ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರೇಕಳ: ನಿಲ್ಲದ ಮರಳು ಸಾಗಣೆ

Last Updated 14 ಜೂನ್ 2011, 10:50 IST
ಅಕ್ಷರ ಗಾತ್ರ

ಮುಡಿಪು:  ಹರೇಕಳ ನದಿ ದಡದಿಂದ  ಮರಳು ತೆಗೆಯುವುದನ್ನು ಕಳೆದ ಕೆಲವು ತಿಂಗಳ ಹಿಂದೆಯೇ ನಿಷೇಧಿಸಿದ್ದರೂ ಮತ್ತೆ ರಾಜಾರೋಷವಾಗಿ ಮರಳು ಸಾಗಣೆನಡೆಯುತ್ತಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾದ ಅಧಿಕಾರಿಗಳ ಮೌನ ಇಲ್ಲಿನ ನಾಗರಿಕರಲ್ಲಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಸಿಆರ್‌ಝಡ್ ವ್ಯಾಪ್ತಿಗೆ ಹರೇಕಳವೂ ಸೇರುವುದರಿಂದ ಈ ಪ್ರದೇಶದಲ್ಲಿ ಮರಳುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಆದರೂ ಈ ವ್ಯಾಪ್ತಿಯಲ್ಲಿ ಮರಳು ಸಾಗಣೆ ಪೊಲೀಸ್ ಹಾಗೂ ಗಣಿ ಇಲಾಖೆ ಅಧಿಕಾರಿಗಳ ಎದುರೇ ರಾಜಾರೋಷವಾಗಿ ನಡೆಯುತ್ತಿತ್ತು. ಹಿಂದಿನ ಜಿಲ್ಲಾಧಿಕಾರಿ ಸುಬೋಧ್ ಯಾದವ್ ನೇತೃತ್ವದಲ್ಲಿ ಕಳೆದ ಎರಡು ತಿಂಗಳ ಹಿಂದೆ ಹರೇಕಳ ಮರಳು ತೆಗೆಯುವ ಪ್ರದೇಶಕ್ಕೆ ದಾಳಿ ಮಾಡಿ ಒಂಬತ್ತು ಲಾರಿಗಳನ್ನು ಹಾಗೂ ಹಲವರನ್ನು ವಶಕ್ಕೆ ತೆಗೆದುಕೊಂಡಿದ್ದರು.

ಈಗ ಮತ್ತೆ ಅಕ್ರಮ ಮರಳು ಸಾಗಣೆ ಆರಂಭವಾಗಿದೆ. ಕೊಣಾಜೆ ಎಸ್.ಐ. ಎಸ್.ಎಫ್ ಲೋಹರ್ ಅವರು ಎರಡು ವಾರದ ಹಿಂದೆ  ಬೆಳಗಾವಿ ಜಿಲ್ಲೆಗೆ ವರ್ಗಾವಣೆಯಾಗಿದ್ದು, ಇದರಿಂದಾಗಿ  ಕೊಣಾಜೆ ಠಾಣೆಗೆ ಠಾಣಾಧಿಕಾರಿ ಸ್ಥಾನ ತೆರವಾಗಿದೆ. ಇದರಿಂದ ಮರಳು ಸಾಗಣೆಯೂ ಎಗ್ಗಿಲ್ಲದೆ ನಡೆಯುತ್ತಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ದಿನವೊಂದಕ್ಕೆ 20ಕ್ಕೂ ಅಧಿಕ ಲಾರಿಗಳು ಇಲ್ಲಿ ಅಕ್ರಮವಾಗಿ ಮರಳನ್ನು ಸಾಗಿಸುತ್ತಿವೆ.

ಮರಳು ದುಬಾರಿಯಾಗಿರುವುದರಿಂದ ಸಾಗಣೆ ಮಾಡುವವರು ಪೊಲೀಸರು ಹಾಗೂ ಗಣಿ ಇಲಾಖೆ ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮರಳು ಸಾಗಿಸುತ್ತಿದ್ದಾರೆ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬರುತ್ತಿವೆ.

ಪ್ರಸ್ತುತ ಅಡವಿನ ಕುದ್ರುವಿನಲ್ಲಿ ಮರಳುಗಾರಿಕೆ ನಡೆಯುತ್ತಿದ್ದು, ಅದೇ ಪ್ರದೇಶದ ಮೂಲಕ ಜನರು ದೋಣಿ ಮೂಲಕ ಅಡ್ಯಾರಿಗೆ ತೆರಳುತ್ತಾರೆ. ಮರಳುಗಾರಿಕೆಯಿಂದ ದೋಣಿ ಸಂಚಾರಕ್ಕೆ ಹಾಗೂ ಜನರ ಪ್ರಯಾಣಕ್ಕೆ ತೊಡಕುಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT