ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಯಲ್ಲೊಂದು ಮನೆಯ ಮಾಡಿ...

Last Updated 4 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ಗೌಡರ ಬಸಜ್ಜ, ನಮ್ಮ ಹಳ್ಳಿಯ ಹಿರೀಕ. ಗೌಡಿಕೆಯ ಗತ್ತನ್ನು ಎಂದೂ ಮಾಡದ ಈತ, ಹಳ್ಳಿಯ ಹಲವರು ಕಂಡಂತೆ ಯಾರ ಮೇಲೂ ಹಟ ಸಾಧಿಸಿಲ್ಲ. ಜಗಳವಾಡಿಲ್ಲ. ಆದರೆ ಇತ್ತೀಚೆಗೆ ತನ್ನ ವ್ಯಕ್ತಿತ್ವಕ್ಕೆ ವಿರುದ್ಧವಾದ `ಹಟಯೋಗಿ'ಯ ಬಿರುದು ಪಡೆದು ಹಳ್ಳಿಯ ಪ್ರತಿ ಮನೆಗಳ ಬಾಯಿಗೆ ಸಿಕ್ಕಿದ್ದಾನೆ.

ಕಪ್ಪಂಚಿನ, ಕೆಸರುಗಚ್ಚಿನ, ಮಳೆಗಾಲದಲ್ಲಿ ಮಾಳಿಗೆಯಲ್ಲಿ ನೀರು ಸೋರುವ, ಗಜ ಗಾತ್ರ ಗೋಡೆಯ ಪೂರ್ವಿಕರ ಎಂಟು ಅಂಕಣದ ಮನೆಯನ್ನು ನೆಲಸಮ ಮಾಡಿ, ಅಲ್ಲಿಯೇ ಮಾರ್ಬಲ್ ಕಲ್ಲಿನ, ಅದ್ಧೂರಿ ಆರ್‌ಸಿಸಿ ಮನೆ ನಿರ್ಮಿಸುವ ಇರಾದೆ ಪಟ್ಟಣದಲ್ಲಿರುವ ಬಸಜ್ಜನ ಮಗನದ್ದು. ಮನೆಯ ನೆಲಸಮಕ್ಕೆ ಒಪ್ಪಿದ ಅಜ್ಜ, ನಂತರ ಮಾತ್ರ ಹಳ್ಳಿ ಸೊಗಡಿನ ಸಾಂಪ್ರದಾಯಿಕ ಶೈಲಿಯಲ್ಲಿಯೇ ಮನೆ ನಿರ್ಮಿಸಬೇಕೆಂದು ಹಟ ಹಿಡಿದ.

ಅಂತಿಮವಾಗಿ ಅಪ್ಪ- ಮಗನ ನಡುವೆ ಒಪ್ಪಂದವಾಗಿ ಇಬ್ಬರ ಕನಸು ಮೇಳೈಸಿದ ನಗರ ಮತ್ತು ಗ್ರಾಮೀಣ ಶೈಲಿಯ ಹೊಸ ಮನೆ ನಿರ್ಮಾಣವಾಯಿತು. ಮನೆ ಪೂರ್ಣವಾಗುವ ವೇಳೆಗೆ ಸ್ಥಳೀಯ ಸಂಪನ್ಮೂಲವನ್ನು ಯಾವ ರೀತಿ ಸದ್ಬಳಕೆ ಮಾಡಿಕೊಳ್ಳಬಹುದು ಎಂಬುದು ಮಗನಿಗೆ ಮನವರಿಕೆಯಾಗಿತ್ತು. ಪಟ್ಟಣ ಲೆಕ್ಕಾಚಾರದ ಮಗನ ಅಂದಾಜು ವೆಚ್ಚಕ್ಕಿಂತ ಕಡಿಮೆ ಹಣದಲ್ಲಿ ಹೊಸ ಮನೆ ಪೂರ್ಣವಾಗಿತ್ತು.

ಪ್ರತಿಯೊಬ್ಬರ ಜೀವಿತದ ಅವಧಿಯ ಬಹುದೊಡ್ಡ ಸಾಧನೆಯ ಕನಸಾದ `ಮನೆ ನಿರ್ಮಾಣ' ಆಧುನಿಕ ಪ್ರಭಾವಕ್ಕೆ ಪ್ರಬಲವಾಗಿಯೇ ಸಿಲುಕಿವೆ. ಒಂದಕ್ಕಿಂತ ಒಂದು ಚೆಂದದ ಆಧುನಿಕ ವಿನ್ಯಾಸ ಹೊತ್ತ ಮನೆಗಳು ನಿರ್ಮಾಣವಾಗುತ್ತಿವೆ. ಹಳ್ಳಿ-ನಗರದ ಮನೆಗಳ ನಡುವೆ ಈಗ ಹೆಚ್ಚಿನ ವ್ಯತ್ಯಾಸವೇನೂ ಉಳಿದಿಲ್ಲ. ಕೃಷಿ ಪ್ರಧಾನ ಗ್ರಾಮೀಣ ಪ್ರದೇಶದಲ್ಲಿನ ಕಂಬ ಸಾಲಿನ, ಕಪ್ಪಂಚಿನ, ಕೆಸರುಗಚ್ಚಿನ ಮನೆಗಳ ಜಾಗದಲ್ಲಿ ಆರ್‌ಸಿಸಿ ಮನೆಗಳು ತಲೆ ಎತ್ತುತ್ತಿವೆ. ಒಳಾಂಗಣ, ಹೊರಾಂಗಣ ವಿನ್ಯಾಸ ನಾವಿನ್ಯ ಪಡೆಯುತ್ತಿವೆ. ಶೌಚಾಲಯದಿಂದ ಹಿಡಿದು ಮನೆಯ ಅಂಗಳದವರೆಗೂ ಮಾರ್ಬಲ್ ಹಾಸುಗಲ್ಲುಗಳು, ಅಲಂಕಾರ ಸಾಮಗ್ರಿಗಳು ಜಾಗ ಪಡೆದುಕೊಳ್ಳುತ್ತಿವೆ.

ಹೊಸ ವಿನ್ಯಾಸ

ಹಳ್ಳಿಗಳಲ್ಲಿನ ಈ ಪರಿವರ್ತನೆ ಹೊಸ ಬಗೆಯ ವಿನ್ಯಾಸಕ್ಕೂ ಮುನ್ನುಡಿ ಬರೆದಿದೆ. ಹಳ್ಳಿಯ ಮನೆಗಳು ಪೂರ್ಣವಾಗಿ ಗ್ರಾಮೀಣ ಸೊಗಡನ್ನೂ ಕಳೆದುಕೊಂಡಿಲ್ಲ. ಕೃಷಿ ಕುಟುಂಬಗಳು ತಮ್ಮ ಅನುಕೂಲಕ್ಕೆ ಅನು ಗುಣವಾಗಿ ಮನೆ ನಿರ್ಮಿಸಿಕೊಳ್ಳು ತ್ತಿವೆ. ಸರಾಸರಿ ನಾಲ್ಕು ಸಾವಿರ ಜನ ಸಂಖ್ಯೆಯ ಒಂದು ಹಳ್ಳಿಯಲ್ಲಿ ವರ್ಷ ಕ್ಕೆ 10 ಮನೆಗಳು ನಿರ್ಮಾಣವಾದರೆ, 5 ಮನೆ ಗಳು ಪೂರ್ಣ ಆರ್‌ಸಿಸಿ ಮನೆಗಳಾಗಿ ರುತ್ತವೆ. ಉಳಿದ ಮನೆಗಳು ಮುಂಭಾಗ ಅರ್ಧ ಆರ್‌ಸಿಸಿ ಹೊದ್ದರೆ, ಹಿಂದಿನ ಸಾಲು ಹೆಂಚು. ಪೂರ್ಣ ಆರ್‌ಸಿಸಿ ಮನೆಯಾದರೂ ಎರಡಂಕಣ ಹೆಂಚಿನ ಮನೆ ಇರಲೇಬೇಕು.

ಕೊಟ್ಟಿಗೆಗೆ, ಧವಸ ಧಾನ್ಯಗಳ ಶೇಖರಣೆಗೆ, ಕೃಷಿ ಉಪಕರಣಗಳಿಗೆ, ಕಾಯಿ-ಕೊಬ್ಬರಿ (ತೆಂಗಿನ ಬೆಳೆ ಪ್ರಧಾನವಾಗಿ ಬೆಳೆಯುವ ಭಾಗಗಳಲ್ಲಿ) ತುಂಬಲು ಹೆಂಚಿನ ಮನೆಗಳನ್ನು ಉಳಿಸಿಕೊಳ್ಳಲಾಗುತ್ತಿದೆ. ಹೆಂಚು ಮತ್ತು ಆರ್‌ಸಿಸಿ ಮನೆಗಳ ನಡುವೆ ಖರ್ಚು ವೆಚ್ಚದ ಅಂತರ ಹೆಚ್ಚೇನೂ ಇಲ್ಲ. ಹೆಂಚಿನ ಮನೆಗೆ ಮರ, ಮುಟ್ಟು ಬಳಸುವ ಅಗತ್ಯವಿರುವುದರಿಂದ ಆರ್‌ಸಿಸಿ ಮನೆಗಳತ್ತ ಹಳ್ಳಿ ಮಕ್ಕಳ ಒಲವು ಮೂಡುತ್ತಿದೆ. `ಹಳ್ಳಿಯ ಮನೆ'ಗಳ ವಿನ್ಯಾಸದಲ್ಲಿ ಬದಲಾವಣೆಗಳಾಗಿದ್ದರೂ ಕೆಲವು ಸಾಂಪ್ರದಾಯಿಕ ವಿನ್ಯಾಸ ಈಗಲೂ ಉಳಿದಿವೆ. ಸಂಜೆಯ ಹರಟೆಗೆ, ನೆರೆ ಹೊರೆಯವರ ಜತೆ ಕುಳಿತು ಮಾತನಾಡಲು, ಬೇಸಿಗೆಯಲ್ಲಿ ಮಲಗಲು ಮನೆ ಮುಂಭಾಗದ ಎರಡು ಬದಿಗಳಲ್ಲಿ ನಿರ್ಮಿಸುವ `ಜಗುಲಿ, ಸುಗ್ಗಿಯ ಧಾನ್ಯಗಳನ್ನು ಶೇಖರಿಸಿಡುವ ಪಡಸಾಲೆ, ರುಬ್ಬು ಕಲ್ಲು, ಅಡುಗೆ ಓಲೆಗಳು ಹೊಸ ಶೈಲಿಯ ಹಳ್ಳಿಮನೆಗಳಲ್ಲಿ ಈಗಲೂ ಕಾಣುತ್ತೇವೆ.

ವೆಚ್ಚ ವ್ಯತ್ಯಾಸ: ನಗರಕ್ಕೆ ಹೋಲಿಸಿದರೆ ಹಳ್ಳಿಗಳಲ್ಲಿ ಮನೆ ನಿರ್ಮಾಣದ ವೆಚ್ಚ ಕಡಿಮೆ. ಸಾಗಣೆ ವೆಚ್ಚ, ಕಚ್ಚಾ ಸಾಮಗ್ರಿ, ಮರಮುಟ್ಟುಗಳ ಬೆಲೆ, ಕಾರ್ಮಿಕರ ಕೂಲಿ ವ್ಯತ್ಯಾಸವಿದೆ. ಹಳ್ಳಿಯಲ್ಲಿ ಗದ್ದೆ ಬಯಲಲ್ಲಿ ಅಚ್ಚುಹಾಕಿದ ಸಾಮಾನ್ಯ ಇಟ್ಟಿಗೆಗಳಿಗೆ(1ಸಾವಿರಕ್ಕೆ) 2 ಸಾವಿರ ರೂಪಾಯಿ ಬೆಲೆ. ಉತ್ತಮ ಗುಣಮಟ್ಟದಲ್ಲಿ ಅಚ್ಚುಮಾಡಿದ ಇಟ್ಟಿಗೆಗಳಿಗಾದರೆ ರೂ 4000ರಿಂದ 5000 ಬೆಲೆ. ನಗರದಲ್ಲಿ ಯಾದರೆ ಸಾಮಾನ್ಯ ಇಟ್ಟಿಗೆಗೇ ಎಂಟು ಸಾವಿರ ರೂಪಾಯಿ ಕೊಡಬೇಕು. ಸಿಮೆಂಟ್ ಇಟ್ಟಿಗೆಗಳ ಬೆಲೆ ರೂ 20000ದಿಂದ 25000 ಇದೆ. ಮರಳು ಒಂದು ಲಾರಿ ಲೋಡ್‌ಗೆ ಬೆಂಗಳೂರಿ ನಂತಹ ಮಹಾನಗರದಲ್ಲಿ ರೂ 25 ಸಾವಿರ ಬೆಲೆ ಇದ್ದರೆ, ತಾಲ್ಲೂಕು ಮಟ್ಟದಲ್ಲಿ ರೂ 7 ಸಾವಿರ. ಹಳ್ಳಿಯಲ್ಲಿ ಒಂದು ಟ್ರ್ಯಾಕ್ಟರ್ ಲೋಡ್ ಮರಳು ರೂ 1,700 (ನಾಲ್ಕು ಟ್ರ್ಯಾಕ್ಟರ್ ಲೋಡ್‌ಗಳಿಗೆ ಒಂದು ಲಾರಿ ಲೋಡ್ ಮರಳು ಸಮ).

ಸಾಮಗ್ರಿ-ಕೂಲಿ ಧಾರಣೆ ಹಳ್ಳಿಯಲ್ಲಿ ಕಡಿಮೆ ಇರಬಹುದು. ಆದರೆ, ಹಾಗೆಂದು ಅಲ್ಲಿಯೇನೂ ಮನೆ ನಿರ್ಮಾಣ ಸುಲಭವಲ್ಲ. ಏಕೆಂದರೆ, ಹೆಚ್ಚು ಕೂಲಿ ಸಿಗುತ್ತದೆ ಎಂದು ಗಾರೆ ಕೆಲಸ, ಮರಗೆಲಸ, ಎಲೆಕ್ಟ್ರಿಕಲ್, ನಲ್ಲಿ ಜೋಡಣೆ ಕೆಲಸದಲ್ಲಿ ನುರಿತ ಕಾರ್ಮಿಕರೆಲ್ಲಾ ಬೆಳಿಗ್ಗೆಯೇ ಬುತ್ತಿ ಕಟ್ಟಿಕೊಂಡು ಸಮೀಪದ ಪಟ್ಟಣಗಳಿಗೆ ಸೈಕಲ್ ಹತ್ತಿರುತ್ತಾರೆ. ಇನ್ನು ಹಳ್ಳಿಗಳಲ್ಲಿ ಮನೆ ಕಟ್ಟಬೇಕೆಂದರೆ ನುರಿತ ಕಾರ್ಮಿಕರ ಲಭಿಸುವುದೇ ಇಲ್ಲ. ಹಳ್ಳಿ ಮತ್ತು ನಗರದ ನಡುವೆ ಮನೆ ನಿರ್ಮಾಣ ಕ್ಷೇತ್ರದಲ್ಲಿನ ಅನುಭವಗಳನ್ನು ಬಿಚ್ಚಿಡುತ್ತಾರೆ ಬಾಲ್ಯದಿಂದಲೇ ಕರಣೆ ಹಿಡಿದ ಹಾಸನ ಕಡೆಯ ಗಾರೆ ಕೆಲಸಗಾರ ರಾಮಣ್ಣ.

`ನಮ್ಮ ಹಳ್ಳಿಯಲ್ಲಿ ಗಾರೆ ಕೆಲಸ ಮಾಡಿದರೆ ದಿನಕ್ಕೆ 200ರಿಂದ 300 ರೂಪಾಯಿ ಸಿಕ್ಕುತ್ತೆ. ಆದರೆ ನಗರದಲ್ಲಿ ಇದು ದುಪ್ಪಟ್ಟು. ನಿತ್ಯ ಕೆಲಸನೂ ದೊರೆಯುತ್ತೆ. ಕೆಲವು ವೇಳೆ ಹಳ್ಳಿಗಳಲ್ಲಿ ಕೆಲಸಗಾರರ ಸಮಸ್ಯೆಯಾಗಿ ಕಾಮಗಾರಿ ನಿಲ್ಲುತ್ತೆ. ಮಾಲೀಕರಿಗೆ ಹಣಕಾಸು ಸಮಸ್ಯೆಯಾದರೆ ಕಚ್ಚಾ ಸಾಮಗ್ರಿ ಪೂರೈಕೆ ತಡವಾಗುತ್ತದೆ. ಇದರಿಂದ ಮಾಲೀಕರಿಗೂ ಮೇಸ್ತ್ರಿಗೂ ಜಗಳ. ಪಟ್ಟಣದಲ್ಲಿ ಹಾಗಲ್ಲ. ಅಂದಿನ ಕೆಲಸ ಮಾಡು ಸಂಜೆ ಕೂಲಿ ಇಸ್ಕ. ಮೇಸ್ತ್ರಿ ಒಳ್ಳೆಯವನಾಗಿದ್ದರೆ ಮುಂಗಡವೂ ಸಿಗುತ್ತೆ. ಹಳ್ಳಿಗಿಂತ ಇಲ್ಲಿ ಹೊಸ ಹೊಸ ಕಸುಬು ಕಲಿಯೊಕ್ಕೆ ಒಳ್ಳೆ ಅವಕಾಶ. ಹೊಸ ರೀತಿ ಕೆಲಸ ಕಲ್ತು ಹಳ್ಳೀಲಿ ನಾಲ್ಕಾರು ಜನ ಮಡಿಕ್ಕೊಂಡು ಮೇಸ್ತ್ರಿ ಕೆಲಸ ಮಾಡಿದರೆ ಉತ್ತಮವಾಗಿ ಸಂಪಾದಿಸಬಹುದು'.

`ನಗರದಲ್ಲಿ ಒಂದು ಮನೆ ನಿರ್ಮಾಣ ವೆಚ್ಚ ಅಂದಾಜು ರೂ. 20 ಲಕ್ಷವಾದರೆ, ಹಳ್ಳಿಯಲ್ಲಿ ಇದೇ ಮನೆ ಕಟ್ಟಿದ್ರೆ ಕನಿಷ್ಠ ನಾಲ್ಕು ಲಕ್ಷನಾದರೂ ಉಳಿತಾಯ ಮಾಡಬಹುದು. ಲಾರಿ ಮುಷ್ಕರದ ಬಿಸಿ ನಮಗೂ ತಟ್ಟಿದೆ. ನಾಲ್ಕಾರು ದಿನ ಮರಳು, ಇಟ್ಟಿಗೆ, ಜಲ್ಲಿ ಪೂರೈಕೆ ಇಲ್ಲದೆ ಕೆಲಸ ನಿಂತಿತ್ತು. ಪಟ್ಟಣದಲ್ಲಿ ದುಡ್ಡಿರುವ ಜನ ಬೇಗ ಬೇಗ ಸಾಮಗ್ರಿ ಪೂರೈಸುತ್ತಾರೆ, ಬೇಗ ಮನೆ ಕಟ್ಟಿಸಿಕೊಳ್ಳತ್ತಾರೆ. ಹಳ್ಳಿಗಳಲ್ಲಿ ಒಂದು ಮನೆ ನಿರ್ಮಾಣಕ್ಕೆ ಅವಧಿನೇ ಇರಲ್ಲ. ದಿನಕ್ಕೆ ಇಷ್ಟೇ ಕೆಲಸ ಮುಗಿಸಬೇಕು ಎನ್ನುವ ಗುರಿನೂ ಇರಲ್ಲ. ನಗರಗಳಲ್ಲಿ ಸಿಮೆಂಟ್ ಮಾಡಿದ ನಂತರ 15,20ದಿನದವರೆಗೆ ಕ್ಯೂರಿಂಗ್ ಮಾಡಲ್ಲ. ಇಂಗಾದ್ರೆ ಮನೆ ಬೀಟ್ (ಸೀಳು) ಬರುತ್ತೆ. ನಮಗೇನು ಸರ್ ಮಾಲೀಕರು, ಮೇಸ್ತ್ರಿ ಹೇಳ್ತಾರೆ ಹಾಗೆ ಕೆಲಸ ಮಾಡೊದು. ಹೊಟ್ಟೆಪಾಡಲ್ವೆ ಸರ್ ಪ್ರಶ್ನಿಸುತ್ತಾರೆ ರಾಮಣ್ಣ.

ಹಳ್ಳಿ ಇಟ್ಟಿಗೆಯಲ್ಲೇ ಉತ್ತಮವಾಗಿರುವುದು, ಕೆರೆ-ಕುಂಟೆಯಲ್ಲಿನ ಮರಳು, ಕಚ್ಚಾ ಸಾಮಗ್ರಿ, ಬೇವು-ಮತ್ತಿಯಂತಹ ಮರದ ಸಾಮಗ್ರಿ ಸೇರಿದಂತೆ ಸ್ಥಳೀಯ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರಿಂದ `ಹಳ್ಳಿ ಮನೆ' ನಿರ್ಮಾಣ ವೆಚ್ಚ ಕಡಿಮೆಯೇ ಇರುತ್ತದೆ. ವೇಗದ ಬುದುಕಿನ ನಗರಗಳಲ್ಲಿ ವಸತಿ ಸಂಕೀರ್ಣಗಳನ್ನು ಅಷ್ಟೇ ವೇಗದಲ್ಲಿ ನಿರ್ಮಿಸುವ ಧಾವಂತ. ಹಳ್ಳಿಗಳಲ್ಲಿ ತಳಪಾಯ ನಿರ್ಮಿಸಿ ಕನಿಷ್ಠ ಒಂದು ತಿಂಗಳ ವಿರಾಮ ನೀಡಿ, ನಂತರ ಮನೆ ಕಟ್ಟಲಾಗುತ್ತದೆ. ಮನೆ ಕಟ್ಟಿದ ನಂತರ ತಿಂಗಳು ಬಿಟ್ಟು ಸಿಮೆಂಟ್ ಪ್ಲಾಸ್ಟರಿಂಗ್ ಮಾಡಲಾಗುತ್ತದೆ. ಈಗೆ ಪ್ರತಿ ಕಾರ್ಯದ ಅವಧಿಯ ನಡುವೆ ನಿರ್ದಿಷ್ಟ ಸಮಯದ ಬಿಡುವು ಇರುತ್ತದೆ. ಈ ರೀತಿ ಮಾಡಿದರೆ ಮನೆಯ ತಳಪಾಯ ಉತ್ತಮವಾಗುತ್ತದೆ, ಭವಿಷ್ಯದಲ್ಲಿ ಅವಘಡಕ್ಕೆ ಅವಕಾಶವಿರುವುದಿಲ್ಲ ದೀರ್ಘ ಬಾಳಿಕೆ ಬರುತ್ತದೆ.

ಆದರೆ ನಗರಗಳಲ್ಲಿನ ಮನೆಗಳು ವ್ಯತಿರಿಕ್ತವಾಗಿವೆ. ಎಷ್ಟೇ ಆದರೂ ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಗಾದೆ ಗ್ರಾಮೀಣರ ಅನುಭವದಿಂದ ಹುಟ್ಟಿದ್ದು ಅಲ್ಲವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT