ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ಚಂದ್ರರು!

Last Updated 31 ಮೇ 2012, 19:30 IST
ಅಕ್ಷರ ಗಾತ್ರ

ಆಯುರ್ವೇದದ ಬಗೆಗಿನ ತಪ್ಪು ಕಲ್ಪನೆಗಳನ್ನು ನಿವಾರಿಸುವ ಉದ್ದೇಶದ ಹಾಗೂ ಜನಸಾಮಾನ್ಯರಿಗೆ ಮನೆಯಲ್ಲೇ ಮಾಡಿಕೊಳ್ಳಬಹುದಾದ ಕೆಲವು ಔಷಧಿಗಳ ಕುರಿತು ಮಾಹಿತಿ ನೀಡುವ ಜಾಲತಾಣ- `ಸ್ವಯಂ  ವೈದ್ಯ~ (http://swayamvydya.blogspot.in).

ಈ ಬ್ಲಾಗಿನ ಕೆ.ಚಂದ್ರಶೇಖರ್ ಅವರಿಗೆ ಆಯುರ್ವೇದದ ಬಗ್ಗೆ ಇನ್ನಿಲ್ಲದ ಅಭಿಮಾನ ಮತ್ತು ಆರಾಧನಾ ಭಾವ. ಅವರು ತಮ್ಮ ಬ್ಲಾಗಿಗೆ ಮುನ್ನುಡಿಯಾಗಿ ಬರೆಯುತ್ತಾರೆ:
“ಮರಗಿಡಬಳ್ಳಿಗಳ ಅನೇಕ ಹೆಸರುಗಳಲ್ಲಿ `ತರು~ ಎಂಬುದೂ ಒಂದು. ತರು-ಎಂದರೆ ದಾಟುವುದು ಎಂದು: ಏನನ್ನು ದಾಟುವುದು?... ದುಃಖವನ್ನು ದಾಟುವುದು; ಆಪತ್ತುಗಳಿಂದ ಮುಕ್ತವಾಗುವುದು ಎಂದರ್ಥ. ಮರಗಿಡಬಳ್ಳಿಗಳೂ, ವೃಕ್ಷಗಳೂ ತಮ್ಮ ಗುಣ, ಪ್ರಭಾವಗಳಿಂದ- ಮಾನವನ ದುಃಖವನ್ನು ಪರಿಹರಿಸುತ್ತವೆ. ಆದುದರಿಂದ ಅವುಗಳಿಗೆ `ತರು~ ಎಂದರು. ಅಮೃತವೆಂಬುದು ವನೌಷಧಿಗಳ ಇನ್ನೊಂದು ಹೆಸರು. ಮಾನವನನ್ನು ಕಷ್ಟ-ದುರಂತಗಳಿಂದ ಪಾರುಮಾಡುವ ವನೌಷಧಿಗಳು ಅಮೃತವಲ್ಲದೆ ಮತ್ತೇನು?”.
ಆಯುರ್ವೇದ ಎಂದರೆ ಬರಿಯ ಗಿಡಮೂಲಿಕೆಯ ಪುಡಿವೈದ್ಯ ಎಂದು ಮೂಗು ಮುರಿಯುವವರ ಬಗ್ಗೆ `ಸ್ವಯಂ ವೈದ್ಯ~ರಿಗೆ ತಕರಾರಿದೆ. ಅಂಥವರಿಗೆ ತಿಳಿವಳಿಕೆ ಹೇಳುವುದು ಕೂಡ ಈ ಬ್ಲಾಗಿನ ಉದ್ದೇಶ. ಹಾಗಾಗಿ, ಅರಿವು ಮತ್ತು ಬೋಧನೆ- ಎರಡು ರೂಪಗಳಲ್ಲೂ ಇಲ್ಲಿನ ಬರಹಗಳನ್ನು ನೋಡಬಹುದು.

ನಿತ್ಯದ ಬಳಕೆಯಲ್ಲಿರುವ ಸೌತೆ, ಆಲೂಗೆಡ್ಡೆ, ಕ್ಯಾರೆಟ್, ಸೋರೆಗಳಂಥ ತರಕಾರಿಗಳ ಉಪಯೋಗಗಳೇನು? ಅವುಗಳನ್ನು ಯಾವ ರೀತಿ ಔಷಧಿಗಳಾಗಿಯೂ ಬಳಸಬಹುದು ಎನ್ನುವುದರ ಬಗ್ಗೆ ಚಂದ್ರು ಸಾಕಷ್ಟು ಬರೆದಿದ್ದಾರೆ. ಕರಿಬೇವು, ಕೆಂಪಕ್ಕಿ, ಖರ್ಜೂರ, ತುಳಸಿ, ಬೇವು, ಅಣಬೆ, ಬಾಳೆಹಣ್ಣು, ಮುಂತಾದವುಗಳ ಉಪಯುಕ್ತತೆಯ ಬಗ್ಗೆ ಸಾಕಷ್ಟು ವಿವರಗಳಿವೆ. `ಬಾಯಿಯ ದುರ್ಗಂಧ ಹೋಗಲಾಡಿಸುವುದು ಹೇಗೆ?~, `ತೂಕ ಕಡಿಮೆ ಮಾಡಿಕೊಳ್ಳುವುದು ಹೇಗೆ?~- ರೀತಿಯ ಜನಪ್ರಿಯ ಬರಹಗಳೂ `ಸ್ವಯಂ ವೈದ್ಯ~ದಲ್ಲಿವೆ.
ಆಯುರ್ವೇದದ ಜನಪ್ರಿಯ ಪರಿಕಲ್ಪನೆಯಾದ `ತ್ರಿಫಲ~ದ ಬಗ್ಗೆ `ಸ್ವಯಂ ವೈದ್ಯ~ ಹೇಳುವುದು ಹೀಗೆ:

“ಸಾವಿರಾರು ವರ್ಷಗಳ ಹಿಂದೆ ಆಯುರ್ವೇದದಲ್ಲಿ ಕಂಡುಹಿಡಿದ ಈ ತ್ರಿಫಲ ಚಿಕಿತ್ಸೆ ಈಗಲೂ ಪ್ರಸ್ತುತ. ಬೆಟ್ಟದ ನೆಲ್ಲಿಕಾಯಿ, ತಾರೆಕಾಯಿ, ಹರಳೇಕಾಯಿ- ಈ ಮೂರರ ಮಿಶ್ರಣ ದೇಹವನ್ನು, ಮನಸ್ಸನ್ನು, ಮೆದುಳನ್ನು ಶುದ್ಧವಾಗಿಡುತ್ತದೆ. ಈ ಮೂರರಲ್ಲೂ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಪಿತ್ತವನ್ನು ನಿಯಂತ್ರಿಸುವ ಶಕ್ತಿಯಿದೆ. ಅಜೀರ್ಣ, ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದರೆ ಇದು ನಿಮ್ಮ ಆಯ್ಕೆಯಾಗಿರಲಿ. ಕೂದಲಿನ ಬೆಳವಣಿಗೆಯಲ್ಲೂ ತ್ರಿಫಲ ಫಲಕಾರಿ.

ಮಲಬದ್ಧತೆ, ಅಲ್ಸರ್, ಕರುಳಿನ ತೊಂದರೆ ಇವುಗಳನ್ನು ಹೇಳ ಹೆಸರಿಲ್ಲದಂತೆ ನಿವಾರಿಸುವ ಮಾಂತ್ರಿಕ ಶಕ್ತಿ ಇದರಲ್ಲಿದೆ. ತಾರೆಕಾಯಿಯಲ್ಲಿ ಜೀರ್ಣಕ್ರಿಯೆ ತೊಂದರೆ, ಹೃದಯ ಮತ್ತು ಜಠರದ ತೊಂದರೆಯನ್ನು ಒಳಗಿನಿಂದಲೇ ಗುಣಪಡಿಸುವ ಶಕ್ತಿಯಿದೆ. ಇದು ದೃಷ್ಟಿಯನ್ನೂ ವೃದ್ಧಿಸುತ್ತದೆ.

ಬೆಟ್ಟದ ನೆಲ್ಲಿಕಾಯಿಯಿಂದ ದೇಹ ಚೈತನ್ಯದಿಂದಿರುವುದಲ್ಲದೆ, ಕೂದಲಿನ ಸಮಸ್ಯೆ, ಕಫದ ಸಮಸ್ಯೆಯೂ ಕಡಿಮೆಯಾಗುತ್ತದೆ. ಹರಳೇಕಾಯಿ ಹೃದಯ, ಮೆದುಳನ್ನು ಹೆಚ್ಚು ಕಾಲ ಬಾಳಿಕೆ ಬರಿಸುವಂತಹ ಔಷಧೀಯ ಗಿಡವಾಗಿದೆ. ವಾತಕ್ಕೆ ಸಂಬಂಧಿಸಿದ ರೋಗವನ್ನು ತಕ್ಷಣವೇ ನಿಯಂತ್ರಣಕ್ಕೆ ತರುತ್ತದೆ. ಆದರೆ ಕೆಲವು ಕಾಲಾವಧಿಗೆ ಮಾತ್ರ ಅದನ್ನು ಉಪಯೋಗಿಸಲಾಗುತ್ತದೆ”.

ಇಷ್ಟು ಹೇಳಿ `ಸ್ವಯಂ ವೈದ್ಯ~ ಬ್ಲಾಗಿನ ಪರಿಚಯ ಮುಗಿಸಬಹುದು. ಆದರೆ, ಇದಿಷ್ಟೇ ಚಂದ್ರು ಅವರ ಪರಿಚಯ ಆಗಲಾರದು. ಮಕ್ಕಳ ಲೋಕವನ್ನು ಅನಾವರಣಗೊಳಿಸುವ `ಬಾಲವನ~

(baalavana.blogspot.in) ಎನ್ನುವ ಬ್ಲಾಗನ್ನೂ ಅವರು ಬರೆಯುತ್ತಾರೆ. ಸ್ನೇಹದ ಸವಿರುಚಿಯನ್ನು ಬಣ್ಣಿಸುವ `ಚೆಡ್ಡಿ ದೋಸ್ತ್~ (cheddidost.blogspot.in) ಅವರ ಇನ್ನೊಂದು ಬ್ಲಾಗು. ಇವೆಲ್ಲಕ್ಕೂ ಮಿಗಿಲಾದುದು `ಚಂದ್ರು ಮಲ್ಟಿಮೀಡಿಯಾ~ (www.chandrumultimedia.com). ಅನೇಕ ಉಪಯುಕ್ತ ಜಾಲತಾಣಗಳ ಪರಿಚಯ ಮತ್ತು ವಿಶ್ಲೇಷಣೆ `ಚಂದ್ರು ಮಲ್ಟಿಮೀಡಿಯಾ~ದ ವಿಶೇಷ. ಹೀಗೆ, ಅನೇಕ ಬ್ಲಾಗುಗಳಲ್ಲಿ ತೊಡಗಿಕೊಂಡಿರುವ ಚಂದ್ರು ಉರುಫ್ ಚಂದ್ರಶೇಖರ್ ಅವರು ತಮ್ಮ ಬರಹ ಹಾಗೂ ವ್ಯಕ್ತಿತ್ವ ಎರಡು ಕಾರಣದಿಂದಲೂ ಗಮನಸೆಳೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT