗ, ನಮ್ಮ ಕೆಲಸದ ಬಗ್ಗೆ ಹೆಮ್ಮೆಯೂ ಮೂಡಿತು’ ಎನ್ನುತ್ತಾರೆ ಬಿ.ಎಸ್ಸಿ ಓದುತ್ತಿರುವ ತೇಜಸ್.

ಮೊದ ಮೊದಲು ವಿದ್ಯಾರ್ಥಿಗಳಲ್ಲಿ ಈ ಕನ್ನಡ ವಿಕಿಪೀಡಿಯ ಪ್ರಾಜೆಕ್ಟ್‌ ಗೊಂದಲ ಹುಟ್ಟಿಸಿತ್ತು. ‘ಇಪ್ಪತ್ತು ಅಂಕಕ್ಕಾಗಿ ಇಷ್ಟೊಂದು ಕೆಲಸ ಮಾಡುವುದು ಯಾರು ಎಂದು ಅಸಡ್ಡೆ ತೋರಿದೆವು. ಆದರೆ ಕಲಿಯುತ್ತಾ ಹೋದಂತೆ ಅದರ ಉಪಯೋಗದ ಅರಿವು ನಮಗಾಯಿತು. ಕುವೆಂಪು ಮನೆಯ ಕುರಿತು ವಿಷಯ ಆಯ್ಕೆ ಮಾಡಿಕೊಂಡು ಬರೆಯಲು ತೊಡಗಿದಾಗ, ಸಂಶೋಧನೆ ಮಾಡಿ, ನಾನೇ ಚಿತ್ರಗಳನ್ನು ತೆಗೆದೆ.

ಅಲ್ಲಿನ ಅಪರೂಪದ ವಸ್ತುಗಳ ಬಗ್ಗೆ ತಿಳಿದುಕೊಂಡೆ. ವಿದ್ಯಾರ್ಥಿಗಳೆಲ್ಲ ಒಂದೆಡೆ ಕೂಡಿ ಸಭೆ ಮಾಡಿ ಚರ್ಚಿಸುತ್ತಿದ್ದೆವು. ಕೆಲಸ ಮಾಡುವುದು ಹೇಗೆ ಎಂಬ ಅನುಭವವೂ ಇದರಿಂದ ಸಿಕ್ಕಿತು. ಇಡೀ ಪ್ರಪಂಚವೇ ನಾವು ಬರೆದಿದ್ದನ್ನು ನೋಡುತ್ತದೆ ಎನ್ನುವಾಗ ಎಂಥವರಿಗೂ ಖುಷಿ ಎನಿಸುತ್ತದೆ ಅಲ್ಲವೇ’ ಎನ್ನುತ್ತಾರೆ ಬಿ.ಕಾಂ ವಿದ್ಯಾರ್ಥಿ ಗೌತಮ ಗೌಡ.

ಇನ್ನು ಮತ್ತೊಬ್ಬ ಬಿ.ಕಾಂ ವಿದ್ಯಾರ್ಥಿನಿ ವಿದ್ಯಾಗೆ ವಿಕಿಪೀಡಿಯ ಕುತೂಹಲಗಳ ಕಂತೆಯಂತಿತ್ತು. ಕನ್ನಡ ಭಾಷೆಯ ಬಗ್ಗೆ ಮೊದಲಿನಿಂದಲೂ ಇದ್ದ ಅಭಿಮಾನ ಇದರಿಂದ ಇನ್ನಷ್ಟು ಗಾಢವಾಗಿತ್ತು. ಮಾಹಿತಿ ಸಂಗ್ರಹಿಸು ವುದು, ಎಡಿಟ್ ಮಾಡುವುದು, ವಿಸ್ತರಿಸುವುದು ಎಲ್ಲವನ್ನೂ ಉತ್ಸಾಹ ದಿಂದ ಮಾಡುತ್ತಾ ಲೇಖನ ಮಾಡಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ  ಲೇಖನಗಳನ್ನು ಬರೆದು ಈ ಮೂಲಕ ಭಾಷೆ ಬೆಳೆಸುವ ಕನಸು ಹೊತ್ತಿದ್ದಾರೆ.

ಚಿಗುರಿನಿಂದ ಹೆಮ್ಮರವಾಗಿ...
ವಿದ್ಯಾರ್ಥಿ ಜೀವನದಲ್ಲಿ ಕಲಿಯುವುದಕ್ಕಷ್ಟೇ ಆದ್ಯತೆ. ಪ್ರಪಂಚಕ್ಕೆ ತಮ್ಮಿಂದ ಸಾಧ್ಯವಾಗುವ ಏನನ್ನಾದರೂ ನೀಡಬೇಕು ಎನ್ನುವ ಬಗ್ಗೆ ವಿದ್ಯಾರ್ಥಿಗಳು ಯೋಚಿಸುವುದು ಕಡಿಮೆ. ಆದರೆ ಈ ವಿದ್ಯಾರ್ಥಿಗಳು ತಮ್ಮಿಂದ  ಪ್ರಪಂಚಕ್ಕೆ ಅಕ್ಷರ ನೀಡುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಇಂಥ ಪ್ರಯತ್ನಗಳು ಇನ್ನಷ್ಟು ಕಾಲೇಜುಗಳಲ್ಲಿ ನಡೆದರೆ ಭಾಷೆಯ ಉಳಿವು, ಬೆಳವಣಿಗೆಗೆ ಸಾಧ್ಯವಾದಂತೆಯೇ.  

ಜ್ಞಾನದ ಬೆಳಕು ಹಂಚುತ್ತಾ... 
‘ಆಕ್ಸೆಸ್ ಟು ನಾಲೆಡ್ಜ್‌’ ಎಂಬ ಪರಿಕಲ್ಪನೆಯಲ್ಲಿ ಈ ಪ್ರಾಜೆಕ್ಟ್‌ ಅನ್ನು ಕ್ರೈಸ್ಟ್‌ ವಿವಿ ಮುಂದಿಟ್ಟೆವು. ಇದರ ಸಾಧ್ಯಾಸಾಧ್ಯತೆಗಳ ಕುರಿತು ಚರ್ಚೆ ನಡೆಯಿತು. ನಂತರ ಕಾರ್ಯರೂಪಕ್ಕೆ ತರಲಾಯಿತು. ಭಾಷೆ ಕಲಿತಿದ್ದು ಮಾತ್ರವಲ್ಲ, ಹೇಗೆ ಒಟ್ಟಾಗಿ ಕೆಲಸ ಮಾಡಬೇಕು ಎಂಬುದನ್ನು ತಿಳಿದುಕೊಂಡರು. ಇದರಿಂದ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವವೂ ಬೆಳೆದಿದೆ.

ಅಂಕಗಳು ಮಾನದಂಡವಷ್ಟೆ. ಕನ್ನಡ, ಹಿಂದಿ, ಸಂಸ್ಕೃತ, ತಮಿಳು, ಉರ್ದು ಐದೂ ಭಾಷೆಯಲ್ಲಿ ವಿಕಿಪೀಡಿಯ ಪ್ರಾಜೆಕ್ಟ್‌ ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಸಲುವಾಗಿ ಐದು ಉನ್ನತ ಲೇಖನಗಳಿಗೆ ಪ್ರಮಾಣ ಪತ್ರವನ್ನೂ ನೀಡಲಾಯಿತು. ನೋಂದಣಿ, ವಿಷಯದ ಆಯ್ಕೆ, ಕಾಗುಣಿತ, ಕೊಂಡಿಗಳ ಆಯ್ಕೆ ಎಲ್ಲವನ್ನೂ ನೋಡಿ ಅಂಕ ನಿಗದಿ ಮಾಡಲಾಗುತ್ತದೆ. ಇಬ್ಬರಿಗೆ ಒಂದರಂತೆ ಒಟ್ಟು 372 ವಿಷಯಗಳು ಇದ್ದವು. ಅದರಲ್ಲಿ ಕನಿಷ್ಠವೆಂದರೂ ಶೇ.25ರಷ್ಟು ಉತ್ತಮ ಲೇಖನಗಳು ಮೂಡಿಬಂದಿವೆ.
–ಯು.ಬಿ. ಪವನಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT