ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಯದ ಹೇಮೆ: ಕಂಗಾಲಾದ ರೈತ

Last Updated 4 ಅಕ್ಟೋಬರ್ 2011, 10:20 IST
ಅಕ್ಷರ ಗಾತ್ರ

ಕುಣಿಗಲ್: ಸರ್ಕಾರ, ಜಿಲ್ಲಾಡಳಿತ-ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ತಾಲ್ಲೂಕಿಗೆ ಹೇಮಾವತಿ ನೀರು ಸಕಾಲದಲ್ಲಿ ಹರಿಯದೆ ರೈತರು ಕಂಗಾಲಾಗಿದ್ದಾರೆ ಎಂದು ಮಾಜಿ ಶಾಸಕ ಎಸ್.ಪಿ.ಮುದ್ದಹನುಮೇಗೌಡ ಆರೋಪಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ರಾಜಕೀಯ ಸಂದಿಗ್ಧ ಪರಿಸ್ಥಿತಿ ನಡುವೆ ಚುನಾವಣೆ, ಪಕ್ಷದ ಆಂತರಿಕ ಕಲಹಗಳಲ್ಲಿ ಮುಳುಗಿದ್ದು, ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಹಾಸನ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಹೇಮಾವತಿ ನೀರಿನ ಸದ್ಬಳಕೆ ಬಗ್ಗೆ ನೀರಾವರಿ ಸಲಹಾ ಸಮಿತಿ ಸಭೆ ನಡೆಯಬೇಕಾಗಿದ್ದು, ಅಧಿಕೃತವಾಗಿ ಸಭೆ ನಡೆದಿಲ್ಲ. ಉಸ್ತುವಾರಿ ಸಚಿವರು ಸ್ವಾಮೀಜಿಗಳ ಸೇವೆ ಹಾಗೂ ರಾಜಕೀಯಕ್ಕೆ ಹೆಚ್ಚು ಒತ್ತು ನೀಡಿದ್ದಾರೆ ಹೊರತು ರೈತರ ಸಂಕಷ್ಟಗಳ ಬಗ್ಗೆ ಅರಿವೆ ಇಲ್ಲವಾಗಿದೆ ಎಂದು ಟೀಕಿಸಿದರು.

ಮಾಜಿ ಸಚಿವ ಎಚ್.ಡಿ.ರೇವಣ್ಣ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಹೇಮಾವತಿ ನೀರು ತುಮಕೂರು ಜಿಲ್ಲೆಗೆ ಹರಿದುಬರುತ್ತಿದೆ. ಆದರೂ ಹರಿಯುವ ಪ್ರಮಾಣ ಸಮರ್ಪಕವಾಗಿಲ್ಲ ಎಂದರು.

ಪ್ರತಿ ವರ್ಷವೂ ತಾಲ್ಲೂಕಿನ ಮಾರ್ಕೋನಹಳ್ಳಿ, ಮಂಗಳಾ ಜಲಾಶಯ ಸೇರಿದಂತೆ ಕೊತ್ತಗೆರೆ, ದೊಡ್ಡಕೆರೆಗಳ ಅಚ್ಚುಕಟ್ಟು ಪ್ರದೇಶಗಳಿಗೆ ಸಕಾಲದಲ್ಲಿ ಬೆಳೆಗೆ ನೀರನ್ನು ಕೊಡದೆ ಬೆಳೆ ನಷ್ಟವಾಗುವ ಆತಂಕ ಪರಿಸ್ಥಿತಿ ನಿರ್ಮಿಸಿ ನೀರು ಹರಿಸುವ ಪರಿಪಾಠ ಕೈಬಿಟ್ಟು, ಶಾಶ್ವತ ನೀತಿ ರೂಪಿಸಿ ಬೆಳೆಗಳಿಗೆ ನೀರನ್ನು ಹರಿಸಬೇಕು ಎಂದು ಆಗ್ರಹಿಸಿದರು.

ಜಲಾಶಯಕ್ಕೆ ನೀರು: ಶಾಸಕ
ಕುಣಿಗಲ್: ತಾಲ್ಲೂಕಿನ ಮಾರ್ಕೋನಹಳ್ಳಿ ಮತ್ತು ಮಂಗಳಾ ಜಲಾಶಯಗಳಿಗೆ ನೀರು ಹರಿದು ಬರುತ್ತಿದ್ದರೂ; ರಾಜಕೀಯ ಲಾಭ ಪಡೆಯುವ ದುರುದ್ದೇಶದಿಂದ ಜೆಡಿಎಸ್ ಮುಖಂಡರು ಪ್ರತಿಭಟನೆ ಹಾಗೂ ಹೇಳಿಕೆ ನೀಡುತ್ತಿರುವುದು ದುರದೃಷ್ಟಕರ ಎಂದು ಶಾಸಕ ಬಿ.ಬಿ.ರಾಮಸ್ವಾಮಿಗೌಡ ತಿಳಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ಅಧಿಕಾರಾವಧಿಯಲ್ಲಿ ಕಳೆದ ಮೂರು ವರ್ಷಗಳಿಂದಲೂ ಸರ್ಕಾರದ ಗಮನ ಸೆಳೆದು ಹೇಮಾವತಿ ನಾಲಾ ವಲಯದ ಅಧಿಕಾರಿಗಳಿಗೆ ಒತ್ತಡ ಹಾಕಿ ನೀರಿಗಾಗಿ ಬೀದಿಗಿಳಿದು ಹೋರಾಟ ಮಾಡುವ ಪರಿಪಾಠ ತಪ್ಪಿಸಿದ್ದು, ಈ ಬಾರಿ ಮಳೆ ಪ್ರಮಾಣ ಕಡಿಮೆಯಾದ ಕಾರಣ ನೀರನ್ನು ಹರಿಸಲು ತಡವಾಗಿದೆ.

ಆದರೂ ಬೆಳೆಗೆ ಅವಶ್ಯಕವಾಗಿರುವ ನೀರನ್ನು ಹರಿಸುವಂತೆ ಒತ್ತಡ ಹೇರಿದ್ದ ಹಿನ್ನೆಲೆಯಲ್ಲಿ ಹೇಮಾವತಿ ನಾಲೆಯಿಂದ ಈಗಾಗಲೇ ನೀರು ಹರಿದು ಬರುತ್ತಿದೆ. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರು ತಾಳ್ಮೆ ವಹಿಸಿ ರೈತರ ಆತಂಕ ನಿವಾರಿಸುವ ಬದಲು ಅನವಶ್ಯಕ ಸಮಸ್ಯೆ ಸೃಷ್ಟಿಸುತ್ತಿರುವುದು ನ್ಯಾಯ ಸಮ್ಮತವಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT