ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿವ ನೀರು: ಕಟುಮಧುರ ಕತೆಗಾರ್ತಿ- ಕೊಡಗಿನ ಗೌರಮ್ಮ

Last Updated 19 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಒಂದು ರೀತಿಯಲ್ಲಿ ಅಂದಿನ ಬಂಗಾಲೀ ಕಾದಂಬರಿಗಳಲ್ಲಿ ನಮಗೆ ಕಾಣ ಸಿಗುವ ಸುಧಾರಿತ ಮನೋಧರ್ಮದ ಭಾವನಾಶೀಲ ಮಹಿಳೆಯನ್ನು ನೆನಪಿಸುವ ಮಹಿಳೆ, ಕತೆಗಾರ್ತಿ ಕೊಡಗಿನ ಗೌರಮ್ಮ. ಈಜು, ಟೆನಿಸ್ ಮುಂತಾದವು ಈಗಲೂ ಮಹಿಳಾ ಲೋಕದ, ಅದರಲ್ಲಿಯೂ ಲೇಖಕಿಯರ ಜೀವನದಲ್ಲಿನ, ‘ಸಾಮಾನ್ಯ ಸಂಗತಿ’ ಅಲ್ಲದಿರುವಾಗ ಗೌರಮ್ಮ ಪ್ರತಿದಿನವೂ ತಪ್ಪದೆ ಟೆನಿಸ್ ಆಡುತಿದ್ದರು ಮತ್ತು ಮನೆ ಹತ್ತಿರವೇ ಹರಿಯುವ ಹೊಳೆಯಲ್ಲಿ ಪ್ರತಿದಿನ ಸಂಜೆ ಈಜುತಿದ್ದರು ಎಂಬುದು ಅವರ ವೈಯಕ್ತಿಕ ಜೀವನಕ್ರಮ ತಮ್ಮ ಕಾಲಕ್ಕಿಂತ ಎಷ್ಟು ಮುಂದೆ ಇತ್ತೆಂಬುದನ್ನು ಸೂಚಿಸುತ್ತಿದೆ. ಈ ಬಗೆಯ ಜೀವನದ ಮಾನಸಿಕ ಮುಂದರಿಕೆಯಂತೆ ಕಥಾವಸ್ತುವಿನ ಬಗೆಗಿನ ಅವರ ಮಂಥನ ಕ್ರಮವೂ ಅಂದಿನ ದಿನಕ್ಕೆ ಹೋಲಿಸಿದರೆ ಆಧುನಿಕವೇ ಆಗಿದೆ. ತನಗೆ ಬೇಕಾದ್ದನ್ನು ಕಲಿಯುವ, ಸ್ನೇಹ ಬಳಗ ಕಟ್ಟುವ ಅವಕಾಶವಿದ್ದ ಅದೃಷ್ಟದ ಈ ಲೇಖಕಿ ಮಡಿಕೇರಿಯ ಸಂತ ಜೋಸೆಫರ ವಿದ್ಯಾಶಾಲೆಯ ವಿದ್ಯಾರ್ಥಿನಿ. ಹಿಂದೀ ‘ವಿಶಾರದೆ’. ಆಂಗ್ಲ ಸಾಹಿತ್ಯದ ಪರಿಚಯವೂ ಅವರಿಗೆ ಸಾಕಷ್ಟಿತ್ತು ಎನ್ನುತ್ತಾರೆ. ಮೂಲತಃ ಸ್ನೇಹಶೀಲೆಯಾಗಿದ್ದ ಅವರ ಆತ್ಮೀಯರ ಬಳಗದಲ್ಲಿ ಲೇಖಕಿಯರೂ ಇದ್ದರು, ಲೇಖಕರೂ. ಆರ್.ಕಲ್ಯಾಣಮ್ಮ, ಗಾಯಕಿ ಶಕುಂತಲಾಚಾರ್, ಲೇಖಕಿ ಪದ್ಮಾವತಿ ರಸ್ತಗಿ ಮುಂತಾದವರು ಗೌರಮ್ಮನವರ ನಿಕಟವರ್ತಿಯಾಗಿದ್ದರು. ಮಾಸ್ತಿ, ಬೇಂದ್ರೆ, ರಾಜರತ್ನಂ, ದ.ಬಾ. ಕುಲಕರ್ಣಿ ಮುಂತಾದವರೆಲ್ಲ ಅವರ ಮನೆಗೆ ಹೊಕ್ಕು ಬಳಕೆಯಿದ್ದವರು.

ಶ್ರೀಮತಿ ನಂಜಕ್ಕ ಮತ್ತು ವಕೀಲ್ ಶ್ರೀ ಎನ್.ಎಸ್. ರಾಮಯ್ಯ ಅವರ ಕೊನೆಯ ಮಗಳಾಗಿ 1912, ಮಾರ್ಚ್ 5ರಂದು ಮಡಿಕೇರಿಯಲ್ಲಿ ಜನಿಸಿದ ಗೌರಮ್ಮ ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡು ತಂದೆಯ ಕಣ್ಣರಕೆಯಲ್ಲಿ ಬೆಳೆದವರು. ಒಳಮನೆಯಲ್ಲಿ ತೀರಾ ಬಂಧನದ ವಾತಾವರಣವೂ ಇಲ್ಲವಾಗಿ ಸಹಜವಾಗಿಯೇ ಸಣ್ಣಂದಿನಲ್ಲೆ ಅವರಲ್ಲಿ ಸ್ವತಂತ್ರ ವ್ಯಕ್ತಿತ್ವ ಕಣ್ಣೊಡೆಯಿತು. ಅದುವೇ ಮುಂದೆ ಅವರ ಜೀವನ ಶೈಲಿಯನ್ನೂ ನಿರ್ದೇಶಿಸಿತು ಎನ್ನುತ್ತಾರೆ. 1925ರಲ್ಲಿ ಅವರ ಸಂಬಂಧಿಕರೇ ಆದ ಶುಂಠಿಕೊಪ್ಪದ ಶ್ರೀ ಬಿ.ಟಿ. ಗೋಪಾಲಕೃಷ್ಣಯ್ಯನವರನ್ನು ವಿವಾಹವಾದ ಗೌರಮ್ಮ, ವ್ಯಾವಹಾರಿಕವಾಗಿ ಶ್ರೀಮತಿ ಬಿ.ಟಿ.ಜಿ. ಕೃಷ್ಣ ಎಂದು ನಾಮಾಂಕಿತರಾದರು. ಪತ್ನಿಯ ವ್ಯಕ್ತಿತ್ವವನ್ನು ಗೌರವದಿಂದ ಕಂಡ ಅಭಿರುಚಿವಂತ ಪತಿ ಯಜಮಾನಿಕೆ ಮೆರೆಸದೆ ನಿಜಅರ್ಥದಲ್ಲಿ ಅವರ ‘ಬಾಳಗೆಳೆಯ’ರಾದರು. 1931ರಲ್ಲಿ ಪುತ್ರ ವಸಂತನ ಆಗಮನವೂ ಆಗಿ ಮನೆಮನವೆಲ್ಲ ಉಲ್ಲಾಸದ ಅಲರಾಯಿತು.

ತಾಯಿಯಿಲ್ಲದ ಕೊರತೆ ಮಾತ್ರ ಅವರಲ್ಲಿ ಇದ್ದೇ ಇತ್ತು. ಗೆಳೆಯ ಶ್ರೀ ದ.ಬಾ, ಕುಲರ್ಣಿಯವರ ತಾಯಿಯನ್ನು ತನ್ನದೇ ತಾಯಿಯೆಂಬಂತೆ ಭಾವಿಸಿಕೊಳ್ಳುವ ಮೂಲಕ ಆ ಕೊರತೆಯನ್ನು ಮೀರಿಕೊಳ್ಳಲು ಅವರು ಯತ್ನಿಸಿದ್ದರು. ಅದಕ್ಕೆ ಸರಿಯಾಗಿ ದ.ಬಾ. ಅವರ ತಾಯಿಗಾದರೂ ಅಷ್ಟೆ. ಗೌರಮ್ಮ ಎಂದರೆ ತನ್ನ ಮಗಳೇ ಎಂಬ ವಾತ್ಸಲ್ಯ. ಒಮ್ಮೆ ಕಾವೇರಿ ಸಂಕ್ರಮಣದ ಸಂದರ್ಭದಲ್ಲಿ ‘ನಿಮ್ಮ ತಾಯಿಯನ್ನು ಕಳಿಸಿಕೊಡಿ’ ಎಂದು ಗೌರಮ್ಮ ದ.ಬಾ. ಅವರಿಗೆ ಪತ್ರ ಬರೆದಾಗ ಉತ್ತರವಾಗಿ ದ.ಬಾ. ಅವರು ‘ಮಗಳ ಮನೆಗೆ ಹೋಗಲು ಅವ್ವ ಹಟಹಿಡಿಯುತಿದ್ದಳು. ಆದರೆ ಅವಳ ಅನಾರೋಗ್ಯದ ಕಾರಣ ಕಳಿಸಲು ಸಾಧ್ಯವಾಗುತ್ತಿಲ್ಲ’ ಎಂದು ಬರೆದರಂತೆ.

‘ಮಗಳ ಮನೆಗೆ ಹೋಗಲು’ ಎಂಬುದನ್ನು ಓದಿದ ಗೌರಮ್ಮ ಭಾವುಕರಾಗಿ ತಕ್ಷಣವೇ ದ.ಬಾ. ಅವರಿಗೆ ಪತ್ರ ಬರೆದು ಆ ವಾಕ್ಯದಿಂದ ತನಗೆ ಎಷ್ಟು ತಂಪಾಯಿತೆಂದು ತಿಳಿಸುತ್ತ ತಾಯಿ ಇರುವವರಿಗೆ ಇದು ಕಲ್ಪನೆಗೂ ಬಾರದು ಅಂತ ಬರೆದರಂತೆ. ತನ್ನನ್ನು ಕಾಡುವ ಖಾಲಿತನ ಮಗನಲಿರಬಾರದೆಂದು ಆತನನ್ನು ಕಣ್ರೆಪ್ಪೆಯಂತೆ ನೋಡಿಕೊಳ್ಳುತಿದ್ದರಂತೆ. ಮನೆ, ಸಂಸಾರ, ಸಮಾಜಸೇವೆ,
ರಾಜಕೀಯ, ಎಲ್ಲವನ್ನೂ ಒಂದಕ್ಕೊಂದು ಘರ್ಷಣೆಯಾಗದಂತೆ ಸಮಯ ಹೊಂದಿಸಿ, ಒಂದು ಕೀಳು ಒಂದು ಶ್ರೇಷ್ಠ ಎನ್ನದೆ ಏಕರೀತಿಯ ಶ್ರದ್ಧೆಯಲ್ಲಿ ನಿಭಾಯಿಸಿದ ಸಾಮರ್ಥ್ಯ ಹಾಗೂ ಜೀವನಾಸ್ಥೆ ಅವರದು. ಅವರ ಆತ್ಮೀಯರಲ್ಲಿ ಒಬ್ಬರಾಗಿದ್ದ ಕೊಡಗಿನ ಲೇಖಕ ಭಾರತೀಸುತರ ಪ್ರಕಾರ ಗೌರಮ್ಮ ಅತ್ಯಂತ ಸ್ಪಷ್ಟ ನೇರ ನಡೆ ನುಡಿಯವರಾಗಿದ್ದರು.

ರಾಜಕೀಯ ಹಿನ್ನೆಲೆಯುಳ್ಳ ಕುಟುಂಬಿಕರು ಮತ್ತು ಸ್ನೇಹಿತರಿಂದಾಗಿ ಗೌರಮ್ಮನೂ ರಾಜಕೀಯದಲ್ಲಿ ಆಸಕ್ತಿ ಬೆಳೆಸಿಕೊಂಡು ಅಂದಿನ ನ್ಯಾಶನಲ್ ಕಾಂಗ್ರೆಸ್ ಪರ ಕೆಲಸ ಮಾಡುತಿದ್ದರು. ಗಾಂಧೀಜಿ ಒಮ್ಮೆ ಕೊಡಗಿಗೆ ಬಂದವರು ಗುಂಡುಕುಟ್ಟಿಯಲ್ಲಿ ತಂಗಿದ್ದರು. ಅವರು ತಂಗಿದ ಪಕ್ಕದ ಮನೆಯೇ ಗೌರಮ್ಮನವರ ಮನೆ. ಗೌರಮ್ಮನಿಗೆ ಗಾಂಧೀಜಿ ತಮ್ಮ ಮನೆಗೆ ಬರಬೇಕೆಂಬ ಆಸೆ. ಸ್ವಾಗತ ಮಂಡಲಿಯವರೋ ಅವರನ್ನು ಕರೆತರಲು ಒಪ್ಪರು. ಗೌರಮ್ಮ ಉಪವಾಸ ಕುಳಿತರು. ವಿಚಾರ ತಿಳಿದು ಗಾಂಧೀಜಿ ತಾನು ಖಂಡಿತಾ ಬರುವೆನೆಂದು ಹೇಳಿಕಳಿಸಿದರು. ಗೌರಮ್ಮನಿಗೆ ಅದು ಸಾಲದಾಯಿತು. ಶಬರಿಯೇ ಶ್ರೀರಾಮನ ಬಳಿಗೆ ಹೋದಂತೆ ಸೀದಾ ಗಾಂಧೀಜಿ ಇದ್ದಲ್ಲಿಗೆ ಹೋದರು. ಗದ್ಗದಿತರಾಗಿ- ತಮ್ಮ ಮನೆಗೆ ಬರಬೇಕೆಂದೂ, ಅವರಿಗಾಗಿ ಕೆಲವು ಒಡವೆಗಳನ್ನು ತಾನು ತೆಗೆದಿಟ್ಟಿರುವೆನೆಂದೂ ಹೇಳಿ ಅವರಿಂದ ಬರುವ ಮಾತನ್ನು ಖುದ್ದು ಪಡಕೊಂಡ ಮೇಲೆಯೇ ಸೈ ಆಕೆ ಉಪವಾಸ ನಿಲ್ಲಿಸಿದ್ದು. ಗಾಂಧೀಜಿ ಗೌರಮ್ಮನ ಮನೆಗೆ ಬಂದದ್ದು, ತನ್ನೆಲ್ಲ ಚಿನ್ನವನ್ನು ಗೌರಮ್ಮ ಗಾಂಧೀಜಿಯವರ ಹರಿಜನೋದ್ಧಾರ ಕಾರ್ಯಕ್ಕಾಗಿ ನೀಡಿದ್ದು, ಇನ್ನು ಕರಿಮಣಿತಾಳಿ ಮತ್ತು ನತ್ತು ಬಿಟ್ಟರೆ ಬೇರೆ ಚಿನ್ನ ಧರಿಸುವುದಿಲ್ಲವೆಂದು ಅವರೆದುರು ಪ್ರತಿಜ್ಞೆ ಮಾಡಿದ್ದು, ಕೊನೆಯವರೆಗೂ ಆ ಪ್ರತಿಜ್ಞೆಯನ್ನು ಪಾಲಿಸಿದ್ದು ಎಲ್ಲ ಗೌರಮ್ಮನ ಜೀವನ ಚರಿತ್ರೆಯ ಧೀರ ಜಾಗೃತ ಪುಟಗಳು. ಸಮಾಜದಲ್ಲಿ- ಸಾಮಾನ್ಯವಾಗಿ- ಹೆಣ್ಣುಮಕ್ಕಳ ಜೊತೆಗೆ ಚಿನ್ನದ ಮೋಹ ಎಂದಿಗೂ ಜೋಡಿಕೊಂಡೇ ಬಂದಿದೆ. ಅದು ತುಸುಮಟ್ಟಿಗೆ ಸಡಿಲವಾಗಿದ್ದು ಸ್ವಾತಂತ್ರ್ಯ ಚಳವಳಿಯ ಕಾಲಘಟ್ಟದಲ್ಲಿ. ಸ್ವಾತಂತ್ರ್ಯ ಎಂಬ ಕೇಂದ್ರ ಉದ್ದೇಶವನ್ನು ಸಾಧಿಸುವತ್ತ ಪುರುಷರೊಂದಿಗೆ ಮಹಿಳೆಯರೂ ಸರಿಸರಿಯಾಗಿ ಹೋರಾಟಕ್ಕಿಳಿದ ಐತಿಹಾಸಿಕ ಸಂದರ್ಭವದು. ನಮ್ಮ ಒಬ್ಬ ಲೇಖಕಿಯೂ ಅದರಲ್ಲಿ ಪಾಲ್ಗೊಂಡಿದ್ದು ಪ್ರಾಯಶಃ ಕನ್ನಡ ಲೇಖಕಿಯರ ಮಟ್ಟಿಗೆ ವಿರಳ ಉದಾಹರಣೆಗಳಲ್ಲೊಂದು. ಪಾಲ್ಗೊಂಡಿದ್ದು ಮಾತ್ರವಲ್ಲ ತನ್ನ ಅನುಭವಗಳನ್ನು, ಬಹಳ ಮುಖ್ಯವಾಗಿ ಗಾಂಧೀಜಿಯವರ ಪ್ರಭಾವವನ್ನೂ ಕಥಾಚೌಕಟ್ಟಿನಲ್ಲಿ ತೊಡಗಿಸಿ, ಸ್ತ್ರೀಸ್ವಾತಂತ್ರ್ಯ ಪ್ರೀತಿ ಮದುವೆ ವೈಧವ್ಯ ಜಾತಿ ಮತ ಧರ್ಮ ಇತ್ಯಾದಿ ವಿವಿಧ ಸಮಸ್ಯೆಗಳನ್ನು ಆಯ್ದುಕೊಂಡು, ದನಿಯನ್ನು ಏರಿಸದೆ ಇಳಿಸದೆ ತೀಕ್ಷ್ಣತೆಯನ್ನೂ ಗಾಂಭೀರ್ಯವನ್ನೂ ಕಳೆಯದೆ ನಿರ್ವಹಿಸಿದ ಪರಿ ಅನನ್ಯ.  ‘ಮನುವಿನ ರಾಣಿ’ ಎಂಬ ಕತೆಯಂತೂ ‘ಗಾಂಧೀಜಿ ಎಂಬ ಲೇಖಕಿ’ ಬರೆದಂತಿದೆ.  
*
ಇಪ್ಪತ್ತನೆಯ ಶತಮಾನದ ಮೂವತ್ತನೇ ದಶಕವೆಂದರೆ ಸ್ತ್ರೀಲೋಕದ ಕತೆಗಳು ಆವರೆಗಿನ ಪೌರಾಣಿಕ ಜಡತೆಯನ್ನು ಕೊಡವಿ ಹೊಸಹುಟ್ಟು ಪಡೆಯುತಿದ್ದ ದಶಕ ಎನ್ನಬೇಕು. ಲೇಖಕಿಯರು ಮಹಿಳೆಯರ ಭವ-ಭಾವಲೋಕದ ಬದುಕನ್ನು ಕೌಟುಂಬಿಕ ಸಾಮಾಜಿಕ ನೋವು ನಲಿವು ಸಮಸ್ಯೆಗಳನ್ನು ಕಥಾರೂಪದಲ್ಲಿ ಕಾಣಿಸಿದ, ಹೆಚ್ಚು ಇಹಪರವಾಗಿಸಿದ, ಅವಧಿ ಅದು. ಶ್ಯಾಮಲಾ ಬೆಳಗಾಂವ್‌ಕರ್, ಸರಸ್ವತೀಬಾಯಿ ರಾಜವಾಡೆ ಮತ್ತು ಕೊಡಗಿನ ಗೌರಮ್ಮ- ಈ ಮೂವರು ಕನ್ನಡ ಮಹಿಳಾ ಕಥಾಸಾಹಿತ್ಯದ ಮೊದಲ ತಲೆಮಾರಿನ ಪ್ರಮುಖ ಲೇಖಕಿಯರಾಗಿ ಹೊಮ್ಮಿದ, ಆಗಿನ ಮುಖ್ಯ ಪತ್ರಿಕೆಗಳಾದ ‘ರಾಷ್ಟ್ರಬಂಧು’, ‘ಪ್ರಜಾಮತ’, ‘ಜಯಕರ್ನಾಟಕ’, ‘ಜಯಂತಿ’, ‘ಕೇಸರಿ’, ‘ಜೀವನ’, ಕಥಾವಳಿ’ ಮುಂತಾದ ಒಂದಲ್ಲ ಒಂದು ಪತ್ರಿಕೆಗಳಲ್ಲಿ ಇವರಲ್ಲಿ ಒಬ್ಬರಲ್ಲ ಒಬ್ಬರ ಕಥೆಗಳು ಪ್ರಕಟಗೊಳ್ಳುತಿದ್ದ ಅವಧಿ.

ಈ ಮೂವರಲ್ಲಿ ಗೌರಮ್ಮನ ಕಥೆಗಾರಿಕೆಯಲ್ಲಿ ಕಾಣುವ ವಿಶೇಷವೆಂದರೆ ಸಮಗ್ರ, ಸಮಕೋನ ದೃಷ್ಟಿ. ಮಹಿಳೆ ಮತ್ತು ಅವಳ ಸಮಸ್ಯೆಯ ಒತ್ತಿಗೇ ಅದರ ಸುತ್ತಣ ಸಮಾಜ ಮತ್ತು ಕಾರ್ಯಕಾರಣ ಸಂಬಂಧ. ಲೇಖಕಿಯ ಮಾನಸ ಸಂಚಾರದ ಬೌದ್ಧಿಕ ರೇಕು. ನಿರೂಪಣೆಯ ಸೀದ ದಾರಿ ಮುರಿದು ಮತ್ತೆ ಸೇರುವ, ಪತ್ರ ಲೇಖನದ ಒಕ್ಕಣೆಗಳ ಮೂಲಕವೇ ಕಥಾಚಿತ್ರವನ್ನು ಓದುಗರೇ ಕಟ್ಟಿಕೊಳ್ಳುವಂತೆ ಮಾಡುವ, ಜಾತಿ ಮತ ಧರ್ಮ ವಿಚಾರಗಳನ್ನೂ ಕಥನದ ವಿವಿಧ ದಿಕ್ಕುಗಳಲ್ಲಿ ಪಾತ್ರಗಳನ್ನು ಕೆತ್ತಿ ನಿಲ್ಲಿಸಿ ಅವರ ಚಲನೆಯ ಮೂಲಕವೇ ಸೂಕ್ಷ್ಮ-ವಾಚ್ಯ ಬೆರೆಸಿ ಚಿಂತಿಸುವ- ಅಂದಿನ ದಿನಕ್ಕೆ ನವನವೀನವೆನಿಸುವ ಬರವಣಿಗೆ ಅದು. ಲವಲವಿಕೆಯ ಭಾಷೆಯಂತೂ ಅವರ ವ್ಯಕ್ತಿತ್ವದ ಮುಂದರಿಕೆಯಾಗಿ ಅವರ ನೆರವಿಗೆ ನಿಂತಿದೆ. ಒಂದು ಸರಳ ಕಾದಂಬರಿಯ ಜಾಡು ಹಿಡಿದು ನಡುವಿನಲ್ಲೇ ಕಡಿದು ಮುಗಿಸಿದ ದೀರ್ಘ ಕತೆ (ಪಾಪನ ಮದುವೆ), ವಿಧವೆಯೊಬ್ಬಳು ತಾನು ಕೆಲಸ ಮಾಡುತ್ತಿದ್ದ ಮನೆಯ ಯಜಮಾನನಿಂದ ಅತ್ಯಾಚಾರಕ್ಕೊಳಗಾಗಿ ಇನ್ನೆಲ್ಲಿಯೂ ಆಶ್ರಯ ಸಿಗದೆ, ತನ್ನ ಮುಸ್ಲಿಂ ಗೆಳತಿಯ ಮನೆ ಸೇರಿ ಮತಾಂತರಗೊಂಡಾಗ, ಆ ಯಜಮಾನನ ನೇತೃತ್ವದಲ್ಲೇ ಊರವರು ಸಭೆ ಸೇರಿ ‘ಇನ್ನು ಮೇಲೆ ಹೀಗಾಗದಂತೆ ಹಿಂದೂಧರ್ಮದ ರಕ್ಷಣೆ ಮಾಡಬೇಕೆಂದು’ ನಿರ್ಣಯ ತೆಗೆದುಕೊಳ್ಳುವ, ಇವತ್ತಿಗೂ ಸಲ್ಲುವ ಇವತ್ತಿಗೂ ನಡೆಯುವ ವಿಡಂಬನಾತ್ಮಕ ಕತೆ (ಅಪರಾಧಿ ಯಾರು?), ನಾಟಕೀಯವಾಗಿ ಮುಂದರಿದು ಸುಖಾಂತ್ಯಗೊಂಡ ಕತೆ (ಕೌಸಲ್ಯಾ ನಂದನ), ಎಳೆವಯದ ವಿಧವೆಯೊಬ್ಬಳು ತನ್ನನ್ನು ಮದುವೆಯಾಗಲು ತಹತಹಿಸುವ ಮೂವತ್ತರ ಹರಯದ ವಿಧುರನಲ್ಲಿ ಮರ್ಮಪ್ರಶ್ನೆಯನ್ನೇ ಎದುರಿಟ್ಟು ವಾದಿಸಿ ಬಾಯಿ ಕಟ್ಟಿಸಿದ ಇಬ್ಬಗೆಯ ನ್ಯಾಯದ ಜಿಜ್ಞಾಸೆ (ಪುನರ್ವಿವಾಹ), ಹೆಚ್ಚಿನ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವ ಆಸೆ ಗರಿಗೆದರುತಿದ್ದ ದಿನಗಳವು; ಮದುವೆಯಿಂದ ಆರ್ಥಿಕ ಲಾಭ ಪಡೆದು ಅದನ್ನು ಸಾಧ್ಯವಾಗಿಸಲು ಹವಣಿಸುವ ಗಂಡುಗಳ ವ್ಯಾಪಾರೀ ಮನದ ಉದಯ ಕಾಲವೂ; ಈ ಸಮಸ್ಯೆಯನ್ನು ಹೃದಯಸ್ಪರ್ಶಿಯಾಗಿ ಚರ್ಚಿಸುವ ಕತೆಗಳು (ಆಹುತಿ, ನನ್ನ ಮದುವೆ, ಯಾರು), ಕಾಯಲಾರದ ಕಷ್ಟವೇ ಪ್ರೇಮಿಗಳಿಬ್ಬರನ್ನು ಅಗಲಿಸಿದ, ಓದುತ್ತ ಸಂಕಟವಾಗುವ ಕತೆ (ಅದೃಷ್ಟದ ಆಟ)- ಎಲ್ಲಿಯೂ ಕಲ್ಪಕತೆಯು ಕೃತಕವಾಗದಂತೆ, ಭಾವನೆಗಳೂ ತರ್ಕಗಳೂ ವಿಚಾರಗಳೂ ಅಂದಿನ ಸಾಮಾಜಿಕ ವಿದ್ಯಮಾನಗಳ ವಾಸ್ತವ ತಳಹದಿಯ ಮೇಲೆಯೇ ನಿಂತಿರುವ ರಚನೆಗಳು ಗೌರಮ್ಮನವು. 

ಅಚ್ಚರಿಯೆಂದರೆ ಇಲ್ಲಿನ ಕತೆಗಳ ಹೆಚ್ಚಿನ ಪಾತ್ರಗಳು ಇನ್ನೂ ಹದಿನೈದು ಹದಿನಾರು ವರ್ಷದ, ಹೈಸ್ಕೂಲಿನಲ್ಲಿ ಓದುತ್ತಿರುವ ಹುಡುಗಿಯರು ಮತ್ತು ಕಾಲೇಜು ಓದುತ್ತಿರುವ ಹುಡುಗರು. ಅಂದು ಹದಿಹರೆಯ ಮುಗಿವ ಮುಂಚೆಯೇ ಜೀವನದ ಮುಖ್ಯ ನಿರ್ಧಾರಗಳೂ ಆಗಿ ಬಿಡುತ್ತವೆಯಾಗಿ ಅವರ ಮನಸ್ಸು ತಂತಾನೇ ವಯಸ್ಸಿಗಿಂತಲೂ ಮುಂದಿರುತಿತ್ತೆ? ಮುಂಬರುವ ಬದುಕನ್ನು ಎದುರಿಸಲು ಶೀಘ್ರ ತಯಾರಾಗಲೇ ಬೇಕಾದ ಅನಿವಾರ್ಯತೆಯ ಪರಿಣಾಮವೆ ಇದು? ಆಗಿನ ಬಹುತೇಕ ಕತೆಗಳಲ್ಲಿನ ಯುವಕ ಯುವತಿಯರ ರಾಗ ಅನುರಾಗ, ಮಾತು, ಚಿಂತನೆ, ವಾದಗಳನ್ನು ಓದುವಾಗೆಲ್ಲ ಹೀಗನಿಸುತ್ತದೆ. ಗೌರಮ್ಮನ ಕತೆಗಳಲ್ಲಿಯೂ ಇದು ಎದ್ದು ಕಾಣುತ್ತದೆ. ‘ಪುನರ್ವಿವಾಹ’ದ ರಾಜಿ, ‘ಸನ್ಯಾಸಿ ರತ್ನ’ ಕತೆಯ ರಾಜ ಮತ್ತು ರತ್ನ ಇದಕ್ಕೆ ಕೆಲ ಉದಾಹರಣೆಗಳು. ಅಂದಹಾಗೆ, ಆ ಕಾಲದ ಎಸ್‌ಎಸ್‌ಎಲ್‌ಸಿ ಬೀಳ್ಕೊಡುಗೆಯ ಫೋಟೋ ಹುಡುಕಿ ನೋಡಿದರೆ ಅದರಲ್ಲಿ ಉಪಾಧ್ಯಾಯರ ಕುರ್ಚಿ ಸಾಲಿನ ಹಿಂದೆ ನಿಂತ ಹುಡುಗರ, ಮುಂದೆ ಜಮಖಾನದಲ್ಲಿ ಸಾಲಾಗಿ ಕುಳಿತ ಸೀರೆಯುಟ್ಟ ಹುಡುಗಿಯರ (ಬೆರಳೆಣಿಕೆ ಮಂದಿ) ಮುಖಭಾವ ಇಂದಿನಕ್ಕಿಂತ ಎಷ್ಟು ಭಿನ್ನ ಕಾಣುತ್ತಿದೆ!

ಗೌರಮ್ಮನ ಕತೆಗಳಲ್ಲಿನ ಆಕರ್ಷಕ ಅಂಶಗಳಲ್ಲೊಂದು ಈ ಹದಿಹರಯದವರ ಆಪ್ಯಾಯಮಾನ ಕಲರವ, ನಗೆ ಕುಶಾಲು ಸಡಗರ. ಆ ತಲೆಮಾರಿನ ಇತರ ಲೇಖಕಿಯರಲ್ಲಿ ಕಂಡು ಬರದ (ಆದರೆ ಅವರ ನಂತರದ ತಲೆಮಾರಿಗೆ, ವಿಶೇಷವಾಗಿ ತ್ರಿವೇಣಿಯವರ ಬರಹಗಳಲ್ಲಿ ಪುನರ್ಭವಿಸಿದ) ಚುರುಕು ಸಂಭಾಷಣೆ, ಕುಟುಂಬದ ನೆಲೆಯಲ್ಲಿ ಕಾಣುವ ನಿತ್ಯದ ಸಹಜ ಮಾತುಕತೆಗಳಲ್ಲೇ ಕತೆ ಅನಾವರಣಗೊಳ್ಳುವ ಶೈಲಿ. ತ್ರಿವೇಣಿಯವರ ಛಕಛಕನೆ ಹರಿಯುವ ಭಾಷೆಯ ಬೇರುಗಳನ್ನು ಗೌರಮ್ಮನ ಕತೆಗಳಲ್ಲಿ ಗಮನಿಸಲೇಬೇಕು.

ನನಗನಿಸುವಂತೆ, ಇದುವರೆಗಿನ ಓದುಗರ ಮತ್ತು ವಿಮರ್ಶಕರ ಪ್ರಕಾರವೂ, ‘ವಾಣಿಯ ಸಮಸ್ಯೆ’ ಗೌರಮ್ಮನವರ ಪ್ರಾತಿನಿಧಿಕ ಕತೆ. ಅದು ಅವರ ಅಮರ ಕತೆಯೂ. ಹೆಣ್ಣೊಬ್ಬಳ ತಳಮಳ, ನೈತಿಕತೆಯ ತರ್ಕ, ಇನ್ನೊಬ್ಬಳ ಬಾಳನ್ನು ಒಡೆಯಬಾರದೆಂಬ ವಿವೇಕ, ವಿವೇಚನೆ ಎಲ್ಲವೂ ಸಂಗಮಿಸಿದ, ಪರಿಣಾಮವಾಗಿ ಜೀವೋತ್ಕರ್ಷದ ಆಯ್ಕೆಯನ್ನು ಪ್ರಧಾನ ನೆಲೆಯಿಂದ ಹಿಂತಳ್ಳಿದ ಇಂದಿಗೂ ಎಂದಿಗೂ ಓದುಗರೊಂದಿಗೆ ಸಂವಾದಿಸಬಲ್ಲ ಕತೆ ಇದು. ಕತೆಯ ವಿವರಗಳಲ್ಲಿ ಮತ್ತು ಓಟದಲ್ಲಿ ಗೌರಮ್ಮ ತೋರಿದ ಪ್ರಬುದ್ಧತೆ ಅಕ್ಷರಶಃ ಅ-ಪೂರ್ವ. ‘ಅವನ ಕಾಲ್ಪನಿಕ ಇಂದುವಿನ ಅಪ್ರತಿಮ ಸೌಂದರ್ಯವು ನಿಜವಾದ ಇಂದುವಿಗಿಲ್ಲದಿದ್ದರೂ ಅವಳ ಕಾರ್ಯತತ್ಪರತೆಯು ಆ ಕಮ್ಮಿಯನ್ನು ತುಂಬಿಕೊಟ್ಟಿತು’ ಎಂದು ಸೌಂದರ್ಯದ ಬಗ್ಗೆ ಲೇಖಕಿ ನೀಡುವ ಒಂದು ಹೃದಯಂಗಮ ವ್ಯಾಖ್ಯಾನ ಬೇರೆ ಕತೆಯ ಹರಿವಿನಲ್ಲೇ ಬಂದು ಸೇರಿಕೊಂಡಿದೆ. ಫಕ್ಕನೆ ಜೀವವಿರೋಧಿಯಾಗಿ ಕಾಣಲೂ ಬಲ್ಲ, ಆದರೆ ಒಳ ತಿರುಳಿನಲ್ಲಿ ಒಂಟಿ ಹೆಣ್ಣಿನ ಘನತೆಯನ್ನು ಎತ್ತಿಹಿಡಿಯುವ, ಮೈಮರೆವ ಕ್ಷಣದಲ್ಲಿಯೂ ಮುಂದಿನ ಪರಿಣಾಮವನ್ನು ಮರೆಯದೆ ಸಂಯಮ ಧರಿಸುವ ಪಕ್ವ ಸ್ತ್ರೀಮನದ ಕತೆಯಿದು.

ಅಂದಹಾಗೆ ಅವರು ಕೊಡಗಿನದೇ ಆದ ಕತೆಗಳನ್ನು ಬರೆಯಲಿಲ್ಲ. ಅಲ್ಲಿನ ಮನೆವಾರ್ತೆ, ಆ ತೋಟ, ಮಾಲಿಕರು, ಕೂಲಿಗಳು, ಆ ಚಳಿ ಆ ಮಂಜು, ಕಾಫಿ ಗಿಡ, ಹೂವು, ಗುಡ್ಡ ಬೆಟ್ಟ ಯಾವುದನ್ನೂ. ಇನ್ನೇನು ಇದನೆಲ್ಲ ಬರೆಯಬೇಕು, ಮೊದಲ ಯತ್ನಕ್ಕೆ ಹೊರಟೆ ಎಂಬಂತೆ ಹಲವು ಆಯಾಮಗಳ, ವಿಶಾಲ ಭಿತ್ತಿಯ, ಕೊಡಗಿನ ಆವರಣವನ್ನು ಹೊಂದಿದ, ಒಂದು ಪ್ರಮುಖ ಕತೆಯಾಗಿ ವಿಸ್ತಾರ ಪಡೆಯಲಿದ್ದೂ ಅವರ ನಿಧನದಿಂದಾಗಿ ಅರ್ಧಕ್ಕೇ ನಿಂತ ಕತೆ ‘ಮುನ್ನಾದಿನ’. ಜಾತಿ, ಮತ ಮತಾಂತರಗಳ ಚರ್ಚೆ ಅನವಶ್ಯ ಕ್ಲಿಷ್ಟವಾಗುತ್ತ ಹೋಗುವಾಗ ಈ ಕತೆ ಹೊಟ್ಟೆಪಾಡಿಗೋಸ್ಕರ ಗಲಿಬಿಲಿಯಿಲ್ಲದೆ ಜಾತಿ ಬಿಡುವ, ಪ್ರೀತಿಗಾಗಿ ಯಾವ ತಾಕಲಾಟಗಳಿಲ್ಲದೆ ಮತಾಂತರಗೊಳ್ಳುವ, ಉಳಿದವರೂ ಅದರ ಬಗ್ಗೆ ಯಾವ ತಕರಾರೆತ್ತದ, ಕಾಡ ಎಂಬ ದೊರೆ ಆಳಿನ ಜೀವನವೃತ್ತಾಂತವನ್ನು ಆ ಕಾಲದಲ್ಲೇ ಹೇಳಹೊರಟಿತ್ತು. ಪ್ರಾಯಶಃ ಗೌರಮ್ಮನ ಬರವಣಿಗೆಗೇನೇ ಬೇರೊಂದು ತಿರುವು ಕಾಣಿಸಲಿದ್ದ ಕತೆಯಾಗಿತ್ತು ಇದು. ಆದರೆ ಕತೆಯ ದ್ವಿತೀಯ ಅಂಕ ತೆರೆದುಕೊಳ್ಳುವ ಮುನ್ನವೇ ಲೇಖಕಿಯ ಬದುಕಿನ ಅಂಕವೇ ಮುಗಿದು ಹೋಯ್ತು. 1939ರ ಏಪ್ರಿಲ್ ಹದಿಮೂರರಂದು ತನ್ನೊಡನೆ ಈಸಾಡಲು ಬಾರೆಂದು ನಿತ್ಯವೂ ಕರೆಯುತಿದ್ದ ನದಿಯೇ ವಿಧಿಯಾಗಿ ಶಾಶ್ವತವಾಗಿ ಅವರನ್ನು ಕರೆಸಿಕೊಂಡಿತು. ಕನ್ನಡದ ಒಡಲು ಮಾಣಿಕದಂತಹ ಮಗುವನ್ನು ಕಳೆದುಕೊಂಡು ಘಾಸಿಗೊಂಡಿತು.

(ಅರೆದಾರಿಯಲ್ಲೇ ತಿರುಗಿ ಹೊರಟು ಹೋದ ತ್ರಿವೇಣಿ, ಎಂ ಕೆ. ಜಯಲಕ್ಷ್ಮಿ, ಕವಯತ್ರಿ ವಿಭಾ... ನೆನಪು ಕಲಕುತ್ತದೆಯಲ್ಲವೆ?)
ತನ್ನ ಕಥಾಸಂಗ್ರಹ ತರುವ ಜವಾಬ್ದಾರಿಯನ್ನು ಅವರು ಗೆಳೆಯ ದ.ಬಾ.ಕುಲಕರ್ಣಿ ಅವರಿಗೆ ವಹಿಸಿದ್ದರಂತೆ. ‘ಕಂಬನಿ’ ಎಂದು ಪ್ರಥಮ ಸಂಕಲನಕ್ಕೆ ಹೆಸರಿಟ್ಟವರೂ ಸ್ವತಃ ಅವರೆ. ಅವರ ನಿಧನಾನಂತರವೆ ಕಂಬನಿ ಮತ್ತು ಚಿಗುರು ಎರಡೂ ಸಂಕಲನಗಳು ಪ್ರಕಟವಾದವು. 1937ರಲ್ಲಿ ಪ್ರಕಟವಾದ ಮಹಿಳೆಯರ ಮಹತ್ವದ ಕಥಾಸಂಗ್ರಹ ‘ರಂಗವಲ್ಲಿ’ಗೆ- ‘ಅದೃಷ್ಟಕ್ಕೆ ಒಂದು ಸರಿಯಾದ ವಿಮರ್ಶೆ ಬರೆಯುವ ಪುಣ್ಯಾತ್ಮರೂ ಇಲ್ಲ. ಇದು ಹೆಣ್ಣುಮಕ್ಕಳ ಕೃತಿ ಎಂಬ ಪೊಳ್ಳು ಸಹಾನುಭೂತಿಯ ಹೊರೆಯನ್ನು ನಾವೆಷ್ಟು ದಿನ ಹೊರಬೇಕು?’ ಎಂದು ನೊಂದು ನುಡಿದಿದ್ದರು ಗೌರಮ್ಮ. ಮುಂದೆ ಅವರ ಕಥೆಗಳಿಗೆ ಬೇಂದ್ರೆಯವರು ‘ಕಟುಮಧುರ ಕತೆಗಾರ್ತಿ’ ಎಂದು ಗುರುತಿಸಿ ಬರೆದ ಅಮೂಲ್ಯ ಮುನ್ನುಡಿಯನ್ನು ಓದುವವರೆಗಾದರೂ ವಿಧಿ ಅವರನ್ನು ಬಿಟ್ಟಿದ್ದರೆ? 

ನತ್ತು ಮತ್ತು ಕರಿಮಣಿ ಮಾತ್ರ ತೊಟ್ಟು ಯಾಚೆಗೋ ನೋಡುತ್ತ ಯೋಚಿಸುವಂತೆ ಕಾಣುತ್ತಿದ್ದಾರೆ ಗೌರಮ್ಮ, ಇದೋ ಇಲ್ಲಿಯೇ ನನ್ನೆದುರಲ್ಲಿ, ಚಿತ್ರದಲ್ಲಿ ಕುಳಿತು.
ಮುಖದಲ್ಲಿ ಚಿನ್ನ- ಬಣ್ಣಕ್ಕೂ ಮೀರಿದ ಏನೋ ಒಂದು ಪ್ರಭೆ, ಏನು ಎದ್ದು ಕಾಣುತ್ತಿದೆ!
ಇದ್ದಿದ್ದರೆ- ಈಗವರಿಗೆ ನೂರು ವರ್ಷ.
ಇನ್ನಷ್ಟು ಕಾಲ ಇರಬಹುದಿತ್ತು; ಇರಬೇಕಿತ್ತು.
... ಹೋಗುವ ಗಡಿಬಿಡಿ, ಏನಿತ್ತು ಅಷ್ಟು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT