ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರದ ರಥೋತ್ಸವ

Last Updated 6 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

`ಹರಿಹರಲ್ಲಿ ಭೇದವಿಲ್ಲ. ಇಬ್ಬರೂ ಒಂದೇ, ನಮ್ಮಲ್ಲಿ ಯಾರನ್ನೇ ಪೂಜಿಸಿದರೂ ಇಬ್ಬರಿಗೂ ಸೇರುತ್ತದೆ~ ಎಂಬುದನ್ನು ಸಾರುತ್ತಿದ್ದಾನೆ ಹರಿಹರದಲ್ಲಿ ನೆಲೆಸಿರುವ ಹರಿಹರೇಶ್ವರ.
ಸ್ಕಂದ ಪುರಾಣದ ಬ್ರಹ್ಮಖಂಡದ ಚಾತುರ್ಮಾಸ ಮಹಾತ್ಮೆ ಪ್ರಸಂಗದಲ್ಲಿ ಹರಿಹರನ ಮೂರ್ತಿಯ ವರ್ಣನೆಯಿದ್ದು ಅದರ ಕನ್ನಡ ಅನುವಾದ ಹೀಗಿದೆ.

`ಈಶ್ವರನ ಅರ್ಧ ಮತ್ತು ವಿಷ್ಣುವಿನ ಅರ್ಧ ದೇಹ, ಒಂದೆಡೆ ವಿಷ್ಣು ಚಿಹ್ನೆ ಇನ್ನೊಂದೆಡೆ ಹರ ಚಿಹ್ನೆ, ಒಂದು ಕಡೆ ಗರುಡ ಇನ್ನೊಂದು ಕಡೆ ವೃಷಭರನ್ನೂ ಹೊಂದಿರುವ ಮೇಘವರ್ಣನು ತನ್ನ ಎಡಗಡೆಗೆ ಕರ್ಪೂರದಂತೆ ಬೆಳ್ಳಗಿರುವ ಗೌರೀಪತಿಯನ್ನೂ ಜೊತೆಗೆ ಹೊಂದಿದ್ದಾನೆ~.
ಇಂತಿಪ್ಪ ಹರಿಹರದ ಹರಿಹರೇಶ್ವರನಿಗೆ ಕದಂಬರ ಅರಸ ಶ್ರಿ ವೀರಮಲ್ಲದೇವರಸ, ಚಾಲುಕ್ಯ, ಬಿಜ್ಜಳ ಮೊದಲಾದವರಿಂದ ಹಿಡಿದು ಶ್ರಿ ವೇಚರಸನ ವರೆಗೆ ಅರಸರುಗಳು ನಾನಾ ವಿಧ ದತ್ತಿ ಕಾಣಿಕೆ ಸೇವೆಗಳನ್ನು ಮಾಡಿದ ವಿವರಗಳಿವೆ.

4ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ತುಂಗಭದ್ರಾ ನದಿ ದಂಡೆ ಮೇಲಿದೆ ಹರಿಹರ. ಕ್ರಿ.ಶ. 1224ನೆ ಸ್ವಭಾನು ಸಂವತ್ಸರದ ಮಾಘ ಶುದ್ಧ ಏಕಾದಶಿ ಬುಧವಾರದಂದು ಅಲ್ಲಿ ಹರಿಹರೇಶ್ವರನ ಈಗಿರುವ ದೇವಾಲಯ ನಿರ್ಮಿಸಿದವನು  ಪೋಲಾಳ್ಪ ದಂಡನಾಥ. ಆದರೆ ದೇವಾಲಯದ ಮುಖ್ಯ ಶಿಲ್ಪಿಯ ಹೆಸರು ಎಲ್ಲೂ ಕಂಡುಬರುವುದಿಲ್ಲ. ಜಕಣಾಚಾರಿ ಎಂಬ ಊಹೆ ಇದೆ.

ದೇವಾಲಯ ಎಡಭಾಗದಲ್ಲಿ ಅಮ್ಮನವರ ದೇವಾಲಯವಿದೆ, ಅದಕ್ಕೆ ಹೊಂದಿಕೊಂಡಂತೆ ಕಾಳಭೈರವ, ಒಡಬಂಡೇಶ್ವರರ ಚಿಕ್ಕಗುಡಿಯಿದೆ. ಕ್ರಿ.ಶ. 1300 ರಲ್ಲಿ ಜೀರ್ಣೋದ್ಧಾರ, ನಾನಾ ಅರಸರು, ಶ್ರಿಮಂತರು, ಅಧಿಕಾರಿಗಳು ವಿವಿಧ ಕಾಣಿಕೆ ಸೇವೆಗಳನ್ನು ಮಾಡಿದ ಬಗ್ಗೆ ಶಾಸನಗಳಿವೆ. ನೈವೇದ್ಯಾದಿ ಸೇವೆಗಳಿಗೆ ಚಿನ್ನದ ಹರಿವಾಣ, ಪಾತ್ರೆ, ದತ್ತಿ ಗ್ರಾಮಗಳನ್ನು ನೀಡಿದ ಉಲ್ಲೇಖಗಳಿವೆ. ದೇವಾಲಯದ ಮುಂಭಾಗದಲ್ಲಿ ಎರಡು ದೊಡ್ಡ ದೀಪಸ್ತಂಭಗಳಿವೆ. ಅಲ್ಲಿ ಕಾರ್ತಿಕ ಮಾಸದಲ್ಲಿ ನೂರಾರು ದೀಪಗಳನ್ನು ಹಚ್ಚಲಾಗುತ್ತದೆ.

ದೇವಾಲಯವು ಅಷ್ಟಶಿಲಾದಿಗ್ಗಜಗಳ ಮೇಲೆ ಅಷ್ಟದಳ ಕಮಲಾಕಾರದಲ್ಲಿ ರಚನೆಯಾಗಿದೆ. ಹೊಯ್ಸಳರು ಮೊದಲು ಚಾಲುಕ್ಯರ ಮಾಂಡಲಿಕರಾಗಿದ್ದು ನಂತರ ಅವರನ್ನೇ ಗೆದ್ದುಕೊಂಡರು. ಹೊಯ್ಸಳರ ಚಿಹ್ನೆ ಸಿಂಹ, ಚಾಲುಕ್ಯರದು ಆನೆ. ಹೀಗಾಗಿ ದೇವಾಲಯದ ಗೋಪುರದ ಬುಡದಲ್ಲಿ, ಮಾಳಿಗೆಯ ಮೇಲೆ ಎರಡೂ ಕಡೆ ಆನೆಯ ಮೇಲೆ ಸಿಂಹವು ಹಾರಿ ಕುಳಿತಿರುವ ವಿಗ್ರಹಗಳಿವೆ. ಆವರಣದ ಗೋಡೆಯ ಹೊರಮುಖದಲ್ಲಿ ಸಿಂಹ ಆನೆ ಕುದುರೆ ಇತ್ಯಾದಿಗಳನ್ನು ಕೆತ್ತಲಾಗಿದೆ.

ಹರಿಹರದ ಹರಿಹರೇಶ್ವರ ಸ್ವಾಮಿಯ ರಥಾರೋಹಣ ಇಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT