ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರೇ ಉಸಿರು...

ನಮ್ಮ ಕ್ಯಾಂಪಸ್
Last Updated 18 ಜುಲೈ 2013, 10:35 IST
ಅಕ್ಷರ ಗಾತ್ರ

ಕಾಲೇಜಿನ ಎನ್‌ಎಸ್‌ಎಸ್ ಘಟಕದ ಶ್ರಮದಾನ ಯಶಸ್ವಿಯಾದರೆ, ಆ ಕಾಲೇಜಿನ ರೂಪುರೇಷೆಯನ್ನೇ ಬದಲಿಸಿ ಬಿಡುತ್ತದೆ ಎಂಬುದಕ್ಕೆ ತುಮಕೂರು ಶಿರಾಗೇಟ್‌ನಲ್ಲಿರುವ ಯೂನಿಯನ್ ಕ್ರಿಶ್ಚಿಯನ್ ಕಾಲೇಜು ಉತ್ತಮ ಉದಾಹರಣೆ.

ಇಲ್ಲಿರುವ 750 ಪದವಿ ವಿದ್ಯಾರ್ಥಿಗಳಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವಯಂಸೇವಾ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ, ಕಾಲೇಜಿನ ಸ್ವಚ್ಛತೆ ಜತೆಗೆ ಮರಗಿಡ ಬೆಳೆಸಲು ಟೊಂಕ ಕಟ್ಟಿದ್ದಾರೆ, ಅದರ ಮೊದಲ ಪ್ರಯತ್ನ ಎಂಬಂತೆ 300ಕ್ಕೂ ಹೆಚ್ಚು ತೇಗ ಮತ್ತು ಬೇವಿನ ಗಿಡ ನೆಟ್ಟು ಆರೈಕೆ ಮಾಡುತ್ತಿದ್ದಾರೆ.

ವಾರದಲ್ಲಿ ಎರಡು ದಿನ ಎನ್‌ಎಸ್‌ಎಸ್ ಘಟಕದ 100 ವಿದ್ಯಾರ್ಥಿಗಳ ತಂಡ ಶ್ರಮದಾನ ಮಾಡುತ್ತದೆ. ಇದರಿಂದ ಕಾಲೇಜು ಆವರಣ ಹಚ್ಚಹಸಿರಿನಿಂದ ನಳನಳಿಸುತ್ತಿದೆ ಎನ್ನುತ್ತಾರೆ  ಎನ್‌ಎಸ್‌ಎಸ್ ಮುಖ್ಯಸ್ಥ ಸದಾಶಿವಯ್ಯ.

1917ರಲ್ಲಿ ಪಾದ್ರಿಗಳಿಗೆ ಶಿಕ್ಷಣ ನೀಡುವುದಕ್ಕಾಗಿ ಕರ್ನಾಟಕ ಮಧ್ಯ ಸಭಾ ಪ್ರಾಂತ ಕಾಲೇಜು ಕಟ್ಟಡ ನಿರ್ಮಾಣ ಮಾಡಿತ್ತು. ಕಾಲೇಜು ಆವರಣದಲ್ಲಿ ಚರ್ಚ್ ಸ್ಥಾಪಿಸಲಾಯಿತು. 1985ರಲ್ಲಿ ಪದವಿ ಕಾಲೇಜು ಪ್ರಾರಂಭವಾಯಿತು. ಕಾಲೇಜು ಆರಂಭಕ್ಕೂ ಮುನ್ನವೇ ಇಲ್ಲಿ ಹಿಪ್ಪೆ, ಆಲದಮರ, ಅರಳಿಮರ, ನೀಲಗಿರಿ, ನೇರಳೆ ಮರಗಳನ್ನು ಬೆಳೆಸಿದ್ದರು. ಅದೇ ಸಂಪ್ರದಾಯವನ್ನು ಮುಂದುವರಿಸುತ್ತಿದ್ದೇವೆ, ಕಾಲೇಜಿಗೆ ಸೇರುವ ಬಹುತೇಕರು ಗ್ರಾಮೀಣ ಪ್ರದೇಶದಿಂದ ಬಂದ ವಿದ್ಯಾರ್ಥಿಗಳು. ಮರಗಳನ್ನು ಬೆಳೆಸುವುದು ಅವರಿಗೆ ಹೊಸದೇನಲ್ಲ. ಆದರಿಂದ ಇಷ್ಟು ಮರ ಬೆಳೆಸಲು ಸಾಧ್ಯವಾಯಿತು ಎಂದು ಪ್ರಾಂಶುಪಾಲ ಜೋಯೆಲ್ ಜಯಪ್ರಕಾಶ್ ಹೇಳುತ್ತಾರೆ.

ಕಾಲೇಜಿನಲ್ಲಿರುವ ಬೋರ್‌ವೆಲ್ ಕೈಕೊಟ್ಟಿದೆ. ನೀರಿಲ್ಲದೆ ಕೆಲ ಗಿಡಗಳು ಒಣಗಿವೆ. ಹೊಸ ಬೋರ್‌ವೆಲ್ ಕೊರೆಸಲು ಪ್ರಸ್ತಾವ ಸಲ್ಲಿಸಿದ್ದು, ಅದು ಸಾಧ್ಯವಾದರೆ ಮತ್ತಷ್ಟೂ ಮರ-ಗಿಡಗಳನ್ನು ಬೆಳೆಸಲು ಮುಂದಾಗುತ್ತೇವೆ. ಕಾಲೇಜು ಆವರಣದಲ್ಲಿ ಎಲ್ಲಿಯೂ ಹಲಸಿನ ಮರವಿಲ್ಲ. ಈ ಬಾರಿ ಹಲಸಿನ ಗಿಡ ಬೆಳೆಸಲು ಯೋಜನೆ ರೂಪಿಸಲಾಗಿದೆ ಎನ್ನುತ್ತಾರೆ.

ದಿನನಿತ್ಯ ವಾಯುವಿಹಾರಕ್ಕೆ ಬರುವ ಅಕ್ಕಪಕ್ಕದವರು ಸಹ ನಮ್ಮಂದಿಗೆ ಸಹಕರಿಸುತ್ತಾರೆ. ಯಾರಾದರೂ ಮರಗಳನ್ನು ಕಡಿದರೆ ನಮಗೆ ಮಾಹಿತಿ ನೀಡುವುದರ ಜೊತೆಗೆ ಪರಿಸರದ ಬಗ್ಗೆ ಕಾಳಜಿ ವಹಿಸುತ್ತಾರೆ. 18 ಎಕರೆ ಇರುವ ಕಾಲೇಜಿನ ಆವರಣದಲ್ಲಿ ಈ ಹಿಂದೆ ಶ್ರೀಗಂಧದ ಮರ ಬೆಳೆಸಲಾಗಿತ್ತು, ಆದರೆ ಅವುಗಳು ಕಳ್ಳರ ಪಾಲಾಯಿತು. ಕಾಲೇಜಿನ ಹಸಿರಿಗೆ ದನಗಳ ಕಾಟವಿಲ್ಲ, ಜನಗಳ ಕಾಟವೇ ಜಾಸ್ತಿ ಎಂದು ಹೇಳುತ್ತಾರೆ.

`ಇದು ನಮ್ಮ ಕಾಲೇಜು. ನಾವು ತಾನೇ ಇದರ ಬಗ್ಗೆ ಕಾಳಜಿ ವಹಿಸಿಕೊಳ್ಳಬೇಕಿರುವುದು. ಎನ್‌ಎಸ್‌ಎಸ್ ತಂಡ ಶ್ರಮದಾನ ಮಾಡಬೇಕಾದರೆ, ಉದಾಸೀನತೆ ತೋರುವುದಿಲ್ಲ. ಎಲ್ಲರೂ ಕಷ್ಟಪಡುತ್ತಾರೆ. ತಂಡ ವಾರಕ್ಕೆರಡು ದಿನ ಮಾತ್ರ ಕೆಲಸಮಾಡುತ್ತದೆ. ಆ ದಿನ ಎಲ್ಲರೂ 2ರಿಂದ 3 ಗಂಟೆ ಕೆಲಸ ಮಾಡುತ್ತಾರೆ. ದೂರದ ಊರಿಗೆ ಹೋಗಬೇಕಾದವರು ಮಾತ್ರ ಬೇಗ ಹೋಗುತ್ತಾರೆ. ಉಳಿದವರೆಲ್ಲರೂ ಸಂಜೆವರೆಗೂ ಕೆಲಸ ಮಾಡುತ್ತಾರೆ. ನಮ್ಮೆಲ್ಲರ ಶ್ರಮದಾನದಿಂದ ಕಾಲೇಜು ಆವರಣ ಹಸಿರಿನಿಂದ ಕೂಡಿದೆ. ಇಂಥ ಪ್ರಶಾಂತ ವಾತಾವರಣ ಇರುವುದರಿಂದ ಓದಿನಲ್ಲಿ ಆಸಕ್ತಿ, ಏಕಾಗ್ರತೆ ಮೂಡುತ್ತದೆ' ಎಂದು ಎನ್‌ಎಸ್‌ಎಸ್ ವಿದ್ಯಾರ್ಥಿಗಳಾದ ನವೀನ್, ಸಂಗಮೇಶ್, ಚೇತನ್ ಕಾಲೇಜಿನಲ್ಲಿ ಬೆಳೆಸಿರುವ ಮರಗಳನ್ನು ಕಾಲೇಜು ನೋಡಲು ಹೋದವರಿಗೆ ಹೆಮ್ಮೆಯಿಂದ ತೋರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT