ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡಹಗಲೇ ರೌಡಿ ಕಬೀರ್ ಕೊಲೆ

Last Updated 26 ಫೆಬ್ರುವರಿ 2011, 8:00 IST
ಅಕ್ಷರ ಗಾತ್ರ

ಮಂಗಳೂರು: ರೌಡಿ ಕಬೀರ್‌ನನ್ನು ಗುರುಪುರ ಸಮೀಪದ ಬಂಡಸಾಲೆ ಎಂಬಲ್ಲಿ ಶುಕ್ರವಾರ ಹಾಡಹಗಲೇ ತಲವಾರಿನಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ. ಬೈಕಿನಲ್ಲಿ ಗೆಳೆಯರಿಬ್ಬರ ಜೊತೆ ಶುಕ್ರವಾರ ಮಧ್ಯಾಹ್ನ ಗುರುಪುರ ಮಸೀದಿಯಲ್ಲಿ ನಮಾಜ್ ಮುಗಿಸಿ ಮರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಕಪ್ಪು ಬಣ್ಣದ ಸ್ಕಾರ್ಪಿಯೋದಲ್ಲಿ ಆಗಮಿಸಿದ ದುಷ್ಕರ್ಮಿಗಳು ಆತನ ಹತ್ಯೆ ನಡೆಸಿದ್ದಾರೆ ಎನ್ನಲಾಗಿದೆ.

‘ಸ್ಕಾರ್ಪಿಯೋ ಕಬೀರ್ ಇದ್ದ ಬೈಕ್‌ಗೆ ಡಿಕ್ಕಿ ಹೊಡೆಯಿತು. ಅಪಘಾತದಲ್ಲಿ ಕಬೀರ್ ಹಾಗೂ ಆತನ ಜತೆಗಿದ್ದ ಗೆಳೆಯ ಸರ್ಫ್ರಾಜ್ ಹಾಗೂ ನಜೀರ್ ಗಂಭೀರ ಗಾಯಗೊಂಡರು. ರಸ್ತೆಗೆ ಬಿದ್ದ ನಜೀರ್ ಮೇಲೆ ದುಷ್ಕರ್ಮಿಗಳು ಮಾರಾಕಾಸ್ತ್ರದಿಂದ ಹಲ್ಲೆ ನಡೆಸಿ ಪರಾರಿಯಾದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗಂಭೀರ ಗಾಯಗೊಂಡ ಕಬೀರ್ ಸ್ನೇಹಿತರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ವಿಶೇಷ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಕಾರ್ಪಿಯೋ ವಾಹನದ ಬಿಡಿಭಾಗಗಳು ಹೆದ್ದಾರಿ ಪಕ್ಕದಲ್ಲೇ ಬಿದ್ದಿವೆ. 
 
ಪಾತಕಿ ಮಾಡೂರು ಇಸುಬು ಸಹಚರ ಕಬೀರ್, ಬಿಜೆಪಿ ಮುಖಂಡ ಸುಖಾನಂದ ಶೆಟ್ಟಿ, ಪೊಳಲಿ ಅನಂತು, ಹಾಗೂ ರೌಡಿ ಕ್ಯಾಂಡಲ್ ಸಂತು ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದ. ಮೂರು ಕೊಲೆ ಯತ್ನ ಪ್ರಕರಣವೂ ಆತನ ಮೇಲಿದೆ. ಹಳೆ ದ್ವೇಷವೇ ಕೊಲೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

ಮತ್ತೆ ಆತಂಕ: ಕ್ಯಾಂಡಲ್ ಸಂತು ಹತ್ಯೆ ಬಳಿಕ ಕೋಮು ಸಂಬಂಧಿ ಹತ್ಯೆ ಸ್ಥಗಿತಗೊಂಡಿತ್ತು. ಆದರೆ ರೌಡಿ ಕಬೀರ್ ಹತ್ಯೆ ಮತ್ತೊಮ್ಮೆ ನಗರದ ಪೊಲೀಸರ ನಿದ್ದೆಗೆಡಿಸಿದೆ. ‘ಘಟನೆಯ ಹಿನ್ನೆಲೆಯಲ್ಲಿ ಗುರುಪುರ ಪರಿಸರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ದುಷ್ಕರ್ಮಿಗಳಿಗಾಗಿ,  ಹತ್ಯೆಗೆ ಬಳಸಿರುವ ಸ್ಕಾರ್ಪಿಯೋಗಾಗಿ ತೀವ್ರ ಶೋಧ ಕಾರ್ಯ ನಡೆಸಲಾಗಿದೆ.ಇದಕ್ಕಾಗಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಿದ್ದು, ಘಟನೆಯ ಹಿನ್ನೆಲೆಯಲ್ಲಿ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ವ್ಯವಸ್ಥೆಗೊಳಿಸಲಾಗಿದೆ. ನಗರದ ಆಸುಪಾಸಿನಲ್ಲೆ ತಲೆಮರೆಸಿಕೊಂಡಿರಬಹುದಾದ ಹಂತಕರಿಗಾಗಿ ಪೊಲೀಸರು ತಡರಾತ್ರಿವರೆಗೂ ಹುಡುಕಾಟ ಮುಂದುವರಿಸಿದ್ದರು ’ ಎಂದು ಮೂಲಗಳು ತಿಳಿಸಿವೆ.

ಹಲವು ಭಾರಿ ಹತ್ಯೆಯತ್ನ: ಜೀವಭಯದಲ್ಲಿ ನರಳುತ್ತಿದ್ದ ಕಬೀರ್
ಮಂಗಳೂರು:
ಪೇಂಟರ್ ಆಗಿದ್ದ ಕಬೀರ್ ಬೆಳೆಸಿಕೊಂಡ ಅಪರಾಧ ಲೋಕದ ನಂಟು ಕೊನೆಗೆ ಆತನನ್ನೇ ಬಲಿ ಪಡೆದಿದೆ. ದ.ಕ. ಜಿಲ್ಲೆ ಕಂಡ ಮೂರು ಭಯಾನಕ ಕೊಲೆ ಪ್ರಕರಣ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಹೊತ್ತಿದ್ದ ಆತ ಕೊನೆ ದಿನಗಳಲ್ಲಿ ಸದಾ ಜೀವಭಯದಲ್ಲೇ ಓಡಾಡುತ್ತಿದ್ದ ಎನ್ನುತ್ತಾರೆ ಆತನನ್ನು ಹತ್ತಿರದಿಂದ ಬಲ್ಲವರು.

ಅನೇಕ ಬಾರಿ ಯತ್ನ: ಕಳೆದ ಆಗಸ್ಟ್‌ನಿಂದೀಚೆಗೆ ಅನೇಕ ಬಾರಿ ಕಬೀರ್ ಹತ್ಯೆಗೆ ಪ್ರಯತ್ನ ನಡೆದಿತ್ತು. ಆದರೆ, ಎಲ್ಲದರಲ್ಲೂ ಆತನ ಬದುಕಿ ಬಂದಿದ್ದ. ಜೀವಕ್ಕೆ ಹಾನಿ ಇದೆ ಎಂದು ಮೊದಲೇ ಗೊತ್ತಿದ್ದ ಕಾರಣ ಕಬೀರ್ ಸದಾ ತನ್ನೊಂದಿಗೆ ಸಹಚರರನ್ನು ಇಟ್ಟುಕೊಂಡೇ ತಿರುಗಾಡುತ್ತಿದ್ದ. ಶುಕ್ರವಾರ ನಮಾಜ್‌ಗೆ ಹೋಗುವಾಗಲೂ ಇಬ್ಬರನ್ನು ಒಟ್ಟಿಗೆ ಕರೆದೊಯ್ಯುತ್ತಿದ್ದ. ಅದು ಆತನ ಅಂತಿಮ ಪ್ರಾರ್ಥನೆಯಾಗಿತ್ತು.

ಗುರುಪುರದಲ್ಲಿ 1980ರಲ್ಲಿ ಜನಿಸಿದ ಅಕ್ಬರ್ ಕಬೀರ್ ಹಿಂದೂ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿವರೆಗೆ ವಿದ್ಯಾಭ್ಯಾಸ ನಡೆಸಿದ್ದ. ಆರಂಭದಲ್ಲಿ ಸ್ಥಳೀಯ ಮೆಟ್ರೋ ಬೀಡಿ ವರ್ಕ್ಸ್‌ನಲ್ಲಿ 3 ವರ್ಷ ಕಾಲ ಬೀಡಿ ಪ್ಯಾಕಿಂಗ್ ಮಾಡಿದ ಈತ ಬಳಿಕ ಉಳಾಯಿಬೆಟ್ಟುವಿನಲ್ಲಿ ಇಟ್ಟಿಗೆ ಕೆಲಸಕ್ಕೆ ಸೇರಿದ. ಬಳಿಕ ಮುಸ್ತಾಫಾ ಜತೆ, ನಂತರ ಸಹೋದರನ ಜತೆ ಸೇರಿ ಪೇಂಟಿಂಗ್ ಗುತ್ತಿಗೆ ವಹಿಸಿಕೊಳ್ಳುತ್ತಿದ್ದ.

ಮೊದಲ ಪ್ರಕರಣ: ಕಬೀರ್ ವಿರುದ್ಧ ಮೊದಲ ಮೊಕದ್ದಮೆ ದಾಖಲಾಗಿದ್ದು 1999ರಲ್ಲಿ. ಗುರುಪುರದಲ್ಲಿ ಬ್ಯಾನರ್ ಕಟ್ಟುವ ವಿಚಾರದಲ್ಲಿ ಬಜರಂಗದಳದ ಕಾರ್ಯಕರ್ತರಾದ ಶಂಕರ್ ಮತ್ತು ಹರೀಶ್ ಜತೆ ಜಗಳವಾಡಿ ಅವರ ಮೇಲೆ ತಲವಾರಿನಿಂದ ಹಲ್ಲೆ ನಡೆಸಿದ್ದ. ಇದು ಈತನ ಮೇಲೆ ದಾಖಲಾದ ಮೊದಲ ಪ್ರಕರಣ. 3 ತಿಂಗಳು ತಲೆಮರೆಸಿಕೊಂಡಿದ್ದ ಈತ ನಿರೀಕ್ಷಣಾ ಜಾಮೀನು ಪಡೆದು ಶರಣಾಗಿದ್ದ. ಈ ಪ್ರಕರಣದಲ್ಲಿ 3 ವರ್ಷ ಶಿಕ್ಷೆಯೂ ಆಗಿತ್ತು. 2001ರಲ್ಲಿ ಕುಪ್ಪೆಪದವು ರವೀಂದ್ರನ ಕೊಲೆಗೆ ಯತ್ನಿಸಿ ಬಂಧಿತನಾಗಿದ್ದ. 

ಸಾಲು ಸಾಲು ಪ್ರಕರಣ: ಪೊಳಲಿ ಅನಂತು ಕೊಲೆ ಪ್ರಕರಣ ಈತನ ವಿರುದ್ಧ ದಾಖಲಾದ ಮೊದಲ ಹತ್ಯೆ ಪ್ರಕರಣ. ಪೊಳಲಿ ಅನಂತನ ಶವಯಾತ್ರೆ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಿ ಕೋಮುಗಲಭೆಗೆ ಪ್ರಚೋದಿಸಿದ ಬಗ್ಗೆಯೂ ಈತನ ವಿರುದ್ಧ 2 ಪ್ರಕರಣ ದಾಖಲಾಗಿದೆ.2006ರಲ್ಲಿ ನಡೆದ ಬಿಜೆಪಿ ಮುಖಂಡ ಸುಖಾನಂದ ಶೆಟ್ಟಿ ಕೊಲೆ ಪ್ರಕರಣದಲ್ಲಿ ಕಬೀರ್ ಪ್ರಮುಖ ಆರೋಪಿ. ಈ ಹತ್ಯೆ ಬಳಿಕ ದಕ್ಷಿಣ ಕನ್ನಡದಲ್ಲಿ ಒಂದರ ಹಿಂದೊಂದರಂತೆ ಒಟ್ಟು ನಾಲ್ಕು ಕೋಮುಗಲಭೆಗಳು ನಡೆದವು. ಈ ಪ್ರಕರಣಕ್ಕೆ ಸಂಬಂಧಿಸಿ ಒಂದೂವರೆ ವರ್ಷ ಜೈಲಿನಲ್ಲಿದ್ದ.

ಬಿಡುಗಡೆಯಾಗಿ ಬಂದಾತ 2008ರಲ್ಲಿ ಕುಪ್ಪೆಪದವು ರಿಕ್ಷಾ ಡ್ರೈವರ್ ಮೇಲೆ ಹಲ್ಲೆ ಮಾಡಿದ್ದ. 2009ರಲ್ಲಿ ಫೆಬ್ರವರಿ 18ರಂದು ನಡೆದ ಕ್ಯಾಂಡಲ್ ಸಂತು ಹತ್ಯೆಯಲ್ಲೂ ಕಬೀರ್ ಪ್ರಮುಖ ಆರೋಪಿ. ಆತನ ಶವಯಾತ್ರೆ ಸಂದರ್ಭದಲ್ಲೂ ಕೋಮುಗಲಭೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸಿದ್ದ. ಬಳಿಕ ಸುಮಾರು ಮೂರು ತಿಂಗಳು ಚಿಕ್ಕಮಗಳೂರಿನ ಕಳಸದಲ್ಲಿ ತಲೆಮರೆಸಿಕೊಂಡ ಕಬೀರ್‌ನನ್ನು ಮಂಗಳೂರು ಪೊಲೀಸರು ಮೇ 19ರಂದು ಕಳಸದಲ್ಲಿ ಬಂಧಿಸಿದ್ದರು. ಇದಾಗಿ ಒಂದು ವರ್ಷ ಮೂರು ತಿಂಗಳು ಜೈಲು ವಾಸ ಅನುಭವಿಸಿದ್ದ ಕಬೀರ್ ಕಳೆದ ವರ್ಷವಷ್ಟೇ ಜಾಮೀನು ಮೇಲೆ ಹೊರಬಂದಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT