ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿ ಅಪ್ಪಯ್ಯ!

Last Updated 12 ಜನವರಿ 2012, 19:30 IST
ಅಕ್ಷರ ಗಾತ್ರ

`ಸಿನಿಮಾ ನೋಡುವ ಪ್ರೇಕ್ಷಕರೆಲ್ಲ ಹಳ್ಳಿಯವರೇ. ಹಾಗಾಗಿ, ಅವರಿಗೆ ಹತ್ತಿರವಾದ ಕತೆಗಳನ್ನು ಸಿನಿಮಾ ಮಾಡಿದರೆ ತೊಡಗಿಸಿದ ಬಂಡವಾಳ ವಾಪಸ್ ಬರುತ್ತದೆ~. ಇದು ನಿರ್ದೇಶಕ ಎಸ್.ನಾರಾಯಣ್ ಕಂಡುಕೊಂಡಿರುವ ಸತ್ಯ.

ನಾರಾಯಣ್ ಮಾತನಾಡುತ್ತಿದ್ದುದು `ಅಪ್ಪಯ್ಯ~ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ. ತಮ್ಮ ನಿರ್ಮಾಣ ಸಂಸ್ಥೆಯಿಂದ 19ನೇ ಚಿತ್ರವನ್ನು ನಿರ್ಮಿಸುತ್ತಿರುವ ಅವರು, ಹಿರಿಯೂರು ಸಮೀಪ ನಡೆಯುತ್ತಿರುವ ಚಿತ್ರೀಕರಣವನ್ನು ನೋಡಲು ಪತ್ರಕರ್ತರನ್ನು ಆಹ್ವಾನಿಸಿದ್ದರು.

`ಮೂರು ವರ್ಷದ ಹಿಂದೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಗಡ್ಡ ಬಿಟ್ಟುಕೊಂಡು ಹುಚ್ಚನಂತೆ ಕಾಣುತ್ತಿದ್ದ ಗುಲ್ಬರ್ಗದ ವ್ಯಕ್ತಿಯೊಬ್ಬ ಹಣದ ಸಹಾಯ ಮಾಡುವಂತೆ ನನ್ನನ್ನು ಕೋರಿದ. ಆತ ಕೇಳಿದ ಮೊತ್ತ ಹೆಚ್ಚೇ ಇತ್ತು. ವಿಚಲಿತನಾದೆ.

ಬೋರ್ಡಿಂಗ್ ಪಾಸ್ ಹೊಂದಿದ್ದ ಆ ವ್ಯಕ್ತಿ ನಾನು ಅನುಮಾನ ಪಡುವುದನ್ನು ನೋಡಿ, ತನಗೆ ಹಣ ಏಕೆ ಬೇಕೆಂದು ಹೇಳಿದ ಕತೆಯೇ `ಅಪ್ಪಯ್ಯ~ ಚಿತ್ರಕ್ಕೆ ಪ್ರೇರಣೆ. ಆ ವ್ಯಕ್ತಿ ಹೇಳಿದ ಕತೆ ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುವ 1 ಗಂಟೆ ಪ್ರಯಾಣದಲ್ಲಿ ಚಿತ್ರಕತೆಯಾಗಿತ್ತು~ ಎಂದು ನಾರಾಯಣ್ ಹೇಳಿದರು.

ಈಗಾಗಲೇ ಐದು ಹಾಡು ಮತ್ತು ನಾಲ್ಕು ಫೈಟ್‌ಗಳ ಚಿತ್ರೀಕರಣವನ್ನು ನಾರಾಯಣ್ ಮುಗಿಸಿದ್ದಾರಂತೆ. ಈವರೆಗಿನ `ಅಪ್ಪಯ್ಯ~ನ ಶೂಟಿಂಗ್ ಬಗ್ಗೆ ಅವರಿಗೆ ತೃಪ್ತಿಯಿದೆ.
ಶ್ರೀನಗರ ಕಿಟ್ಟಿ `ಅಪ್ಪಯ್ಯ~ ಚಿತ್ರದ ನಾಯಕ. `ಶೈಲೂ~ ಚಿತ್ರದ ಭಾಮಾ ನಾಯಕಿ. ಇವರಿಬ್ಬರನ್ನು ಹೊರತುಪಡಿಸಿದರೆ ಚಿತ್ರದಲ್ಲಿನ ಬಹುತೇಕ ಪಾತ್ರಗಳಿಗೆ ನಾರಾಯಣ್ ಹೊಸಬರನ್ನೇ ಆಯ್ಕೆ ಮಾಡಿಕೊಂಡಿದ್ದಾರಂತೆ.

ನಾಯಕಿಯ ಚಿಕ್ಕಪ್ಪನ ಪಾತ್ರಕ್ಕೆ ಇಂದ್ರಕುಮಾರ್ ಎನ್ನುವವರನ್ನು ಪರಿಚಯಿಸಲಾಗುತ್ತಿದೆ. ಸ್ವತಃ ನಾರಾಯಣ್ ಚಿಕ್ಕ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವುದು ಸಿನಿಮಾದ ವಿಶೇಷಗಳಲ್ಲೊಂದು.

`ಅಪ್ಪಯ್ಯ~ ಚಿತ್ರದ ಇಡೀ ಕತೆ ಬಯಲುಸೀಮೆಯ್ಲ್ಲಲಿ ನಡೆಯುತ್ತದೆ. ಕುಡಿಯಲು ನೀರಿಲ್ಲದ ಊರಲ್ಲಿ ಕತೆ ಆರಂಭಗೊಳ್ಳುತ್ತದೆ. ದೃಶ್ಯಗಳು ನೈಜವಾಗಿ ಬರಲಿ ಎಂಬ ಕಾರಣಕ್ಕೆ ಹಿರಿಯೂರು ಸಮೀಪದ ಈ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಚಿತ್ರದಲ್ಲಿ ನಾಯಕ ಒಬ್ಬ ನಿರ್ಗತಿಕ, ಕೂಲಿ ಮಾಡುತ್ತಿರುತ್ತಾನೆ. ನಾಯಕಿಗಾಗಿಯೇ ತನ್ನೆಲ್ಲ ಬದುಕನ್ನು ಮೀಸಲಿಟ್ಟಿರುತ್ತಾನೆ. ನಾಯಕನ ಮುಗ್ಧತೆ, ಸ್ವಾಮಿನಿಷ್ಠೆ ನೋಡಿ ನಾಯಕಿ ಪ್ರೀತಿಸುತ್ತಾಳೆ ಎಂದು ನಾರಾಯಣ್ ಹೇಳಿದರು.

ನಾಯಕ ಶ್ರೀನಗರ ಕಿಟ್ಟಿ ಮಾತುಗಳಲ್ಲಿ ನಾರಾಯಣ್ ಗರಡಿಯಲ್ಲಿ `ಅಪ್ಪಯ್ಯ~ನಾಗುತ್ತಿರುವ ಖುಷಿಯಿತ್ತು. `ನಿನಗೆ ಬೇಕಾದಷ್ಟು ಕತೆಗಳು ಸಿಕ್ಕುತ್ತೆ. ಆದರೆ ಪಾತ್ರಗಳು ಸಿಕ್ಕೊಲ್ಲ. ಇದುವರೆಗೂ ಯಾವ ಸಿನಿಮಾದಲ್ಲೂ ಮಾಡದ ಪಾತ್ರವಿದು. ಇದನ್ನು ನೀನೇ ಮಾಡು ಎಂದು  ನಾರಾಯಣ್ ಅವರು ಆಹ್ವಾನಿಸಿದಾಗ ನನ್ನ ಕಣ್ಣನ್ನು ನಾನೇ ನಂಬದಾದೆ~ ಎಂದು ಕಿಟ್ಟಿ ಭಾವುಕರಾಗಿ ಹೇಳಿದರು.

ನಾಯಕಿ ಭಾಮಾ ಇಂಗ್ಲಿಷ್‌ಮಿಶ್ರಿತ ಕನ್ನಡದಲ್ಲಿ, ತನಗೆ ಸಿಕ್ಕಿರುವ ಪಾತ್ರ ವಿಭಿನ್ನವಾಗಿದ್ದು, ಇದು ಶೈಲೂ ಚಿತ್ರಕ್ಕಿಂತ ಬೇರೆಯದೇ ರೀತಿಯ ಪಾತ್ರ ಎಂದರು.

ಅಂದಹಾಗೆ, ಏಪ್ರಿಲ್‌ನಲ್ಲಿ `ಅಪ್ಪಯ್ಯ~ ತೆರೆಕಾಣಲಿದೆ. ಅದಕ್ಕೆ ಮುಂಚೆ ನಾರಾಯಣ್ ಅವರೇ ನಿರ್ಮಿಸಿರುವ `ಮುಂಜಾನೆ~ ಚಿತ್ರ ತೆರೆಕಾಣಲಿದೆಯಂತೆ. ಇದರ ಜೊತೆಗೆ `ದುಷ್ಟ~ ಚಿತ್ರದ ಶತದಿನ ಸಮಾರಂಭ ನಡೆಸುವ ಉದ್ದೇಶವೂ ನಾರಾಯಣ್ ಅವರಿಗಿದೆ. `ಪ್ರಚಾರದ ಕೊರತೆಯಿಂದಾಗಿ `ದುಷ್ಟ~ ನಿರೀಕ್ಷಿತ ಯಶಸ್ಸು ಗಳಿಸದೆ ಹೋದರೂ, ನೂರು ದಿನ ಪೂರೈಸಿದೆ~ ಎಂದು ನಾರಾಯಣ್ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT