ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಟೂರ್ನಿ: ಭಾರತ-ಫ್ರಾನ್ಸ್ ಫೈನಲ್ ಇಂದು

Last Updated 25 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: `ಚಿಲಿ ದುರಂತ~ದ ದುಸ್ವಪ್ನವನ್ನು ಮರೆತು ಥೇಮ್ಸ ನದಿ ದಡದ ಮೇಲಿನ ಲಂಡನ್ ನಗರಿಯ ಅಂಗಳದಲ್ಲಿ ಆಡುವ ಸಿಹಿಗನಸಿನಲ್ಲಿ ಭಾರತದ ಪುರುಷರ ಹಾಕಿ ತಂಡ ತೇಲುತ್ತಿದೆ!

ಮೇಜರ್ ಧ್ಯಾನಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆಯಲಿರುವ ಒಲಿಂಪಿಕ್ ಹಾಕಿ ಅರ್ಹತಾ ಟೂರ್ನಿಯ ಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಗೆದ್ದರೆ ಕನಸು ನನಸಾಗುತ್ತದೆ.

ಒಲಿಂಪಿಕ್ಸ್‌ನಲ್ಲಿ ಭಾಗಹಿಸಲು ನಾಲ್ಕು ದಶಕಗಳಿಂದ ಹರಸಾಹಸ ಪಡುತ್ತಿರುವ ಫ್ರೆಂಚ್ ಬಳಗ ಮತ್ತು ನಾಲ್ಕು ವರ್ಷಗಳ ಹಿಂದಿನ ಗಾಯಕ್ಕೆ ಮುಲಾಮು ಹಚ್ಚುವ ತವಕದಲ್ಲಿರುವ ಭಾರತದ ನಡುವಿನ ಈ ಪಂದ್ಯ ರೋಚಕ ಹಣಾಹಣಿಯಾಗುವ ನಿರೀಕ್ಷೆಯಿದೆ. 

ಲೀಗ್ ಹಂತದ ಐದು ಪಂದ್ಯಗಳಲ್ಲಿ ಎಲ್ಲವನ್ನೂ ಗೆದ್ದು 15 ಪಾಯಿಂಟ್‌ಗಳೊಂದಿಗೆ ಭರತ್ ಚೆಟ್ರಿ ಬಳಗ ಫೈನಲ್ ಪ್ರವೇಶಿಸಿದೆ. ಇದೇ ಹಂತದಲ್ಲಿ ಭಾರತ 6-2ರಿಂದ ಫ್ರಾನ್ಸ್ ತಂಡವನ್ನೂ ಹಣಿದಿತ್ತು. ಫ್ರೆಂಚ್ ಬಳಗವು  ಮೂರು ಗೆದ್ದು, ಒಂದರಲ್ಲಿ ಸೋತು, ಒಂದು ಡ್ರಾ ಮಾಡಿಕೊಂಡಿದೆ. ಗಾಯಗೊಂಡಿರುವ ಯುವರಾಜ್ ವಾಲ್ಮೀಕಿ ಐದನೇ ಪಂದ್ಯದಲ್ಲಿ ಆಡಿರಲಿಲ್ಲ ಮತ್ತು ಫೈನಲ್‌ನಲ್ಲಿಯೂ ಆಡುವುದಿಲ್ಲ.  ಶುಕ್ರವಾರ ರಾತ್ರಿ ಪೊಲೆಂಡ್ ತಂಡದ ತೀವ್ರ ಪ್ರತಿರೋಧವನ್ನೂ ಮೆಟ್ಟಿ ನಿಂತ ಆಟಗಾರರು ಜಯ ಸಾಧಿಸಿದ್ದರು. ಅದರಲ್ಲೂ  ಪೆನಾಲ್ಟಿ ಕಾರ್ನರ್ ಪರಿಣಿತರಾದ ಸಂದೀಪ್‌ಸಿಂಗ್, ಕರ್ನಾಟಕದ ವಿ.ಆರ್ ರಘುನಾಥ್ ತಮ್ಮ ಸಾಮರ್ಥ್ಯವನ್ನು ಮೆರೆದಿದ್ದಾರೆ.

ಮಿಡ್‌ಫೀಲ್ಡರ್ ಸರದಾರ್ ಸಿಂಗ್,  ಮನಪ್ರೀತ್‌ಸಿಂಗ್, ಸರವಣಜೀತ್‌ಸಿಂಗ್, ಕೋತಾಜಿತ್‌ಸಿಂಗ್, ದನೀಶ್ ಮುಜ್ತಾಬಾ  ಫಾರ್ವರ್ಡ್ ಲೈನ್‌ನಲ್ಲಿ ಸುನಿಲ್, ಗುರುವಿಂದರ್ ಸಿಂಗ್,  ಎಸ್.ಕೆ. ಉತ್ತಪ್ಪ, ತುಷಾರ್ ಖಾಂಡ್ಕರ್ ಪರಿಣಾಮಕಾರಿಯಾಗಿದ್ದಾರೆ.

ಕಳೆದ ಪಂದ್ಯದಲ್ಲಿ ಶಿವೇಂದ್ರ ಸಿಂಗ್ ಹಲವು ಅವಕಾಶಗಳಲ್ಲಿ ಗುರಿ ತಪ್ಪಿದರೂ, ನಂತರದ ತಂಡಕ್ಕೆ ಗೋಲಿನ ಕಾಣಿಕೆ ನೀಡುವಲ್ಲಿಯೂ ಹಿಂದೆ ಬಿದ್ದಿಲ್ಲ. ಕೊಡಗಿನ ಹುಡುಗ ಎಸ್.ವಿ. ಸುನಿಲ್ ಚಿರತೆ ವೇಗದ ಓಟದೊಂದಿಗೆ ಚೆಂಡನ್ನು ಒಯ್ಯುವ ರೀತಿ ಚಿತ್ತಾಕರ್ಷಕ. ಅವರ ವೇಗಕ್ಕೆ ಸರಿಸಾಟಿಯಾಗಿ ಓಡಲು ಎದುರಾಳಿ ತಂಡದ ಆಟಗಾರರು ಸರಿಸಮನಾಗಿಲ್ಲ.

ಆದರೆ ಪೊಲೆಂಡ್ ಮತ್ತು ಸಿಂಗಪುರ ಎದುರಿಗಿನ ಪಂದ್ಯಗಳಲ್ಲಿ ಪೆನಾಲ್ಟಿ ಕಾರ್ನರ್‌ಗಳಲ್ಲಿ ಶೇ 100ರಷ್ಟು ಯಶಸ್ವಿಯಾಗಿಲ್ಲ. ಐದನೇ ಪಂದ್ಯದಲ್ಲಿಯಂತೂ ಸಿಕ್ಕ ಒಂಬತ್ತು ಅವಕಾಶಗಳಲ್ಲಿ ಫಲಪ್ರದವಾಗಿದ್ದು ಎರಡು ಮಾತ್ರ. 

ಲೀಗ್ ಪಂದ್ಯದಂತೆ ಫೈನಲ್‌ನಲ್ಲಿ ಸುಲಭವಾಗಿ ಶರಣಾಗುವ ತಂಡ  ಫ್ರಾನ್ಸ್ ಅಲ್ಲ. 1972ರ ಒಲಿಂಪಿಕ್ಸ್ ನಂತರ ಅರ್ಹತೆಯನ್ನು ಪಡೆಯುವಲ್ಲಿ ವಿಫಲರಾಗಿರುವ ನಮ್ಮ ತಂಡ ಈ ಬಾರಿ ಗೆಲ್ಲಲು ಎಲ್ಲ ಪ್ರಯತ್ನವನ್ನೂ ಮಾಡಲಿದೆ ಎಂದು ತಂಡದ ನಾಯಕ ಅರ್ನಾಡ್ ಬೆಕ್ವೆ ಮತ್ತು ಕೋಚ್ ಫ್ರೆಡ್ರಿಕ್ ಸೊಯೆಜ್ ಸ್ಪಷ್ಟಪಡಿಸಿದ್ದಾರೆ.  ಆದರೆ ಮೇಲ್ನೋಟಕ್ಕೆ ಮಾತ್ರ ಭಾರತವೇ ಗೆಲ್ಲುವ ಫೆವರಿಟ್ ಆಗಿದೆ. ಕಳೆದ ಐದು ಪಂದ್ಯಗಳಲ್ಲಿ ಈ ನಿರೀಕ್ಷೆ ಸುಳ್ಳಾಗಿಲ್ಲ.
ತಂಡಗಳು ಇಂತಿವೆ

ಭಾರತ: ಭರತ್ ಚೆಟ್ರಿ (ನಾಯಕ/ಗೋಲ್‌ಕೀಪರ್), ಇಗ್ನೇಸ್ ಟಿರ್ಕಿ, ರೂಪಿಂದರ್ ಪಾಲ್ ಸಿಂಗ್, ಸಂದೀಪ್ ಸಿಂಗ್, ಕೊತಾಜಿತ್‌ಸಿಂಗ್ ಕಡಂಗಬಮ್,  ಸರ್ದಾರ್ ಸಿಂಗ್, ಮನಪ್ರಿತ್ ಸಿಂಗ್, ಸರವಣಜೀತ್ ಸಿಂಗ್, ವಿ.ಆರ್. ರಘುನಾಥ್, ತುಷಾರ್ ಖಾಂಡೇಕರ್, ದನೀಶ್ ಮುಜ್ತಬಾ, ಶಿವೇಂದ್ರಸಿಂಗ್, ಎಸ್.ವಿ. ಸುನಿಲ್, ಎಸ್.ಕೆ. ಉತ್ತಪ್ಪ, ಬೀರೆಂದ್ರ ಲಕ್ರಾ, ಪಿ.ಆರ್. ಶ್ರೀಜೆಶ್ (ಗೋಲ್‌ಕೀಪರ್), ಗುರುವಿಂದರ್ ಸಿಂಗ್ ಚಾಂಡಿ.  ಮುಖ್ಯ ಕೋಚ್: ಮೈಕೆಲ್ ನಾಬ್ಸ್

ಫ್ರಾನ್ಸ್:
ಅರ್ನಾಡ್ ಬೆಕ್ವೆ (ನಾಯಕ) ಫ್ರೆಡ್ರಿಕ್ ವೆರಿರಾ, ಟಾಮ್ ಜೆನಸ್ಟೇಟ್, ಹುಗೋ ಜೆನಸ್ಟೆಟ್, ಒಲಿವರ್ ಸ್ಯಾಚೆಜ್, ಜೂಸ್ಟ್ ಜೆನ್ಸೆನ್, ಫೆಬಿಯನ್ ಮ್ಯಾಗ್ನೇರ್, ನಿಕೋಲಾಸ್ ಮಾರ್ಟಿನ್ ಬ್ರಿಸೆಕ್, ಸೆಬಾಸ್ಟಿಯನ್ ಜೀನ್‌ಜೀನ್, ಬಾಸ್ಟೆಯನ್ ಡೆರಿಕ್‌ನೆಸ್, ಲುಕಾಸ್ ಸೆವೆಸ್ಟರ್, ಫ್ರ್ಯಾಂಕೊಸ್, ಮಾರ್ಟೀನ್   ಜೆನ್‌ಸ್ಟೆಟ್, ವ್ಯಾಲೆಂಟೆನ್ ಮಿಗ್, ಸೈಮನ್ ಮಾರ್ಟಿನ್ ಬ್ರಿಸೆಕ್, ಜೀನ್ ಬ್ಯಾಪಿಟೆಸ್ಟ್ ಫಾರ್ಗ್ಯೂಸ್, ಮಥಾಯಿಸ್ ಡೆರಿಕ್‌ನೆಸ್ (ಗೋಲ್    ಕೀಪರ್), ಹೆನ್ರಿ ಜೂಲಿಯನ್ ಐಹೊಮೆ (ಗೋಲ್‌ಕೀಪರ್), ಮುಖ್ಯ ಕೋಚ್: ಫ್ರೆಡ್ರಿಕ್ ಸೊಯೆಜ್.
ಪಂದ್ಯದ ಸಮಯ: ರಾತ್ರಿ 8
ನೇರಪ್ರಸಾರ: ಟೆನ್‌ಸ್ಪೋರ್ಟ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT