ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡಹಗಲೇ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯನ ಕಗ್ಗೊಲೆ

Last Updated 16 ಜನವರಿ 2011, 20:15 IST
ಅಕ್ಷರ ಗಾತ್ರ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಜೆಡಿಎಸ್ ಸದಸ್ಯ ರೌಡಿ ಮಹಮ್ಮದ್ ಅಲಿ ಉರುಫ್ ದಿವಾನ್ ಅಲಿಯ (37) ಮೇಲೆ ದುಷ್ಕರ್ಮಿಗಳು ಪಿಸ್ತೂಲ್‌ನಿಂದ ಗುಂಡು ಹಾರಿಸಿ ಮತ್ತು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬನಶಂಕರಿ ಎರಡನೇ ಹಂತದ ಯಾರಬ್‌ನಗರದಲ್ಲಿ ಭಾನುವಾರ ಹಾಡಹಗಲೇ ನಡೆದಿದೆ.
 
ದಿವಾನ್ ಅಲಿಯ ಸಹಚರರಾದ ಖಲೀಂ ಉಲ್ಲಾ, ಉಮರ್, ಜಾಹೀರ್ ಮತ್ತು ಪೇಂಟರ್ ಖಲೀಂ ಅವರ ಮೇಲೂ ಹಲ್ಲೆ ನಡೆದಿದೆ. ನಾಲ್ಕೂ ಮಂದಿಗೆ ಮಚ್ಚಿನ ಏಟು ಬಿದ್ದಿದೆ. ಇವರಲ್ಲಿ ಉಮರ್ ಮತ್ತು ಖಲೀಂ ಅವರಿಗೆ ತೀವ್ರ ಗಾಯಗಳಾಗಿವೆ. ಆದರೆ ಪ್ರಾಣಕ್ಕೆ ಅಪಾಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಜಯನಗರದ ರೌಡಿ ಮಾಹೀಮ್ ಎಂಬಾತ ಈ ಕೊಲೆ ಮಾಡಿಸಿರುವ ಶಂಕೆ ಇದೆ ಎಂದು ಪೊಲೀಸರು ಹೇಳಿದ್ದಾರೆ.
 
ಯಾರಬ್‌ನಗರ ಮಸೀದಿ ರಸ್ತೆಯಲ್ಲಿ ದಿವಾನ್ ಅಲಿಯ ಖಾಸಗಿ ಕಚೇರಿ ಇದೆ. ಬೆಳಿಗ್ಗೆ 11.30ರ ಸುಮಾರಿಗೆ ಕಚೇರಿಗೆ ಬಂದ ಆತ ಪಕ್ಕದಲ್ಲೇ ಇರುವ ಕ್ಷೌರದ ಅಂಗಡಿಗೆ ಹೋಗುತ್ತಿದ್ದ ವೇಳೆ ಏಕಾಏಕಿ ದಾಳಿ ಮಾಡಿದ ಏಳು ಮಂದಿ ದುಷ್ಕರ್ಮಿಗಳು ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಅನಂತರ ದಿವಾನ್ ಅಲಿ ಎದೆಗೆ ಗುಂಡು ಹೊಡೆದರು. ಅಲ್ಲದೇ ಮಚ್ಚು, ಲಾಂಗ್‌ಗಳಿಂದ ಒಂದೇ ಸಮನೆ ಕೊಚ್ಚಿ ಪರಾರಿಯಾದರು.
 
ದಿವಾನ್ ಅಲಿಯ ರಕ್ಷಣೆಗೆ ಬಂದ ಆತನ ಸಹಚರರ ಮೇಲೂ ದುಷ್ಕರ್ಮಿಗಳು ಮನಬಂದಂತೆ ಹಲ್ಲೆ ಮಾಡಿದರು. ತೀವ್ರವಾಗಿ ಗಾಯಗೊಂಡಿದ್ದವರನ್ನು ಸಾಗರ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಕೆಲವೇ ನಿಮಿಷಗಳಲ್ಲಿ ದಿವಾನ್ ಅಲಿ ಸಾವನ್ನಪ್ಪಿದ. ಆತನ ದೇಹದ ಹದಿಮೂರು ಕಡೆ ಮಚ್ಚು, ಲಾಂಗ್ ಏಟು ಬಿದ್ದಿದೆ ಮತ್ತು ಗುಂಡು ಸಹ ತಗುಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
 
ಓಡಾಡಿಸಿ ಕೊಚ್ಚಿದರು: ಕ್ಷೌರದಂಗಡಿ ಬಾಗಿಲ ಬಳಿ ನಿಂತಿದ್ದ ದಿವಾನ್ ಅಲಿ ಮೇಲೆ ದಾಳಿ ನಡೆದೊಡನೆ ಆತ ಓಡಲಾರಂಭಿಸಿದ. ಆದರೂ ಬೆನ್ನು ಬಿಡದ ಹಂತಕರು ಸುಮಾರು ಇಪ್ಪತ್ತು ಮೀಟರ್‌ವರೆಗೆ ಅಟ್ಟಾಡಿಸಿಕೊಂಡು ಹೋಗಿ ಹೊಡೆದಿದ್ದಾರೆ. ದಿವಾನ್ ಅಲಿಯ ಮೊಬೈಲ್ ಫೋನ್ ಸಹ ಪುಡಿಯಾಗಿ ನೆಲಕ್ಕೆ ಸೋರಿದ್ದ ರಕ್ತದೊಳಗೆ ಸೇರಿಕೊಂಡಿತ್ತು.
 
‘ಕೋಣನಕುಂಟೆ ತಿರುವಿನಲ್ಲಿರುವ ಮ್ಯಾಂಗೋ ಗಾರ್ಡನ್‌ನಲ್ಲಿ ದಿವಾನ್ ವಾಸವಿದ್ದರು. ಯಾರಬ್‌ನಗರದಲ್ಲಿ ಸಹ ಅವರಿಗೆ ಸೇರಿದ ಹಳೆಯ ಮನೆ ಇತ್ತು. ಅದನ್ನು ನವೀಕರಣ ಮಾಡಿದ ಅವರು ಒಂದು ತಿಂಗಳ ಹಿಂದೆಯಷ್ಟೇ ಆ ಮನೆಗೆ ಸ್ಥಳಾಂತರಗೊಂಡಿದ್ದರು’ ಎಂದು ಖಾಸಗಿ ಕಚೇರಿಯಲ್ಲಿ ಕೆಲಸ ಮಾಡುವ ಮುಜೀಬ್ ‘ಪ್ರಜಾವಾಣಿ’ಗೆ ತಿಳಿಸಿದರು.
 
‘ಬೆಳಿಗ್ಗೆ ಹನ್ನೊಂದು ಗಂಟೆಗೆ ಬಂದ ಅವರು ಒಂದು ಲೋಡ್ ಮರಳನ್ನು ಮನೆಯ ಹತ್ತಿರ ಹಾಕಿಸುವಂತೆ ಹೇಳಿದರು. ಮರಳು ಹಾಕಿಸಿದ ನಂತರ ಹೋಗಿ ಸ್ನಾನ ಮಾಡಿಕೋ ಎಂದರು. ಅಲ್ಲಿಂದ ನಾನು ಮನೆಗೆ ತೆರಳಿದೆ. ಅನಂತರ ಕರೆ ಮಾಡಿದ ಸ್ನೇಹಿತ, ದಿವಾನ್ ಅವರ ಮೇಲೆ ದಾಳಿ ನಡೆದಿರುವ ಸುದ್ದಿ ತಿಳಿಸಿದ. ಸ್ಥಳಕ್ಕೆ ಬರುವಷ್ಟರಲ್ಲಿ ಅವರು ಸಾವನ್ನಪ್ಪಿದ್ದು ಗೊತ್ತಾಯಿತು’ ಎಂದು ಮುಜೀಬ್ ಹೇಳಿದರು.
 
ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಶಂಕರ್ ಬಿದರಿ ‘ರೌಡಿ ಮಾಹಿಮ್ ಎಂಬಾತನೊಂದಿಗೆ ದಿವಾನ್‌ಗೆ ದ್ವೇಷವಿತ್ತು. ಪರಸ್ಪರರು ಒಬ್ಬರನ್ನೊಬ್ಬರು ಮುಗಿಸಲು ಯತ್ನಿಸುತ್ತಿದ್ದರು.  ಈ ಬಗ್ಗೆ ಅವರಿಬ್ಬರಿಗೂ ಎಚ್ಚರಿಕೆ ನೀಡಲಾಗಿತ್ತು. ಕೊಲೆ ಆರೋಪಿಗಳ ಬಗ್ಗೆ ಸುಳಿವಿದ್ದು, ಅವರನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಅವರು ತಿಳಿಸಿದರು.
 
ಭಾರತಿನಗರದ ರುಕ್ಸಾನಾ ಬಾನು ಎಂಬುವರನ್ನು ವಿವಾಹವಾಗಿದ್ದ ದಿವಾನ್ ಅಲಿಗೆ ಇಬ್ಬರು ಗಂಡು ಮಕ್ಕಳು ಮತ್ತು ಹೆಣ್ಣು ಮಗಳಿದ್ದಾಳೆ.
ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ.ಸುನಿಲ್ ಕುಮಾರ್, ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್, ದಕ್ಷಿಣ ವಿಭಾಗದ ಡಿಸಿಪಿ ಸೋನಿಯಾ ನಾರಂಗ್, ಗುಪ್ತದಳದ ಡಿಸಿಪಿ ಡಿಸೋಜಾ ಮತ್ತು ಅಪರಾಧ ವಿಭಾಗದ ಡಿಸಿಪಿ ಕೃಷ್ಣಂ ರಾಜು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT