ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಹವ್ಯಾಸಿ ರಂಗಭೂಮಿಯವರು ಕಲಾವಿದರಲ್ಲ'

Last Updated 3 ಜುಲೈ 2013, 5:44 IST
ಅಕ್ಷರ ಗಾತ್ರ

ಧಾರವಾಡ: `ಹವ್ಯಾಸಿ ರಂಗಭೂಮಿಯಲ್ಲಿ ಇರುವ ಕಲಾವಿದರು ಮಧ್ಯವರ್ತಿಗಳಿದ್ದಂತೆ. ಅವರು ಒಂದು ಕಾಲನ್ನು ಟಿವಿಯಲ್ಲಿ, ಇನ್ನೊಂದು ಕಾಲನ್ನು ರಂಗಭೂಮಿಯಲ್ಲಿ ಇಟ್ಟುಕೊಂಡು ನಡೆಯುತ್ತಿದ್ದಾರೆ. ಅವರ‌್ಯಾರೂ ನಿಜವಾದ ಕಲಾವಿದರಲ್ಲ' ಎಂದು ಖ್ಯಾತ ರಂಗಕರ್ಮಿ ಪ್ರಸನ್ನ ಹೇಳಿದರು.

ರಂಗಭೂಮಿ ಪುರೋಭಿವೃದ್ಧಿ ಸಮಿತಿಯು ಮಂಗಳವಾರ ಆಯೋಜಿಸಿದ್ದ `ರಂಗಾಯಣ ಸ್ವಾಯತ್ತತೆ: ದಿಕ್ಕು ದೆಸೆ' ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು,

`ಕರ್ನಾಟಕದ ರಂಗ ಚಳವಳಿಯಲ್ಲಿ ಹವ್ಯಾಸಿ ಹಾಗೂ ವೃತ್ತಿ ಚಳವಳಿಗಳು ಒಟ್ಟಿಗೆ ಬೆಳೆದಿವೆ. ಆದರೆ, ವೃತ್ತಿ ರಂಗಭೂಮಿ ಇಂದು ಮಾಯವಾಗಿ ರಂಗಭೂಮಿ ಕೇವಲ ಒಂದೆ ಚಕ್ರದ ಚಕ್ಕಡಿಯಂತಾಗಿದೆ. ರಾಜಕಾರಣಿಗಳಿಗೆ ಮಾಹಿತಿ ಇದ್ದರೆ ರಂಗಭೂಮಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಕೈಗಾರಿಕೆಗಳು ಬೆಳೆದಂತೆ ವೃತ್ತಿ ರಂಗಭೂಮಿ ಚಟುವಟಿಕೆಗಳು ಮಾಯವಾಗುತ್ತಿವೆ. ಬಾಳಪ್ಪ ಹುಕ್ಕೇರಿ ಅವರ ಕಾಲದಲ್ಲಿ ನಡೆದಷ್ಟು ರಂಗಪ್ರಯೋಗಗಳು ಒಂದು ನಡೆಯುತ್ತಿಲ್ಲ.

ಇಂದಿನ ಸಮಾಜದ ವ್ಯವಸ್ಥೆ ಬದಲಾದಂತೆ ನಿಜವಾದ ಕಂಪನಿ ನಾಟಕಗಳು ನಡೆಯದಂತಾಗಿದೆ' ಎಂದು ವಿಷಾದಿಸಿದರು.

`ವೃತ್ತಿ ನಾಟಕ ಕಂಪೆನಿಗಳನ್ನು ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಸ್ಥಾಪಿಸಬೇಕು ಎಂದು ಸರ್ಕಾರವನ್ನು ಕೇಳುವ ಪರಿಸ್ಥಿತಿ ಎದುರಾಗಿದೆ. ರಾಜ್ಯದ ಮೂರು ಕಡೆಗಳಲ್ಲಿ ಸರ್ಕಾರ ರಂಗಾಯಣವನ್ನು ಸ್ಥಾಪಿಸಿದ್ದು, ಈ ರಂಗಾಯಣಕ್ಕೆ ಗುಬ್ಬಿ ವೀರಣ್ಣ ಅವರಿದ್ದ ಕಾಲದಲ್ಲಿ ದೊರೆಯದಷ್ಟು ಹಣ ಇಂದು ದೊರೆಯುತ್ತಿದೆ. ಆದರೆ, ಆ  ಹಣ ಪೋಲಾಗಿ ಹೋಗುತ್ತಿದೆ. ಶ್ರೀರಂಗರ ಕಾಲದಲ್ಲಿ ಹವ್ಯಾಸಿ ರಂಗಭೂಮಿ ಗಟ್ಟಿಯಾಗಿತ್ತು' ಎಂದರು.

`ಇಂದಿನ ಅಬ್ಬರದ ದಿನದಲ್ಲಿ ವೃತ್ತಿಪರ ರಂಗ ಕಲಾವಿದರಾಗುವುದು ಸುಲಭದ ಮಾತಲ್ಲ. ವೃತ್ತಿಪರರಾದ ಕಲಾವಿದರನ್ನು ಪ್ರಪಂಚದ ಯಾವ ರಂಗಭೂಮಿಯಲ್ಲಿಯೂ ಕಾಯಂ ಮಾಡಿಕೊಂಡಿಲ್ಲ. ನಾಟಕ ಕೇವಲ ಮನರಂಜನೆಗೆ ಮಾತ್ರ ಸೀಮಿತವಾದದ್ದಲ್ಲ. ಅದೊಂದು ವಿಮರ್ಶೆಯ ಪ್ರಕ್ರಿಯೆ. ಇಂಥ ವಿಮರ್ಶೆಯ ಪ್ರಕ್ರಿಯೆಯನ್ನು ಟೆಲಿವಿಷನ್ ನಮಗೆ ಕಲಿಸಲಾರದು. ಸಿದ್ದರಾಮಯ್ಯ, ಯಡಿಯೂರಪ್ಪ ಅವರು ಎಲ್ಲಿಯೋ ನಿಂತು ಭಾಷಣ ಮಾಡಿದರೆ ಸಾಮಾಜಿಕ ಕ್ರಾಂತಿಯಾಗಲಾರದು. ಪ್ರತಿ ಹಳ್ಳಿಯಲ್ಲಿಯೂ ಕ್ರಾಂತಿಯ ಬಗ್ಗೆ ಚರ್ಚೆ ಮೂಡಿಸುವ ನಾಟಕಗಳಿಂದ ಮಾತ್ರವೇ ಸಾಮಾಜಿಕ ಕ್ರಾಂತಿ ಸಾಧ್ಯ. ಕುವೆಂಪು, ಬೇಂದ್ರೆ ಅವರಿಗಿಂತ ಹೆಚ್ಚಿನ ಕೆಲಸವನ್ನು ರಂಗಭೂಮಿ ಮಾಡಬಲ್ಲದು.

ಇಂದಿನ ಸಮಾಜ ಬದಲಾವಣೆ ಹೊಂದಬೇಕಾದರೆ ವೃತ್ತಿಪರ ರಂಗಭೂಮಿಯನ್ನು ಮತ್ತೊಮ್ಮೆ ಹೊಸದಾಗಿ ಕನ್ನಡದಲ್ಲಿಯೇ ಕಟ್ಟಬೇಕು. ಆದರೆ, ಇಂದಿನ ರಂಗಭೂಮಿ ನಾವಂದುಕೊಂಡಷ್ಟು ಕೆಲಸವನ್ನು ಮಾಡುತ್ತಿಲ್ಲ' ಎಂದು ಪ್ರಸನ್ನ ವಿಷಾದಿಸಿದರು.

ರಂಗ ಚಿಂತಕ ಮುದ್ದುಕೃಷ್ಣ, `ರಾಜ್ಯದಲ್ಲಿ ಇರುವ ರಂಗಾಯಣದ ಮಾನದಂಡಗಳು ಏನು ಎಂಬುದು ಇನ್ನೂ ನಮ್ಮ ನಾಡಿನ ಜನತೆಗೆ ಸರಿಯಾಗಿ ಗೊತ್ತಿಲ್ಲ. ರಂಗಾಯಣದ ಪರಿಕಲ್ಪನೆ ಗೊತ್ತಿಲ್ಲದ ಕೆಲ ನಿರ್ದೇಶಕರು ಹಾಗೂ ರಂಗಸಮಾಜದ ಕೆಲ ಸದಸ್ಯರಿಂದ ಸಮಸ್ಯೆಗಳು ಉದ್ಭವವಾಗಿವೆ. ಇಂಥ ಎಲ್ಲ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ' ಎಂದರು.

ರಂಗಭೂಮಿ ಪುರೋಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಐ.ಈಳಿಗೇರ ಅಧ್ಯಕ್ಷತೆ ವಹಿಸಿದ್ದರು. ರಂಗನಿರ್ದೇಶಕ ಜಗುಚಂದ್ರ ಕೂಡ್ಲ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT