ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರಂಗಿ ನಾಲೆ ಸೇತುವೆಗೆ ತಡೆಗೋಡೆ: ಒತ್ತಾಯ

Last Updated 24 ಫೆಬ್ರುವರಿ 2012, 10:20 IST
ಅಕ್ಷರ ಗಾತ್ರ

ರಾಮನಾಥಪುರ: ಇಲ್ಲಿಗೆ ಸಮೀಪದ ಲಕ್ಕೂರು- ಕೆರಗೋಡು ನಡುವಣ ಮಾರ್ಗ ಮಧ್ಯೆ ಹಾದು ಹೋಗಿರುವ ಹಾರಂಗಿ ಬಲದಂಡೆ ನಾಲೆಯ ಸೇತುವೆಗೆ ತಡೆಗೋಡೆ ಇಲ್ಲದೇ ವಾಹನಗಳಲ್ಲಿ ಓಡಾಡುವ ಪ್ರಯಾಣಿಕರು ಪ್ರಾಣ ಭೀತಿಯಿಂದ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ಗ್ರಾಮಗಳ ಮಧ್ಯೆ ಹಾದು ಹೋಗಿ ರುವ ನಾಲೆಗೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಗಿದೆ. ಆದರೆ ಸೇತುವೆಗೆ ಯಾವುದೇ ತಡೆಗೋಡೆ ಹಾಕಿಲ್ಲ.
 
ಕಿರಿದಾದ ಸೇತುವೆ ಮೇಲೆ ಎರಡು ಗ್ರಾಮಗಳಿಗೆ ಸಂರ್ಪಕ ಕಲ್ಪಿಸುವ ರಸ್ತೆ ಯಿದ್ದು, ಕೆರಗೋಡು ಮಾರ್ಗವಾಗಿ ಪ್ರತಿ ನಿತ್ಯ ರಾಮನಾಥಪುರದಿಂದ ಲಕ್ಕೂರು ಹಾಗೂ ಲಕ್ಕೂರಿನಿಂದ ಕೆರಗೋಡು, ಆನಂದೂರು, ಹನ್ಯಾಳು ಮತ್ತು ರುದ್ರಪಟ್ಟಣದ ಕಡೆಗೆ ನೂರಾರು ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳು, ಎತ್ತಿನ ಬಂಡಿಗಳು ಓಡಾಡುತ್ತವೆ. ಈ ನಾಲೆಯ ಸೇತುವೆ ಸಮೀಪ ಬಂದರೆ ಎರಡು ಕಡೆ ರಸ್ತೆ ತಿರುವು ಸಹ ಇರುವುದರಿಂದ ವಾಹನಗಳು ನೇರವಾಗಿ ಚಲಿಸಲು ಕಷ್ಟವಾಗಿದೆ.

ಸೇತುವೆಗೆ ತಡೆಗೋಡೆ ಇಲ್ಲದಿರುವುದು ಒಂದು ಸಮಸ್ಯೆಯಾದರೆ ನಾಲೆಯ ಪಕ್ಕದಲ್ಲಿ ಹಾದು ಹೋಗಿರುವ ರಸ್ತೆ ಸಹ ಅಗಲವಾಗಿಲ್ಲ. ಕಾಲುವೆಗೆ ತಾಗಿಕೊಂಡಂತೇ ಇರುವ ಇಕ್ಕಟ್ಟಾದ ರಸ್ತೆಯಲ್ಲಿ ತಿರುವಿನ ಜೊತೆಗೆ ನಾಲೆ ಏರಿ ಸ್ವಲ್ಪ ದೂರದವರೆಗೆ ಕಲ್ಲು- ಮಣ್ಣಿನಿಂದ ಕೂಡಿದೆ. ವರ್ಷದಲ್ಲಿ ಆರು ತಿಂಗಳ ಕಾಲ ಈ ನಾಲೆಯಲ್ಲಿ ನೀರು ತುಂಬಿರುತ್ತದೆ.

ಹೀಗಾಗಿ ರಾತ್ರಿ ಸಮಯದಲ್ಲಿ ವೇಗವಾಗಿ ಬರುವ ವಾಹನಗಳಿಗೆ ತಿರುವು ಕಾಣಿಸದೇ ತಡೆಗೋಡೆ ಇಲ್ಲದ ಸೇತುವೆಗೆ ಅಪ್ಪಳಿಸಿ ಕೆಳಗೆ ಹರಿಯುವ ಸುಮಾರು 40- 50 ಅಡಿ ಆಳದ ನಾಲೆಗೆ ಬೀಳಬೇಕಾಗುತ್ತದೆ.
ಲಕ್ಕೂರು ಮತ್ತು ಕೆರಗೋಡು ಅವಳಿ ಗ್ರಾಮಗಳಿದ್ದಂತೆ. ಹಾಗಾಗಿ ಈ ಮಾರ್ಗದಲ್ಲಿ ಬಿಡುವಿಲ್ಲದೇ ಸಂಚರಿಸುವ ವಾಹನಗಳು ಹಾಗೂ ರೈತಾಪಿ ವರ್ಗದ ಜನರು ಓಡಾಡುತ್ತಾರೆ.
 
ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ಜನತೆಗೆ ಅಪಾಯಕಾರಿಯಾಗಿ ಪರಿಣಮಿಸಿರುವ ಕಾಲುವೆ ಪಕ್ಕದ ರಸ್ತೆಗೆ ಗೂಟ ಕಲ್ಲುಗಳನ್ನಾದರೂ ನೆಟ್ಟು ಸೇತುವೆಗೆ ತಡೆಗೋಡೆ ನಿರ್ಮಿಸಿ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT