ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲ್ಲೆ-ಪ್ರಾಣ ಬೆದರಿಕೆ ನಕಲಿ ಪತ್ರಕರ್ತರ ಸೆರೆ

Last Updated 2 ಜೂನ್ 2011, 19:10 IST
ಅಕ್ಷರ ಗಾತ್ರ

ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮೇಲೆ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿದ ಆರೋಪದ ಮೇಲೆ ನಕಲಿ ಪತ್ರಕರ್ತರನ್ನು ಉಪ್ಪಾರಪೇಟೆ ಪೊಲೀರು ಬಂಧಿಸಿದ್ದಾರೆ.

ಸಂಜೆ ಟೈಮ್ಸ ಮತ್ತು ತೆಹಲ್ಕಾ ಪತ್ರಿಕೆಯ ವರದಿಗಾರರೆಂದು ಹೇಳಿಕೊಂಡಿದ್ದ ಎಚ್‌ಎಸ್‌ಆರ್ ಲೇಔಟ್‌ನ ಏಳನೇ ಮುಖ್ಯ ರಸ್ತೆಯ ನಿವಾಸಿ ಸುರೇಶ (33) ಮತ್ತು ವಿಲ್ಸನ್‌ಗಾರ್ಡನ್‌ನ ಅರೆಕೆಂಪನಹಳ್ಳಿಯ ಸೀನಾ ಉರುಫ್ ಮಾವಳ್ಳಿ ಸೀನಾ (36) ಬಂಧಿತರು. ಕೋರಮಂಗಲ ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿ ಭಾಸ್ಕರ್‌ರಾವ್ ಮೇಲೆ ಹಲ್ಲೆ ನಡೆಸಿ ಬೆದರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಭಾಸ್ಕರ್‌ರಾವ್ ಮತ್ತು ಕೋದಂಡರಾಮ್ ಎಂಬುವರ ಮಧ್ಯೆ ಇದ್ದ ಜಮೀನು ಒಡೆತನದ ವಿವಾದವು ಕೆಲ ದಿನಗಳ ಹಿಂದೆ ಬಗೆಹರಿದಿತ್ತು. ಕೆಂಪೇಗೌಡ ರಸ್ತೆಯಲ್ಲಿರುವ ಬೆಂಗಳೂರು ದಕ್ಷಿಣ ತಾಲ್ಲೂಕು ತಹಶೀಲ್ದಾರ್ ಕಚೇರಿಗೆ ಮೇ 28ರಂದು ಬಂದಿದ್ದ ಭಾಸ್ಕರ್‌ರಾವ್ ಅವರನ್ನು ಅಡ್ಡಗಟ್ಟಿದ ಆರೋಪಿಗಳು `ಜಮೀನು ವಿವಾದ ಬಗೆಹರಿಸಿದ್ದು ನಾವೇ ಆದ್ದರಿಂದ ಎಂಬತ್ತು ಲಕ್ಷ ರೂಪಾಯಿ ನೀಡಬೇಕೆಂದು~ ಕೇಳಿದ್ದರು. ಅವರು ಹಣ ಕೊಡಲು ನಿರಾಕರಿಸಿದಾಗ ಹಲ್ಲೆ ನಡೆಸಿ ಬೆದರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸುರೇಶ ಮತ್ತು ಸೀನಾ ಪತ್ರಕರ್ತರೆಂದು ಹೇಳಿಕೊಳ್ಳುತ್ತಿದ್ದರು. ಇನ್ನೂ ಕೆಲವರಿಗೆ ಅವರು ಬೆದರಿಕೆ ಹಾಕಿರುವ ಬಗ್ಗೆ ಮಾಹಿತಿ ಇದ್ದು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್ ಸಿದ್ದರಾಮಪ್ಪ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಲೋಕೇಶ್ವರ ಅವರ ತಂಡ ಆರೋಪಿಗಳನ್ನು ಬಂಧಿಸಿದೆ.

ಗಾಯಾಳು ಗುಣಮುಖ
ವಿದ್ಯುತ್ ಪ್ರವಹಿಸಿದ ಪರಿಣಾಮ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಜಯಂತ್ ಮಂಡಲ್ ಅವರು ಗುಣಮುಖರಾಗಿದ್ದು ಮನೆಗೆ ತೆರಳಿದ್ದಾರೆ ಎಂದು ಮಡಿವಾಳ ಪೊಲೀಸರು ತಿಳಿಸಿದ್ದಾರೆ.

ಮಡಿವಾಳದ ಸಮೀಪದ ಮುನಿಯಪ್ಪ ಲೇಔಟ್‌ನಲ್ಲಿರುವ ಮನೆಯ ನೀರಿನ ತೊಟ್ಟಿಯಲ್ಲಿ ನೀರು ತೆಗೆದುಕೊಳ್ಳಲು ಹೋಗ್ದ್ದಿದಾಗ ವಿದ್ಯುತ್ ಪ್ರವಹಿಸಿದ್ದ ವ್ಯಕ್ತಿಗಳ ರಕ್ಷಿಸಲು ಯತ್ನಿಸಿದ್ದ ಜಯಂತ್  ಗಾಯಗೊಂಡಿದ್ದರು. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದರು.

ಘಟನೆಗೆ ಏನು ಕಾರಣ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ ಬೆಸ್ಕಾಂ ಸಿಬ್ಬಂದಿ ತನಿಖೆ ನಡೆಸಿ ವರದಿ ನೀಡಲಿದ್ದಾರೆ ಎಂದು ಮಡಿವಾಳ ಪೊಲೀಸರು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT